ಕಥೆ ಎಂದರೆ ಪ್ರಾಣ ಬಿಡುವ ದೇವರು!

ಭಗವಂತ ಒಬ್ಬ ಮಹಾ ಕಥೆಗಾರ ಮತ್ತು ಅವನಿಗೆ ಕಥೆಗಳೆಂದರೆ ಪ್ರಾಣ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

I love this parable . God is a storyteller, He loves jokes. – Osho

ಒಂದು ಅತ್ಯಂತ ಸುಂದರ ಜ್ಯೂಯಿಶ್ ದೃಷ್ಟಾಂತ ಕಥೆ.

ಒಮ್ಮೆ ಒಂದು ಹಳ್ಳಿಯಲ್ಲಿ ಏನೋ ತೊಂದರೆಗಳಾದವು. ಆ ಹಳ್ಳಿಯಲ್ಲಿದ್ದ ರಬ್ಬೀ ಕಾಡಿಗೆ ಹೋಗಿ, ಒಂದು ಗುಪ್ತ ಸ್ಥಳದಲ್ಲಿ ಕೆಲವೊಂದು ಮಾಂತ್ರಿಕ ಆಚರಣೆಗಳನ್ನು ಮಾಡಿ, ಹಳ್ಳಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವಂತೆ ದೇವರನ್ನು ಪ್ರಾರ್ಥಿಸಿದ. ಅವನ ಮಾತಿಗೆ ಒಲಿದ ದೇವರು ಹಳ್ಳಿಯನ್ನು ತೊಂದರೆಗಳಿಂದ ಪಾರು ಮಾಡಿದ.

ಆಮೇಲೆ ಕೆಲ ದಿನಗಳ ನಂತರ ರಬ್ಬೀ ತೀರಿಕೊಂಡ. ಮತ್ತೆ ಆ ಹಳ್ಳಿಯಲ್ಲಿ ತೊಂದರೆಗಳು ಕಾಣಿಸಿಕೊಳ್ಳತೊಡಗಿದವು. ಹೊಸದಾಗಿ ನೇಮಕಗೊಂಡಿದ್ದ ರಬ್ಬೀ ತಾನೂ ಕಾಡಿಗೆ ಹೋದ, ಆದರೆ ಅವನಿಗೆ ಮಾಂತ್ರಿಕ ಆಚರಣೆಗಳನ್ನು ಮಾಡುವ ಗುಪ್ತ ಜಾಗದ ಬಗ್ಗೆ ಗೊತ್ತಿರದ ಕಾರಣ ಅವ ದೇವರನ್ನು ಪ್ರಾರ್ಥಿಸಿದ,

“ ಹಿಂದಿನ ರಬ್ಬೀ ಮಾಂತ್ರಿಕ ಆಚರಣೆ ಮಾಡುತ್ತಿದ್ದ ಗುಪ್ತ ಜಾಗದ ಬಗ್ಗೆ ನನಗೆ ಗೊತ್ತಿಲ್ಲದ ಕಾರಣ ನಾನು ಇಲ್ಲೇ ಮಾಂತ್ರಿಕ ವಿಧಿ ವಿಧಾನಗಳನ್ನು ನಡೆಸುತ್ತೇನೆ. ನೀನು ದೇವರಾದ ಕಾರಣ ಎಲ್ಲಕಡೆಯೂ ಇರುವಿ. ದಯವಿಟ್ಟು ನನ್ನ ಪ್ರಾರ್ಥನೆಯನ್ನು ಆಲಿಸಿ ನನ್ನ ಹಳ್ಳಿಯಲ್ಲಿ ಉದ್ಭವವಾಗಿರುವ ಸಮಸ್ಯೆಗಳನ್ನು ಪರಿಹರಿಸು.”

ಅವನು ಆ ಜಾಗದಲ್ಲೇ ಆಚರಣೆಗಳನ್ನು ಪೂರೈಸಿದ. ದೇವರು ಅವನ ಪ್ರಾರ್ಥನೆಗೆ ಮೆಚ್ಚಿ, ಹಳ್ಳಿಯ ಸಮಸ್ಯೆಗಳನ್ನು ಪರಿಹರಿಸಿದ.

