ನಮ್ಮಲ್ಲಿ ಮಾತುಗಳಿಗೆ ದುರ್ಭಿಕ್ಷವಿಲ್ಲ ! : ಇಂದಿನ ಸುಭಾಷಿತ, ವಿದುರ ನೀತಿಯಿಂದ

ಹೆಚ್ಚು ಮಾತಾಡುವುದು ‘ವಾಚೋ ವಿಗ್ಲಾಪನಮ್’. ಅದು ವಾಗ್ದೇವಿಯನ್ನು ಬಳಲಿಸಿದಂತೆ. ವಾಕ್ ಶಕ್ತಿಯ ದುರುಪಯೋಗ. ನಮಗಿರುವುದು ವಾಕ್ ಶಕ್ತಿಯ ಕೊರತೆಯಲ್ಲ, ಕ್ರಿಯಾಶಕ್ತಿಯ ಕೊರತೆ ~ ಎನ್.ರಂಗನಾಥ ಶರ್ಮರ ವ್ಯಾಖ್ಯಾನ (ವಿದುರನೀತಿ । ಆಕರ: ಸೂಕ್ತಿ ವ್ಯಾಪ್ತಿ)

ವಾಕ್‌ಸಂಯಮೋ ಹಿ ನೃಪತೇ ಸುದುಷ್ಕರತಮೋ ಮತಃ |
ಅರ್ಥವಚ್ಚ ವಿಚಿತ್ರಂ ಚ ನ ಶಕ್ಯಂ ಬಹು ಭಾಷಿತುಮ್‌ ॥ ವಿದುರ ನೀತಿ ॥

ಅರ್ಥ: “ರಾಜ, ಮಾತನ್ನು ಮಿತವಾಗಿ ಬಳಸುವುದು ಬಹಳ ಕಷ್ಟ. ಅರ್ಥವತ್ತಾಗಿಯೂ ನಾನಾ ಯುಕ್ತಿಗಳಿಂದಲೂ ನಿದರ್ಶನಗಳಿಂದಲೂ ಕೂಡಿ ವಿಚಿತ್ರವೆನಿಸುವಂತೆ (ವಿಶೇಷವೆನಿಸುವಂತೆ) ಹೆಚ್ಚು ಮಾತಾಡಲು ಸಾಧ್ಯವೂ ಇಲ್ಲ.”

ತಾತ್ಪರ್ಯ: ನಮಗೆ ಯಾವುದರ ದುರ್ಭಿಕ್ಷವಾದರೂ ಮಾತುಗಳಿಗೆ ದುರ್ಭಿಕ್ಷವಿಲ್ಲ! ಮಾತಿನ ಸರಮಾಲೆಯನ್ನು ಜೋಡಿಸಿ ಭಾಷಣ ಬಿಗಿಯಬಲ್ಲೆವು. ಹಾಗೆಯೇ
ಬರೆಯಲೂಬಲ್ಲೆವು. “ಅಚ್ಚಿನಾ ಮೊಳೆಯುಂಟು, ವೆಚ್ಚಕ್ಕೆ ಹೊನ್ನುಂಟು.’ ಅದು ಸಂಗತವಾಗಿದೆಯೋ ಅಸಂಗತವಾಗಿದೆಯೋ, ಜನರಿಗೆ ಬೇಕಾದದ್ದೋ
ಬೇಡವಾದ್ದೋ ಎಂದು ಯಾರೂ ಮನಸ್ಸಿಗೆ ತಂದುಕೊಳ್ಳುವುದಿಲ್ಲ. ನಾವು ಮಾತಿನ ಮಲ್ಲರು. ಸರ್ಕಾರ ಅದಕ್ಕೆ ತೆರಿಗೆ ಹಾಕಿದರೆ ಲೇಸೆನಿಸುತ್ತದೆ !
ವಾಕ್‌ಚಪಲವು ಮನುಷ್ಯನು ಗೆಲ್ಲಲಾರದ ಒಂದು ಚಟ.

“ಮಾತನಾಡಿದರೆ ಮುತ್ತು ಚೆಲ್ಲುವಂತಿರಬೇಕು’ ಎನ್ನುವುದು ದೊಡ್ಡವರ ಹಿತ ನುಡಿ. ಮಾತಾಡುವುದು ಮನುಷ್ಯನಿಗೆ ದೈವದತ್ತವಾದ ಒಂದು ಶಕ್ತಿ. ಆ ಶಕ್ತಿ ಮುತ್ತಿನ ಬೆಲೆಯುಳ್ಳದ್ದು. ‘ಮಹೀಯಾಂಸಃ ಪ್ರಕೃತ್ಕಾ ಮಿತಭಾಷಿಣಃ’ (“ದೊಡ್ಡವರು ಸಹಜವಾಗಿ ಮಿತಭಾಷಿಗಳು’) ಎನ್ನುತ್ತದೆ ಒಂದು ಸುಭಾಷಿತ.

ಸತ್ಯವನ್ನು ನುಡಿಯಲು ಹೆಚ್ಚು ಮಾತುಗಳು ಬೇಕಿಲ್ಲ. ಏಕೆಂದರೆ, ಸತ್ಯದ ಸ್ವರೂಪ ಒಂದೇ ಆಗಿರುತ್ತದೆ. ಪ್ರಜೆಗಳಿಗೆ ಬೇಕಾದ್ದು ಸುಖ-ನೆಮ್ಮದಿ. ಅದೊಂದರ ವಿಷಯವಾಗಿ ನಮ್ಮ ರಾಜಕೀಯಸ್ಥರು ಮಾಡುವ ಭಾಷಣಗಳಿಂದ ಆಕಾಶ ಪ್ರತಿಧ್ವನಿತವಾಗಿದೆ. ಅವರಾಡುವ ಮಾತು ಗಾಳಿಯಲ್ಲಿ ಇಂಗಿಹೋಗುವುದರಿಂದ ಎಷ್ಟು ಮಾತಾಡಿದರೂ ಆಕಾಶ ಹಿಡಿಸುತ್ತದೆ ! ಕಲ್ಲುಹರಳುಗಳಂತೆ ಅವು ಉಳಿದುಕೊಂಡಿದ್ದರೆ ಆಕಾಶ ತುಂಬಿಹೋಗಿ ಮುಂದಿನ ಮಾತುಗಳಿಗೆ ಸ್ಥಳ ಇರುತ್ತಿರಲಿಲ್ಲ!

ಹೆಚ್ಚು ಮಾತಾಡುವುದು ‘ವಾಚೋ ವಿಗ್ಲಾಪನಮ್’. ಅದು ವಾಗ್ದೇವಿಯನ್ನು ಬಳಲಿಸಿದಂತೆ. ವಾಕ್ ಶಕ್ತಿಯ ದುರುಪಯೋಗ. ನಮಗಿರುವುದು ವಾಕ್ ಶಕ್ತಿಯ ಕೊರತೆಯಲ್ಲ, ಕ್ರಿಯಾಶಕ್ತಿಯ ಕೊರತೆ.

Leave a Reply