ಬದುಕು ಇರುವುದೇ ಖುಶಿಗಾಗಿ, ಸಂಭ್ರಮಿಸಲು. ಕೇವಲ ಬಳಕೆಗಾಗಿ ಅಲ್ಲ. ಬದುಕು ಮಾರುಕಟ್ಟೆಯ ಸರಕಲ್ಲ, ಅದೊಂದು ಕಾವ್ಯ ; ಅದನ್ನು ಕವಿತೆಯ ಹಾಗೆಯೇ ಬಾಳಬೇಕು, ಹಾಡು, ಕುಣಿತದ ಹಾಗೆ ಸಂಭ್ರಮಿಸಬೇಕು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಒಮ್ಮೆ ಲಾವೋತ್ಸೇ ತನ್ನ ಶಿಷ್ಯರ ಜೊತೆಗೂಡಿ ಒಂದು ಕಾಡಿನ ಮೂಲಕ ಪ್ರಯಾಣ ಮಾಡುತ್ತಿದ್ದ. ಆ ಪ್ರಾಂತ್ಯದಲ್ಲಿ ಒಂದು ಹೊಸ ಅರಮನೆ ಕಟ್ಟುವ ಕೆಲಸ ನಡೆಯುತ್ತಿದ್ದರಿಂದ, ಮರಗೆಲಸದವರು ಆ ಕಾಡಿನ ಎಲ್ಲ ಮರಗಳನ್ನು ಅರಮನೆಯ ಕೆಲಸಕ್ಕಾಗಿ ಕತ್ತರಿಸುತ್ತಿದ್ದರು. ಆದರೆ ಒಂದು ವಿಶಾಲ ಮರವನ್ನು ಮಾತ್ರ ಮರಗೆಲಸದವರು ಮುಟ್ಟದಿರುವುದನ್ನ ಲಾವೋತ್ಸೇಯ ಸೂಕ್ಷ್ಮ ಕಣ್ಣುಗಳು ಗಮನಿಸಿದವು. ಸಾವಿರಾರು ಟೊಂಗೆಗಳ ಆ ಮರ ಎಷ್ಟು ವಿಶಾಲವಾಗಿತ್ತೆಂದರೆ, ಒಂದೇ ಸಲಕ್ಕೆ ಹತ್ತು ಸಾವಿರ ಜನ ಆ ಮರದ ನೆರಳಲ್ಲಿ ವಿಶ್ರಾಂತಿ ಪಡೆಯಬಹುದಿತ್ತು. ಲಾವೋತ್ಸೇ ತನ್ನ ಶಿಷ್ಯರಿಗೆ ಮರಗೆಲಸದವರ ಹತ್ತಿರ ಹೋಗಿ ಆ ಮರ ಯಾಕೆ ಕತ್ತರಿಸುತ್ತಿಲ್ಲ ಅವರು ಎನ್ನುವುದನ್ನ ವಿಚಾರಿಸಲು ಹೇಳಿದ.
ಶಿಷ್ಯರು ಮರಗೆಲಸದವರ ಹತ್ತಿರ ಹೋಗಿ ವಿಚಾರಿಸಿದರು, “ ಅಷ್ಟು ವಿಶಾಲವಾದ ಮರ ನೀವು ಯಾಕೆ ಕತ್ತರಿಸುತ್ತಿಲ್ಲ?”
