ಕುಡುಕರ ಸಮ್ಮಿಲನ; ರಮದಾನ್ ಕಾವ್ಯವ್ರತ | ಸೂಫಿ Corner

ಮೂಲ: ಇಮಾಮ್ ಖೊಮೇನಿ | ಕನ್ನಡಕ್ಕೆ: ಸುನೈಫ್
 ದರ್ವೇಶಿಗಳ ಸಂಗದಲ್ಲಿ
ಸಿಗಲಿಲ್ಲ ಪರಿಪೂರ್ಣತೆ,
ಕುಟೀರದಲ್ಲಿ ಯಾವೊಬ್ಬನೂ
ಕೂಗಲಿಲ್ಲ ಅವನ ಹೆಸರು
ಮದರಸದ ಕಿತಾಬುಗಳಲ್ಲಿ
ಕಾಣಿಸಲೇ ಇಲ್ಲ ಅವನು
ಎತ್ತರದ ಮಿನಾರದ ತುದಿಯಲ್ಲೂ
ಕೇಳಿಸಲಿಲ್ಲ ಅವನ ದನಿ
ಪಾಂಡಿತ್ಯ‌ ತುಳುಕುವ ಪುಸ್ತಕಗಳಲ್ಲಿ
ನನಗೇನೂ ಸಿಗಲಿಲ್ಲ
ಪವಿತ್ರ ಗ್ರಂಥದ ಪಾಠಗಳು
ಬರಿದೇ ದಿಕ್ಕು ತಪ್ಪಿಸಿದವು
ಬದುಕು ಸವೆಯಿತು
ಮಸೀದಿ ಮಂದಿರಗಳಲ್ಲಿ ಪೊಳ್ಳಾಗಿ
ಸಂಗಾತಿಗಳ ಸಂಗಡ
ದವಾ ದರ್ದುಗಳೊಂದೂ ಇರಲಿಲ್ಲ
ಆದರೆ,
ನಾನು ಹೋಗುವ
ಆ ಪ್ರೇಮಿಗಳ ಕೂಟದಲ್ಲಿ
ಪ್ರಿಯತಮನ ಹೂದೋಟದ
ತಂಗಾಳಿಯನ್ನು ಉಸಿರಾಡುತ್ತೇನೆ
ಮತ್ತು ಅವನ ಹೆಜ್ಜೆಗುರುತುಗಳನ್ನು ಕಾಣುತ್ತೇನೆ
ಬುದ್ದಿವಂತರು ಹೇಳುವ
'ನಾವು' ಮತ್ತು 'ನಾನು'
ಬರಿಯ ಮೂಗುದಾರಗಳು
ಕುಡುಕರ ಸಮ್ಮಿಲನದಲ್ಲಿ
ನಾನೆಂಬುದಿಲ್ಲ, ನಾವೆಂಬುದಿಲ್ಲ.

Leave a Reply