ಧರ್ಮ ಎಂದರೆ ಸ್ವಾತಂತ್ರ್ಯ

ಒಮ್ಮೆ ಒಂದು ಧರ್ಮವನ್ನು ಪಾಲಿಸುವವರು ಸಂಘಟಿತರಾದರೆಂದರೆ, ಆ ಧರ್ಮ ಸತ್ತಂತೆಯೇ. ಧರ್ಮವನ್ನು ಸಂಘಟಿಸುವುದೆಂದರೆ ಜನಸಮೂಹದ ಬಯಕೆಗಳೊಡನೆ ರಾಜಿಮಾಡಿಕೊಂಡಂತೆ, ಜನ ಸಮೂಹದ ಉನ್ಮಾದಕ್ಕೆ ಉತ್ತೇಜನ ನೀಡಿದಂತೆ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Once a religion is organised, it is dead – Osho

ಹೀಗೊಂದು ಕಥೆ,

ನರಕದ ಹೆಡ್ ಆಫ್ ಡಿಪಾರ್ಟಮೆಂಟ್ ತನ್ನ ಜ್ಯೂನಿಯರ್ ನನ್ನು ಭೂಮಿಯ ಸ್ಥಿತಿಗತಿಗಳನ್ನು ನೋಡಿಕೊಂಡುಬರಲು ಕಳುಹಿಸಿದ್ದ.

ಲಗುಬಗೆಯಿಂದ ತನ್ನ ಭೂಮಿಯ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಜ್ಯೂನಿಯರ್ ನರಕಕ್ಕೆ ವಾಪಸ್ಸಾಗಿ, ಎಚ್ಚೋಡಿ ಗೆ ವರದಿ ಒಪ್ಪಿಸಿದ,

“ ಸೀನಿಯರ್, ಭೂಮಿಯ ಪರಿಸ್ಥಿತಿ ಚಿಂತಾಜನಕವಾಗಿದೆ, ಕುರಿಗಾಹಿಯೊಬ್ಬ ಭೂಮಿಯ ಮೇಲೆ ಓಡಾಡುತ್ತ, ಸತ್ಯವನ್ನು ಜನರಿಗೆ ತಿಳಿಸಿ ಹೇಳುತ್ತಿದ್ದಾನೆ. ಜನ ಅವನ ಮಾತು ಕೇಳಲು ಮುಗಿಬಿದ್ದು ಬರುತ್ತಿದ್ದಾರೆ. ಹೀಗೇ ಮುಂದುವರೆದರೆ ನಾವು ನರಕದ ಬಾಗಿಲು ಬಂದ್ ಮಾಡಬೇಕಾಗುವುದು. ದಯವಿಟ್ಟು ತಕ್ಷಣವೇ ಏನಾದರೂ ತಂತ್ರ ಮಾಡಬೇಕು.”

ತನ್ನ ಇಷ್ಟದ ಸಿಗರೇಟ್ ಸೇದುತ್ತಿದ್ದ ಸೀನಿಯರ್ ಪ್ರಶಾಂತವಾಗಿ ನಗುತ್ತ ಜ್ಯೂನಿಯರ್ ನ ಧಾವಂತವನ್ನು ಕೇಳಿಸಿಕೊಂಡ ಆದರೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

“ ಸೀನಿಯರ್, ನಿಮಗೆ ಪರಿಸ್ಥಿತಿಯ ಸೀರಿಯಸ್’ನೆಸ್ ಅರ್ಥ ಆದ ಹಾಗಿಲ್ಲ , ಇನ್ನು ಕೆಲವೇ ದಿನಗಳಲ್ಲಿ ನಾವೆಲ್ಲ ಕೆಲಸ ಕಳೆದುಕೊಳ್ಳಬೇಕಾಗಬಹುದು” ಜ್ಯೂನಿಯರ್ ತನ್ನ ಆತಂಕವನ್ನ ಮುಂದುವರೆಸಿದ.

