ಸತ್ಯವನ್ನ ಹೇಳಲಿಕ್ಕಾಗುವುದಿಲ್ಲ

ಸತ್ಯವನ್ನ ಹೇಳಲಿಕ್ಕಾಗುವುದಿಲ್ಲ.  ನೀವು ಎಚ್ಚರವಾದಾಗ ನಿಮಗೆ ನನ್ನ ಮಾತು ಬೇಕಾಗಿಲ್ಲ  ಮತ್ತು ನಾನೂ ನಿಮಗೆ ಸತ್ಯ ಹೇಳುವ ಸಾಹಸ ಮಾಡುವುದಿಲ್ಲ... | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ 
The man of compassion has to lie. The lie is only a device to wake you up,” explains Osho.

ಅಂತಃಕರಣಕ್ಕೆ ಯಾವ ನಿಯಮ, ಸಿದ್ಧಾಂತಗಳೂ ಗೊತ್ತಿಲ್ಲ. ಯಾವ ಸರಿ ತಪ್ಪುಗಳ ಬಗ್ಗೆ ಮಾಹಿತಿ ಇಲ್ಲ. ನಿಮಗೆ ಸಹಾಯ ಮಾಡಲು ಅಂತಃಕರಣ, ಸುಳ್ಳುಹೇಳಲೂ ಹಿಂದೆ ಮುಂದೆ ನೋಡುವುದಿಲ್ಲ. ನಿದ್ದೆಯಲ್ಲಿ ನಿಮಗೆ ಯಾವ ಸತ್ಯವೂ ಅರ್ಥವಾಗುವುದಿಲ್ಲ ನಿಮಗೆ ಅರ್ಥವಾಗುವುದು ಸುಳ್ಳು ಮಾತ್ರ.

ಹಲವಾರು ಸಂಗತಿಗಳು ಇಲ್ಲಿ ಸಮ್ಮಿಳಿತವಾಗಿವೆ. ಮೊದಲು ಜ್ಞಾನೋದಯ, ನಿರ್ವಾಣ, ಎಚ್ಚರ, ಬೆಳಕು ಎಲ್ಲ ಸಾಧ್ಯವಾಗುವುದು ಮೈಂಡ್ ನ ಅನುಪಸ್ಥಿತಿಯಲ್ಲಿ. ಇಲ್ಲಿ ಶಬ್ದಗಳಿಲ್ಲ, ಭಾಷೆಯಿಲ್ಲ ಮತ್ತು ಸ್ವತಃ ನೀವು ಕೂಡ ಗೈರು ಹಾಜರಾಗಿರುವಿರಿ.

ಇಂಥ ಅಪರೂಪದ ಮೌನವನ್ನು, ಪರಿಪೂರ್ಣತೆಯನ್ನು, ಅಪರಿಮಿತವನ್ನು ಸುಳ್ಳಿನ ಸಹಾಯವಿಲ್ಲದೇ ವಿವರಿಸಲಿಕ್ಕಾಗುವುದಿಲ್ಲ.

ಸತ್ಯವನ್ನು ನುಡಿದ ಕ್ಷಣದಲ್ಲಿಯೇ ಅದು ತನ್ನ ಸತ್ಯವನ್ನು ಕಳೆದುಕೊಳ್ಳುತ್ತದೆ. ಸತ್ಯವನ್ನ ನುಡಿಯುವ ಕ್ರಿಯೆಯೇ ಅದನ್ನು ಸುಳ್ಳಾಗಿಸುತ್ತದೆ. ಶಬ್ದರಾಹಿತ್ಯದ ಅನುಭವವನ್ನು ಶಬ್ದಗಳಲ್ಲಿ ಹೇಳುವುದೆಂದರೆ ಆ ಅನುಭವದ ಗುಣಮಟ್ಟವನ್ನೇ ಬದಲಾಯಿಸುವುದು.

ಯಾವುದೋ ಒಂದು ಮಹತ್ತರವಾದ ಅನುಭವವನ್ನು ಯಾವುದೋ ಒಂದು ಸಮಯದಲ್ಲಿ ಒಬ್ಬ ವ್ಯಕ್ತಿ ಅನುಭವಿಸಿದ್ದಾನೆಂದರೆ ಅದನ್ನು ಆತ ಇತರರಿಗೆ ವಿವರಿಸಬಯಸುವಾಗ ಸುಳ್ಳಿನ ಸಹಾಯ ಪಡೆಯದೆ ಬೇರೆ ದಾರಿಯಿಲ್ಲ. ಆದರೆ ಅರಿವನ್ನು ಸಾಧಿಸಿರುವ ಮನುಷ್ಯನ ಸುಳ್ಳು ನಿದ್ದೆಯಲ್ಲಿರುವವನ ಸತ್ಯಕ್ಕಿಂತ ಹೆಚ್ಚು ಸತ್ಯಕ್ಕೆ ಹತ್ತಿರವಾಗಿರುತ್ತದೆ.

