ನೋಡು, ಕಾಣುತ್ತದೆ; ಹುಡುಕು, ಸಿಗುತ್ತದೆ… । ಅಧ್ಯಾತ್ಮ ಡೈರಿ

ಸಫೋಕ್ಲಿಸ್ “ನೋಡು, ಅದು ಕಾಣುತ್ತದೆ” ಅನ್ನುತ್ತಿದ್ದಾನೆ. ನೋಡಿದರೆ ಯಾವುದೇ ವಸ್ತು ಕಾಣುವುದು ಶತಃಸಿದ್ಧ. ಅದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದೂ ಸಫೋಕ್ಲಿಸ್ ಯಾಕೆ ಆ ಮಾತನ್ನು ಹೇಳುತ್ತಿದ್ದಾನೆ? : ಅಲಾವಿಕಾ

ನಾವು ಬಹಳ ಸಲ ಇದೊಂದು ತಪ್ಪನ್ನು ಮಾಡುತ್ತೇವೆ. ನಮಗೆ ಯಾವುದು ಕಾಣುವುದಿಲ್ಲವೋ ಅದು ಇಲ್ಲವೆಂದು ನಿರಾಕರಿಸಿಬಿಡುತ್ತೇವೆ. ನಾವು ನೋಡುವ ಯತ್ನವನ್ನೇ ಮಾಡದೆ ಹೋದರೆ ಅದು ಕಾಣುವುದಾದರೂ ಹೇಗೆ? ಈ ಪ್ರಶ್ನೆಯನ್ನೇ ನಾವು ಮಾಡಿಕೊಳ್ಳುವುದಿಲ್ಲ.

ಸಫೋಕ್ಲಿಸ್ “ನೋಡು, ಅದು ಕಾಣುತ್ತದೆ” ಅನ್ನುತ್ತಿದ್ದಾನೆ. ನೋಡಿದರೆ ಯಾವುದೇ ವಸ್ತು ಕಾಣುವುದು ಶತಃಸಿದ್ಧ. ಅದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದೂ ಸಫೋಕ್ಲಿಸ್ ಯಾಕೆ ಆ ಮಾತನ್ನು ಹೇಳುತ್ತಿದ್ದಾನೆ?

ನೋಡುವುದು ಅಂದರೆ ನಮ್ಮ ಕಣ್ಣುಗಳಿಂದ, ನಮ್ಮ ಎದುರು ಇರುವ ವಸ್ತುಗಳನ್ನು ದೃಶ್ಯವತ್ತಾಗಿ ನೋಡುವುದು ಎಂದು ಮಾತ್ರವಲ್ಲ. ನೋಡುವುದು ಅಂದರೆ ಗ್ರಹಿಸುವುದು ಕೂಡಾ ಆಗಿದೆ. ಕಣ್ಣೆದುರು ಇರುವ ಯಾವುದೇ ವಸ್ತು ಆರೋಗ್ಯವಂತ ಕಣ್ಣಿಗೆ ಕಂಡೇ ಕಾಣುತ್ತದೆ. ಅದು ವಿಶೇಷವಲ್ಲ. ಅದರಾಚೆಯ ವಸ್ತು ಅಥವಾ ಇಂದ್ರಿಯ ಮಾತ್ರದ ಗ್ರಹಿಕೆಗೆ ನಿಲುಕದ ವಸ್ತುವನ್ನು ನಾವು ವಿಶೇಷ ಗಮನವನ್ನಿರಿಸಿ ನೋಡಿದರಷ್ಟು ಅದು ನಮಗೆ ಕಾಣುತ್ತದೆ. ಇನ್ನೂ ಕೆಲವು ವಸ್ತು ಅಥವಾ ಸಂಗತಿಗಳನ್ನು ನಾವು ಕಣ್ ಮುಚ್ಚಿ, ಅಂತರಂಗದಲ್ಲಿ ಕಂಡುಕೊಳ್ಳಬೇಕಾದ್ದೂ ಇದೆ. ಹಾಗೆಯೇ ಸೂಕ್ಷ್ಮ ಶರೀರದಿಂದ ಭಾವಿಸಿ, ಅದರ ಕಾಣ್ಕೆ ಪಡೆಯಬೇಕಾದುದೂ ಇದೆ.
ಸಫೋಕ್ಲಿಸ್’ನ ಮಾತಿನ ಅರ್ಥ ಇದು.