ಸೀನಿಯರ್ ನಿಧಾನವಾಗಿ ಸಿಗರೇಟ್ ಆರಿಸಿ ತನ್ನ ಆರಾಂ ಖುರ್ಚಿಯಲ್ಲಿ ಹಿಂದೆ ಒರಗಿಕೊಂಡು ಮಾತನಾಡಿದ,

“ ಹುಡುಗಾ ಗಾಬರಿಯಾಗಬೇಡ, ಇದೆಲ್ಲ ಇನ್ನೂ ಸ್ವಲ್ಪ ದಿನ ಮುಂದುವರೆಯಲಿ, ಒಂದು ಹಂತಕ್ಕೆ ಬಂದಾಗ ನಾವು ಮಧ್ಯ ಪ್ರವೇಶ ಮಾಡಿ ಅವರು ಸಂಘಟಿತರಾಗುವಂತೆ ಮಾಡುವ !”

ಹೌದು, ಒಮ್ಮೆ ಒಂದು ಧರ್ಮವನ್ನು ಪಾಲಿಸುವವರು ಸಂಘಟಿತರಾದರೆಂದರೆ, ಆ ಧರ್ಮ ಸತ್ತಂತೆಯೇ. ಧರ್ಮವನ್ನು ಸಂಘಟಿಸುವುದೆಂದರೆ ಜನಸಮೂಹದ ಬಯಕೆಗಳೊಡನೆ ರಾಜಿಮಾಡಿಕೊಂಡಂತೆ, ಜನ ಸಮೂಹದ ಉನ್ಮಾದಕ್ಕೆ ಉತ್ತೇಜನ ನೀಡಿದಂತೆ.

ನೀವು ಧರ್ಮದಲ್ಲಿರುವ ಧಾರ್ಮಿಕತೆಯನ್ನ ಕಳೆದುಕೊಳ್ಳಲು ಸಿದ್ಧರಾದಾಗ, ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದಾಗ ಮಾತ್ರ, ಧರ್ಮವನ್ನು ಸಂಘಟಿಸಬಹುದು. ಆದರೆ ಈ ಎರಡೂ ಉದ್ದೇಶಗಳು ಧರ್ಮದ ಅವನತಿಯನ್ನು ನಿಕ್ಕಿ ಮಾಡುತ್ತವೆ.

ಧರ್ಮ, ಧರ್ಮವಾಗಿ ಉಳಿಯದಿದ್ದಾಗ ಮಾತ್ರ ಅದನ್ನು ಸಂಘಟಿಸಬಹುದು. ಧರ್ಮವನ್ನು ಧರ್ಮವಾಗಿ ಸಂಘಟಿಸುವುದು ಅಸಾಧ್ಯ. ಒಮ್ಮೆ ಸಂಘಟಿತವಾಯಿತೆಂದರೆ ಅದು ಧರ್ಮವಾಗಿ ಉಳಿಯುವುದಿಲ್ಲ.

ಧರ್ಮ ಮೂಲಭೂತವಾಗಿ ಅಸಂಘಟಿತ, ಸದಾ ಅಸ್ತವ್ಯಸ್ತ (Chaotic) ಮತ್ತು ಕೊನೆವರೆಗೂ ನಿಯಮಗಳಿಗೆ ಹೊರತಾದದ್ದು – ಏಕೆಂದರೆ ಧರ್ಮ ಎಂದರೆ ಸ್ವಾತಂತ್ರ್ಯ.

Osho, The Discipline of Transcendence – Discourse on 42 sutras of Buddha, Vol 3, Ch 5 (excerpt)

1 Comment

  1. ಓಶೋ ರವರ ಉತ್ತಮ ಮಾತುಗಳು. ಧರ್ಮವನ್ನು ಪಾಲಿಸುವವರು ಸಂಘಟಿತರಾದಾಗ ಧರ್ಮ ಅಲ್ಲಿಂದ ಕಾಲ್ಕಿತ್ತು ಅಲ್ಲಿ ಸಂಘಟನೆಯ ನಿಯಮಗಳೇ ಪ್ರಧಾನವಾಗುತ್ತವೆ. ಸಂಘಟಿತಗೊಂಡ ಧರ್ಮಗಳು ಜಗತ್ತಿನ ಇತಿಹಾಸದಲ್ಲಿ ಮಾಡಿದ ಅನಾಹುತಗಳಿಗೆ ಲೆಕ್ಕವೇ ಇಲ್ಲ.

Leave a Reply