ಎಷ್ಟು ಜನ ಒಂದು ಸಂಗತಿಯನ್ನ ನಂಬುತ್ತಾರೆ, ಎಷ್ಟು ಜನ ಆ ಸಂಗತಿಯ ಪರ ತಮ್ಮ ಮತ ಚಲಾಯಿಸುತ್ತಾರೆ ಎನ್ನುವುದು ಆ ಸಂಗತಿಯ ಸತ್ಯಕ್ಕೆ ಪ್ರಮಾಣವಲ್ಲ. ಸತ್ಯ ಯಾವತ್ತಿದ್ದರೂ ವೈಯಕ್ತಿಕ ಅನುಭವದ ಪ್ರಮಾಣ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
Truth is not decided by voting. It is not a question of how many people believe in it – Osho
ಇದು ಸಾಮಾನ್ಯ ಅನ್ನಬಹುದಾದ ಮನುಷ್ಯನ ಪರಿಸ್ಥಿತಿ ಆದರೆ ಆತ ಸಾಮಾನ್ಯ ಮನುಷ್ಯ ಅಲ್ಲ. ಬುದ್ಧ ಸಾಮಾನ್ಯ, ಪೈಥಾಗೋರಸ್ ಸಾಮಾನ್ಯ ಏಕೆಂದರೆ ಅವರು ಸಹಜ ಮನುಷ್ಯರು, ಆದ್ದರಿಂದಲೇ ಅವರು ಸಾಮಾನ್ಯರು. ಆದರೆ ಈ ಸಾಮಾನ್ಯ (normal ) ಅನ್ನುವ ಪದಕ್ಕೆ ಇನ್ನೊಂದು ಅರ್ಥವೂ ಇದೆ. Norm ಎಂದರೆ ಎವರೇಜ್. ದಿನ ನಿತ್ಯದ ಬಳಕೆಯಲ್ಲಿ ನಾರ್ಮಲ್ ಎಂದರೆ ಸಾಧಾರಣ (ಎವರೇಜ್ ) ಅನ್ನೋ ಅರ್ಥವೇ. ಈ ಅರ್ಥದಲ್ಲಿ ಬುದ್ಧ abnormal (ಅಸಹಜ) ಅವನು ಸಾಧಾರಣ ಅಲ್ಲವೇ ಅಲ್ಲ. ಪೈಥಾಗೋರಸ್ ಅಸಹಜ ಮನುಷ್ಯ. ಹಾಗು ಕೋಟ್ಯಾಂತರ ಜನ ನಾವು ಯಾರನ್ನ ಸಾಮಾನ್ಯರು (ನಾರ್ಮಲ್) ಅನ್ನುತ್ತೇವೆಯೋ ಅವರು ಸಾಧಾರಣರು average people ಏಕೆಂದರೆ ಅವರು ಸಹಜರಲ್ಲ. ಇಂಥ ಜನರೇ ಬಹುಸಂಖ್ಯಾತರು ಆದರೆ ಸತ್ಯ ಕ್ಕೆ ಇವರ ಮನ್ನಣೆ, ಇವರ ವೋಟ್ ಬೇಕಿಲ್ಲ , ಸತ್ಯ ಸ್ಪರ್ಧೆಯಿಂದ ಹೊರತು.
ಭೂಮಿ ಸೂರ್ಯನ ಸುತ್ತ ಸುತ್ತುತ್ತದೆಯೇ ಹೊರತು, ಸೂರ್ಯ ಭೂಮಿಯ ಸುತ್ತ ಸುತ್ತುವುದಿಲ್ಲ ಎಂದು ಗೆಲಿಲಿಯೋ ಹೇಳಿದಾಗ ಅವನ ಜೊತೆ ಯಾರೂ ಇರಲಿಲ್ಲ. ಶತ ಶತಮಾನಗಳಿಂದಲೂ ಜಗತ್ತು, ಸೂರ್ಯ ಭೂಮಿಯ ಸುತ್ತ ಸುತ್ತುತ್ತದೆ ಎಂದು ನಂಬಿಕೊಂಡೇ ಇತ್ತು. ನಮ್ಮ ಭಾಷೆಯಲ್ಲಿಯೂ ಕೂಡ ಈ ತಿಳುವಳಿಕೆ ಹಾಸುಹೊಕ್ಕಾಗಿತ್ತು, ಈಗಲೂ ನಾವು ಆ ಭಾಷೆಯಲ್ಲಿಯೇ ಮಾತನಾಡುತ್ತೇವೆ, ಉದಾಹರಣೆಗೆ, ಸೂರ್ಯ ಹುಟ್ಟಿದ, ಸೂರ್ಯ ಮುಳುಗಿದ ಎನ್ನುತ್ತೇವೆ. ಹಾಗು ಈ ಭಾಷೆ ಇನ್ನು ಮುಂದೆಯೂ ಬಳಸಲ್ಪಡುತ್ತದೆ ಎನ್ನುವಲ್ಲಿ ನನಗಾವ ಸಂಶಯವೂ ಇಲ್ಲ . ಸೂರ್ಯ ಹುಟ್ಟುವುದೂ ಇಲ್ಲ , ಮುಳುಗುವುದೂ ಇಲ್ಲ ಅದು ಇದ್ದಲ್ಲಿಯೇ ಇದೆ, ನಾವು ಸೂರ್ಯನನ್ನು ಸುತ್ತುತ್ತಿದ್ದೇವೆ.
