ಮೂಲ : ಸಾದಿ | ಕನ್ನಡಕ್ಕೆ: ಸುನೈಫ್
ಉರಿವ ಸೂರ್ಯನನ್ನು ದಿಟ್ಟಿಸಲಾರವು
ನಿಮ್ಮ ಬೆತ್ತಲೆ ಕಂಗಳು
ಉರಿಯೊಳಗಿನ ಬೆಳಕ ಕಾಣಬೇಕೆಂದರೆ
ತಿಳಿಕೊಳದ ಬಳಿ ನಿಂತು
ಪ್ರತಿಫಲಿಸುವುದ ನೋಡಿರಿ.
ಪರಿಪೂರ್ಣತೆಯ ಪ್ರತಿಬಿಂಬ ಹುದುಗಿರುವುದು
ಇಲ್ಲದಿರುವಿಕೆಯ ಕನ್ನಡಿಯಲ್ಲಿ;
ಲೋಕವೊಂದು ಕನ್ನಡಿ;
ಅದರಣುಕಣದೊಳಗೆ ನೂರು ಸೂರ್ಯರು.
ಹನಿ ನೀರಿನ ಎದೆ ಸೀಳಿದರೆ
ಹರಿಯುವುದು ಸಾವಿರ ಸಾಗರಗಳು;
ಧೂಳಿನ ಕಣದಲ್ಲಿ ಸಾವಿರ ಬದುಕು,
ನೊಣದ ಕಾಲಿಗೂ ಆನೆಬಲವಿದೆ;
ನೈಲ್ ಎಂದು ಕರೆಯುವಾಗ
ನೀರ ಬಿಂದು ಮಹಾನದಿಯಾಗುವುದು.
ಭತ್ತದ ಕಾಳಿನಲ್ಲಿ ಸುಗ್ಗಿ ಅಡಗಿರುವುದು,
ಪೈರಿನಲ್ಲಿ ಲೋಕ ನೆಲೆ ನಿಂತಿರುವುದು.
ಕೀಟಕ್ಕೆ ರೆಕ್ಕೆಯೊಡಲಲ್ಲೇ ಬದುಕಿನ ಕಡಲು.
ನಿಮ್ಮ ಕಣ್ಣಗೊಂಬೆಯಲ್ಲೇ ಸ್ವರ್ಗ ಅಡಗಿರುವುದು.
ಹೀಗೆಯೇ,
ಪುಟ್ಟ ಹೃದಯದ ಕವಾಟವು
ಕಿರಿದಿರುವುದು ನಿಜವಾದರೂ,
ಅಲ್ಲಿ ಲೋಕಾಧಿಪತಿ ಹೊಕ್ಕು ನೆಲೆಸಬಲ್ಲನು.