ಜಗತ್ತಿನ ಎಲ್ಲ ಧಾರ್ಮಿಕ ನಾಯಕರು ‘ಬ್ರಹ್ಮಚರ್ಯ’ ವನ್ನ ಒಂದು ಶ್ರೇಷ್ಠ ನೈತಿಕ ಮೌಲ್ಯ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ. ಆದರೆ ಬ್ರಹ್ಮಚರ್ಯ ಅಸಹಜವಾದ್ದರಿಂದ ಅತ್ಯಂತ ಅನೈತಿಕ ಸಂಗತಿಯಾಗಿದೆ ~ ಓಶೋ ರಜನೀಶ್ |ಕನ್ನಡಕ್ಕೆ : ಚಿದಂಬರ ನರೇಂದ್ರ
That which is unnatural cannot be moral – Osho
ಒಂದು ಹಳೆಯ ಕಥೆ
ದೇವರು ಈ ವಿಶ್ವವನ್ನ ನಿರ್ಮಿಸಿ ಮುಗಿದಿತ್ತು. ಆರನೇ ದಿನ ಎಲ್ಲ ಮುಗಿದ ಮೇಲೂ ಇನ್ನೂ ಒಂದು ಹಾಗೇ ಉಳಿದಿತ್ತು. ದೇವರು ಭೂಮಿಯ ಜನರಿಗೆ ಇನ್ನೂ ‘ನೈತಿಕ ನಿಯಮ’ ಗಳನ್ನು ಹೇಳಿಕೊಟ್ಟಿರಲಿಲ್ಲ. ದೇವರು ಬ್ಯಾಬಿಲೋನಿಯಾ ಮತ್ತು ಈಜಿಪ್ತಿನ ಜನರನ್ನು ಕಂಡು ವಿಚಾರಿಸಿದ, “ ನಿಮಗೆ ಭೂಮಿಯ ಮೇಲೆ ನಾಗರೀಕರಂತೆ ಬದುಕಲು ನನ್ನ ಕಡೆಯಿಂದ ಏನಾದರೂ ವಿಶೇಷ ಆಜ್ಞೆಗಳು, ನಿಯಮಗಳು (Commandments ) ಬೇಕಾ? “
ಬಹುತೇಕ ಜನ “ ಕಮಾಂಡಮೆಂಟ್ಸ್ ? ಹಾಗೆಂದರೇನು ?” ಎಂದೇ ಕೇಳಿದರು . ಉದಾಹರಣೆಗೆ “ ನೀವು ನಿಮ್ಮ ಗಂಡ / ಹೆಂಡತಿಯಲ್ಲದ ಯಾರೊಡನೆಯೂ ಸೆಕ್ಸ್ ಮಾಡುವಂತಿಲ್ಲ, ಎನ್ನುವ ದೈವಾಜ್ಞೆ” ದೇವರು ಕಮಾಂಡಮೆಂಟ್ಸ್ ನ ಅರ್ಥ ಬಿಡಿಸಿ ಹೇಳಿದ.
“ ಇಂಥ ಯಾವ ಕಮಾಂಡಮೆಂಟ್ಸ್ ನಮಗೆ ಬೇಡ. ಇಂಥವುಗಳಿಂದ ನಮ್ಮ ಬದುಕು ನೀರಸವಾಗಿಬಿಡುತ್ತದೆ.” ಎಲ್ಲ ಜನ ಕಮಾಂಡಮೆಂಟ್ಸ್ ಗಳನ್ನ ನಿರಾಕರಿಸಿದರು.
ಭೂಮಿಯನ್ನ ಸುತ್ತಿ ಸುತ್ತಿ ಹೈರಾಣಾದ ದೇವರು ಕೊನೆಗೆ ಮೋಸೆಸ್ ನ ಭೇಟಿಯಾಗಿ ವಿಚಾರಿಸಿದ “ನಿಮಗೆ ನನ್ನ ಕಮಾಂಡಮೆಂಟ್ಸ್ ಬೇಕಾ?”
ಪಕ್ಕಾ ಜ್ಯೂ (Jew) ಸ್ವಭಾವದ ಮೋಸೆಸ್ ದೇವರೊಡನೆ ವ್ಯಾಪಾರಕ್ಕಿಳಿದ, “ ಒಂದು ಕಮಾಂಡಮೆಂಟ್ ಗೆ ಎಷ್ಟು ಕೊಡಬೇಕು?”
“ ಇಲ್ಲ, ಇವು ನನ್ನ ಕಡೆಯಿಂದ ನಿಮಗೆ ಉಡುಗೊರೆಗಳು, ಉಚಿತ. ನೀವು ಏನು ಕೊಡಬೇಕಾಗಿಲ್ಲ.” ದೇವರು ತನ್ನ ಔದಾರ್ಯವನ್ನು ಪ್ರದರ್ಶಿಸಿದ.
“ ಉಚಿತ ಎಂದಾರೆ ಒಂದು ಹತ್ತು ಕಮಾಂಡಮೆಂಟ್ಸ್ ಕೊಡು” ಮೋಸೆಸ್, ದೇವರ ಮುಂದೆ ತನ್ನ ಬೇಡಿಕೆ ಮಂಡಿಸಿದ.
ಇವತ್ತಿಗೂ ಈ ಕಮಾಂಡಮೆಂಟ್ಸ್ ಗಳಿಂದಾಗಿ ಜನ ಬಳಲುತ್ತಿದ್ದಾರೆ. ಸ್ವತಃ ಅಪರಾಧಿಗಳಲ್ಲದಿದ್ದರೂ ಈ ನೈತಿಕತೆಯ ವಕ್ತಾರರು ಒಂದಲ್ಲ ಒಂದು ರೀತಿಯಿಂದ ಕೆಲ ಅಪರಾಧಗಳ ಮೂಲವಾಗಿದ್ದಾರೆ. ಉದಾಹರಣೆಗೆ ಜಗತ್ತಿನ ಎಲ್ಲ ಧಾರ್ಮಿಕ ನಾಯಕರು ‘ಬ್ರಹ್ಮಚರ್ಯ’ ವನ್ನ ಒಂದು ಶ್ರೇಷ್ಠ ನೈತಿಕ ಮೌಲ್ಯ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ. ಆದರೆ ಬ್ರಹ್ಮಚರ್ಯ ಅಸಹಜವಾದ್ದರಿಂದ ಅತ್ಯಂತ ಅನೈತಿಕ ಸಂಗತಿಯಾಗಿದೆ.
ಯಾವುದು ಅಸಹಜವೋ ಅದು ನೈತಿಕ ಮೌಲ್ಯವಾಗುವುದು ಸಾಧ್ಯವೇ ಇಲ್ಲ.
Osho, Hari Om Tat Sat, Ch 14, Q 1 (excerpt)
The image shows three views of the Ten Commandments marble slab (Heritage Auctions). This tablet was likely inscribed in Samaritan during the late Roman or Byzantine era between 300 and 800 CE.