ಮರಗೆಲಸದವರು ಉತ್ತರಿಸಿದರು, “ ಅದೊಂದು ಯಾವುದಕ್ಕೂ ಉಪಯೋಗಕ್ಕೆ ಬಾರದ ಮರ. ಆ ಮರದಲ್ಲಿ ಟೊಂಗೆಗಳಲ್ಲಿ ಗಂಟುಗಳಿರುವುದರಿಂದ ಆ ಮರದ ಭಾಗಗಳಿಂದ ಏನನ್ನೂ ತಯಾರಿಸಲಾಗುವುದಿಲ್ಲ. ಆ ಮರದ ಯಾವ ಟೊಂಗೆಯೂ ನೇರವಾಗಿಲ್ಲ ಹಾಗಾಗಿ ಕಂಬಗಳನ್ನು ತಯಾರಿಸುವುದು, ಪೀಠೋಪಕರಣಗಳನ್ನು ತಯಾರಿಸುವುದು ಅಸಾಧ್ಯ. ಆ ಮರದ ಕಟ್ಟಿಗೆಯನ್ನ ಉರುವಲಾಗಿ ಬಳಸುವುದು ಕೂಡ ಕಷ್ಟ, ಅಷ್ಟು ಅಪಾಯಕಾರಿಯಾಗಿದೆ ಅದರ ಹೊಗೆ, ಜನ ಕಣ್ಣು ಕಳೆದುಕೊಳ್ಞುವ ಸಾಧ್ಯತೆ ಕೂಡ ಉಂಟು. ಈ ಎಲ್ಲ ಕಾರಣಗಳಿಗಾಗಿಯೇ ನಾವು ಆ ಮರವನ್ನು ಬಳಸುತ್ತಿಲ್ಲ”
ಶಿಷ್ಯರು ವಾಪಸ್ ಬಂದಾಗ ಲಾವೋತ್ಸೇ ನಗುತ್ತ ಹೇಳಿದ, “ ಈ ಜಗತ್ತಿನಲ್ಲಿ ಬದುಕಬೇಕಾದರೆ ಆ ಮರದ ಹಾಗೆ ಯಾವುದಕ್ಕೂ ಉಪಯೋಗವಾಗದ ಹಾಗೆ ಇರಿ, ಆಗ ಯಾರೂ ನಿಮಗೆ ಅಪಾಯವನ್ನು ಮಾಡುವುದಿಲ್ಲ. ನೀವು ನೇರವಾಗಿದ್ದರೆ ನಿಮ್ಮನ್ನ ಜನ ಕತ್ತರಿಸಿ ತಮ್ಮ ಮನೆಗಳಿಗೆ ಪೀಠೋಪಕರಣ ತಯಾರಿಸಿಕೊಳ್ಳುತ್ತಾರೆ. ನೀವು ಆಕರ್ಷಕವಾಗಿದ್ದರೆ ಜನ ನಿಮ್ಮನ್ನು ಸರಕಿನ ಹಾಗೆ ಮಾರುತ್ತಾರೆ, ಕೊಳ್ಳುತ್ತಾರೆ. ಯಾವುದಕ್ಕೂ ಉಪಯೋಗಕ್ಕೆ ಬಾರದ ಆ ಮರದ ಹಾಗೆ ಇರಿ. ಆಗ ನಿಮಗೆ ಯಾರೂ ತೊಂದರೆ ಕೊಡುವುದಿಲ್ಲ, ಆಗ ನೀವು ವಿಶಾಲವಾಗಿ ಬೆಳೆಯಬಹುದು, ಸಾವಿರಾರು ಜನರಿಗೆ ನೆರಳಾಗಬಹುದು.”
ಲಾವೋತ್ಸೇಯ ತರ್ಕ ನಮ್ಮ ಬುದ್ಧಿ-ಮನಸ್ಸಿನ ತಿಳುವಳಿಕೆಗಿಂತ ಬಹಳ ಬೇರೆ. ಅವನ ಪ್ರಕಾರ, “ಯಾವಾಗಲೂ ನೀನು ಕೊನೆಯವನಾಗಿರು, ಈ ಜಗತ್ತಿನಲ್ಲಿ ನೀನು ಚಲಿಸುವುದು ಹೇಗಿರಬೇಕೆಂದರೆ ನೀನು ಚಲಿಸುತ್ತಿರುವುದು ಯಾರಿಗೂ ಗೊತ್ತಾಗಬಾರದು. ಸದಾ ಅನಾಮಿಕನಾಗಿರು. ಯಾವ ಕೆಲಸವನ್ನೂ ಮುನ್ನುಗ್ಗಿ ಮಾಡಬೇಡ ಹಾಗೇನಾದರೂ ಮಾಡುವೆಯಾದರೆ ನಿನ್ನ ಹೊರಗೆ ಹಾಕಲಾಗುತ್ತದೆ. ಯಾವ ಕೆಲಸದಲ್ಲೂ ಸ್ಪರ್ಧೆಗೆ ಮುಂದಾಗಬೇಡ, ನಿನ್ನ ಮೌಲ್ಯವನ್ನು ಪ್ರಮಾಣೀಕರಿಸಲು ಹಾತೊರೆಯಬೇಡ. ಈ ಯಾವುದರ ಅವಶ್ಯಕತೆ ನಿನಗಿಲ್ಲ. ಸುಮ್ಮನೇ ಕೆಲಸಕ್ಕೆ ಬಾರದವನಂತಿರು, ಖುಶಿಯಾಗಿರು.”
