ಮೌನ ಭಿತ್ತಿ, ಧ್ಯಾನ ಚಿತ್ರ

ಧ್ಯಾನವನ್ನ, ಮೌನವನ್ನ ವಿವರಿಸುತ್ತ ಹೋದರೆ ಅದೆಲ್ಲವೂ ಸುಳ್ಳಾಗಿರುತ್ತದೆ. ಮೊದಲು ಹೇಳಿದ್ದು ಮಾತ್ರ ಸತ್ಯ; ಈಗ ಅದು ಶಬ್ದದ ಪುನರಾವರ್ತನೆ ಅಷ್ಟೇ… | ಓಶೋ ಉಪನ್ಯಾಸದಿಂದ; ಕನ್ನಡಕ್ಕೆ: ಚಿದಂಬರ ನರೇಂದ್ರ

Master Renzai said, “ That which can be heard will not be essential. I have given you the key ; silence is the key…”

ಒಂದು ದಿನ ಪ್ರಾಂತ್ಯದ ದೊರೆ ತನ್ನ ಯಾತ್ರಾ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ, ಝೆನ್ ಅನುಭಾವಿ ಮಾಸ್ಟರ್ ರಿನ್ಝೈ ನ ಆಶ್ರಮಕ್ಕೆ ಬಂದ.

ಮಾಸ್ಟರ್ ರಿನ್ಝೈ ನ ಭೇಟಿ ಮಾಡಿ ಅವನಿಗೆ ತನ್ನ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆ ರಾಜನಿಗೆ.

“ರಾಜ್ಯವನ್ನು ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಹೋಗಿಬಿಡುತ್ತದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?”

ರಾಜ, ಮಾಸ್ಟರ್ ರಿನ್ಝೈ ನ ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ.

ಮಾಸ್ಟರ್ ರಿನ್ಝೈ ಮೌನವಾಗಿ ಕುಳಿತುಕೊಂಡ. ದೊರೆಗೆ ಕಸಿವಿಸಿ ಶುರುವಾಯಿತು,

“ಮಾಸ್ಟರ್ ನನ್ನ ಮಾತು ಕೇಳಿಸಿತಾ ? ನಾನು ನಿನ್ನನ್ನೇ ಕೇಳುತ್ತಿರುವುದು, ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳು”

ಮಾಸ್ಟರ್ ರಿನ್ಝೈ ಉತ್ತರಿಸಿದ “ ಹೇಳಿದೆನಲ್ಲ ! ಈಗ ನೀನು ಹೋಗಬಹುದು”

“ಆದರೆ ನನಗೆ ಏನೂ ಕೇಳಿಸಲಿಲ್ಲ” ದೊರೆ ತಕರಾರು ಮಾಡಿದ.

“ಯಾವುದನ್ನ ಕೇಳಿಸಿಕೊಳ್ಳಬಹುದೋ ಅದರಿಂದ ಏನೂ ಉಪಯೋಗವಿಲ್ಲ. ನಾನು ನಿನಗೆ ಧರ್ಮದ ತಿರುಳಿನ ಕೀಲಿ ಕೈ ಕೊಟ್ಟಿರುವೆ ; ಮೌನ ಆ ಕೀಲಿ ಕೈ. ಈಗ ನೀನು ಹೋಗು ಅವಸರದಲ್ಲಿದ್ದೀ” ಮಾಸ್ಟರ್ ರಿನ್ಝೈ ಅವಸರ ಮಾಡಿದ.

ದೊರೆಗೆ ಈಗ ಮಾಸ್ಟರ್ ಕೊಟ್ಟ ಉತ್ತರದಲ್ಲಿ ಆಸಕ್ತಿ ಮೂಡತೊಡಗಿತ್ತು, “ಇಲ್ಲ ಬಹಳ ಸಂಕ್ಷಿಪ್ತವಾಯಿತು, ಸ್ವಲ್ಪ ವಿವರಣೆ ಕೊಡು, ನನಗೆ ಸಹಾಯವಾಗುತ್ತದೆ” ದೊರೆ ಮಾಸ್ಟರ್ ನ ವಿನಂತಿಸಿಕೊಂಡ.

“ಮತ್ತೆ ಮತ್ತೆ ಹೇಳಿದರೆ ಉತ್ತರ ನಾಶವಾಗಿಬಿಡುತ್ತದೆ” ಮಾಸ್ಟರ್ ರಿನ್ಝೈ ಹಿಂದೇಟು ಹಾಕಿದ.

“ಮರುಕಳಿಕೆ ಆದರೂ ಅಡ್ಡಿ ಇಲ್ಲ, ದಯವಿಟ್ಟು ವಿವರಿಸು” ದೊರೆ ಒತ್ತಾಯ ಮಾಡಿದ.

