ಬೋಟ್ ಹೌಸ್, ಹುಣ್ಣಿಮೆ ಮತ್ತು ಮೌನ

“ಬಹುತೇಕ ಲೇಖಕರ ಪುಸ್ತಕಗಳು ಅನುಭವದ ಮಾಯೆಯಿಂದ ವಂಚಿತವಾದ ಬರಡು ಶಬ್ದಗಳ ನೂಕುನುಗ್ಗಲಿನಿಂದ ಗದ್ದಲಮಯವಾಗಿರುತ್ತೆ” ಅನ್ನುತ್ತಾರೆ ಓಶೋ. । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

“ Unless something is your experience, don’t go on deceiving yourself “ Osho

ಗೀತಾಂಜಲಿ ಯ ಪದ್ಯಗಳ ರಚನೆಯ ಕಾಲದಲ್ಲಿ ಟ್ಯಾಗೋರ್ ರು ಒಂದು ಪುಟ್ಟ ಹೌಸ್ ಬೋಟ್ ನಲ್ಲಿ ದಿನಗಟ್ಟಲೇ ನದಿಯ ಮೇಲೆ ವಾಸ ಮಾಡುತ್ತಿದ್ದರು, ಒಬ್ಬರೇ ದೋಣಿಯಲ್ಲಿ ಪ್ರಯಾಣ ಮಾಡುತ್ತ, ತಮಗೆ ಇಷ್ಟವಾದಲ್ಲಿ ದೋಣಿಯನ್ನ ನಿಲ್ಲಿಸಿ ಪ್ರಕೃತಿಯ ಮಡಿಲಲ್ಲಿ ಕಾವ್ಯವನ್ನು ತಮ್ಮೊಳಗೆ ಆವಾಹಿಸಿಕೊಂಡು ಪದ್ಯ ರಚನೆ ಮಾಡುತ್ತಿದ್ದರು.

ಒಂದು ಹುಣ್ಣಿಮೆ ರಾತ್ರಿ ಟ್ಯಾಗೋರರು ತಮ್ಮ ಬೋಟ್ ನ ಪುಟ್ಟ ಕೋಣೆಯಲ್ಲಿ ಕುಳಿತು ಕ್ಯಾಂಡಲ್ ಬೆಳಕಲ್ಲಿ ಹುಣ್ಣಿಮೆಯ ಅದ್ಭುತ ಸೌಂದರ್ಯದ ಬಗ್ಗೆ ಪದ್ಯ ರಚನೆ ಮಾಡುತ್ತಿದ್ದರು ಹೊರಗೆ ಚಂದ್ರ ತನ್ನ ಪೂರ್ಣ ಅವತಾರದಲ್ಲಿ ಕಂಗೊಳಿಸುತ್ತಿರುವುದರ ಕಡೆಗೆ ಕೊಂಚವೂ ಗಮನವಿಲ್ಲದೆ. ನದಿಯ ಅತ್ಯಂತ ಸುಂದರ ತಾಣದಲ್ಲಿ ಹೌಸ್ ಬೋಟ್ ನಿಂತಿತ್ತು, ಸುತ್ತ ಮುತ್ತ ಮೈಲುಗಟ್ಟಲೇ ಹಬ್ಬಿಕೊಂಡಿದ್ದ ಸುಶಾಂತ ಮೌನ. ಆಗೊಮ್ಮೆ ಈಗೊಮ್ಮೆ ನದಿಯ ಹರಿವು ಮೌನಕ್ಕೆ ಭಂಗ ತರುತ್ತಿತ್ತಾದರೂ ಈ ಅಡಚಣೆಯ ನಂತರ ಮೌನ ಇನ್ನೂ ಆಳವಾಗಿ ಹರಡಲು ಶುರು ಮಾಡುತ್ತಿತ್ತು.

ರವೀಂದ್ರರಿಗೆ ಈ ಬಗ್ಗೆ ಗಮನವೇ ಇರಲಿಲ್ಲ ; ಕ್ಯಾಂಡಲ್ ನ ಬೆಳಕಲ್ಲಿ ತದೇಕಚಿತ್ತದಿಂದ ಹುಣ್ಣಿಮೆಯ ಅಪ್ರತಿಮ ಚೆಲುವನ್ನ ಕಾಗದದ ಮೇಲೆ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ನಟ್ಟ ನಡು ರಾತ್ರಿ ಸುಸ್ತಾದಂತೆ ಅನಿಸಿದಾಗ ಎಲ್ಲ ಎತ್ತಿಟ್ಟು ಕ್ಯಾಂಡಲ್ ದೀಪವನ್ನು ಊದಿ ಆರಿಸಿ ನಿದ್ದೆಗೆ ಜಾರಲು ಸಿದ್ಧರಾದರು. ರವೀಂದ್ರರು ಕ್ಯಾಂಡಲ್ ದೀಪ ಆರಿಸುತ್ತಿದ್ದಂತೆಯೇ, ತಮ್ಮ ಡೈರಿಯಲ್ಲಿ ಟ್ಯಾಗೋರ್ ಇದನ್ನ ದಾಖಲು ಮಾಡುತ್ತಾರೆ “ ಕ್ಯಾಂಡಲ್ ದೀಪ ಆರಿಸುತ್ತಿದ್ದಂತೆಯೇ, ಒಂದು ಜಾದೂ ಸಂಭವಿಸಿತು. ನನಗೆ ದಿಗ್ಭ್ರಮೆಯಾಯಿತು, ಬಿದಿರಿನಿಂದ ನಿರ್ಮಿತವಾದ ಹೌಸ್ ಬೋಟ್ ನ ಎಲ್ಲ ಸಂದುಗಳಿಂದ ಹುಣ್ಣಿಮೆಯ ಚಂದ್ರ ಒಳಗೆ ನುಸುಳಲು ಶುರು ಮಾಡಿದ.

