ಪರಿಪೂರ್ಣತೆ ಒಂದು ಮಾನಸಿಕ ವ್ಯಾಧಿ!

ಸಂಪ್ರದಾಯವಾದಿಗಳು ಪರಿಪೂರ್ಣತೆಯ ವಕ್ತಾರರು. ಅವರು ಎಲ್ಲ ಮಾನವೀಯ ಭಾವನೆಗಳನ್ನು ಕತ್ತರಿಸುತ್ತ ಹೋಗುತ್ತಾರೆ, ಕೊನೆಗೆ ಉಳಿಯುವುದು ನಿರ್ಜೀವ ಕಲ್ಲಿನ ಬೊಂಬೆ ಮಾತ್ರ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Perfectionism is a kind of inhuman ideal. You can not think of Buddha crying – Osho

ಪರಿಪೂರ್ಣತೆ, ಪರಿಪೂರ್ಣತೆಯ ಬಗೆಗಿನ ಕಲ್ಪನೆಯೇ ಮಹಾ ಅಸಹ್ಯದ್ದು. ಪರಿಪೂರ್ಣತೆಗಾಗಿ ತುಡಿಯುವವ ನ್ಯೂರಾಟಿಕ್. ಪರಿಪೂರ್ಣತೆ ಒಂದು ಮಾನಸಿಕ ವ್ಯಾಧಿ.

ಬದುಕು ಒಂದು ಹರಿವು. ಅಪರಿಪೂರ್ಣತೆ ಒಂದು ಅದ್ಭುತ ಸೌಂದರ್ಯ. ಸಂಪೂರ್ಣರಾಗಿರಿ, ಯಾವತ್ತೂ ಪರಿಪೂರ್ಣತೆಗಾಗಿ ಹಾತೊರೆಯದಿರಿ. ಸಂಪೂರ್ಣತೆ ಮತ್ತು ಪರಿಪೂರ್ಣತೆಗಳ ನಡುವಿನ ವ್ಯತ್ಯಾಸವೇನು ? ಸಂಪೂರ್ಣರಾಗಿರಿ ಎಂದು ನಾನು ಹೇಳುವಾಗ ಯಾವುದನ್ನೂ ಅರ್ಧಕ್ಕೆ ಬಿಡಬೇಡಿ ಮನಃಪೂರ್ವಕವಾಗಿ ಪೂರ್ಣ ಮಾಡಿ ಅದು ಪರಿಪೂರ್ಣ ಆಗಿರಬೇಕಿಲ್ಲ. ಇವೆರಡೂ ಎರಡು ವಿಭಿನ್ನ ಆಯಾಮಗಳು. ಪರಿಪೂರ್ಣರಾಗಿ ಎನ್ನುವುದನ್ನೇ ನಿಮ್ಮ ತಲೆಯಲ್ಲಿ ತುಂಬಲಾಗಿದೆ.

ಉದಾಹರಣೆಗೆ, ನಿಮಗೆ ಕೋಪ ಬಂದಾಗ ಪರಫೆಕ್ಷನಿಸ್ಟ್ ಹೇಳುವುದೇನು ? “ ಇದು ಸರಿ ಅಲ್ಲ, ಕೋಪ ಬಿಟ್ಟು ಬಿಡಿ” ಎಂದು ತಾನೇ? ಪರಿಪೂರ್ಣತೆಯ ಪರೀಧಿಯಲ್ಲಿ ಕೋಪಕ್ಕೆ ಜಾಗವಿಲ್ಲ. ಪರಿಪೂರ್ಣ ಮನುಷ್ಯ ಕೋಪ ಮಾಡಿಕೊಳ್ಳುವಂತಿಲ್ಲ.

ಪರಿಪೂರ್ಣತೆಯ ಸಿದ್ಧಾಂತ ಮಾನವೀಯವಾಗಿರುವ ಎಲ್ಲವನ್ನೂ ನಿರಾಕರಿಸುತ್ತ ಹೋಗುತ್ತದೆ. ಪರಿಪೂರ್ಣತೆ ಒಂದು ಅಮಾನವೀಯ ಆಚರಣೆ. ಬುದ್ಧ ಅಳುವುದನ್ನು ನೀವು ನಂಬಲು ಕೂಡ ಸಾಧ್ಯವಿಲ್ಲ, ಬುದ್ಧನ ಕಣ್ಣಲ್ಲಿ ನೀರು ನೀವು ಕಲ್ಪಿಸಿಕೊಳ್ಳಲಾಗದ ಚಿತ್ರ.

ಒಂದು ಪ್ರಸಂಗ ಹೀಗಿದೆ……..

