ಮಹಾಭಾರತದಲ್ಲಿ ಹೇಳಲಾಗಿರುವಂತೆ, ಭಿಷ್ಮಪಿತಾಮಹನು ಪಾಂಡವರಿಗೆ ನೀಡಿದ ಬೋಧನೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ.
** ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು
ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ
ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು.
** ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. ಇಷ್ಟುದಿನವೂ ಸುಖವಿತ್ತು; ಈಗ ದುಃಖ ಬಂದಿದೆ, ಮುಂದೆ ಮತ್ತೆ ಸುಖ ಬರುತ್ತದೆ. ದುಃಖವೂ ನಿತ್ಯವಲ್ಲ, ಸುಖವೂ ನಿತ್ಯವಲ್ಲ.
** ಸಂತೋಷಕ್ಕೆ ಸ್ನೇಹಿತರಾಗಲಿ, ದುಃಖಕ್ಕೆ ಶತ್ರುಗಳಾಗಲಿ, ಪ್ರಯೋಜನಗಳಿಗೆ ಬುದ್ಧಿಯಾಗಲಿ, ಸುಖಕ್ಕೆ ಹಣವಾಗಲಿ, ಹಣಕ್ಕೆ ಬುದ್ಧಿಯಾಗಲಿ ಕಾರಣವೆಂದೂ ಹೇಳುವಹಾಗಿಲ್ಲ. ಏಕೆಂದರೆ, ಜಾಣನಾಗಲಿ ದಡ್ಡನಾಗಲಿ, ಶೂರನಾಗಲಿ ಭೀರುವಾಗಲಿ,
ಮಂಕನಾಗಲಿ ಕವಿಯಾಗಲಿ, ಬಲಿಷ್ಠನಾಗಲಿ ಕೈಲಾಗದವನಾಗಲಿ, ಸುಖ ಬರುವವರಿಗೆ ಬಂದೇಬರುತ್ತದೆ.
** ಪರಮ ಮೂಢನಿಗೆ, ಕಂಬಳಿ ಕವಚಿಕೊಂಡರೆ ಕಣ್ಣು ಕಾಣಿಸದಂತೆ, ಯಾವ ದುಃಖವೂ ಇಲ್ಲ; ಸುಖದುಃಖಗಳನ್ನು
ಮೀರಿದ ಜ್ಞಾನಿಗಳಿಗೂ ದುಃಖವಿಲ್ಲ; ಜಂಜಡವೆಲ್ಲ ಇವೆರಡರ ನಡುವೆ ಇರುವವರಿಗೆ ಮಾತ್ರ.
** ಸುಖವೋ ದುಃಖವೋ, ಇಷ್ಟವೋ ಅನಿಷ್ಟವೋ, ಬಂದಬಂದದ್ದನ್ನು ಎದೆಗುಂದದೆ ಅನುಭವಿಸಬೇಕು. ಆಮೆಯು ತನ್ನ ಅಂಗಗಳನ್ನೆಲ್ಲ ಒಳಗೆ ಎಳೆದುಕೊಳ್ಳುವಂತೆ ಕಾಮಕ್ರೋಧಗಳನ್ನು ಒಳಕ್ಕೆ ಅಡಗಿಸಿಕೊಂಡು ಶಾಂತನಾದರೆ ಆತ್ಮ ಸಂಪತ್ತು ದೊರೆಯುತ್ತದೆ, ಬೆಳಕು ಕಾಣುತ್ತದೆ. ಅದಕ್ಕೆ ಆಶೆಯನ್ನು ಬಿಡಬೇಕು; ಅದು ಮಂದಬುದ್ಧಿಗಳಿಗೆ ಸಾಧ್ಯವಿಲ್ಲ; ಆಶೆ ಎಂಬುದು ಮುಪ್ಪಿನಲ್ಲಿಯೂ ಮುದಿಯಾಗುವುದಿಲ್ಲ; ಬಂದರೆ ವಾಸಿಯಾಗದೆ ಪ್ರಾಣವನ್ನು ತೆಗೆಯುವ ರೋಗದಂತೆ, ಅದು ಕೊನೆಯವರೆಗೂ ಹೋಗುವುದಿಲ್ಲ.
** ಒಳ್ಳೆಯದೆಂದು ತಿಳಿದಿರುವುದನ್ನು ಕೂಡಲೇ ಮಾಡಿಬಿಡಬೇಕು; ಇಲ್ಲದಿದ್ದರೆ ಮೃತ್ಯು ಅಡ್ಡ ಬಂದೀತು. ನಾಳೆ
ಮಾಡುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡುವುದನ್ನು ಬೆಳಗ್ಗೆಯೇ ಮಾಡಬೇಕು. ಇದನ್ನು ಮಾಡಿದನೇ ಬಿಟ್ಟನೇ
ಎಂದು ಮೃತ್ಯುವು ನೋಡುವುದಿಲ್ಲ. ಅದಕ್ಕೆ ಅದು ಬೇಕಾಗಿಯೂ ಇರುವುದಿಲ್ಲ. ಆದ್ದರಿಂದ ಸದಾ ಧರ್ಮಶೀಲರಾಗಿರಬೇಕು.