ರವೀಂದ್ರರು ಒಂದು ಕ್ಷಣ ಮೂಕ ವಿಸ್ಮಿತರಾದರು. ಅಷ್ಟು ಆಳವಾದ ಮೌನವನ್ನು ಅವರು ಎಂದೂ ಅನುಭವಿಸಿರಲಿಲ್ಲ. ಹೊರಗೆ ಬಂದು ಆಕಾಶದತ್ತ ಕಣ್ಣು ಹಾಯಿಸಿದ ರವೀಂದ್ರರ ಕಣ್ಣುಗಳಲ್ಲಿ ಕಣ್ಣೀರು ಒಂದೇ ಸವನೇ ಧಾರಾಕಾರವಾಗಿ ಹರಿಯುತ್ತಿತ್ತು. ಪುಟ್ಟ ಮಗುವಿನಂತೆ ರವೀಂದ್ರರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ಒಳಗೆ ಹೋಗಿ ಈಗ ತಾನೆ ಬರೆದು ಮುಗಿಸಿದ್ದ ಹುಣ್ಣಿಮೆ ಸೌಂದರ್ಯದ ಕುರಿತಾದ ಪದ್ಯವನ್ನು ಹರಿದು ಚೂರು ಚೂರು ಮಾಡಿದರು. ಈ ಘಟನೆಯನ್ನ ರವೀಂದ್ರು ತಮ್ಮ ಡೈರಿಯಲ್ಲಿ ನಮೂದಿಸುತ್ತಾರೆ, “ ಹುಣ್ಣಿಮೆಯ ಕುರಿತಾದ ನನ್ನ ಪದ್ಯ ಅತ್ಯಂತ ಕಳಪೆಯಾಗಿತ್ತು ; ನಿಜ ಹುಣ್ಣಿಮೆಯ ಸಾವಿರದ ಒಂದು ಪಾಲಿಗೂ ಸಮನಾಗಿರಲಿಲ್ಲ. ನಿಜದ ಹುಣ್ಣಿಮೆ ಹೊರಗೆ ಬಾಗಿಲು ಬಾರಿಸುತ್ತಿದ್ದಾಗ, ನಾನು ಕಲ್ಪನೆಯ ಹುಣ್ಣಿಮೆಯನ್ನು ಪದಗಳಲ್ಲಿ ಹಿಡಿಯಲು ತಿಣುಕಾಡುತ್ತಿದ್ದೆ, ಮೌನದ ಸೌಂದರ್ಯ ದ ಕುರಿತು ಪದ್ಯ ಬರೆಯುತ್ತಿದ್ದೆ ಆದರೆ ಪರಿಪೂರ್ಣ ಮೌನ ನನಗಾಗಿ ಹೊರಗೆ ಕಾಯುತ್ತಿತ್ತು. ಅಂಥ ಬೆಳಕನ್ನ ನಾನು ಹಿಂದೆಂದೂ ಕಂಡಿರಲಿಲ್ಲ ಮತ್ತು ಮುಂದೂ ಕೂಡ ಕಾಣಲು ಸಾಧ್ಯವಾಗಲಿಲ್ಲ. ಅಕಸ್ಮಾತ್ ನಾನೇನಾದರೂ ಕ್ಯಾಂಡಲ್ ಆರಿಸದೇ ನಿದ್ದೆಗೆ ಮೊರೆ ಹೋಗಿ ಬಿಟ್ಟಿದ್ದರೆ ನನ್ನ ಬದುಕಿನ ಅಭೂತಪೂರ್ವ ಕ್ಷಣಗಳಿಗೆ ಎದುರಾಗುವ ಅಪರೂಪದ ಅವಕಾಶವೊಂದನ್ನು ನನಗೇ ಗೊತ್ತಿಲ್ಲದಂತೆ ಕಳೆದುಕೊಂಡು ಬಿಡುತ್ತಿದ್ದೆ. ಆ ಪುಟ್ಟ ಕ್ಯಾಂಡಲ್ ನ ಬೆಳಕು ಇಡೀ ಹುಣ್ಣಿಮೆಯನ್ನು ಒಳಗೆ ಬರದಂತೆ ತಡೆ ಹಿಡಿದಿತ್ತು. “

ಬಹುತೇಕ ಲೇಖಕರ ಪುಸ್ತಕಗಳು ಅನುಭವದ ಮಾಯೆಯಿಂದ ವಂಚಿತವಾದ ಬರಡು ಶಬ್ದಗಳ ನೂಕುನುಗ್ಗಲಿನಿಂದ ಗದ್ದಲಮಯವಾಗಿರುತ್ತೆ.

Osho, From Ignorance to Innocence, Chapter 12 (excerpt)

Leave a Reply