ಪ್ರೇಮ ಬೆಳಗುವುದು ಅವಿರತ, ಬಾ ಇಲ್ಲಿ | ರಮದಾನ್ ಕಾವ್ಯ ವ್ರತ#3; ಸೂಫಿ Corner

ರಚನೆ: ಬುಲ್ಲೇ ಶಾ | ಕನ್ನಡಕ್ಕೆ: ಸುನೈಫ್
ಪ್ರೇಮ ಪಾಠ ಕಲಿತ ದಿನ ನಾನು
ಮಸೀದಿ ತೊರೆದು ಬಿಟ್ಟೆ
ಮಂದಿರ ಹೊಕ್ಕರೆ ಅಲ್ಲಿಯೂ
ಸಾವಿರ ಮದ್ದಳೆಯ ಸದ್ದು

ವೇದ ಕುರಾನುಗಳ ಓದಿ ದಣಿದಿರುವೆ
ಉದ್ದಂಡ ನಮಸ್ಕಾರ ಸಾಕಾಗಿದೆ
ಮಥುರಾ - ಮಕ್ಕಾದಲ್ಲಿ ದೇವನಿಲ್ಲವೋ
ಅವನ ಪಡೆದವನೇ ಜ್ಞಾನಿಯೋ

ಮುಸಲ್ಲ ಸುಟ್ಟು ಹಾಕು,
ಬಿಂದಿಗೆಯ ಒಡೆದು ಹಾಕು,
ಜಪಮಾಲೆಯ ಎಸೆದು ಬಿಡು,
ದಂಡವ ತುಂಡರಿಸು,
ಪ್ರೇಮಿಗಳ ಪಿಸುಮಾತನೊಮ್ಮೆ ಕೇಳಿ ನೋಡು
ಸಾಚಾತನಕೆ ಕೊಳ್ಳಿಯಿಟ್ಟು
ಬಿಡಿಸಿಕೊಳ್ಳು ಬಂಧನವನ್ನು.

ಹೀರ್ ರಾಂಜಾ ಜೊತೆಯಾದ
ಪರಿ ನೀವು ಕಂಡಿಲ್ಲವೇ?
ಅವಳು ತೋಟದಲ್ಲಿ ಹುಡುಕಿ ಅಲೆಯುವಾಗ
ರಾಂಜಾ ಅವಳ ಏದುಸಿರಿನಲ್ಲಿ ಉಸಿರಾಗಿರುತ್ತಿದ್ದ.
ಹೀರ್ ತನ್ನಿನಿಯನ ಪಡೆದಳು,
ಸಾಕ್ಷಾತ್ಕಾರವೆಂದರೆ ಇದು.

Leave a Reply