ತಂ ವಂದೇ ಸಾತ್ವಿಕಂ ಶಿವಂ : ಶಿವ ಜಾಗರಕ್ಕೊಂದು ತಾತ್ತ್ವಿಕ ಚಿಂತನೆ

ತಾಂಡವ ನರ್ತನದ ಈ ರಾತ್ರಿಯಲ್ಲಿ, ಮೂರರಲ್ಲಿ ಒಂದಾಗಿಬಿಡುವ ಶಿವನ ರೂಪದ ಬಗ್ಗೆ ಚಿಂತಿಸುವುದಕ್ಕಾಗಿ ಕೆಲ ಕ್ಷಣಗಳನ್ನಾದರೂ ನಾವು ವಿನಿಯೋಗಿಸಬೇಕಿದೆ… | ಅಚಿಂತ್ಯ ಚೈತನ್ಯ

ಶಿವನ ಕೈಯಲ್ಲಿ ತ್ರಿಶೂಲವೇಕಿದೆ? ಈ ಪ್ರಶ್ನೆ ಕೇಳಿಕೊಳ್ಳುವ ಮೊದಲು ‘ತ್ರಿ’ ಅಥವಾ ‘ತ್ರಯ’ದ ಮಹತ್ವವೇನೆಂದು ಅರಿಯಬೇಕಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಂಬ ತ್ರಿಮೂರ್ತಿಗಳು; ಸತ್ವ, ರಜ ಮತ್ತು ತಮಗಳೆಂಬ ಮೂರು ಗುಣಗಳು; ಇಡಾ, ಪಿಂಗಳ ಮತ್ತು ಸುಷುಮ್ನಾಗಳೆಂದ ಮೂರು ನಾಡಿಗಳು, ಸೃಷ್ಟಿ, ಸ್ಥಿತಿ ಮತ್ತು ಲಯಗಳೆಂಬ ಮೂರು ಪ್ರಕ್ರಿಯೆಗಳು; ಕರುಣೆ, ಪ್ರೀತಿ ಮತ್ತು ಆನಂದಗಳೆಂಬ ಮೂರು ಅನುಭೂತಿಗಳು; ಅಷ್ಟೇಕೆ ಶಿವಶಂಕರನಿಗಿರುವ ತ್ರಿನಯನಗಳು ಹೀಗೆ ಮೂರಾಗಿರುವ ಅನೇಕ ಸಂಗತಿಗಳನ್ನು ನಾವು ಕಾಣಬಹುದು.

ಹೀಗೆ ಮೂರನ್ನು ಒಟ್ಟಾಗಿ ವಿವರಿಸುವುದರಲ್ಲಿಯೇ ತ್ರಿಶೂಲದ ಮಹತ್ವವೂ ಅದರ ಸಾಂಕೇತಿಕತೆಯೂ ಇದೆ. ಸದಾಶಿವನು ಶಂಕರನಾದಾಗಲೇ ಅವನ ಕೈಯಲ್ಲಿ ತ್ರಿಶೂಲವಿತ್ತು. ಸೃಷ್ಟಿಕರ್ತನಾದ ಬ್ರಹ್ಮ ಮತ್ತು ಸ್ಥಿತಿಯನ್ನು ಕಾಯುವ ವಿಷ್ಣುವಿನ ನಂತರ ಆವಿರ್ಭವಿಸಿದ್ದು ಶಿವ. ಓಂಕಾರದ ನಾದದ ಹಿನ್ನೆಲೆಯಲ್ಲಿ ಆವಿರ್ಭಿಸುವ ಶಿವಶಂಕರ ಕೇವಲ ಲಯಕರ್ತನಷ್ಟೇ ಅಲ್ಲ, ಎಲ್ಲ ಬಗೆಯ ಮೂರನ್ನೂ ಒಂದಾಗಿಸಿಕೊಂಡದ್ದರ ಸ್ವರೂಪ.