ನನಗೊಂದು ಪುಟ್ಟ ಕಥೆ ನೆನಪಾಗುತ್ತಿದೆ…

ತನ್ನ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ವ್ಯಕ್ತಿಯೊಬ್ಬ ಯಾವುದೋ ಕೆಲಸ ನಿಮಿತ್ತ ಹತ್ತಿರದ ಶಹರಕ್ಕೆ ಹೋಗಬೇಕಾಗಿಬಂತು. ಶಹರಕ್ಕೆ ಹೊರಟು ನಿಂತಿದ್ದ ಅಪ್ಪನಿಗೆ ಮಕ್ಕಳು, ತಮಗೆ ಬೇಕಾದ ಆಟದ ಸಾಮಾನುಗಳನ್ನು ತರಲು ಲಿಸ್ಟ ಕೊಟ್ಟರು. ಅಂದು ತಡ ರಾತ್ರಿ ಆ ವ್ಯಕ್ತಿ ಮನೆಗೆ ಮರಳಿದಾಗ ಅವನ ಮನೆ ಹೊತ್ತಿ ಉರಿಯುತ್ತಿತ್ತು. ಮನೆಯ ಸುತ್ತ ಸೇರಿದ್ದ ಜನಜಂಗಳಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿತ್ತು. ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಮಕ್ಕಳ ಬಗ್ಗೆ ಎಲ್ಲರಿಗೂ ಕಾಳಜಿ.

“ನಾವು ಎಷ್ಟು ಕೂಗಿದರೂ ಮಕ್ಕಳು ಗಮನ ಕೊಡುತ್ತಿಲ್ಲ, ಅವರು ಆಟದಲ್ಲಿ ಮಗ್ನರಾಗಿಬಿಟ್ಟಿದ್ದಾರೆ. ತಾವು ಅನುಭವಿಸಬಹುದಾದ ಅಪಾಯದ ಬಗ್ಗೆ ಮಕ್ಕಳಿಗೆ ಗೊತ್ತಾಗುತ್ತಿಲ್ಲ. ಅವರು ಮನೆಗೆ ಹತ್ತಿರುವ ಬೆಂಕಿಯನ್ನ ಸಂಭ್ರಮಿಸುತ್ತಿದ್ದಾರೆ. ಈಗ ನೀನು ಬಂದಿರುವೆ, ಏನಾದರೂ ಮಾಡಿ ಮಕ್ಕಳನ್ನು ಮನವೊಲಿಸಿ ಹೊರಗೆ ಬರುವಂತೆ ಮಾಡು.“

ಮನೆ ಸುತ್ತ ಸೇರಿದ್ದ ಜನ ಮನೆಗೆ ಬಂದ ಅಪ್ಪನಿಗೆ ವಿಷಯ ತಿಳಿಸಿದರು.

ಯಾವುದೂ ಗಡಿಬಿಡಿಯಲ್ಲಿ ಅಪ್ಪ, ಮಕ್ಕಳು ಹೇಳಿದ ಯಾವ ಆಟದ ಸಾಮಾನೂ ತಂದಿರಲಿಲ್ಲ. ಅಪ್ಪ ಮನೆಯ ಬಾಗಿಲ ಹತ್ತಿರ ಹೋದ, ಅಲ್ಲಿ ಇನ್ನೂ ಬೆಂಕಿ ಆವರಿಸಿಕೊಂಡಿರಲಿಲ್ಲ. ಮನೆಯ ಬಾಗಿಲನ್ನು ಮಕ್ಕಳು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಅಪ್ಪ ಎಷ್ಟು ಮನವಿಮಾಡಿಕೊಂಡರೂ ಮಕ್ಕಳು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಅವರು ಸುತ್ತ ಕಾಣುತ್ತಿದ್ದ ಬೆಂಕಿಯನ್ನ ಕಂಡು ಖುಶಿ ಪಡುತ್ತಿದ್ದರು.

“ಮಕ್ಕಳಾ ಹೊರಗೆ ಬನ್ನಿ ನಿಮಗೆ ನಾನು ಹೊಸ ಆಟದ ಸಾಮಾನು ತಂದಿದ್ದೇನೆ , ಮೂರು ಎಣಿಸುವುದರಲ್ಲಿ ನೀವು ಹೊರಬರದಿದ್ದರೆ ಈ ಕಾರು, ಟ್ರೈನು, ಬಸ್ಸು ಎಲ್ಲ ಬೇರೆ ಮಕ್ಕಳಿಗೆ ಕೊಟ್ಟುಬಿಡುತ್ತೇನೆ."

ಅಪ್ಪ ಕೊನೆಯ ಅಸ್ತ್ರವಾಗಿ ಮಕ್ಕಳಿಗೆ ಸುಳ್ಳು ಆಮಿಷ ಒಡ್ಡಿದ.