ಝೆನ್ ಮಾಸ್ಟರ್ ತೀರಿಕೊಂಡಿದ್ದ. ಮಾಸ್ಟರ್ ನ ಪ್ರಧಾನ ಶಿಷ್ಯ ಯಾರಿಗೆ ಜ್ಞಾನೋದಯ ಆಗಿದೆಯೆಂದು ಜನ ಎಲ್ಲ ತಿಳಿದುಕೊಂಡಿದ್ದರೋ ಆತ, ಮಾಸ್ಟರ್ ನ ಶವದ ಎದುರು ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅಲ್ಲಿ ನೆರೆದಿದ್ದ ನೂರಾರು ಜನರಿಗೆ ಜ್ಞಾನೋದಯ ಆಗಿರುವ ಈ ಸನ್ಯಾಸಿ ಇಷ್ಟು ಘೋರವಾಗಿ ಕಣ್ಣೀರಿಡುತ್ತಿರುವುದನ್ನ ಕಂಡು ಆಶ್ಚರ್ಯವಾಗಿತ್ತು. ಕೆಲ ಜನ ಮುಂದೆ ಬಂದು ಪ್ರಧಾನ ಶಿಷ್ಯನಿಗೆ ಬುದ್ಧಿ ಹೇಳಿದರು,

“ ಒಬ್ಬ ಹಿರಿಯ ಸನ್ಯಾಸಿಯಾಗಿ ಹೀಗೆ ಸಾಧಾರಣ ಮನುಷ್ಯರಂತೆ ಅಳುವುದು ನಿನಗೆ ಹಾಗು ನಮ್ಮ ಆಶ್ರಮಕ್ಕೆ ಶೋಭೆ ತರುವ ವಿಷಯವಲ್ಲ. ಜನ ನಿನ್ನನ್ನು ಜ್ಞಾನೋದಯವಾದ ಮನುಷ್ಯ ಎಂದುಕೊಂಡಿದ್ದಾರೆ, ಈಗ ಅವರು ನಿನ್ನ ಈ ವರ್ತನೆ ಕಂಡು ನಿರಾಶರಾಗಿದ್ದಾರೆ. “

“ ನನಗೆ ಜ್ಞಾನೋದಯವಾದ ವಿಷಯವನ್ನ ನಾನು ಬಿಟ್ಟುಬಿಡಬಲ್ಲೆ ಆದರೆ ನನ್ನ ಮನಸ್ಸಿಗೆ ವಿರುದ್ಧವಾಗಿ ಎಂದೂ ವರ್ತಿಸಲಾರೆ”

ಪ್ರಧಾನ ಶಿಷ್ಯ ನೆರೆದ ಜನರಿಗೆ ಉತ್ತರಿಸಿದ.

“ ಆದರೆ ನೀನೇ ಅಲ್ಲವೇ, ಆತ್ಮಕ್ಕೆ ಸಾವಿಲ್ಲ ಎಂದು ನಮಗೆಲ್ಲ ಪಾಠ ಮಾಡಿದ್ದು? ಹಾಗಾಗಿ ಮಾಸ್ಟರ್ ಆತ್ಮ ಜೀವಂತವಾಗಿದೆ, ನೀನು ಅಳುವ ಕಾರಣವಿಲ್ಲ”

ಆ ಜನ ಪ್ರಧಾನ ಶಿಷ್ಯನಿಗೆ ಮತ್ತೆ ಮನವಿ ಮಾಡಿಕೊಂಡರು.

“ ನಾನು ಮಾಸ್ಟರ್ ನ ಆತ್ಮಕ್ಕಾಗಿ ಅಳುತ್ತಿಲ್ಲ ಅದು ಯಾವಾಗಲೂ ಅಮರ. ನಾನು ಅಳುತ್ತಿರುವುದು ಅವನು ಬಿಟ್ಟುಹೋಹುತ್ತಿರುವ ಈ ಸುಂದರ ದೇಹಕ್ಕಾಗಿ. ನಶಿಸಿ ಹೋಗುವ ಅವನ ಈ ಸುಂದರ ದೇಹಕ್ಕಾಗಿ ನಾನು ಎರಡು ಹನಿ ಕಣ್ಣೀರು ಸುರಿಸಿದರೆ ತಪ್ಪೇ ?”

ಪ್ರಧಾನ ಶಿಷ್ಯ ಮತ್ತೆ ಅಳತೊಡಗಿದ.

ಜ್ಞಾನೋದಯವಾದ ಮನುಷ್ಯ ಕಣ್ಣೀರು ಸುರಿಸುವುದು ಸಂಪ್ರದಾಯವಾದಿ ಬೌದ್ಧರಿಗೆ ಒಪ್ಪಿಗೆಯಿಲ್ಲ. ಸಂಪ್ರದಾಯವಾದಿಗಳು ಪರಿಪೂರ್ಣತೆಯ ವಕ್ತಾರರು. ಅವರು ಎಲ್ಲ ಮಾನವೀಯ ಭಾವನೆಗಳನ್ನು ಕತ್ತರಿಸುತ್ತ ಹೋಗುತ್ತಾರೆ, ಕೊನೆಗೆ ಉಳಿಯುವುದು ನಿರ್ಜೀವ ಕಲ್ಲಿನ ಬೊಂಬೆ ಮಾತ್ರ.

Osho, Sufis, The people of the path – Talks on Sufism, Vol 1, Ch 10, Q 2 (excerpt)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.