ಮೊದಲ ಬಾರಿ ಗೆಲಿಲಿಯೋ ಸೂರ್ಯ ಕೇಂದ್ರ ಎಂದು ಹೇಳಿದಾಗ ಸಹಜವಾಗಿಯೇ ಚರ್ಚ್ ಮತ್ತು ರಾಜ್ಯಾಡಳಿತದ ಕಣ್ಣು ಕೆಂಪಾದವು. ಗೆಲಿಲಿಯೋ ನ್ನ ಕೋರ್ಟಿಗೆ ಎಳೆಯಲಾಯಿತು, ಪುರೋಹಿತರ ಎದುರು ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. “ ಹೌದು ಈ ಗೆಲಿಲಿಯೋ ಗೆ ಎಷ್ಚು ಧೈರ್ಯ, ಕೋಟ್ಯಾಂತರ ಜನರ ನಂಬಿಕೆಗೆ ವಿರುದ್ಧವಾಗಿ ಮಾತನಾಡಲು? , ಚರ್ಚ ನ ಹೆಚ್ಚುಗಾರಿಕೆಗೆ ಸವಾಲು ಹಾಕಲು ? ಹುಚ್ಚು ಹಿಡಿದಿದೆಯಾ ಇವನಿಗೆ? ಎಂಥ ಸೊಕ್ಕು ಇವನಿಗೆ ? “ ಎಂದು ಮೂಗು ಮುರಿದವರೇ ಹೆಚ್ಚು.
ಗೆಲಿಲಿಯೋ ಅಪಾರ ಸೌಂದರ್ಯದ ಮನುಷ್ಯನಾಗಿದ್ದಿರಬಹುದು ಖಂಡಿತ ಅವ ಎಲ್ಲ ರೋಗಗಳಿಂದ ಹೊರತಾದವ. “ ಸರಿ, ನಾನು ಕ್ಷಮೆ ಕೇಳುತ್ತೇನೆ ಆದರೆ ನನ್ನ ಕ್ಷಮೆಯಿಂದ ನಿಮ್ಮ ಅಹಂ ಗೆ ಸ್ವಲ್ಪ ತೃಪ್ತಿಯಾಗಬಹುದೇ ಹೊರತು ಬೇರೆ ಯಾವ ವ್ಯತ್ಯಾಸವೂ ಆಗುವುದಿಲ್ಲ, ಭೂಮಿ ಸೂರ್ಯನ ನುತ್ತ ಸುತ್ತುವುದನ್ನ ನಿಲ್ಲಿಸುವುದಿಲ್ಲ.” ಗೆಲಿಲಿಯೋ ತನ್ನ ಮಾತಿನಿಂದ ಹಿಂದೆ ಸರಿಯಲಿಲ್ಲ.
ಹಾಗಾದರೆ ಕೋಟ್ಯಾಂತರ ಜನ ಸುಳ್ಳು ಹೇಳುತ್ತಿದ್ದಾರೆಯೇ ? ಎಂದು ಗೆಲಿಲಿಯೋ ನ್ನ ಪ್ರಶ್ನೆ ಮಾಡಿದರೆ ಪಾಪ ಅವ ಏನು ಹೇಳಿಯಾನು ?
ಎಷ್ಟು ಜನ ಒಂದು ಸಂಗತಿಯನ್ನ ನಂಬುತ್ತಾರೆ, ಎಷ್ಟು ಜನ ಆ ಸಂಗತಿಯ ಪರ ತಮ್ಮ ಮತ ಚಲಾಯಿಸುತ್ತಾರೆ ಎನ್ನುವುದು ಆ ಸಂಗತಿಯ ಸತ್ಯಕ್ಕೆ ಪ್ರಮಾಣವಲ್ಲ. ಸತ್ಯ ಯಾವತ್ತಿದ್ದರೂ ವೈಯಕ್ತಿಕ ಅನುಭವದ ಪ್ರಮಾಣ. ಪೈಥಾಗೋರಸ್ ಗೆ ಇದು ಗೊತ್ತಿತ್ತು ಈ ಸತ್ಯವನ್ನು ಆತ ಸ್ವಯಂ ಅನುಭವಿಸಿದವನಾಗಿದ್ದ. ಈ ಅರ್ಥದಲ್ಲಿ ಸತ್ಯ ಯಾವತ್ತೂ ಡೆಮೊಕ್ರಾಟಿಕ್ ಅಲ್ಲ ಅದು ಯಾವಾಗಲು ಅರಿಸ್ಟೋಕ್ರ್ಯಾಟಿಕ್ ಸ್ವಭಾವದ್ದೇ, ಏಕೆಂದರೆ ಸತ್ಯದ ಬೇರು ಇರುವುದು ವೈಯಕ್ತಿಕ ಅನುಭವದ ಸತ್ವದಲ್ಲಿಯೇ. ಸಮೂಹಗಳು, ಗುಂಪುಗಳು ಒಂದಾಗಿ ಸತ್ಯವನ್ನು ತೀರ್ಮಾನ ಮಾಡಿ ಹೇಳುವುದು ಸಾಧ್ಯವಿಲ್ಲ.
Osho, Philosophia Perennis – Discourses on the Golden verses of Pythagoras, Vol 2, Ch 11 (excerpt)