ಇಬ್ಬನಿಯ ಹನಿಯಲ್ಲಿ ಸಮುದ್ರ ಕಣ್ಮರೆಯಾದಾಗ , ಎಲ್ಲ ಗಡಿಗಳು ನಾಶವಾಗಿ ಅದ್ವೈತ ಸ್ಥಾಪನೆಯಾಗುತ್ತದೆ. ‘ ನಾನು ‘ ಎನ್ನುವುದು ನಾಶವಾಗುತ್ತ ನಾಶವಾಗುತ್ತ ಶೂನ್ಯ ಆವರಿಸಿಕೊಳ್ಳುತ್ತದೆ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
The dew drop has not not disappeared in to ocean, but the ocean has disappeared in dew drop – Kamal corrects his father Kabir’s statement.
ಕಬೀರ್, ಭಾರತದ ಅತೀ ದೊಡ್ಡ ಅನುಭಾವಿ. ಆತ ಶಿಕ್ಷಿತನಲ್ಲದಿದ್ದರೂ ಅತ್ಯದ್ಭುತವಾದ ಸಾಲುಗಳನ್ನ ರಚಿಸಿದವ. ಕಬೀರ್, ಯುವಕನಾಗಿದ್ದಾಗ ಅತ್ಯಂತ ಸುಂದರ ಸಾಲೊಂದನ್ನ ರಚಿಸಿದ. ಆ ಸಾಲು ಬಹಳ ಪ್ರಖ್ಯಾತವಾಯಿತು, ಜನ ಆ ಸಾಲನ್ನು ಮೆಚ್ಚಿ ಕೊಂಡಾಡಿದರು. ಹೀಗಿತ್ತು ಆ ಸಾಲು …….
ಮುಂಜಾನೆಯ ಸೂರ್ಯನ ಬೆಳಕಲ್ಲಿ
ಹೊಳೆಯುತ್ತಿರುವ ಮುತ್ತಿನಂತಿದ್ದ
ಇಬ್ಬನಿಯ ಹನಿಯೊಂದು
ಪದ್ಮಪತ್ರದಿಂದ ಜಾರಿ ಬಿತ್ತು
ಅಪಾರ ಸಾಗರದಲ್ಲಿ.
ನನಗೂ ಈ ಪದ್ಯದ ಅನುಭವವಾಗಿದೆ.
ತಾನು ಸಾಯುವುದಕ್ಕಿಂತ ಮುಂಚೆ, ಇನ್ನೇನು ಕಣ್ಣು ಮುಚ್ಚುತ್ತಿದ್ದಾಗ ಕಬೀರ್, ತನ್ನ ಮಗ ಕಮಾಲ್ ನನ್ನು ಕೂಗಿದ.
ಕಮಾಲ್ ಅಪ್ಪನಷ್ಟೇ ಜ್ಞಾನಿ, ಪ್ರತಿಭಾವಂತ, ಕೆಲವರು ಹೇಳುವ ಪ್ರಕಾರ ಅಪ್ಪ ಕಬೀರ್ ಗಿಂತಲೂ ಧೈರ್ಯಶಾಲಿ. ಕಬೀರ ಎಲ್ಲ ಆಚರಣೆ, ಸಂಪ್ರದಾಯಗಳ ವಿರುದ್ಧ ಬಂಡೆದ್ದವ. ಆದರೆ ಕಮಾಲ್, ಅಪ್ಪ ಕಬೀರನ ಕೆಲವು ಮಾತುಗಳನ್ನ ಕಟುವಾಗಿ ಟೀಕಿಸಿದವ.