** ತ್ಯಾಗವಿಲ್ಲದೆ ಇಹಸುಖವಿಲ್ಲ, ತ್ಯಾಗವಿಲ್ಲದೆ ಪರವಿಲ್ಲ; ತ್ಯಾಗವಿಲ್ಲದೆ ನೆಮ್ಮದಿಯ ನಿದ್ರೆಯೂ ಬರುವುದಿಲ್ಲ; ಎಲ್ಲವನ್ನೂ
ತ್ಯಜಿಸಿದವನಿಗೆ ಮಾತ್ರ ಸೌಖ್ಯ! ಭಾಗ್ಯವಂತನಿಗೆ ಮೃತ್ಯುವಿನ ಕೈಗೆ ಸಿಕ್ಕಿದವನ ಹಾಗೆ ಸದಾ ಕಳವಳವಿದ್ದೇ ಇರುತ್ತದೆ. ಹಣ ಕೈಗೆ
ಸೇರಿತೆಂದರೆ ಕ್ರೋಧ ಲೋಭಗಳು ಅವನನ್ನು ಮೆಟ್ಟಿಕೊಳ್ಳ್ಳುತ್ತವೆ; ಬುದ್ಧಿ ಕೆಟ್ಟುಹೋಗುತ್ತದೆ; ಅಡ್ಡನೋಟ, ಸಿಡುಕುಮೋರೆ, ಹುಬ್ಬುಗಂಟು, ಕಚ್ಚುತುಟಿ, ಕಟು ಭಾಷಣಗಳು ಬರುತ್ತವೆ; ತಾನೇ ರೂಪವಂತ, ಧನವಂತ, ಕುಲವಂತ, ಸಿದ್ಧಪುರುಷ, ತಾನು ಮನುಷ್ಯಮಾತ್ರದವನಲ್ಲ ಎಂಬ ಮದವೇರುತ್ತದೆ. ವಿಷಯಸುಖಗಳಲ್ಲಿ ಹಣವೆಲ್ಲ ವೆಚ್ಚವಾಗಿ ಹೋದರೆ, ಮತ್ತೊಬ್ಬರ ಸ್ವತ್ತಿಗೆ ಕೈಹಾಕುತ್ತಾನೆ; ಶಿಕ್ಷೆಗೆ ಗುರಿಯಾಗುತ್ತಾನೆ.
** ಒಂದು ವಿಧದಲ್ಲಿ ನೋಡಿದರೆ ಏನೂ ಇಲ್ಲದಿರುವುದು ರಾಜ್ಯ ಸಂಪತ್ತಿಗಿಂತ ಮೇಲು. ಈ ಸುಖದುಃಖಗಳನ್ನೂ
ಗಮನಿಸುತ್ತ, ನಿತ್ಯಾನಿತ್ಯವಿಚಾರ ಮಾಡಬೇಕು. ಸುಖ ಬಂದರೆ ಹಿಗ್ಗಬಾರದು; ದುಃಖ ಬಂದರೆ ಕುಗ್ಗಬಾರದು.
** ಕರ್ಮವು ಮನುಷ್ಯನನ್ನು ಅವನ ನೆರಳಿನಂತೆ ಎಡೆಬಿಡದೆ ಅನುಸರಿಸುತ್ತ, ಎದ್ದರೆ ಏಳುತ್ತ, ಕೂತರೆ ಕೂರುತ್ತ, ಓಡಿದರೆ
ಓಡುತ್ತ, ಮಲಗಿದರೆ ಮಲಗುತ್ತ ಇರುತ್ತದೆ. ಅದರ ಕಾಲ ಬಂದಾಗ, ಯಾರ ಪ್ರೇರಣೆಯೂ ಇಲ್ಲದೆ, ಮರಗಳು ಹೂವು
ಹಣ್ಣುಗಳನ್ನು ಬಿಡುವಂತೆ ಫಲ ಕೊಡುತ್ತದೆ.
ಸಾವಿರ ಹಸುಗಳಿದ್ದರೂ ಅವುಗಳ ನಡುವೆ ಕರು ತನ್ನ ತಾಯಿಯನ್ನು ಗುರುತಿಸುವಂತೆ ಅವರವರ ಕರ್ಮ ಅವರನ್ನು ಬೆಂಬಿಡದೆ ಹಿಡಿಯುತ್ತದೆ; ಬಟ್ಟೆ ಒಗೆದರೆ ಕೊಳೆ ಹೋಗುವಂತೆ, ಸತ್ಕರ್ಮಗಳಿಂದ ಪಾಪ ತೊಳೆದು ಇಷ್ಟಾರ್ಥಗಳು ಸಿದ್ಧಿಸುತ್ತವೆ.
(ಆಕರ : ವಚನ ಭಾರತ )