ಮೂಲ ~ ಖಲೀಲ್ ಜಿಬ್ರಾನ್ | ಕನ್ನಡಕ್ಕೆ: ಸುನೈಫ್
ಅದು ಹೀಗಾಯಿತು:
ಲೋಕದೆಲ್ಲ ದೇವರುಗಳು
ಇನ್ನೂ ಹುಟ್ಟಿರದ ಒಂದು ದಿನ
ಗಾಢ ನಿದ್ದೆಯಿಂದೆದ್ದು ನೋಡಿದರೆ
ಮುಖವಾಡಗಳೆಲ್ಲ ಕಾಣೆಯಾಗಿದ್ದವು.
ಏಳು ಜನ್ಮಗಳಲ್ಲಿ ಕೈಯಾರೆ ಹೊಲಿದು
ಹೊತ್ತು ನಡೆದ ಏಳು ಮುಖವಾಡಗಳು.
ಆ ಜನಸಂದಣಿಯ ಬೀದಿಯಲ್ಲಿ
ಬೊಬ್ಬಿಡುತ್ತಾ ಓಡಿದೆ
'ಕಳ್ಳರು, ಕಳ್ಳರು, ಶಾಪಗ್ರಸ್ತ ಕಳ್ಳರು'
ಜನರು ಗೇಲಿ ಮಾಡಿ ನಕ್ಕರು
ಹೆದರಿದವರು ಮನೆ ಹೊಕ್ಕರು
ಸಂತೆ ತಲುಪಿದಾಗ
ಮಾಳಿಗೆಯಿಂದ ಯುವಕನೊಬ್ಬ ಕೂಗಿದ:
'ಇವನೊಬ್ಬ ಹುಚ್ಚ!'
ತಲೆಯೆತ್ತಿದೆ ಅವನ ನೋಡಲು
ಮುತ್ತಿಟ್ಟ ಸೂರ್ಯ ಅದೇ ಮೊದಲ ಸಲ
ನನ್ನ ಬೆತ್ತಲೆ ಮುಖಕ್ಕೆ
ನನ್ನಾತ್ಮ ಸೂರ್ಯನ ಪ್ರೇಮದಲ್ಲಿ
ಹೊತ್ತುರಿದು ಬೆಳಗಿತು
ಆ ನಂತರ ಮುಖವಾಡಗಳು
ಬೇಕಾಗಲೇ ಇಲ್ಲ
ಕವಿದ ಮಂಪರು ತಿಳಿಯಾದಂತೆ
ನಾನು ಮತ್ತೆ ಕೂಗಿದೆ:
'ಅವರು ಪುಣ್ಯವಂತರು,
ಮುಖವಾಡ ಕದ್ದವರು ಪುಣ್ಯವಂತರು'
ಹೀಗೆ ನಾನೊಬ್ಬ ಹುಚ್ಚನಾದೆ
ಈ ಹುಚ್ಚುತನದಲ್ಲಿ
ಸ್ವಾತಂತ್ರ್ಯ ಮತ್ತು ನೆಮ್ಮದಿಯಿದೆ;
ಒಬ್ಬಂಟಿತನದ ಸ್ವಾತಂತ್ರ್ಯ ಮತ್ತು
ಅನಾಮಿಕತೆಯ ಭದ್ರತೆ.
ಪರಿಚಯವಾದಷ್ಟೂ ದಾಸ್ಯತನ.
ಆದರೂ,
ಈ ನೆಮ್ಮದಿಯ ದಿನಗಳ ಬಗ್ಗೆ
ನಾನು ಅಹಂಕರಿಸುವುದಿಲ್ಲ,
ಜೈಲಿನಲ್ಲಿರುವ ಕಳ್ಳನೂ
ಇನ್ನೊಬ್ಬ ಕಳ್ಳನಿಂದ
ಸುರಕ್ಷಿತವಾಗಿರುತ್ತಾನೆ.