ಹೂವು ಗಂಧ ಸೇರಿಕೊಂಡು

ಪ್ರೇಮಿಸುವವ, ಪ್ರೇಮಿಸಲ್ಪಡುವವ ಒಂದಾಗಿ ಪ್ರೇಮ ಮಾತ್ರ ಬದುಕುಳಿಯುತ್ತದೆ… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

The duality has melted in to oneness. The knower and the known are dissolved ; there is only knowing. – Osho

ಎರಡು ಗುಳ್ಳೆಗಳು
ಒಂದಾಗಿ ನಾಶವಾದವು.
ಕಮಲ ಅರಳಿದ ಕ್ಷಣ.

ಭಗವಂತ ಒಂದು ಬದಿಯ ಸಂಗೀತ. ಅವನನ್ನು ಕೇಳಿದಾಗ ನೀವೂ ಸಂಗೀತವಾಗುವಿರಿ, ಇನ್ನೊಂದು ಬದಿಯಿಂದ. ಆಗ ಸಂಗೀತಗಾರನೂ ಇಲ್ಲ ಶ್ರೋತೃವೂ ಇಲ್ಲ ; ಆ ಇಬ್ಬರೂ ಕರಗಿ ಹೋಗಿದ್ದಾರೆ ಒಂದೇ ಸಂಗೀತದಲ್ಲಿ.

ಒಮ್ಮೆ ಲಖನೌ ಗೆ ಒಬ್ಬ ಮಹಾನ್ ಸಿತಾರ್ ವಾದಕ ಆಗಮಿಸಿದ. ಬಹುತೇಕ ಎಲ್ಲ ಪ್ರಸಿದ್ಧ ಸಂಗೀತಗಾರರಂತೆ ಆ ಸಂಗೀತಗಾರನೂ ಮಹಾ ಮೂಡಿಯೂ, ತಲೆತಿರುಕನೂ ಆಗಿದ್ದ. ದೊಡ್ಡ ಸಂಗೀತ ಪ್ರೇಮಿಯಾಗಿದ್ದ ಲಖನೌದ ನವಾಬ, ಆ ಸಂಗೀತಗಾರನನ್ನು ಆಹ್ವಾನಿಸಿ ತನ್ನ ಆಸ್ಥಾನದಲ್ಲಿ ಸಿತಾರ್ ವಾದನ ಪ್ರಸ್ತುತಪಡಿಸಬೇಕೆಂದು ಮನವಿ ಮಾಡಿಕೊಂಡ.

“ ನನ್ನ ಕರಾರಿಗೆ ಒಪ್ಪಿಕೊಂಡರೆ ಮಾತ್ರ ನಾನು ಆಸ್ಥಾನದಲ್ಲಿ ಸಿತಾರ್ ನುಡಿಸುತ್ತೇನೆ. ನಾನು ಸಿತಾರ್ ನುಡಿಸುವಾಗ ಯಾರೂ ಅಲ್ಲಾಡಬಾರದು, ಮೆಚ್ಚುಗೆಯಿಂದ ಕೂಡ ಯಾರೂ ತಲೆಯಲ್ಲಾಡಿಸಬಾರದು. ಯಾರಾದರೂ ತಲೆಯಲ್ಲಾಡಿಸಿದರೆ ಅವರ ತಲೆ ಕತ್ತರಿಸಬೇಕು “ ಸಂಗೀತಗಾರ ನವಾಬನಿಗೆ ಆಸ್ಥಾನದಲ್ಲಿ ಸಿತಾರ್ ನುಡಿಸಲು ತನ್ನ ಕರಾರುಗಳನ್ನ ವಿವರಿಸಿದ.

ಸಂಗೀತಗಾರನ ಕರಾರು ಕೇಳಿ ನವಾಬನಿಗೆ ಆಶ್ಚರ್ಯವಾಯಿತು ಆದರೂ ಸಂಗೀತದ ಹುಚ್ಚನಾಗಿದ್ದ ನವಾಬ ಈ ಕರಾರಿಗೆ ಒಪ್ಪಿಕೊಂಡ. ನಗರದ ಎಲ್ಲ ಸಂಗೀತ ಪ್ರೇಮಿಗಳಿಗೂ ಈ ಕರಾರಿನ ಬಗ್ಗೆ ತಿಳಿಸಲಾಯಿತು. ಸಂಗೀತಕ್ಕೆ ಮಂತ್ರ ಮುಗ್ಧರಾಗಿ ಯಾರಾದರೂ ತಲೆಯಲ್ಲಾಡಿಸಿದರೆ ಅವರ ತಲೆ ಕತ್ತರಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಒಂದು ಮಧುರ ಸಂಗೀತ ಕೇಳಿದಾಗ ಸಹಜವಾಗಿ ಕೇಳುಗ ಮಂತ್ರ ಮುಗ್ಧನಾಗುತ್ತಾನೆ, ಅವನ ದೇಹ ಸಂಗೀತದ ಲಯಗಳಿಗೆ ಮಿಡಿಯಲು ಶುರುಮಾಡುತ್ತದೆ. ಅವನ ತಲೆ ತಾನೇ ತಾನಾಗಿ ತೂಗಲುತೊಡಗುತ್ತದೆ. ಎಲ್ಲ ಸಂಗೀತಗಾರರಿಗೂ ಕೇಳುಗರ ಈ ಪ್ರತಿಕ್ರಿಯೆ ಉತ್ಸಾಹ ಮೂಡಿಸುತ್ತದೆ, ತಮ್ಮ ಸಂಗೀತ ಜನರನ್ನು ಮುಟ್ಟುತ್ತಿದೆ ಎಂದು ಖುಶಿಯಾಗುತ್ತದೆ. ಆದರೆ ನಗರದ ಸಂಗೀತ ಪ್ರೇಮಿಗಳಿಗೆ ಸಂಗೀತಗಾರನ ಈ ಕರಾರು ಕೇಳಿ ಆಶ್ಚರ್ಯ, ಆತಂಕವಾಯಿತು. ಸಾವಿರಾರು ಜನರಿಗೆ ಸಂಗೀತ ಕೇಳುವ ಆಸೆಯಿದ್ದರೂ ಕೇವಲ ಕೆಲ ನೂರು ಜನ ಮಾತ್ರ ಸಂಗೀತ ಕೇಳಲು ಆಗಮಿಸಿದರು.

