ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಂದು ಯಹೂದಿ ಪೂಜಾ ಮಂದಿರದಲ್ಲಿ ಒಂದಿಷ್ಟು ಯಹೂದಿಗಳು ಭಗವಂತನ ಎದುರು ತಾವು ಎಷ್ಟು ಅಮುಖ್ಯರು ಎಂದು ನಿವೇದಿಸಿಕೊಳ್ಳಲು ಸೇರಿದ್ದರು.
ಮೊದಲು ಮುಂದೆ ಬಂದ ಒಬ್ಬ ರಬ್ಬೀ (ಯಹೂದಿ ಪುರೋಹಿತ) ಭಗವಂತನ ಎದುರು ಕೈಮುಗಿದುಕೊಂಡು “ನಿನ್ನ ಅಪಾರ ಅಸ್ತಿತ್ವದ ಎದುರು ನಾನು ತೃಣಮಾತ್ರ, ನಿನ್ನ ಸೃಷ್ಟಿಯಲ್ಲಿ ನಾನೊಂದು ಪುಟ್ಟ ಬಿಂದು ಮಾತ್ರ” ಎಂದು ನಿವೇದಿಸಿಕೊಂಡ.
ಆಮೇಲೆ ಎದ್ದು ನಿಂತ ಶ್ರೀಮಂತ ವ್ಯಾಪಾರಿ “ಭಗವಂತ ನನ್ನ ಸಂಪತ್ತಿಗೆ ನಿನ್ನ ಎದುರು ಯಾವ ಕಿಮ್ಮತ್ತೂ ಇಲ್ಲ, ನಿನ್ನ ಸೃಷ್ಟಿಯಲ್ಲಿ ನಾನು ಅಮುಖ್ಯ” ಎಂದು ಬಾಗಿ ನಮಸ್ಕರಿಸಿದ.
ಕೊನೆಯದಾಗಿ ಮುಂದೆ ಬಂದ ಒಬ್ಬ ಬಡ ಯಹೂದಿ ರೈತ “ದೇವರೆ ! ನಿನ್ನ ಎದುರು ನಾನು ಒಂದು ಸಣ್ಣ ಕಣ ಮಾತ್ರ, ನಿನ್ನ ಇಡೀ ಸೃಷ್ಟಿಯಲ್ಲಿ ನನಗೆ ಯಾವ ಪ್ರಾಮುಖ್ಯತೆ ಇಲ್ಲ, ನಾನು ಅಮುಖ್ಯ” ಎಂದು ದೀನನಾಗಿ ಹೇಳಿ ಹಿಂದೆ ಸರಿದ.
ರೈತ ತನ್ನ ಮಾತು ಮುಗಿಸುತ್ತಿದ್ದಂತೆಯೇ ರಬ್ಬಿಯ ಅಂಗಿ ಜಗ್ಗಿದ ಶ್ರೀಮಂತ ವ್ಯಾಪಾರಿ , ಅವನ ಕಿವಿಯಲ್ಲಿ ಕಿರುಚಿದ, “ಯಾರು ಈ ಅನಾಗರಿಕ ಕೊಳಕ? ಎಂಥ ಸೊಕ್ಕು ಇವನಿಗೆ? ತಾನೂ ಅಮುಖ್ಯ ಎಂದು ಹೇಳುತ್ತಿರುವನಲ್ಲ!”