ಈ ಯುಗದಲ್ಲಾದರೋ ಮಂತ್ರಾಲೋಚನೆ ಮಾಡತಕ್ಕವರ ಸಂಖ್ಯೆ ಅಪರಿಮಿತ; ಆಸೆ ಅಮಿಷಗಳು ಅನಂತಮುಖ. ಹಿಂಬಾಲಕರ ಸಂಖ್ಯೆಗೆ ಅನುಗುಣವಾಗಿ ಮಂತ್ರಾಲೋಚನೆ ಪರಿಪುಷ್ಟವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. ಅದಕ್ಕೆ ಬರುವ ತೂಕ ಸಂಖ್ಯಾಬಲದಿಂದಲೇ ಹೊರತು ತೂಕವಾದ ವಿಚಾರದಿಂದಲ್ಲ. ಸಂಖ್ಯಾಬಲ ಬರುವುದು ಸ್ವಾರ್ಥಬಲದಿಂದ… ~ ಎನ್.ರಂಗನಾಥ ಶರ್ಮರ ವ್ಯಾಖ್ಯಾನ । ಕೃಪೆ : ಸೂಕ್ತಿ ವ್ಯಾಪ್ತಿ
ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಹನ್ಯತೇ |
ಸಬಂಧುರಾಷ್ಟ್ರಂ ರಾಜಾನಂ ಹಂತ್ಯೇಕೋ ಮಂತ್ರವಿಪ್ಣವಃ | ಯಶಸ್ತಿಲಕಚಂಪೂ |
ಅರ್ಥ: ವಿಷವು ಒಬ್ಬನನ್ನು ಕೊಲ್ಲುತ್ತದೆ. ಆಯುಧದಿಂದ ಒಬ್ಬನು ಹತನಾಗುತ್ತಾನೆ. ಆದರೆ ಕೆಟ್ಟ ಮಂತ್ರಾಲೋಚನೆ ಬಂಧು -
ರಾಷ್ಟ್ರಸಮೇತವಾಗಿ ರಾಜನನ್ನು ನಾಶಮಾಡುತ್ತದೆ.
ತಾತ್ಪರ್ಯ: ವಿಷದಿಂದ, ಹರಿತವಾದ ಆಯುಧದಿಂದ ಆಗುವ ಅನರ್ಥಕ್ಕಿಂತ 'ಮಂತ್ರವಿಪ್ಲವ'ದಿಂದ ಆಗುವ ಅನರ್ಥ ಘೋರವಾದದ್ದು, ರಾಷ್ಟ್ರವ್ಯಾಪಿಯಾದದ್ದು. ರಾಷ್ಟ್ರದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಅದರ ಬಿಸಿ ತಟ್ಟುತ್ತದೆ. ಮಂತ್ರಾಲೋಚನೆಯ ವಿಪ್ಲವ ಹೇಗೆ ರಾಷ್ಟ್ರದ ವಿಪತ್ತಿಗೆ ಕಾರಣವಾಗುತ್ತದೆಯೆಂಬುದನ್ನು ರಾಮಾಯಣ, ಮಹಾಭಾರತ ಕಥೆಗಳೂ ಇತಿಹಾಸವೂ ಸ್ಪಷ್ಟಪಡಿಸಿವೆ. ಯಾವ ಮಂತ್ರಾಲೋಚನೆಯಲ್ಲಿ ರಾಷ್ಟ್ರವ್ಯಾಪಿಯಾದ ಹಿತದೃಷ್ಟಿಯಿಲ್ಲವೋ, ಯಾವುದು ದೂರದೃಷ್ಟಿಯನ್ನು ಕಳೆದುಕೊಂಡು ಸ್ಪಾರ್ಥದಿಂದ ಸಂಕುಚಿತವಾಗುವುದೋ ಅದು 'ಮಂತ್ರವಿಪ್ಲವ'. (ಮಂತ್ರಾಲೋಚನೆ ಅಥವಾ ಸಲಹೆ. ತಪ್ಪು ಮಂತ್ರಾಲೋಚನೆ ಅಥವಾ ಸಲಹೆಯೇ ವಿನಾಶಕಾರಿಯಾದ ಮಂತ್ರ ವಿಪ್ಲವ)
ನಿರಂಕುಶ ಪ್ರಭುತ್ವದ ‘ಏಕರಾಜ’ ವ್ಯವಸ್ಥೆಯಲ್ಲಿಯೇ “ಮಂತ್ರವಿಪ್ಲವ’ದಿಂದಾಗುವ ಅನರ್ಥವನ್ನು ಹಿಂದಿನವರು ಕಂಡುಕೊಂಡಿದ್ದರು. ಆಗ ಮಂತ್ರಾಲೋಚನೆ ಹೇಳತಕ್ಕವರ ಸಂಖ್ಯೆ ಪರಿಮಿತವಾಗಿತ್ತು; ಅವರ ಆಸೆ ಆಮಿಷಗಳು ರಾಜಾನುಗ್ರಹಕ್ಕೆ ಮಾತ್ರ ಸೀಮಿತವಾಗಿತ್ತು. ಈ ಯುಗದಲ್ಲಾದರೋ ಮಂತ್ರಾಲೋಚನೆ ಮಾಡತಕ್ಕವರ ಸಂಖ್ಯೆ ಅಪರಿಮಿತ; ಆಸೆ ಅಮಿಷಗಳು ಅನಂತಮುಖ. ಹಿಂಬಾಲಕರ ಸಂಖ್ಯೆಗೆ ಅನುಗುಣವಾಗಿ ಮಂತ್ರಾಲೋಚನೆ ಪರಿಪುಷ್ಟವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. ಅದಕ್ಕೆ ಬರುವ ತೂಕ ಸಂಖ್ಯಾಬಲದಿಂದಲೇ ಹೊರತು ತೂಕವಾದ ವಿಚಾರದಿಂದಲ್ಲ. ಸಂಖ್ಯಾಬಲ ಬರುವುದು ಸ್ವಾರ್ಥಬಲದಿಂದ.
‘ಸ್ವ’ ಎಂದರೆ “ನಾನು, ನನ್ನ ಬಂಧುಗಳು” ಎಂದಷ್ಟೇ ಆದರೆ ಅದು ಸ್ವಾರ್ಥಕಲುಷಿತ. ಅದೇ ‘ಸ್ವ’ ಎಂದರೆ “ನಮ್ಮ ರಾಷ್ಟ್ರ” ಎಂದಾದಾಗ ಅಂತಹ ಸ್ವಾರ್ಥ ಪವಿತ್ರವಾದದ್ದು. ಈ ದೃಷ್ಟಿಯಿಂದಾದ ಮಂತ್ರಾಲೋಚನೆ ರಾಷ್ಟ್ರಕ್ಕೆ ಹಿತಕಾರಿ. ಈ ವಿಶಾಲಾರ್ಥದ ಸ್ವಾರ್ಥದಿಂದ ಪ್ರಚೋದಿತವಾದ – ಮಂತ್ರಾಲೋಚನೆ ನಮಗೆ ಬೇಕಾದದ್ದು. ಸರಿಯಾಗಿ ಬಳಸಿದ ವಿಷ ಔಷಧವಾಗಿ ಅಮೃತವಾಗುವಂತೆ; ಆಯುಧವೂ ಲೋಕೋಪಕಾರಿಯಾಗುವಂತೆಯೇ ಸರಿಯಾದ ಮಂತ್ರಾಲೋಚನೆಯೂ. ಇಲ್ಲವಾದರೆ ವಿನಾಶ ಖಚಿತ.