ಹೌದು ಲಾವೋತ್ಸೇಯ ಮಾತುಗಳು ನಿಮಗೆ ಕಾರ್ಯಸಾಧು ಅನಿಸದಿರಬಹುದು ಆದರೆ ಅವನನ್ನು ನೀವು ಅರಿತುಕೊಳ್ಳಬಲ್ಲಿರಾದರೆ, ಅವನ ಮಾತುಗಳು ಆಳದ ನೆಲೆಯಲ್ಲಿ ಎಷ್ಟು ಪ್ರ್ಯಾಕ್ಟಿಕಲ್ ಎನ್ನುವುದರ ಅನುಭವ ನಿಮಗಾಗುತ್ತದೆ, ಏಕೆಂದರೆ ಬದುಕು ಇರುವುದೇ ಖುಶಿಗಾಗಿ, ಸಂಭ್ರಮಿಸಲು. ಕೇವಲ ಬಳಕೆಗಾಗಿ ಅಲ್ಲ. ಬದುಕು ಮಾರುಕಟ್ಟೆಯ ಸರಕಲ್ಲ, ಅದೊಂದು ಕಾವ್ಯ ; ಅದನ್ನು ಕವಿತೆಯ ಹಾಗೆಯೇ ಬಾಳಬೇಕು, ಹಾಡು, ಕುಣಿತದ ಹಾಗೆ ಸಂಭ್ರಮಿಸಬೇಕು. ಯಾರೋ ಒಬ್ಬರಿಗೆ ಮಾತ್ರ ಅರಳದ ರಸ್ತೆ ಬದಿಯ ಹೂವಿನಂತೆ ಬದುಕಬೇಕು, ತನ್ನ ಸುಗಂಧ ಎಲ್ಲರಿಗೂ ಮುಟ್ಚುವಂತೆ ಗಾಳಿಯಲ್ಲಿ ಹರಿಬಿಟ್ಟು ತನ್ನ ಇರುವನ್ನು ಸಂಭ್ರಮಿಸಬೇಕು.
ಲಾವೋತ್ಸೇ ಹೇಳುವಂತೆ,
ಜಾಣತನ ಮತ್ತು ಪೂಜನೀಯರಾಗೋ ಚಟ
ಸ್ವಲ್ಪ ಕಡಿಮೆ ಆದರೆ
ನೂರಾರು ಮಂದಿ
ಸಮಾಧಾನದಿಂದ ಉಸಿರಾಡಬಹುದು.
ನೈತಿಕತೆ ಮತ್ತು ನ್ಯಾಯಪರತೆ
ನಿಂತು ಹೋದರೆ
ಜನರಿಗೆ, ಮನೆ – ಕುಟುಂಬ
ಸ್ವಲ್ಪ ಹತ್ತಿರವಾಗಬಹುದು.
ಪ್ಲಾನ್ ಮತ್ತು ಪ್ರಾಫಿಟ್ ಗಳ
ಕಳವಳ ಮರೆತು ಹೋದರೆ
ಜನರು ಬಾಗಿಲು ತೆಗೆದು
ಅಂಜಿಕೆಯಿಲ್ಲದೇ ಓಡಾಡಬಹುದು.
ಈ ಮೂರು ನಿಯಮಗಳು ಸಾಕಾಗದೆ ಹೋದರೆ
ಒಮ್ಮೆ ಖಾದಿ ಸವರಿ
ಕತ್ತರಿಸದ ಕಟ್ಟಿಗೆ ಮುಟ್ಟಿನೋಡಿ
ಅಗತ್ಯಗಳು ಕಡಿಮೆಯಾಗಲಿ
ಬಯಕೆಗಳು ಖಾಲಿ ಆಗಲಿ
ಹಸಿವಾದಾಗ ತಿನ್ನಿ
ಬೆಳಕಾದಾಗ ಎಚ್ಚರವಾಗಿ.
ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ
ನಿರ್ಭಿಡೆಯಿಂದ ಬದುಕಿ.
ಲಾವೋತ್ಸೇ ಹೇಳುವ ಹಾಗೆ, ಎಲ್ಲ ಬಂಧನಗಳನ್ನು ಕಳಚಿ. ನೀವು ಕಾವ್ಯವಾಗಬೇಕಾದರೆ, ಆನಂದವಾಗಬೇಕಾದರೆ, ಉಪಯೋಗ, ಬಳಕೆ ಎಲ್ಲವನ್ನೂ ಮರೆತುಬಿಡಿ. ನೀವು ನಿಮ್ಮ ಹಾಗೆ ಇರಿ.
ಹಿಪ್ಪಿಗಳಲ್ಲಿ ಒಂದು ಮಾತಿದೆ, “ Do your thing “
ಹಾಗೆ ನೋಡಿದರೆ ಲಾವೋತ್ಸೇ, ಜಗತ್ತಿನ ಮೊದಲ ಹಿಪ್ಪಿ.
Osho, Tao, The three treasures – Talks on fragments from Tao The Ching by Lao Tzu, Vol 1, Ch 2, Q 5 (excerpt)