ಸತ್ಯ ಯಾವಾಗಲೂ ಸರಿ ಬಾಗಿಲ ಮೂಲಕವೇ, ಕಣ್ಣಿನ ಮೂಲಕ, ನಿಮ್ಮ ಸ್ವಂತ ಅನುಭವವಾಗಿ ನಿಮಗೆ ದಕ್ಕಬೇಕು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
The heard is the lie and the seen is the truth – Rabia al – Adawiyya
ಸಾಧನಾ ಮಾರ್ಗದಲ್ಲಿ ಸೂಫಿ ಪಂಥಕ್ಕೆ ಬಹಳ ಮಹತ್ವದ ಸ್ಥಾನ ಮತ್ತು ಸೂಫಿಗಳಲ್ಲಿಯೇ ರಾಬಿಯಾಳದ್ದು ಮುಂಚೂಣಿಯ ಹೆಸರು.
ಒಮ್ಮೆ ಯಾರೋ ಒಬ್ಬ ಜಿಜ್ಞಾಸು ರಾಬಿಯಾಳನ್ನು ಪ್ರಶ್ನೆ ಮಾಡಿದ, “ ಸತ್ಯಕ್ಕೂ ಸುಳ್ಳಿಗೂ ಎಷ್ಟು ಅಂತರ ? “
ರಾಬಿಯಾ ಥಟ್ಟನೆ ಉತ್ತರ ನೀಡಿದಳು, “ ನಾಲ್ಕು ಬೆರಳಿನಷ್ಟು”
ಆ ಮನುಷ್ಯನಿಗೆ ರಾಬಿಯಾಳ ಉತ್ತರ ಕೇಳಿ ಗಲಿಬಿಲಿಯಾಯ್ತು. “ ಏನು ಹಾಗೆಂದರೆ ?” ಅವನು ಮತ್ತೆ ಪ್ರಶ್ನೆ ಮಾಡಿದ.
“ ಕಣ್ಣಿಗೂ ಕಿವಿಗೂ ಇರುವ ಅಂತರವೇ ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಅಂತರ ಕೂಡ. ಕಣ್ಣು ಮತ್ತು ಕಿವಿಯ ನಡುವೆ ನಾಲ್ಕು ಬೆರಳುಗಳ ಅಂತರ ಉಂಟು. ಯಾವುದನ್ನೆಲ್ಲ ನೀನು ಕಿವಿಯ ಮೂಲಕ ಅಂದರೆ ಪರೋಕ್ಷವಾಗಿ ಗ್ರಹಿಸಿದ್ದಿಯೋ ಅದೆಲ್ಲ ಸುಳ್ಳು, ಯಾವುದನ್ನ ನೀನು ಕಣ್ಣುಗಳ ಮೂಲಕ ಕಂಡುಕೊಂಡಿದ್ದಿಯೋ, ಹಾಗೆಂದರೆ ಪ್ರತ್ಯಕ್ಷವಾಗಿ ಅಥವಾ ಅನುಭವದ ಮೂಲಕ ಗ್ರಹಿಸಿದ್ದೀಯೋ, ಅದು ಮಾತ್ರ ನಿನ್ನ ಸತ್ಯ.”
ರಾಬಿಯಾ ನಗುತ್ತ ಅವನಿಗೆ ತನ್ನ ಉತ್ತರದ ಬಗ್ಗೆ ವಿವರಣೆ ನೀಡಿದಳು.
ಸತ್ಯ ನಿಮ್ಮ ಸ್ವಂತದ ಅನುಭವ, ನಿಮ್ಮ ಸ್ವಂತದ ದರ್ಶನ. ಅದು ನಾನು ಸ್ವಂತ ಕಂಡ ಸತ್ಯವೇ ಆಗಿದ್ದರೂ ಅದನ್ನ ನಾನು ನಿನಗೆ ಹೇಳಿದ ಕ್ಷಣದಲ್ಲಿಯೇ ಅದು ನಿನಗೆ ಸುಳ್ಳಾಗಿ ಪರಿಗಣಿಸಲ್ಪಡುವುದು. ನನಗೆ ಅದು ಸತ್ಯವಾಗಿತ್ತು, ನಾನು ಅದನ್ನ ನನ್ನ ಕಣ್ಣಿನ ಮೂಲಕ ಅಂದರೆ, ಪ್ರತ್ಯಕ್ಷವಾಗಿ ಸ್ವಂತ ಅನುಭವದ ಮೂಲಕ ಕಂಡುಕೊಂಡಿದ್ದೆ, ಅದು ನನ್ನ ದರ್ಶನವಾಗಿತ್ತು. ಆದರೆ ಅದು ನಿನಗೆ ನಿನ್ನ ದರ್ಶನವಾಗುವುದು ಸಾಧ್ಯವಿಲ್ಲ. ಅದು ನಿನಗೆ ಬಾಡಿಗೆಯದು. ಅದು ನಿನ್ನ ನಂಬಿಕೆಯಾಗಬಹುದು, ನಿನ್ನ ತಿಳುವಳಿಕೆಯಾಗಬಹುದು ಆದರೆ ಸತ್ಯವಾಗುವುದು ಸಾಧ್ಯವಿಲ್ಲ. ಇದನ್ನ ನೀನು ನಿನ್ನ ಕಿವಿಯ ಮೂಲಕ , ಪರೋಕ್ಷವಾಗಿ ಗ್ರಹಿಸಿದ್ದೀಯ. ಇದನ್ನು ನೀನು ನಂಬತೊಡಗಿದಾಗ ಸುಳ್ಳು ನಿನ್ನ ಭಾಗವಾಗುತ್ತ ಹೋಗುತ್ತದೆ. ನೆನಪಿಟ್ಟುಕೊಳ್ಳಿ, ತಪ್ಪು ಬಾಗಿಲ ಮೂಲಕ ಬಂದಾಗ ಸತ್ಯವೂ ನಿಮಗೆ ಸುಳ್ಳಾಗುತ್ತದೆ. ಸತ್ಯ ಯಾವಾಗಲೂ ಸರಿ ಬಾಗಿಲ ಮೂಲಕವೇ, ಕಣ್ಣಿನ ಮೂಲಕ, ನಿಮ್ಮ ಸ್ವಂತ ಅನುಭವವಾಗಿ ನಿಮಗೆ ದಕ್ಕಬೇಕು.
Osho, Sufis, The people of the path – Talks on Sufism, Vol 1, Ch 11 (excerpt)