ಸಂಗೀತಗಾರ ಸಿತಾರ್ ನುಡಿಸಲು ಶುರು ಮಾಡುತ್ತಿದ್ದಂತೆಯೇ ಆಗಮಿಸಿದ ಶ್ರೋತೃಗಳು ಯೋಗ ಮುದ್ರೆಯಲ್ಲಿ ತಮ್ಮ ದೇಹವನ್ನು ಅಲ್ಲಾಡದಂತೆ ಗಟ್ಟಿಯಾಗಿ ಹಿಡಿದುಕೊಂಡು ಕುಳಿತರು. ಜನ ತಲೆದೂಗುವುದನ್ನ ಗಮನಿಸಲು ನವಾಬ ಅಲ್ಲಲ್ಲಿ ತನ್ನ ಸೈನಿಕರನ್ನು ನೇಮಿಸಿದ್ದ. ಸಂಗೀತಗಾರ ಅದ್ಭುತವಾಗಿ ಸಿತಾರ್ ನುಡಿಸುತ್ತಿದ್ದ, ಒಂದು ಗಂಟೆಯ ನಂತರ ಒಂದು ಹತ್ತು ಹನ್ನೆರಡು ಜನರು ತನ್ಮಯರಾಗಿ ತಲೆದೂಗುತ್ತಿರುವುದನ್ನು ಕಂಡು ನವಾಬನಿಗೆ ಗಾಬರಿಯಾಯಿತು. ಸಿತಾರ್ ವಾದನ ಮುಗಿದ ಮೇಲೆ ಆ ಹನ್ನೆರಡು ಜನರನ್ನ ಸಂಗೀತಗಾರನ ಎದುರು ನಿಲ್ಲಿಸಲಾಯಿತು. “ ನೀವು ಸಿತಾರ್ ನುಡಿಸುವಾಗ ಈ ಹನ್ನೆರಡು ಜನ ತಲೆದೂಗುತ್ತಿದ್ದರು, ನೀವು ನಿಜವಾಗಿ ಇವರ ತಲೆ ಕತ್ತರಿಸಲು ಇಚ್ಛಿಸುತ್ತೀರಾ? “ ನವಾಬ, ಸಂಗೀತಗಾರನನ್ನು ಕೇಳಿದ.

“ ಇಲ್ಲ, ಈ ಹನ್ನೆರಡು ಜನರಿಗಾಗಿ ಮಾತ್ರ ನಾನು ಈಗ ಸಿತಾರ್ ನುಡಿಸಲು ಬಯಸುತ್ತೇನೆ, ಬಾಕಿ ಎಲ್ಲರನ್ನೂ ವಾಪಸ್ ಕಳಿಸಿ ಬಿಡು. ಈ ಹನ್ನೆರಡು ಜನ ಜೀವ ಭಯವಿಲ್ಲದೇ ನನ್ನ ಸಂಗೀತವನ್ನು ಆಸ್ವಾದಿಸಿದ್ದಾರೆ, ನನ್ನ ಸಂಗೀತದಲ್ಲಿ ಒಂದಾಗಿದ್ದಾರೆ. ಪ್ರತೀ ಸಂಗೀತಗಾರನೂ ಇಂಥ ಕೇಳುಗರಿಗಾಗಿ ಸದಾ ಹುಡುಕುತ್ತಿರುತ್ತಾನೆ “ ಸಂಗೀತಗಾರ ಖುಶಿಯಿಂದ ಮುಂದೆ ಎರಡು ಗಂಟೆಗಳ ಕಾಲ ಕೇವಲ ಆ ಹನ್ನೆರಡು ಜನರಿಗಾಗಿ ಮಾತ್ರ ಅದ್ಭುತವಾಗಿ ಸಿತಾರ್ ನುಡಿಸಿದ.

… ಆಗ ಪ್ರತ್ಯೇಕ, ಏಕತ್ವದಲ್ಲಿ ಒಂದಾಗುತ್ತದೆ. ತಿಳಿದುಕೊಳ್ಳುವವ ತಿಳಿದುಕೊಳ್ಳುವುದರಲ್ಲಿ ಕರಗಿ ಹೋಗಿ ತಿಳುವಳಿಕೆ ಒಂದೇ ಉಳಿದುಕೊಳ್ಳುತ್ತದೆ. ಪ್ರೇಮಿಸುವವ, ಪ್ರೇಮಿಸಲ್ಪಡುವವ ಒಂದಾಗಿ ಪ್ರೇಮ ಮಾತ್ರ ಬದುಕುಳಿಯುತ್ತದೆ.

Osho, The Revolution – Discourses on Kabir, Ch 7, (excerpt)

Leave a Reply