ಮುಂದುವರಿದು ಆತ ಹೇಳುತ್ತಾನೆ, “ಹುಡುಕದೇ ಇರುವುದು ಸಿಗುವುದಾದರೂ ಹೇಗೆ?” ಈ ಎರಡನೇ ವಾಕ್ಯ ಮೊದಲನೆ ವಾಕ್ಯಕ್ಕೆ ಪೂರಕವಾಗಿದೆ. ನಾವು ನೋಡಿದರೆ ಮಾತ್ರ ಕಾಣುತ್ತದೆ. ಅಂದರೆ, ನಾವು ಯಾವುದನ್ನು ಹುಡುಕುತ್ತಿದ್ದೇವೆಯೇ, ಅದಕ್ಕಾಗಿ ನೋಡಬೇಕು. ಆಗ ಮಾತ್ರ ಅದು ಕಾಣಸಿಗುತ್ತದೆ. ನಾವು ನೋಡದೇ ಹೋದರೆ ಅದು ಕಾಣಿಸುವುದಿಲ್ಲ. ನೋಡುವುದು ಅಂದರೆ ಹುಡುಕುವುದೂ ಆಗಿದೆ. ಕಾಣುವುದು ಅಂದರೆ ಸಿಗುವುದು ಕೂಡಾ. ಆದ್ದರಿಂದ, ನೋಡಿದರಷ್ಟೇ ಕಾಣುವುದು, ಹುಡುಕಿದರಷ್ಟೇ ಸಿಗುವುದು.

ಸುಮ್ಮನೆ ಅದು ದೊರೆಯಲಿಲ್ಲ, ಇದು ದೊರೆಯಲಿಲ್ಲ ಎಂದು ಹಳಹಳಿಸುತ್ತ ಕೂರುವುದರಲ್ಲಿ ಯಾವ ಅರ್ಥವೂ ಇಲ್ಲ. ನಮಗೆ ಯಾವುದಾದರೊಂದು ವಸ್ತು ಸಿಗಲಿಲ್ಲ ಅಂದರೆ ನಮಗೆ ಅದು ಇನ್ನೂ ಕಂಡಿಲ್ಲ ಎಂದೇ ಅರ್ಥ. ಅದು ನಮಗೆ ಕಂಡಿಲ್ಲ ಅಂದರೆ, ನಾವು ಅದನ್ನು ನೋಡುವ ಪ್ರಯತ್ನ ಮಾಡಿಲ್ಲವೆಂದೇ ಅರ್ಥ.

ಆದ್ದರಿಂದ ಹಳಹಳಿಕೆ ಬಿಟ್ಟು ಹುಡುಕಲು ಶುರು ಮಾಡಿ. ಸರಿಯಾಗಿ ನೋಡುವುದನ್ನು ಕಲಿತುಕೊಳ್ಳಿ. ಜಲಾಲುದ್ದೀನ್ ರೂಮಿ ಹೇಳುವಂತೆ, “ನೀವು ಏನನ್ನು ಹುಡುಕುತ್ತಿದ್ದೀರೋ ಅದು ನಿಮ್ಮನ್ನು ಹುಡುಕುತ್ತ ಇರುತ್ತದೆ”. ಆದ್ದರಿಂದ ಹುಡುಕಿ…. ಆದ್ದರಿಂದ ನೋಡಿ… ನಿಮ್ಮ ಕಾಣ್ಕೆ, ನಿಮ್ಮ ಪಡೆಯುವಿಕೆ ನಿಮ್ಮನ್ನು ಮುನ್ನಡೆಸುತ್ತವೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply