ಸೋಮಶೇಖರ ಶಿವನ 21 ಹೆಸರುಗಳು ಮತ್ತು ಅರ್ಥ

ಶಿವರಾತ್ರಿಯಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ ಎಂಬ ನಂಬಿಕೆ ಇದೆ. ಈ ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ :


ಶಿವ : ಮಂಗಳಕರನಾದುದರಿಂದ ಈತ ‘ಶಿವ’. ಶಿವ ಎಂಬ ಪದದ ಅರ್ಥವೇ ‘ಮಂಗಳ’.

ವಾಮದೇವ : ವಾಮ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮ ದೇವ’ ಎಂದು ಸ್ತುತಿಸಲಾಗಿದೆ.

ಸುಂದರೇಶ್ವರ : ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತೀದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ. ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ ಸುಂದರೇಶ್ವರನ ರೂಪ ತಾಳುತ್ತಾನೆ.

ವೃಷಭಧ್ವಜ: ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ಶಿವನು ‘ವೃಷಭಧ್ವಜ’’

ಆಶುತೋಶ : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ಆಶುತೋಷ

ಗಂಗಾಧರ : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನು ‘ಗಂಗಾಧರ’

ಪಿನಾಕಿ : ಪಿನಾಕ ಧನಸ್ಸನ್ನು ಧರಿಸಿರುವುದರಿಂದ ಈ ಹೆಸರು.

ವಿಷಕಂಠ : ಸಮುದ್ರಮಥನ ಸಂದರ್ಭದಲ್ಲಿ ಹಾಲಾಹಲ ವಿಷವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.

ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.

shiva
ನಟರಾಜ : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತ ನಟರಾಜ

ಸದಾಶಿವ : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ, “ಸದಾಶಿವ”

ನಾಗಾಭರಣ : ನಾಗ (ಸರ್ಪವನ್ನು)ನನ್ನು ಆಭರಣವಾಗಿ ಧರಿಸಿರುವುದರಿಂದ “ನಾಗಾಭರಣ.

ತ್ರಿಪುರಾರಿ : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”

ಮೃತ್ಯುಂಜಯ : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ “ಮೃತ್ಯುಂಜಯ”

ಧೂರ್ಜಟಿ : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ “ಧೂರ್ಜಟಿ”

ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.

ಮಹಾದೇವ : ದೇವತೆಗಳ ದೇವನಾದ್ದರಿಂದ ‘ಮಹಾದೇವ’

ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ

ಶಂಕರ : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ.

ಆದಿಯೋಗಿ : ಮಹಾ ತಾಪಸಿಯಾದ ಶಿವ ಯೋಗಿಗಳ ಮಹಾದೇವ. ಯೋಗಿಗಳ ಪರಮಗುರು. ಆದ್ದರಿಂದ ಈ ಹೆಸರು

ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಈ ಹೆಸರು.

(ಶಿವಸ್ತುತಿ ಮಾಡುವುದರ ಜೊತೆ, ಎಲ್ಲರಿಗೂ ಮಂಗಳವಾಗಲೆಂದು ಆಶಿಸಿ ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ಆಗ ಮಾತ್ರ ಸ್ತುತಿ – ಪ್ರಾರ್ಥನೆಗಳು ಪೂರ್ಣಗೊಂಡು ಫಲ ನೀಡುವವು. “ಅರಳಿಮರ” ಓದುಗರಿಗೆ ಶಿವರಾತ್ರಿಯ ಶುಭಾಶಯಗಳು)

Leave a Reply