ಚಾಣಕ್ಯನನ್ನು “ಚಾಣಕ್ಯ ರಿಸಿ” ಅಂತ ಕರೆಯುವ ವಡ್ಡಾರಾಧನೆ, ಹೆಚ್ಚು ಪ್ರಚಲಿತದಲ್ಲಿರುವ ಚಂದ್ರಗುಪ್ತನನ್ನು ‘ಚಂದ್ರಭುಕ್ತ’ ಎಂದು ಕರೆಯುತ್ತದೆ. ವಡ್ಡಾರಾಧನೆಯ ಪ್ರಕಾರ ಚಾಣಕ್ಯ ಮಹಾಪದ್ಮನನ್ನು ಸೋಲಿಸಲು ಕಾರಣವಾದ ಹೊಳಹಿನ ಎಳೆ ಹೀಗಿದೆ ನೋಡಿ…
ನಂದ ವಂಶದ ಮಹಾಪದ್ಮನನ್ನು ಚಾಣಕ್ಯ ಮತ್ತು ಚಂದ್ರಭುಕ್ತ ಒಂದೇ ಸಲಕ್ಕೇನೂ ಗೆದ್ದಿದ್ದಲ್ಲ. ಅಂಥ ಒಂದು ವಿಫಲ ಯುದ್ಧದ ಬಳಿಕ ಚಾಣಕ್ಯ ರಣಾಂಗಣದಿಂದ ಪಾಟಲೀಪುತ್ರಕ್ಕೆ ಮರಳುತ್ತಾನೆ. ಅದಾಗಲೇ ಕತ್ತಲು ಕವಿದಿರುತ್ತದೆ. ಒಂದೆಡೆ ಸೋಲಿನ ಬೇಸರ, ಮತ್ತೊಂದೆಡೆ ಕಾಡುವ ಹಸಿವು.
ಚಾಣಕ್ಯ ನಗರದೊಳಗೆ ಬಂದು ಹತ್ತು ಹೆಜ್ಜೆ ಇಡುತ್ತಲೇ ಹಸಿವು ತಾಳಲಾಗದೆ ಕಂಗೆಡುತ್ತಾನೆ. ಅತ್ತಿತ್ತ ನೋಡುವಾಗ ಅಲ್ಲೊಂದು ಗುಡಿಸಲಲ್ಲಿ ಮಿಣುಕು ದೀಪ ಕಾಣುತ್ತದೆ. ಅದೊಂದು ನೇಕಾರರ ಮನೆ. ಚಾಣಕ್ಯ ಗುಡಿಸಲ ಬಳಿ ಹೋಗಿ, “ಯಾರಿದ್ದೀರಿ ಅವ್ವಾ, ನನಗೆ ತುಂಬಾ ಹಸಿವಾಗಿದೆ ಸ್ವಲ್ಪ ಊಟ ಕೊಡಿ” ಅಂತ ಕೇಳುತ್ತಾನೆ.
ಬಾಗಿಲ ಬಳಿ ಬಂದ ಮುದುಕಿ ಚಾಣಕ್ಯ ಯಾರೆಂದು ಅರಿಯದೆ ಒಳಗೆ ಬರ ಮಾಡಿಕೊಳ್ಳುತ್ತಾಳೆ. “ಮಗನೇ ಕುಳಿತುಕೋ” ಅನ್ನುತ್ತಾ ಮಣೆ ಹಾಕಿ ಕೂರಿಸುತ್ತಾಳೆ. ಆಮೇಲೆ ಕಂಚಿನ ತಟ್ಟೆಯನ್ನಿಟ್ಟು ಬಿಸಿಯಾದ ಅಂಬಲಿಯನ್ನು ಬಡಿಸುತ್ತಾಳೆ. ಹಸಿದ ಚಾಣಕ್ಯ ಆತುರದಿಂದ ಬಿಸಿ ಗಂಜಿಯನ್ನು ಬಾಯಿಗಿಡುತ್ತಾನೆ. ಅವನ ಆತುರಕ್ಕೆ ಅವನ ಕೈ ಬಾಯಿಗಳೆರಡೂ ಬೆಂದುಹೋಗುತ್ತವೆ.
