ನೋಡುವುದರೊಂದಿಗೆ ಮನಸ್ಸು ಆಟಕ್ಕಿಳಿದಾಗ…

ಸಮಸ್ಯೆ ಶುರುವಾಗೋದು ನೋಡುವವ ಸ್ಕ್ರೀನ್ ಮೇಲೆ ಪ್ರಕಟವಾಗುತ್ತಿರುವುದರ ಜೊತೆ ತನ್ನನ್ನು ತಾನು ಗುರುತಿಸಿಕೊಳ್ಳಲು ಶುರುಮಾಡಿದಾಗ ಮಾತ್ರ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

The watcher is not on the screen, he is sitting in the movie hall, But the problem arises when the watcher becomes identified with something on the movie screen. – Osho

ನೋಡುವವ ಯಾವಾಗಲೂ ಮೈಂಡ್ ಗಿಂತ ಮೇಲೆ. ನೋಡುವವ ಯಾವತ್ತೂ ಮೈಂಡ್ ನ ಕಾರ್ಯಾಚರಣೆಯ ಭಾಗವಲ್ಲ. ಮೈಂಡ್ ಕೇವಲ ಟೀವಿ ಸ್ಕ್ರೀನ್ ನಂತೆ, ಆಲೋಚನೆಗಳು, ಕನಸುಗಳು, ಕಲ್ಪನೆಗಳು, ನಿರೀಕ್ಷೆಗಳು, ಬಯಕೆಗಳು ಹೀಗೆ ಸಾವಿರಾರು ಸಂಗತಿಗಳು ಈ ಸ್ಕ್ರೀನ್ ಮೇಲೆ ಪ್ರಕಟವಾಗುತ್ತಲೇ ಹೋಗುತ್ತವೆ. ನೋಡುವವ ಸ್ಕ್ರೀನ್ ಅಲ್ಲ, ಅವನು ಮೂವೀ ಹಾಲ್ ಲ್ಲಿ ಕುಳಿತಿದ್ದಾನೆ ಅಷ್ಟೇ. ಆದರೆ ಸಮಸ್ಯೆ ಶುರುವಾಗೋದು ನೋಡುವವ ಸ್ಕ್ರೀನ್ ಮೇಲೆ ಪ್ರಕಟವಾಗುತ್ತಿರುವುದರ ಜೊತೆ ತನ್ನನ್ನು ತಾನು ಗುರುತಿಸಿಕೊಳ್ಳಲು ಶುರುಮಾಡಿದಾಗ ಮಾತ್ರ.

ನಿಮಗೆ ಈ ಅನುಭವ ಆಗಿರುತ್ತದೆ, ಸ್ಕ್ರೀನ್ ಮೇಲೆ ಕಾಣುತ್ತಿರುವುದನ್ನ ನೋಡಿ ನೀವು ಬಿಕ್ಕಿ ಬಿಕ್ಕಿ ಅತ್ತಿರುತ್ತೀರಿ ಅಥವಾ ಬಿದ್ದು ಬಿದ್ದು ನಕ್ಕಿರುತ್ತೀರಿ, ಅಥವಾ ಗಾಢ ವಿಷಾದವನ್ನು ಹೊದ್ದುಕೊಂಡಿರುತ್ತೀರಿ ಆದರೆ ನಿಮಗೆ ಗೊತ್ತಿದೆ ಸ್ಕ್ರೀನ್ ಮೇಲೆ ಏನೂ ಇಲ್ಲ. ಅದು ಖಾಲೀ. ನೀವು ನೋಡುತ್ತಿರುವುದು ಬೆಳಕಿನ ಮೂಲಕ ಪ್ರೊಜೆಕ್ಟ್ ಮಾಡಿರುವ ಫಿಲ್ಮನಲ್ಲಿರುವ ಚಿತ್ರಗಳ ಸರಣಿಯನ್ನ.

ಮೂಕೀ ಸಿನೇಮಾಗಳು ಮೊದಲು ಅಸ್ತಿತ್ವಕ್ಕೆ ಬಂದಾಗ, ಲಂಡನ್ ನಲ್ಲಿ ಮೊದಲ ಶೋ ಏರ್ಪಾಡಾಗಿತ್ತು. ಮ್ಯಾಟನೀ ಶೋ ನೋಡಿದ ಒಬ್ಬ ವ್ಯಕ್ತಿ , ಶೋ ಮುಗಿದರೂ ಜಾಗ ಖಾಲೀ ಮಾಡದೇ ಸಿನೇಮಾ ಹಾಲ್ ನಲ್ಲೇ ಕುಳಿತಿದ್ದ.

“ ಶೋ ಮುಗಿಯಿತು, ಈಗ ನೀವು ಹೊರಗೆ ಹೋಗಬಹುದು” ಥಿಯೇಟರ್ ನ ಮ್ಯಾನೇಜರ್ ಆ ವ್ಯಕ್ತಿಗೆ ಹೊರಗೆ ಹೋಗಲು ವಿನಂತಿ ಮಾಡಿದ.