ಸಾವಿನ ಹಾಸಿಗೆಯಲ್ಲಿ ಮಗನನ್ನು ಕೂಗಿದ ಕಬೀರ, “ ಗೆಳೆಯಾ ಕಮಾಲ್, ನಾನು ಬರೆದಿರುವ ಸಾಲೊಂದನ್ನ ತಿದ್ದಿಬಿಡು. ನನಗೆ ಗೊತ್ತು ಈ ಸಾಲನ್ನ ಜನ ಬಹಳ ಮೆಚ್ಚಿಕೊಂಡಿದ್ದಾರೆ ಆದರೆ ನನಗ್ಯಾಕೋ ಅಷ್ಟು ಸರಿ ಅನಿಸುತ್ತಿಲ್ಲ. ದಯವಿಟ್ಟು ತಿದ್ದು. ಆ ಪದ್ಯ ಯಾವುದು ಗೊತ್ತಾ ? “
ಗೆಳೆಯಾ ನನ್ನನ್ನೇ ನಾನು ಹುಡುಕುತ್ತಿದ್ದೆ
ಆದರೆ ನನ್ನ ಕಂಡುಕೊಳ್ಳುವ ಬದಲು
ನಾನೇ ಕಳೆದು ಹೋದೆ ಬ್ರಹ್ಮಾಂಡದಲ್ಲಿ ,
ಪದ್ಮಪತ್ರದಿಂದ ಜಾರಿಬಿದ್ದ ಇಬ್ಬನಿಯ ಹನಿಯೊಂದು
ಮರೆಯಾದಂತೆ ಸಾಗರದಲ್ಲಿ.
“ ನನಗೆ ಮೊದಲೇ ಸಂಶಯವಿತ್ತು, ನೋಡು ನಾನು ಆಗಲೇ ನಿನ್ನ ಸಾಲುಗಳನ್ನ ಬದಲಾಯಿಸಿ ಇಟ್ಟಿದ್ದೇನೆ. “ ಕಮಾಲ್ ತಾನು ಮಾಡಿದ ತಿದ್ದುಪಡಿಯನ್ನ ಕಬೀರನಿಗೆ ತೋರಿಸಿದ.
ಕಬೀರ ಈಗ ಹೇಳಿದ ತಿದ್ದುಪಡಿಯನ್ನೇ ಕಮಾಲ್ ಅಂಧೇ ಬರೆದಿಟ್ಚಿದ್ದ. ಆ ಬದಲಾವಣೆ ಹೀಗಿತ್ತು…
ಗೆಳೆಯಾ ನನ್ನನ್ನೇ ನಾನು ಹುಡುಕುತ್ತಿದ್ದೆ
ಆದರೆ ನನ್ನ ಕಂಡುಕೊಳ್ಳುವ ಬದಲು
ಇಡೇ ಜಗತ್ತನ್ನು, ಇಡೀ ಬ್ರಹ್ಮಾಂಡವನ್ನು ಕಂಡುಕೊಂಡೆ
ಪದ್ಮಪತ್ರದಿಂದ ಜಾರಿಬಿದ್ದ ಇಬ್ಬನಿಯ ಹನಿಯಲ್ಲಿ
ಕಣ್ಮರೆಯಾಗಿತ್ತು ಸಾಗರ.
ಬಹುಶಃ ಈ ಕಾರಣಕ್ಕೇ ಕಬೀರ, ಮಗನಿಗೆ ಕಮಾಲ್ ( ಆಶ್ಚರ್ಯ) ಎಂದು ಹೆಸರಿಟ್ಟಿದ್ದ.
ಇಬ್ಬನಿಯ ಹನಿಯಲ್ಲಿ ಸಮುದ್ರ ಕಣ್ಮರೆಯಾದಾಗ , ಎಲ್ಲ ಗಡಿಗಳು ನಾಶವಾಗಿ ಅದ್ವೈತ ಸ್ಥಾಪನೆಯಾಗುತ್ತದೆ. ‘ ನಾನು ‘ ಎನ್ನುವುದು ನಾಶವಾಗುತ್ತ ನಾಶವಾಗುತ್ತ ಶೂನ್ಯ ಆವರಿಸಿಕೊಳ್ಳುತ್ತದೆ.
Osho, Hari Om tat sat, Ch 27, Q 1 (excerpt)