ತಾಂಡವ ನರ್ತನದ ಈ ರಾತ್ರಿಯಲ್ಲಿ, ಮೂರರಲ್ಲಿ ಒಂದಾಗಿಬಿಡುವ ಶಿವನ ರೂಪದ ಬಗ್ಗೆ ಚಿಂತಿಸುವುದಕ್ಕಾಗಿ ಕೆಲ ಕ್ಷಣಗಳನ್ನಾದರೂ ನಾವು ವಿನಿಯೋಗಿಸಬೇಕಿದೆ. ರೂಪ, ಗುಣ ಮತ್ತು ರುಚಿಗೆ ಅತೀತನಾದ ಶಿವನು ಶಂಕರನಾಗಬೇಕಾದರೂ ಈ ಮೂರೂ ಅವನಿಗೆ ಬೇಕು. ಆದರೆ ಈ ಮೂರಕ್ಕೂ ಅವನು ಅತೀತನಾಗಿಯೂ ಇರಬೇಕಲ್ಲವೇ? ಹಾಗಾಗಿಯೇ ತ್ರಿಶೂಲ ಶಂಕರನ ಕೈಯಲ್ಲಿದೆ. ಅಂದರೆ ತ್ರಿಗುಣಗಳು, ತ್ರಿಸ್ಥಿತಿಗಳು, ತ್ರಿಕಾಲಗಳು, ತ್ರಿ ಅನುಭೂತಿಗಳು ಅವನ ನಿಯಂತ್ರಣದಲ್ಲಿಯೇ ಹೊರತು ಅವಕ್ಕೆ ಅವನು ಅಧೀನನಲ್ಲ. ಇದುವೇ ನಿರ್ಗುಣದ ಮಹತ್ತು!

ಶಿವನು ಶಂಕರನಾದಾಗ ಮೂರಾಗಿರುವ ಎಲ್ಲವೂ ಅವನ ನಿಯಂತ್ರಣದಲ್ಲಿತ್ತು ಎಂದು ಹೇಳುವಾಗಲೇ ಮತ್ತೊಂದು ಅಂಶವನ್ನು ಗಮನಿಸಬೇಕು. ಅವನ ಉಡುಪು ಮತ್ತು ರೂಪ ಎರಡೂ ತಪಸ್ವಿಯದ್ದು. ಬ್ರಹ್ಮನಂತೆ ಪದ್ಮ ಪೀಠದಲ್ಲಿ ಅವನಿಲ್ಲ. ವಿಷ್ಣುವಿನಂತೆ ಸರ್ವಾಲಂಕೃತನೂ ಅಲ್ಲ. ಸರಳ ಉಡುಪು. ವಾಸಸ್ಥಳವೂ ಅಷ್ಟೇ. ಮರ್ತ್ಯವೆಂದು ಕರೆಯಬಹುದಾದ ಎಲ್ಲವೂ ಇರುವ ಸ್ಥಳದಲ್ಲೇ ಅವನ ಅಮರ್ತ್ಯ ಅಸ್ತಿತ್ವ.

ಇವಿಷ್ಟೂ ಏನನ್ನೂ ತೋರಿಸಿಕೊಡುತ್ತಿವೆ? ಗುಣ, ಅನುಭೂತಿ, ರುಚಿ, ಕಾಲಗಳಂಥ ಮಿತಿಗಳನ್ನು ದಾಟಿದರೆ ಸದಾಶಿವನ ಆವಿರ್ಭಾವ ಹೊರಗೆಲ್ಲೋ ಆಗುವುದಲ್ಲ, ನಮ್ಮೊಳಗೇ ಆಗಿಬಿಡುತ್ತದೆ ಎಂಬ ಬಹುದೊಡ್ಡ ಶಿವತತ್ವಕ್ಕೆ ಶಿವನ ಶಂಕರ ಸ್ವರೂಪವೇ ಒಂದು ದೊಡ್ಡ ರೂಪಕ.

