ಈ ಸುಲಿಗೆಯಲ್ಲಿ ಕೆಡುಕಿಲ್ಲ! : ರಮದಾನ್ ಕಾವ್ಯವ್ರತ #2 | ಸೂಫಿ corner

~ ಫರೀದ್ ಉದ್ದಿನ್ ಅತ್ತಾರ್ | ಕನ್ನಡಕ್ಕೆ: ಸುನೈಫ್

ಪ್ರೇಮವೆಂಬ ಎರಡಕ್ಷರ ನಿಶಾನೆ ಮಾತ್ರ;
ಕಾವ್ಯ ರೂಪಕದೊಳಗೆ ಬಂಧಿಸದಿರಿ.
ಹೃದಯಕ್ಕೊಲಿಯುವ ಪ್ರೇಮದೊಡವೆಯ
ತರ್ಕ ಕಾರಣಗಳಲಿ ಹುಡುಕದಿರಿ.

ವ್ಯಾಖ್ಯಾನಗಳ ಆಳದಲ್ಲಿ ಪ್ರೇಮವಿಲ್ಲ,
ವಿವರಣೆಗಳ ರಾಶಿಯಲ್ಲಿ ಪ್ರೇಮವಿಲ್ಲ.
ಪ್ರೇಮದಿಂದ ಒಡೆದ ಹೃದಯವ
ಮತ್ತೆ ಜೋಡಿಸುವವರಿಲ್ಲ.
ಪ್ರೇಮ ವ್ಯಾಪಾರವೆಂದರೆ,
ಒಲವ ಕಡ ಪಡೆದು ಆತ್ಮ ಬಿಕರಿಗಿಡುವುದು.

ಪ್ರೇಮವಿಲ್ಲದೆ ದಾಟಿದ ಕ್ಷಣವಲ್ಲದೆ
ಇನ್ನೇನು ತಾನೆ ಬದುಕು ಪೂರ್ತಿ ಕಾಡೀತು?
ನಿನ್ನೊಳಗಿನ ಮೋಹದ ಗೋರಿ ಒಡೆದರೆ
ಮತ್ತೆಂದೂ ಕಾಡದು ಬಯಕೆಯ ತಾಪ.
ದೇಹ ಶುದ್ದಿಯಾಗಲು ನೀನೊಮ್ಮೆ
ರಕ್ತಕಣ್ಣೀರಲಿ ಮಿಂದೇಳು.

ಎರಡು ಲೋಕಗಳಲ್ಲೂ ಅವಳಿದ್ದಾಳೆ
ಪ್ರೇಮದೇವತೆಯ ದರ್ಶನ ಮಾತ್ರ ಇನ್ನೂ ಆಗಿಲ್ಲ.
ಭಕ್ತರ ಹೃದಯಗಳ ಕೊಳ್ಳೆ ಹೊಡೆಯುವಾಗ
ದರೋಡೆ ನಿಷಿದ್ಧವೆಂದು ಅವರೆಲ್ಲ ಓಡುವಾಗ,
ಓ ಅತ್ತಾರ್, ನೀನಿದಕ್ಕೆ ಒಪ್ಪಿಕೊಂಡು ಬಿಡು
ಈ ಸುಲಿಗೆಯಲ್ಲಿ ಕೆಡುಕಂತು ಇಲ್ಲವೇ ಇಲ್ಲ.

Leave a Reply