ಝೆನ್, ಪಾವಿತ್ರ್ಯತೆಯನ್ನ ಸಾಧಾರಣ ಬದುಕಿಗೂ ತೊಡಿಸುತ್ತದೆ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
Carrying fuel, drawing water from well and he says, ‘ How mysterious’
ಝೆನ್ ಪ್ರಕಾರ ಎಲ್ಲವೂ ದಿವ್ಯ ವಾಗಿರುವಾಗ (devine), ‘ವಿಶೇಷ’ ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಇಲ್ಲಿರುವ ಎಲ್ಲವೂ ವಿಶೇಷವೇ. ವಿಶೇಷವಲ್ಲದ್ದೂ ಯಾವುದೂ ಇಲ್ಲ ಹಾಗಾಗಿ ಯಾವುದೂ ವಿಶೇಷವಲ್ಲ. ಗಿಡ ಮರಗಳ ಪ್ರತಿಯೊಂದು ಎಲೆ, ನದಿ-ಸಮುದ್ರ ತೀರದ ಪ್ರತಿಯೊಂದು ಹರಳು ಕಲ್ಲು ಎಲ್ಲವೂ ಅನನ್ಯವೇ ಎಲ್ಲವೂ ಪವಿತ್ರವೇ. ಕೇವಲ ಭಗವದ್ಗೀತೆ ಪವಿತ್ರವಲ್ಲ, ಕೇವಲ ಕುರಾನ್, ಬೈಬಲ್ ಮಾತ್ರ ಪವಿತ್ರವಲ್ಲ, ಪ್ರೇಮಿ ತನ್ನ ಪ್ರಿಯಕರ / ಪ್ರಿಯತಮೆಗೆ ಬರೆಯುವ ಪ್ರತೀ ಪ್ರೇಮ ಪತ್ರವೂ ಪವಿತ್ರವೇ.
ಝೆನ್, ಪಾವಿತ್ರ್ಯತೆಯನ್ನ ಸಾಧಾರಣ ಬದುಕಿಗೂ ತೊಡಿಸುತ್ತದೆ.
ಝೆನ್ ಮಾಸ್ಟರ್ ಬೋಕೋಯು (Bokoju ) ಹೇಳುತ್ತಿದ್ದ,
ಎಷ್ಟು ಅದ್ಭುತವಿದು, ಎಷ್ಟು ನಿಗೂಢವಿದು
ನಾನು ಉರುವಲು ಹೊತ್ತು ನಡೆಯುವುದು
ನಾನು ಬಾವಿಯ ನೀರ ಸೇದುವುದು
ಎಷ್ಟು ಅದ್ಭುತ, ಎಷ್ಟು ನಿಗೂಢವಿದು
ಉರುವಲನ್ನು ಹೊತ್ತು ನಡೆಯುವುದು ಮತ್ತು ಬಾವಿಯ ನೀರ ಸೇದುವುದು ಕೂಡ ಎಷ್ಟು ಅದ್ಭುತ, ಎಷ್ಟು ನಿಗೂಢ ಎನ್ನುತ್ತಾನೆ ಝೆನ್ ಮಾಸ್ಟರ್ ಬೋಕೋಯು.
ಇದು ಝೆನ್ ನ ಆತ್ಮ ಇದು ಝೆನ್ ನ ಚೇತನ. ಈ ಚೇತನವೇ ಸಾಧಾರಣವನ್ನು ಅಸಾಧಾರಣವಾಗಿಸುತ್ತದೆ, ಅಪವಿತ್ರವನ್ನು ಪವಿತ್ರವಾಗಿಸುತ್ತದೆ ಹಾಗು ಲೌಕಿಕ ಮತ್ತು ಅಲೌಕಿಕದ ನಡುವಿನ ಅಂತರವನ್ನು ಇಲ್ಲವಾಗಿಸುತ್ತದೆ.
Osho, Zen, the Path of Paradox, Vol 1, Ch 1 (excerpt)