ಮೋಕ್ಷಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?  ~ ಭಾಗ 2

RAMANA

“ಮೋಕ್ಷ ಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?” ಎಂದು ಗೃಹಸ್ಥ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ:

ನಿನ್ನನ್ನು ನೀನು ಗೃಹಸ್ಥ ಎಂದೇಕೆ ತಿಳಿಯುವೆ? ಸಂನ್ಯಾಸಿಯಾಗಿ ಹೊರಟಾಗಲೂ “ನಾನು ಸಂನ್ಯಾಸಿ” ಎಂಬ ಆಲೋಚನೆ ಬೆನ್ನಟ್ಟುತ್ತದೆ. ಮನೆಯಲ್ಲೇ ಇದ್ದರೂ, ಮನೆಯನ್ನು ತೊರೆದು ಕಾಡಿಗೆ ಹೋದರೂ ಮನಸ್ಸು ಬೆನ್ನಟ್ಟುತ್ತದೆ. ಈ ಅಹಂಭಾವವೇ ಎಲ್ಲ ಆಲೋಚನೆಗಳ ಮೂಲ. ಅದೇ ದೇಹವನ್ನೂ ಪ್ರಪಂಚವನ್ನೂ ಸೃಷ್ಟಿ ಮಾಡಿ, ನಿಮ್ಮನ್ನು ನೀವು ಗೃಹಸ್ಥನೆಂದು ಗುರುತಿಸಿಕೊಳ್ಳುವಂತೆ ಮಾಡುತ್ತದೆ.
ಸಂಸಾರವನ್ನು ತ್ಯಜಿಸಿ ಹೊರಟರೆ, ಅಹಂಭಾವವು ಸಂಸಾರಕ್ಕೆ ಬದಲಾಗಿ ಅರಣ್ಯವನ್ನೂ ಗೃಹಸ್ಥ ಎಂಬುದಕ್ಕೆ ಪ್ರತಿಯಾಗಿ ಸಂನ್ಯಾಸಿ ಎಂಬ ಭಾವವನ್ನೂ ಮನದಲ್ಲಿ ಬಿತ್ತುತ್ತದೆ ಅಷ್ಟೆ.
ಮಾನಸಿಕ ಬಂಧಗಳು ಎಲ್ಲಿದ್ದರೂ ಇರುತ್ತವೆ. ಸ್ಥಳವನ್ನು ಬದಲಾಯಿಸಿದ ಮಾತ್ರಕ್ಕೆ ಅವು ಬದಲಾಗುವುದಿಲ್ಲ. ನಿಜವಾಗಿಯೂ ದಾಟಬೇಕಿರುವುದನ್ನು ಮನಸ್ಸನ್ನು. ಅದನ್ನು ನೀವು ಅರಣ್ಯದಲ್ಲಿದ್ದುಕೊಂಡು ಸಾಧಿಸಬಲ್ಲಿರಾದರೆ, ಖಂಡಿತವಾಗಿಯೂ ಅದನ್ನು ಮನೆಯಲ್ಲಿಯೂ ಸಾಧಿಸಬಲ್ಲಿರಿ. ನಿಮ್ಮ ಇಚ್ಛೆಯಂತೆ ಪರಿಸರ ಬದಲಾಗಿಬಿಡುವುದಿಲ್ಲ.
ಎಂತಹ ಪರಿಸರದಲ್ಲೂ ಸಾಧಕರು ತಮ್ಮ ಸಹಜ ಸ್ಥಿತಿಯಾದ ಸಮಾಧಿಯಲ್ಲಿ ಯಾವಾಗಲೂ ಇರಬೇಕು. ಶಂಕರಾಚಾರ್ಯರು ವಿವೇಕ ಚೂಡಾಮಣಿಯಲ್ಲಿ ಇದನ್ನು ಹೇಳಿದ್ದಾರೆ. “ನಾಹಂ ಚಿಂತಾ” (ನಾನು ದೇಹವಲ್ಲ). ಕೋsಹಂ (ನಾನು ಯಾರು). ಸೋsಹಂ (ಅದೇ ನಾನು) ಎಂದು ಶಂಕರರು ಹೇಳುತ್ತಾರೆ. ಈ ಚಿಂತನೆ ನಮಗೆ ಸಾಧ್ಯವಾಗಬೇಕು.
(ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ. ಹಿಂದಿನ ಭಾಗ ಇಲ್ಲಿದೆ : https://aralimara.com/2018/07/03/ramanaqa1/)

1 Comment

Leave a Reply