ಮಹಾ ಕರುಣೆ

ಮಹಾ ಕರುಣೆ ಎಂದರೆ ಅದು ಕಾಠಿಣ್ಯವನ್ನೂ ಒಳಗೊಂಡಿರುತ್ತದೆ. ನಿಮ್ಮ ಕರುಣೆಗೆ ಬೇರೆ ಆಯ್ಕೆಗಳಿಲ್ಲದಾಗ ಅದು ಶಕ್ತಿಯಲ್ಲ, ನಿಮ್ಮ ವೀಕ್’ನೆಸ್. ಕೆಲವೊಮ್ಮೆ ನಿಜವಾಗಿಯೂ ಕರುಣೆ ತೋರಿಸುವುದೆಂದರೆ ಕಠಿಣರಾಗುವುದು ಕೂಡ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

One has to be capable sometimes of not being kind. Great kindness is capable of being kind and of not being kind, both – Osho

ಒಮ್ಮೆ ಒಬ್ಬ ಝೆನ್ ಮಾಸ್ಟರ್ ಒಂದು ಕುದುರೆ ಗಾಡಿಯಲ್ಲಿ ಒಬ್ಬ ಹೆಣ್ಣು ಮಗಳು ಮತ್ತು ಅವಳ ಎಳೆಯ ಮಗುವಿನ ಜೊತೆ ಪ್ರಯಾಣ ಮಾಡುತ್ತಿದ್ದ. ಚಳಿಗಾಲವಾದ್ದರಿಂದ ವಿಪರೀತ ಹಿಮ ಬೀಳುತ್ತಿತ್ತು. ಆಕಾಶದಲ್ಲಿ ಎಲ್ಲಿ ನೋಡಿದರೂ ಸೂರ್ಯನ ಸುಳಿವು ಕಾಣಿಸುತ್ತಿರಲಿಲ್ಲ . ಇಡೀ ಆಕಾಶವನ್ನು ಮೋಡ ಮುಚ್ಚಿಕೊಂಡಿತ್ತು.

ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ಮಾಸ್ಟರ್ ಚಳಿ ಮತ್ತು ಹಿಮದಿಂದಾಗಿ ಫ್ರೀಜ್ ಆಗತೊಡಗಿದ. ಗಾಡಿಯಲ್ಲಿದ್ದ ಹೆಣ್ಣು ಮಗಳೂ ಚಳಿಯಿಂದ ತತ್ತರಿಸತೊಡಗಿದಳು.
ಅವಳ ದೇಹ ನೀಲಿಗಟ್ಟತೊಡಗಿತು ಮತ್ತು ಆಕೆ ಪ್ರಜ್ಞೆ ಕಳೆದುಕೊಳ್ಳತೊಡಗಿದಳು. ಇದನ್ನು ಗಮನಿಸಿದ ಮಾಸ್ಟರ್ ಅವಳ ಕೈಯಿಂದ ಮಗುವನ್ನು ಕಿತ್ತುಕೊಂಡು ಅವಳನ್ನು ಕುದುರೆ ಗಾಡಿಯಿಂದ ಹೊರ ನೂಕಿ ಮುಂದೆ ನಡೆದುಬಿಟ್ಟ.

ಮಾಸ್ಟರ್ ನ ಈ ಕ್ರೂರ ವರ್ತನೆ ಕಾರಣವಾಗಿ ಆ ಹೆಣ್ಣು ಮಗಳು ದಿಗ್ಭ್ರಮೆಗೊಂಡಳು. ಇಂಥ ಭಾರೀ ಹಿಮಪಾತದಲ್ಲಿ ತನ್ನನ್ನು ಸಾಯಲು ಬಿಟ್ಟು ತನ್ನ ಮಗುವನ್ನು ತನ್ನಿಂದ ದೂರ ಮಾಡುತ್ತಿರುವ ಝೆನ್ ಮಾಸ್ಟರ್ ಗೆ ಶಾಪ ಹಾಕುತ್ತ, ಚೀರುತ್ತ, ಕೂಗುತ್ತ ಆ ಹೆಣ್ಣು ಮಗಳು ಕುದುರೆ ಗಾಡಿಯ ಬೆನ್ನು ಹತ್ತಿದಳು. ಅರ್ಧ ಮೈಲು ಕ್ರಮಿಸುವಷ್ಟರಲ್ಲಿ ತನ್ನ ಉದ್ವೇಗ, ಚೀರುವಿಕೆ, ಓಟ ಕಾರಣವಾಗಿ ಆ ಹೆಣ್ಣು ಮಗಳಲ್ಲಿ ಶಕ್ತಿ ಸಂಚಾರವಾಗಿ ಆಕೆ ಪರಿಪೂರ್ಣವಾಗಿ ಮತ್ತೆ ಆರೋಗ್ಯವಂತಳಾದಳು.

ಇದನ್ನು ಗಮನಿಸಿದ ಝೆನ್ ಮಾಸ್ಟರ್ ತನ್ನ ಗಾಡಿ ನಿಲ್ಲಿಸಿ ಆಕೆಯನ್ನ ಗಾಡಿಯಲ್ಲಿ ಕೂರಿಸಿ ಮಗುವನ್ನ ಆಕೆಯ ಕೈ ಗೆ ಹಸ್ತಾಂತರಿಸಿ ಹೇಳಿದ,

“ ಈಗ ಸರಿ ಹೋಯ್ತು, ಆಗ ನಾನು ಹಾಗೆ ಮಾಡದಿದ್ದರೆ ನೀನು ಸತ್ತು ಹೋಗುತ್ತಿದ್ದೆ”

ಮಹಾ ಕರುಣೆ ಎಂದರೆ ಅದು ಕಾಠಿಣ್ಯವನ್ನೂ ಒಳಗೊಂಡಿರುತ್ತದೆ. ನಿಮ್ಮ ಕರುಣೆಗೆ ಬೇರೆ ಆಯ್ಕೆಗಳಿಲ್ಲದಾಗ ಅದು ಶಕ್ತಿಯಲ್ಲ, ನಿಮ್ಮ ವೀಕ್’ನೆಸ್. ಕೆಲವೊಮ್ಮೆ ನಿಜವಾಗಿಯೂ ಕರುಣೆ ತೋರಿಸುವುದೆಂದರೆ ಕಠಿಣರಾಗುವುದು ಕೂಡ. ನೀವು ಕಠಿಣರಾಗದೇ ಹೋದರೆ ನಿಮ್ಮ ಕರುಣೆಗೆ ಅಂಥ ದೊಡ್ಡ ಮೌಲ್ಯವಿಲ್ಲ. ಆಗ ನಿಮ್ಮ ಕರುಣೆ ಕಲಿತದ್ದು, ಅರಿವಿನಿಂದ ಹೊರಹೊಮ್ಮಿದ್ದಲ್ಲ.

Osho, Tao : The pathless path, Talks on extracts from ‘ The book of Lao Tzu ‘ , Vol 2, Ch 7 (excerpt)


Leave a Reply