“ಧ್ಯಾನ” ಮಾಸ್ಟರ್ ರಿನ್ಝೈ ಉತ್ತರಿಸಿದ

“ ಮತ್ತೆ ಧ್ಯಾನ ನಮ್ಮನ್ನು ಎಲ್ಲಿ ಮುಟ್ಟಿಸುತ್ತದೆ?” ಕೇಳಿದ ದೊರೆ

“ ಮೌನ” ಮಾಸ್ಟರ್ ರಿನ್ಝೈ ಉತ್ತರಿಸಿದ.

“ ಈಗಲೂ ನನಗೆ ಅರ್ಥವಾಗಲಿಲ್ಲ. ನಾನು ಮಾತಿನ ಮನುಷ್ಯ . ಈಗಲೂ ನಿನ್ನ ಉತ್ತರ ನನಗೆ ಒಗಟಾಗಿದೆ. ದಯವಿಟ್ಟು ವಿವರಿಸು” ದೊರೆ ಮತ್ತೆ ಬೇಡಿಕೊಂಡ.

“ ಧ್ಯಾನವನ್ನ, ಮೌನವನ್ನ ವಿವರಿಸುತ್ತ ಹೋದರೆ ಅದೆಲ್ಲವೂ ಸುಳ್ಳಾಗಿರುತ್ತದೆ. ಮೊದಲು ಹೇಳಿದ್ದು ಮಾತ್ರ ಸತ್ಯ; ಈಗ ಅದು ಶಬ್ದದ ಪುನರಾವರ್ತನೆ ಅಷ್ಟೇ. ಈಗಾಗಲೇ ಅದು ಅರ್ಧ ಸುಳ್ಳಾಗಿದೆ, ಇನ್ನಷ್ಟು ವಿವರಣೆ ಕೊಟ್ಟರೆ ಪೂರ್ಣ ಸುಳ್ಳಾಗುತ್ತದೆ. ನೀನು ನನ್ನ ಒತ್ತಾಯ ಮಾಡಿ ಪೂರ್ಣ ಸತ್ಯವನ್ನು ಪೂರ್ಣ ಸುಳ್ಳಾಗಿಸಿದ ಪಾಪಕ್ಕೆ ಗುರಿಯಾಗಬೇಡ. ಹೋಗು ಹೋಗು, ನಿನಗೆ ಬೇರೆ ಬಹಳಷ್ಟು ಕೆಲಸಗಳಿರಬಹುದು” ಮಾಸ್ಟರ್ ರಿನ್ಝೈ ತಾನೇ ಜಾಗ ಬಿಟ್ಟು ಎದ್ದು ಹೋಗಿಬಿಟ್ಟ.

ನಾನೂ ಕೂಡ ನನ್ನ ಉಪನ್ಯಾಸಗಳಲ್ಲಿ, ದೃಷ್ಟಾಂತಗಳನ್ನ, ಸತ್ಯ ಘಟನೆಗಳನ್ನ, ಕಥೆಗಳನ್ನ, ಹಾಸ್ಯ ಪ್ರಸಂಗಗಳನ್ನ ಬಳಸುತ್ತೇನಾದರೂ, ಅವು ನಿಜವಾಗಿ ಅಷ್ಟು ಅವಶ್ಯಕವಲ್ಲ, ಇದು ಶುದ್ಧ ಕಾಲಹರಣ. ಆದರೆ ಮಕ್ಕಳಿಗೆ, ಮಕ್ಕಳಂಥವರಿಗೆ ಇವೆಲ್ಲ ಇಷ್ಟ. ನನ್ನ ಭರವಸೆಯೆಂದರೆ ನಾನು ಹೇಳಿದ್ದು ಏನೂ ಅರ್ಥವಾಗದಿದ್ದರೂ ಈ ಕಥೆಗಳಾದರೂ ನಿಮ್ಮ ನೆನಪಿನಲ್ಲಿರುತ್ತವೆ ಮತ್ತು ಈ ಕಥೆಗಳ ಸುತ್ತ ನಿಜದ ರುಚಿ, ವಾಸನೆ ಹಬ್ಬಿಕೊಂಡಿರುತ್ತದೆ. ನೀವು ಈ ಕಥೆಗಳನ್ನ ಮರೆಯಲಿಲ್ಲವಾದರೆ ಈ ಕಥೆಗಳ ಜೊತೆಗೆ ಅಂಟಿಕೊಂಡಿರುವ ಬೇರೆ ಏನೋ ಒಂದು ನಿಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುತ್ತದೆ.

Osho, The Supreme Doctrine – Discourses on the Kenopanishad, Ch 7, Q1 (excerpt)

Leave a Reply