ಸ್ವಲ್ಪ ದಿನಗಳಾದ ಮೇಲೆ ಈ ರಬ್ಬೀಯೂ ತೀರಿಕೊಂಡ ಮತ್ತು ಅವನ ಜಾಗೆಗೆ ಒಬ್ಬ ಯುವ ರಬ್ಬೀ ನೇಮಕಗೊಂಡ. ಮತ್ತೆ ಹಳ್ಳಿಯಲ್ಲಿ ಹೊಸ ತೊಂದರೆಗಳು ಕಾಣಿಸಿಕೊಂಡವು. ಹೊಸ ರಬ್ಬೀ ಕಾಡಿಗೆ ಹೋಗಿ ದೇವರನ್ನು ಕೇಳಿಕೊಂಡ,

“ ದೇವರೇ, ನನಗೆ ಮಾಂತ್ರಿಕ ಆಚರಣೆಗಳೂ ಗೊತ್ತಿಲ್ಲ ಮತ್ತು ಆಚರಣೆ ನಡೆಸುವ ಗುಪ್ತ ಜಾಗವೂ ಗೊತ್ತಿಲ್ಲ, ಆದರೆ ದೇವರಾದ ನಿನಗೆ ಇವು ಮಹತ್ವ ಅಲ್ಲ ಎನ್ನುವುದು ಗೊತ್ತಿದೆ. ದಯವಿಟ್ಟು ನನ್ನ ಹಳ್ಳಿಯನ್ನು ಕಷ್ಟಗಳಿಂದ ರಕ್ಷಿಸು”

ಯುವ ರಬ್ಬೀಯ ಕೋರಿಕೆಯನ್ನು ಮನ್ನಿಸಿ ದೇವರು ಹಳ್ಳಿಯನ್ನು ಕಷ್ಟಗಳಿಂದ ಪಾರು ಮಾಡಿದ.

ಆಮೇಲೆ ಆ ಯುವ ರಬ್ಬೀಯೂ ತೀರಿಕೊಂಡ. ಹಳ್ಳಿಯಲ್ಲಿ ಸಮಸ್ಯೆಗಳು ಮತ್ತೆ ಶುರುವಾದವು. ಹೊಸದಾಗಿ ನೇಮಕಗೊಂಡ ರಬ್ಬೀ ತನ್ನ ಮನೆಯ ಕೋಣೆಯಲ್ಲೇ ಕುಳಿತುಕೊಂಡು ದೇವರನ್ನು ಕೇಳಿಕೊಂಡ,

“ ದೇವರೇ ಹಳೆಯ ರಬ್ಬೀಗಳಿಗೆ ಗೊತ್ತಿದ ಮಾಂತ್ರಿಕ ಆಚರಣೆಗಳೂ, ಆಚರಣೆ ನಡೆಸುವ ಗುಪ್ತ ಜಾಗ ಮತ್ತು ಅವರು ಹೇಳುತ್ತಿದ್ದ ಪ್ರಾರ್ಥನೆ ಯಾವುದೂ ನನಗೆ ಗೊತ್ತಿಲ್ಲ ಆದರೆ ನಾನು ನಿನಗೊಂದು ಒಳ್ಳೆಯ ಕಥೆ ಹೇಳುತ್ತೇನೆ, ನನಗೆ ಗೊತ್ತು ನಿನಗೆ ಕಥೆಗಳೆಂದರೆ ಪ್ರಾಣ, ದಯವಿಟ್ಟು ನನ್ನ ಹಳ್ಳಿಯನ್ನು ಸಮಸ್ಯೆಗಳಿಂದ ದೂರಮಾಡು.”

ರಬ್ಬೀ ಹೇಳಿದ ಕಥೆ ಕೇಳಿ ಮೆಚ್ಚಿಕೊಂಡ ದೇವರು ಹಳ್ಳಿಯನ್ನು ಅವಗಢಗಳಿಂದ ಪಾರು ಮಾಡಿದ.

ನನಗೆ ಈ ಕಥೆ ತುಂಬ ಇಷ್ಟ. ಭಗವಂತ ಒಬ್ಬ ಮಹಾ ಕಥೆಗಾರ ಮತ್ತು ಅವನಿಗೆ ಕಥೆಗಳೆಂದರೆ ಪ್ರಾಣ.

Osho, Tao : The three treasures- Talks on fragments from Tao te Ching by Lao Tzu, Vol 3, Ch 2, Q 7 (excerpt)

Leave a Reply