ಅವನ ಒದ್ದಾಟ ಕಂಡು ಮುದುಕಿ ನಗುತ್ತಾ “ಇವತ್ತಿಗೆ ಈ ಲೋಕದಲ್ಲಿ ಮೂರು ಮಂದಿ ಮೂರ್ಖರನ್ನು ಕಂಡಂತಾಯಿತು” ಅನ್ನುತ್ತಾಳೆ. ಚಾಣಕ್ಯ ಅಚ್ಚರಿಯಿಂದ “ಅವರು ಯಾರು ತಾಯಿ?” ಅಂತ ಕೇಳುತ್ತಾನೆ. ಅದಕ್ಕೆ ಮುದುಕಿ, “ನೀನು, ನಂದ ಮತ್ತು ಚಾಣಕ್ಯ” ಅನ್ನುತ್ತಾಳೆ. ಚಾಣಕ್ಯ ಕುತೂಹಲದಿಂದ “ನಾನು ಹೇಗೆ?” ಅಂತ ಕೇಳುತ್ತಾನೆ. “ಮಗನೇ, ಬುದ್ಧಿವಂತರು ಬಿಸಿ ಅಂಬಲಿಯನ್ನು ಚೂರು ಚೂರೇ ತಣಿಸಿ ತಿನ್ನುತ್ತಾರೆ. ನಿನಗೆ ಆ ವ್ಯವಧಾನವೇ ಇಲ್ಲದ್ದರಿಂದ ನೀನೊಬ್ಬ ಮೂರ್ಖ” ಅನ್ನುತ್ತಾಳೆ. ಚಾಣಕ್ಯ, “ನಂದ ಹೇಗೆ ಮೂರ್ಖ?” ಅಂತ ಕೇಳುತ್ತಾನೆ. “ಅವನು ತಾನು ಯಾರಿಂದ ಸಂಪತ್ತು ಕಿತ್ತುಕೊಂಡು ಕೋಪ ತರಿಸಿದನೋ ಅವನನ್ನು ತಾನು ಸಮರ್ಥನಾಗಿರುವಾಗಲೇ ಕೊಲ್ಲದೇ ಬಿಟ್ಟ. ಅದರ ಪರಿಣಾಮ ಅನುಭವಿಸುವಂತೆ ಮಾಡಿಕೊಂಡ. ಆದ್ದರಿಂದ ಅವನೊಬ್ಬ ಮೂರ್ಖ” ಅನ್ನುತ್ತಾಳೆ ಮುದುಕಿ. ಕೊನೆಯದಾಗಿ ಚಾಣಕ್ಯ, “ತಾಯಿ, ಅಂಥಾ ಬುದ್ಧಿವಂತ ಚಾಣಕ್ಯ ಮೂರ್ಖ ಹೇಗಾದಾನು?” ಅಂತ ಕೇಳುತ್ತಾನೆ. ಅದಕ್ಕೆ ಮುದುಕಿ ಜೋರಾಗಿ ನಕ್ಕುಬಿಡುತ್ತಾಳೆ. ಮತ್ತೆ ಸಾವರಿಸಿಕೊಂಡು, “ಚಾಣಕ್ಯನಿಗೆ ಕೋಪವೇ ಮೇಲುಗೈ, ಅವನು ಕಾರ್ಯಸಾಧನೆ ಬಗ್ಗೆ ಯೋಚನೆ ಮಾಡುವುದಿಲ್ಲ. ಅವನ ಬಳಿ ಮೂಲ ಸೈನ್ಯವೂ ಇಲ್ಲ, ಹುಟ್ಟಿನಿಂದ ಕ್ಷತ್ರಿಯನೂ ಅಲ್ಲ. ಏನೂ ಇಲ್ಲದೆ ನೇರವಾಗಿ ಮಹಾರಾಜನೊಡನೆ ಯುದ್ಧಕ್ಕೆ ನಿಂತರೆ ಹೇಗೆ? ಅವನು ಬುದ್ಧಿವಂತನಾಗಿದ್ದರೆ ಮೊದಲು ವಿರೋಧಪಕ್ಷದವರನ್ನು ತನ್ನತ್ತ ಸೆಳೆಯುತ್ತಿದ್ದ. ರಾಜನ ಸುತ್ತಲಿರುವ ಭ್ರಷ್ಟರನ್ನು ಹಣ ಕೊಟ್ಟು ತನ್ನ ಕಡೆ ಮಾಡಿಕೊಳ್ಳುತ್ತಿದ್ದ. ಸಾಮಂತ ಮಹಾಸಾಮಂತರನ್ನು ಸೆಳೆದು ಬೇಧೋಪಾಯ ಮಾಡುತ್ತಿದ್ದ. ರಾಜನನ್ನು ಏಕಾಂಗಿಯಾಗಿಸಿ, ಅನಂತರ ಯುದ್ಧ ಸಾರಿ ಅವನನ್ನು ಸೋಲಿಸುತ್ತಿದ್ದ” ಅನ್ನುತ್ತಾಳೆ.
ನೇಕಾರ ಮುದುಕಿಯ ಮಾತು ಗಂಭೀರವಾಗಿ ಕೇಳಿಸಿಕೊಂಡ ಚಾಣಕ್ಯ, ಊಟ ಮುಗಿಸಿ ಅವಳಿಗೆ ನಮಸ್ಕರಿಸಿ ಅಲ್ಲಿಂದ ಹೊರಟ. ಆಕೆ ಹೇಳಿದ ಮಾತು ಅವನನ್ನು ನಾಟಿದ್ದವು. ಶ್ರೀಪರ್ವತಕ್ಕೆ ತೆರಳಿ, ಮುದುಕಿ ಹೇಳಿದ್ದ ಹಾಗೇ ಸೈನ್ಯ ಬಲ ಹೆಚ್ಚಿಸಿ, ಭ್ರಷ್ಟರನ್ನು ಖರೀದಿಸಿ, ವಿರೋಧಿಗಳನ್ನು ಸೆಳೆದು, ಸಾಮಂತರನ್ನು ಬಂಡಾಯವೆಬ್ಬಿಸಿ, ಚಂದ್ರಭುಕ್ತನೊಡಗೂಡಿ ಮಹಾಪದ್ಮನನ್ನು ಸೋಲಿಸಿದ. ಹೀಗೆ ಸ್ಥಾಪನೆಯಾಯಿತು ಮಹಾ ಮಗಧ ಸಾಮ್ರಾಜ್ಯ!!