ನಿರ್ಲಿಪ್ತರಾಗುವುದು ಎಂದರೆ ಕರ್ತವ್ಯಗಳನ್ನು ಮಾಡದೆ ಉಳಿಯುವುದಲ್ಲ. ಹಾಗೇನಾದರೂ ಇದ್ದಿದ್ದರೆ ಶ್ರೀಕೃಷ್ಣನು ಕರ್ತವ್ಯಗಳ ಬಗ್ಗೆ ಒತ್ತಿ ಹೇಳುತ್ತಿರಲಿಲ್ಲ…. ~ ಆನಂದಪೂರ್ಣ
ಬಹುತೇಕರಲ್ಲಿ ಇದೊಂದು ತಪ್ಪು ತಿಳುವಳಿಕೆ ಇದೆ. ನಿರ್ಲಿಪ್ತರಾಗುವುದು ಎಂದರೆ ಕಾವಿ ತೊಟ್ಟು ಮನೆಬಿಟ್ಟು ಹೊರಡುವುದು, ಸಂಸಾರ ತ್ಯಜಿಸಿ ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತಾ ಇರುವುದು, ಹಿಮಾಲಯದಲ್ಲೋ ಇನ್ನೆಲ್ಲೋ ಏಕಾಂತದಲ್ಲಿ ಕೂರುವುದು ಎಂದೆಲ್ಲ ಅವರು ಭಾವಿಸುತ್ತಾರೆ. ವಾಸ್ತವ ಹಾಗಿಲ್ಲ. ನಿರ್ಲಿಪ್ತತೆ ಎನ್ನುವುದು ಮನುಷ್ಯನ ಒಂದು ಅತ್ಯುತ್ತಮ ಅವಸ್ಥೆ. ನಿರ್ಲಿಪ್ತರಾಗುವುದು ಅಥವಾ ವಿರಾಗಿಯಾಗುವುದು ಅಂದರೆ ಮನೆಯನ್ನು, ಉದ್ಯೋಗವನ್ನು ತೊರೆದುಹೋಗುವುದಲ್ಲ. ಬದಲಿಗೆ, ನೀವು ಇರುವಲ್ಲೇ, ಇರುವ ರೀತಿಯಲ್ಲೇ ಇನ್ನೂ ಹೆಚ್ಚಿನ ಸಂತೋಷ, ಶಾಂತಿ, ನೆಮ್ಮದಿ ಹಾಗೂ ಸವಲತ್ತುಗಳನ್ನು ಪಡೆಯುವುದಾಗಿದೆ.
ಭಗವದ್ಗೀತೆಯಲ್ಲಿ “ನಿಮಗೆ ನಿಗದಿಪಡಿಸಲಾಗಿರುವ ಕರ್ತವ್ಯಗಳನ್ನು ನೀವು ಮಾಡಿ” ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಕೆಲಸ ಮಾಡದೆ ಇರುವ ವ್ಯಕ್ತಿಯು ತನ್ನ ಭೌತಿಕ ದೇಹವನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿರ್ಲಿಪ್ತರಾಗುವುದು ಎಂದರೆ ಕರ್ತವ್ಯಗಳನ್ನು ಮಾಡದೆ ಉಳಿಯುವುದಲ್ಲ. ಹಾಗೇನಾದರೂ ಇದ್ದಿದ್ದರೆ ಶ್ರೀಕೃಷ್ಣನು ಕರ್ತವ್ಯಗಳ ಬಗ್ಗೆ ಒತ್ತಿ ಹೇಳುತ್ತಿರಲಿಲ್ಲ. ನೀವು ನಿಮ್ಮ ಕುಟುಂಬ ಮತ್ತು ಸಮಾಜಕ್ಕೆ ಪ್ರತಿಯಾಗಿ ಕೆಲವು ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಿರುತ್ತೀರಿ. ಅವನ್ನು ನೀವು ಮಾಡಲೇಬೇಕಾಗಿದೆ. ಆದರೆ, ಅವಕ್ಕೆ ಅಂಟಿಕೊಳ್ಳದಂತೆ ಮಾಡುವುದನ್ನು ರೂಢಿಸಿಕೊಳ್ಳಬೇಕಷ್ಟೆ. ಈ ಅಂಟಿಕೊಳ್ಳದಿರುವಿಕೆಯೇ ನಿರ್ಲಿಪ್ತತೆ.
ನಿರ್ಲಿಪ್ತತೆ ಎಂದರೆ, `ಸುಖ ಅಥವಾ ಸಾಧನೆಗೆ ಹಿಗ್ಗದಿರುವುದು, ದುಃಖ ಅಥವಾ ವೈಫಲ್ಯಕ್ಕೆ ಕುಗ್ಗದೆ ಇರುವುದು’. ಇದು ಬಹಳ ಸರಳ. ನಿಮ್ಮ ಕೆಲಸವನ್ನು ನೀವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿರಬೇಕು, ಅಷ್ಟೆ. ನಿರ್ಲಿಪ್ತತೆ ಸಾಧಿಸಿದವನು ಯಾವಾಗಲೂ ಸಂತುಷ್ಟ ಹಾಗೂ ಸಂತೃಪ್ತನಾಗಿರುತ್ತಾನೆ. ಅವನು ತಾನಾಗಿಯೇ ದೊರೆತ ಫಲವನ್ನು ಅನುಭವಿಸುತ್ತಾನೆ. ಆ ಫಲವು ಸಫಲವೋ ವೈಫಲ್ಯವೋ… ಅವನದು ಸಮಚಿತ್ತ. ಆದ್ದರಿಂದಲೇ ಅವನಲ್ಲಿ ಸಂತೃಪ್ತಿ ಸ್ಥಾಯಿಯಾಗಿರುತ್ತದೆ. ಆದರೆ, ನಿರ್ಲಿಪ್ತರಲ್ಲದವರ ಸಂತೃಪ್ತಿ ಸ್ಥಾಯಿಯಲ್ಲ. ಅದು ಚಂಚಲ. ಅವರಿಗೆ ಈ ಕ್ಷಣ ಖುಷಿ ನೀಡಿದ್ದು ಇನ್ನೊಂದು ಕ್ಷಣಕ್ಕೆ ಕಹಿಯಾದರೆ ಅಚ್ಚರಿಪಡಬೇಕಿಲ್ಲ.
“ಮನಸ್ಸಿಗೆ ಅಶಾಂತಿ ಉಂಟುಮಾಡುವ ಚಾಂಚಲ್ಯವನ್ನು ನಿಗ್ರಹಿಸುವುದು ಕಷ್ಟ. ಆದರೆ ನಿರ್ಲಿಪ್ತತೆಯ ನಿರಂತರ ಅಭ್ಯಾಸದಿಂದ ಅದು ಸಾಧ್ಯವಾಗುತ್ತದೆ” ಎಂದು ಶ್ರೀಕೃಷ್ಣ ಹೇಳುತ್ತಾನೆ. ಆದ್ದರಿಂದ, ನಮಗೆ ಶಾಂತಿ ಬೇಕಾದಲ್ಲಿ ನಿರ್ಲಿಪ್ತತೆಯನ್ನು ರೂಢಿಸಿಕೊಳ್ಳುವುದು ಅನಿವಾರ್ಯ. ಮತ್ತು ಅದನ್ನು ನಾವು ಇರುವ ಸ್ಥಳದಲ್ಲೇ, ಇರುವ ಹಾಗೇ ಮಾಡಬೇಕಾಗಿದೆ.