ಮಕ್ಕಳು, ಆಟದ ಸಾಮಾನುಗಳ ಬಗ್ಗೆ ಕೇಳಿಸಿಕೊಳ್ಳುತ್ತಿದ್ದಂತೆಯೇ ಬಾಗಿಲು ತೆರೆದು ಹೊರಗೆ ಓಡಿಬಂದರು. ಮಕ್ಕಳನ್ನು ದೂರ ಕರೆದುಕೊಂಡು ಹೋಗಿ ಅಪ್ಪ ಕ್ಷಮೆ ಕೇಳಿದ, ತಾನು ಗಡಿಬಿಡಿಯಲ್ಲಿ ಆಟದ ಸಾಮಾನು ತರಲು ಮರೆತಿರುವುದಾಗಿಯೂ ಮುಂದಿನ ಬಾರಿ ಖಂಡಿತ ಆಟದ ಸಾಮಾನು ತರುವುದಾಗಿಯು ಹೇಳಿ ಮಕ್ಕಳ ಮನವೊಲಿಸಿದ. ನಾನು ಸುಳ್ಳು ಹೇಳದಿದ್ದರೆ ಅವರು ಬೆಂಕಿಗೆ ಸಿಲುಕುತ್ತಿದ್ದ ಬಗ್ಗೆ ವಿವರಿಸಿದ.

ನಿಮ್ಮ ಪ್ರಕಾರ ಅಪ್ಪ, ಮಕ್ಕಳಿಗೆ ಸುಳ್ಳು ಹೇಳಿದ್ದು ತಪ್ಪಾ ? ಪಾಪವಾ ? ಇದು ಕೇವಲ ಒಬ್ಬ ಸಾಮಾನ್ಯ ಮನುಷ್ಯ ಮತ್ತು ಅವನ ಮಕ್ಕಳ ವಿಷಯ ಮಾತ್ರವಾದರೆ ನನ್ನ ಮತ್ತು ನನ್ನ ಮಕ್ಕಳ ಗತಿ ಏನು ? ನಾನು ಸುಳ್ಳು ಹೇಳುತ್ತೇನೋ ಇಲ್ಲವೋ ಅದು ನನಗೆ ಅಂಥ ದೊಡ್ಡ ವಿಷಯವಲ್ಲ, ಏಕೆಂದರೆ ಇದರಿಂದ ನನ್ನ ಪ್ರಜ್ಞೆಗೆ ಅಂಥ ಯಾವ ವ್ಯತ್ಯಾಸವೂ ಆಗುವುದಿಲ್ಲ. ಇದು ಕೇವಲ ಆಟ ಮಾತ್ರ. ಆದರೆ ನಿಮಗೆ ಇದು ಬಹಳ ಮಹತ್ವದ ವಿಷಯ. ನಾನು ಸತ್ಯದ ಬಗ್ಗೆ ಸತತವಾಗಿ ಹೇಳುತ್ತ ಹೋಗಬಹುದು, ಆದರೆ ಅದು ನಿಮಗಾರಿಗೂ ಅರ್ಥವಾಗುವುದಿಲ್ಲ ಮತ್ತು ನಿಮಗೆ ಪ್ರಯೋಜನವೂ ಆಗಲಿಕ್ಕಿಲ್ಲ, ಅಥವಾ ಅದಕ್ಕೆ ಅರ್ಥ ಹಚ್ಚುವುದೂ ಸಾಧ್ಯವಿಲ್ಲ.

ಸತ್ಯವನ್ನ ಹೇಳಲಿಕ್ಕಾಗುವುದಿಲ್ಲ. ನೀವು ಎಚ್ಚರವಾದಾಗ ನಿಮಗೆ ನನ್ನ ಮಾತು ಬೇಕಾಗಿಲ್ಲ ಮತ್ತು ನಾನೂ ನಿಮಗೆ ಸತ್ಯ ಹೇಳುವ ಸಾಹಸ ಮಾಡುವುದಿಲ್ಲ. ಈ ಕಾರಣವಾಗಿಯೇ ನಾನು ಹೇಳಿದ್ದು ಅಂತಃಕರಣದ ಮನುಷ್ಯ ಸುಳ್ಳನ್ನು ಬಳಸಿಕೊಳ್ಳುತ್ತಾನೆ ಕೇವಲ ನಿಮ್ಮನ್ನು ಎಚ್ಚರ ಮಾಡಲು. ಒಮ್ಮೆ ನಿಮಗೆ ಎಚ್ಚರವಾಯಿತೆಂದರೆ ನಾನು ನಿಮ್ಮ ಕ್ಷಮೆ ಕೇಳುತ್ತೇನೆ ಮತ್ತು ನೀವು ನಗು ನಗುತ್ತ ನನ್ನ ಕ್ಷಮಿಸಿಬಿಡುತ್ತೀರಿ.

Osho, From Death to Deathlessness, Ch 1 (excerpt)

Leave a Reply