ಬಸವಾದಿ ಶರಣರ ಶಿವನ ಕಲ್ಪನೆಯಲ್ಲಿ ನಮಗೆ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಸಾಮಾಜಿಕ ಕಟ್ಟುಪಾಡುಗಳು, ಅಧ್ಯಾತ್ಮಕ್ಕೆ ಅಗತ್ಯವಿರುವ ಭಾಷೆಯ ಕಟ್ಟುಪಾಡು ಮತ್ತು ಚಿಂತನೆಗಿದ್ದ ಚೌಕಟ್ಟಿನ ಮಿತಿಯನ್ನು ಮೀರುವ ಪ್ರಕ್ರಿಯೆಯೊಂದನ್ನೂ 12ನೇ ಶತಮಾನದ ವಚನ ಚಳವಳಿಯಲ್ಲಿ ನಾವು ಕಾಣುತ್ತೇವೆ ಅಲ್ಲವೇ? ಅಧಿಕಾರದ ಮಟ್ಟಿಗೆ ಅತ್ಯುನ್ನತ ಸ್ಥಾನದಲ್ಲಿದ್ದ ಬಸವಣ್ಣನೂ, ಅಧ್ಯಾತ್ಮದ ಹಾದಿಯಲ್ಲಿ ಎಲ್ಲವನ್ನೂ ಮೀರಿ ನಿಂತ ಅಲ್ಲಮನೂ, ಮಲ್ಲಿಕಾರ್ಜುನನಲ್ಲೇ ಗಂಡನನ್ನು ಕಂಡ ಅಕ್ಕಮಹಾದೇವಿಯೂ ಇವರೆಲ್ಲರನ್ನೂ ಅಣಕವಾಡುವ ಸ್ವಾತಂತ್ರ್ಯವನ್ನುಳಿಸಿಕೊಂಡ ಕಲ್ಲವ್ವೆ, ಸಂಕವ್ವೆ, ಸಿದ್ಧರಾಮ, ದಾಸಿಮಯ್ಯ, ಮಾಚಯ್ಯನಂಥ ಅನೇಕಾನೇಕರು ಸೇರಿ ಅನುಭವವೇ ಅನುಭಾವವಾಗುವ ಪ್ರಕ್ರಿಯೆಯೊಂದನ್ನು ಸಾಧಿಸಿದ್ದು ಇನ್ನೂ ದೊಡ್ಡ ಕ್ರಾಂತಿ.
ಈ ಮಹಾಕ್ರಾಂತಿಗೆ ಶಿವನೇ ಕೇಂದ್ರವಾದದ್ದು ಅವನೇ ಸಂಕೇತವೂ ರೂಪಕವೂ ಆಗಿಬಿಡುವುದರ ಹಿಂದಿನ ಕಾರಣದ ಬಗ್ಗೆ ಅರೆಕ್ಷಣ ಆಲೋಚಿಸಿದರೆ ಶಿವನ ವಿರಾಟ್ ಶಕ್ತಿ ಮತ್ತು ರೂಪದ ಅನಂತ ಸಾಧ್ಯತೆಗಳು ತೆರೆದುಕೊಂಡು ನಾವೆಷ್ಟು ಸಣ್ಣವರೆಂಬ ಅರಿವು ಮೂಡುತ್ತದೆ. ಈ ರೂಪಕ ಮತ್ತು ಸಂಕೇತಗಳ ಗೊಂಡಾರಣ್ಯದಲ್ಲಿ ಕಳೆದು ಹೋಗದಂತೆ ನಮ್ಮನ್ನು ಕಾಪಾಡುವುದೂ ಶಿವತತ್ವವೇ.

ಶಿವ ಮಹಾಪ್ರೇಮಿ ಹೇಗೋ ಹಾಗೆಯೇ ಸಂಸಾರಿಯೂ ಹೌದು. ತನ್ನೊಳಗೆ ಶಿವೆಯನ್ನೂ ಇಟ್ಟುಕೊಂಡಿರುವ ಅರ್ಧನಾರೀಶ್ವರನೂ ಹೌದು. ಶಿವ ಮತ್ತು ಶಕ್ತಿ ಎರಡಲ್ಲ ಎಂದು ತೋರಿಸಿಕೊಡುವುದು ಈ ಸ್ವರೂಪ. ಇಷ್ಟೆಲ್ಲಾ ಆಗಿಯೂ ಶಿವ ತಪಸ್ವಿ- ಮಹಾ ಸನ್ಯಾಸಿ! ಆನಂದ ತಾಂಡವದಂತೆಯೇ ರುದ್ರ ತಾಂಡವದಲ್ಲೂ ನಟರಾಜನೇ ಇದ್ದಾನಲ್ಲವೇ?

ಶಿವ ಚಿಂತನೆಯೆಂಬುದು ಒಂದು ರಾತ್ರಿಯಲ್ಲಿ ಮುಗಿಯುವಂಥದ್ದಲ್ಲ. ಇದನ್ನು ನಡೆಸಲು ಬೇಕಿರುವುದು ಮಾಹಿತಿಯ ಭಂಡಾರವೂ ಅಲ್ಲ. ನಮ್ಮನ್ನೇ ನಾವು ಧ್ಯಾನಿಸುತ್ತಾ ನಮ್ಮ ತಮೋಗುಣಗಳನ್ನು ಕಳೆಯುತ್ತಾ ಹೋದಂತೆ ಹೊಳೆಯುವ ರಜೋಗುಣವನ್ನು ಬೆಳಕಾಗಿಸಿಕೊಂಡು ಸತ್ವದತ್ತ ಸಾಗಿದರೆ ಸಾಕು. ತಂ ವಂದೇ ಸಾತ್ವಿಕಂ ಶಿವಂ!

Leave a Reply