“ ನಾನು ಮುಂದಿನ ಶೋ ಕೂಡ ನೋಡಬೇಕು” ಆ ವ್ಯಕ್ತಿ ಜಾಗಬಿಟ್ಟು ಕದಲಲಿಲ್ಲ.

“ ನೋಡಿದಿಯಲ್ಲ ಮತ್ತೆ ಯಾಕೆ ?” ಮ್ಯಾನೇಜರ್ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ.

“ ಅದೆಲ್ಲ ನಿನಗೆ ಯಾಕೆ? ನಿನಗೆ ಹಣ ಬೇಕು ತಾನೇ, ತೊಗೋ ಈ ಹಣ” ಆ ವ್ಯಕ್ತಿ ಹಟಕ್ಕೆ ಬಿದ್ದ.

ಎರಡನೇ ಶೋ ಮುಗಿದರೂ ಆ ವ್ಯಕ್ತಿ ಅಲ್ಲೇ ಕುಳಿತಿದ್ದ.

“ ಮೂರನೇ ಶೋ ಕೂಡ ನೋಡಬೇಕ ? ಅಂಥದೇನಿದೆ ಸಿನೇಮಾದಲ್ಲಿ ?”
ಮ್ಯಾನೇಜರ್ ಮತ್ತೆ ಆ ವ್ಯಕ್ತಿಯೊಂದಿಗೆ ಸಂಭಾಷಣೆಗೆ ಇಳಿದ.

“ ನಿನಗೆ ಅರ್ಥ ಆಗಲ್ಲ. ಈ ಸಿನೇಮಾದಲ್ಲಿ ಒಂದು ಸೀನ್ ಇದೆ. ಒಬ್ಬ ಸುಂದರ ಹೆಂಗಸು ಬಟ್ಟೆ ಬಿಚ್ಚುತ್ತಿದ್ದಾಳೆ, ಇನ್ನೇನು ಅವಳು ಪೂರ್ಣ ಬೆತ್ತಲಾಗಿ ಸರೋವರದಲ್ಲಿ ಸ್ನಾನಕ್ಕೆ ಇಳಿಯಬೇಕು ಆ ಸಮಯಕ್ಕೆ ಸರಿಯಾಗಿ ಒಂದು ವೇಗದಿಂದ ಓಡುತ್ತಿರುವ ರೈಲು ಅಡ್ಡಬಂದುಬಿಟ್ಟಿತು. ಆ ರೈಲು ಕಾಣೆಯಾದಾಗ ಸುಂದರ ಹೆಂಗಸು ಸರೋವರದಲ್ಲಿ ಇಳಿದುಬಿಟ್ಟಿದ್ದಳು.”
ಆ ವ್ಯಕ್ತಿ, ಮ್ಯಾನೇಜರ್ ಗೆ ವಿವರಿಸಿದ.

“ ಆದರೆ ನನಗೆ ಇನ್ನೂ ನೀನು ಮೂರನೇ ಸಲ ಸಿನೇಮಾ ನೋಡಲು ಕುಳಿತಿರುವ ವಿಷಯ ಅರ್ಥವಾಗಲಿಲ್ಲ” ಮ್ಯಾನೇಜರ್ ಕುತೂಹಲದಿಂದ ಆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ.

“ವಿಷಯ ಏನು ಅಂದ್ರೆ ಒಂದಲ್ಲ ಒಂದು ಸಲ ರೈಲು ಲೇಟಾಗಿ ಆಗಿ ಆ ಜಾಗಕ್ಕೆ ಬರಬಹುದಲ್ಲ !” ಆ ವ್ಯಕ್ತಿ ಮೂರನೇ ಬಾರಿ ಸಿನೇಮಾ ನೋಡುತ್ತಿರುವ ನಿಜ ಕಾರಣ ಬಾಯಿಬಿಟ್ಟ.

ಈಗ ಪ್ರೊಜೆಕ್ಟ್ ಮಾಡಲಾಗಿರುವ ಫಿಲ್ಮ ಮೈಂಡ್ ನ ಮೇಲೆ ಸವಾರಿ ಮಾಡುತ್ತಿದೆ. ಆ ವ್ಯಕ್ತಿ ಸ್ಕ್ರೀನ್ ಮೇಲಿನ ಆ ದೃಶ್ಯದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ ; ಈಗ ಅದು ಬರೀ ಪರದೆಯ ಮೇಲಿನ ಸಿನೇಮಾ ಅಲ್ಲ, ಅವನ ಬಯಕೆಗಳ ಭಾಗವಾಗಿಬಿಟ್ಟಿದೆ. ಈಗ ಆತ ಕೇವಲ ಸಿನೇಮಾ ನೋಡುತ್ತಿಲ್ಲ, ಸಿನೇಮಾದ ಭಾಗವಾಗಿಬಿಟ್ಟಿದ್ದಾನೆ. ಅವನ ಸಮಸ್ಯೆಗಳು ಈಗ ಶುರುವಾಗಲಿವೆ!

Osho, The Hidden Splender, Ch 25, Q 1 (excerpt)

Leave a Reply