ಮೂಲ: ಮಖ್ಫೀ | ಕನ್ನಡಕ್ಕೆ: ಸುನೈಫ್
ಹರಿದು ಚೂರಾದ ಹೃದಯದಲೀಗ
ಹೊಳೆಯುತಿದೆ ಮತ್ತೊಂದು ಆಳ ಗಾಯ
ಉದಿಸುತಿದೆ ಕಣ್ಣ ಕೊಳ ತುಂಬುವ,
ದುರ್ದೆಸೆಯ ಮತ್ತೊಂದು ದಿನ
ಅಲೆದಾಡಿದ ಊರುಗಳೆಷ್ಟು,
ನಡೆದು ಸವೆದ ದಾರಿಗಳೆಷ್ಟು,
ಹರಿದ ನನ್ನ ನೆತ್ತರಿಗಾದರೂ ಲೆಕ್ಕವಿದೆಯೇ?
ಎಲ್ಲವೂ ಸೂರ್ಯನಿಂದ ಕಳಚಿ ಬಿದ್ದ
ಒಂದು ತುಂಡು ಒಡವೆಗಾಗಿ!
ಈಗ,
ನನ್ನ ಹೃದಯದಲಿ ಹೊಸ ಗಂಧ,
ಕಣ್ಣಲಿ ಹೊಸ ಹೊಳಪು
ಆದರೆ, ನಿನ್ನ ಕಂಗಳು ಯಾಕಿಷ್ಟು ಗಂಭೀರ?
ನೋಟದಲ್ಲಿ ಯಾಕಿಷ್ಟು ಉಪೇಕ್ಷೆ?
ಹೃದಯದಿಂದ ಬದುಕನ್ನೇ
ಕಿತ್ತುಕೊಂಡಿರುವೆ ನೀನು
ಹೃದಯವನ್ನು ಎದೆಗೂಡಿನಿಂದಲೇ
ಎತ್ತಿಕೊಂಡಿರುವೆ ನೀನು
ಈಗ ನಾನೇನು ಮಾಡಲಿ?
ಉಳಿದಿರುವುದು ಒಂದೇ ಪ್ರಾರ್ಥನೆ
ನಿನ್ನ ಮುಖಕೆ ಅಡ್ಡಲಾಗಿರುವ
ಆ ಬಟ್ಟೆಯನ್ನು ಚೂರು ಸರಿಸು ನನಗಾಗಿ.
Like this:
Like Loading...
Related