ನೆನಪು ಪ್ರೀತಿಯ ನಿರಾಕರಣೆ| ಜಿಡ್ಡು ಕಂಡ ಹಾಗೆ…

ಪ್ರೀತಿಯ ಇರುವಿಕೆ ಸಾಧ್ಯವಾಗಬೇಕಾದರೆ ನೆನಪಿನ ಕೊನೆ ಆಗಲೇಬೇಕು. ನೆನಪು ಅಸ್ತಿತ್ವಕ್ಕೆ ಬರೋದು ಅನುಭವವನ್ನು ಪೂರ್ಣವಾಗಿ, ಇಡಿಯಾಗಿ ಅರ್ಥಮಾಡಿಕೊಳ್ಳದೇ ಹೋದಾಗ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಯಾವ ಆಲೋಚನೆಯನ್ನು ಮಾಡದೇ ಪ್ರೀತಿಸುವುದು ಸಾಧ್ಯವೆ ? ಆಲೋಚನೆ ಎಂದರೆ ಏನು ? ಆಲೋಚನೆ ನಮ್ಮ ನೋವು ನಲಿವುಗಳ ನೆನಪಿಗೆ ನಾವು ನೀಡುವ ಪ್ರತಿಕ್ರಿಯೆ. ಒಂದು ಪೂರ್ಣವಲ್ಲದ ಅನುಭವ ನಮ್ಮೊಳಗೆ ಎನನ್ನಾದರೂ ಉಳಿಸದೇಹೋದರೆ ಆಲೋಚನೆಗೆ ಜಾಗವೇ ಇಲ್ಲ. ಪ್ರೀತಿ, ಮನಸ್ಸಿನ ಪ್ರತಿಕ್ರಿಯೆ ಭಾವನೆಗಳಿಗಿಂತ ವಿಭಿನ್ನ.

ಪ್ರೀತಿಯನ್ನ ಆಲೋಚನೆಯ ಪರಿಧಿಯಲ್ಲಿ ಇರಿಸಲಿಕ್ಕಾಗುವುದಿಲ್ಲ ; ಆದರೆ ಈ ಭಾವ, ಭಾವನೆಗಳನ್ನ ಆಲೋಚನೆಯ ಮೂಲಕ ಪರೀಕ್ಷಿಸಬಹುದು. ಪ್ರೀತಿ, ಹೊಗೆಯಿಲ್ಲದ ಜ್ವಾಲೆಯಂತೆ ಸದಾ ತಾಜಾ, ಸೃಜನಶೀಲ ಮತ್ತು ಆನಂದ ತುಂಬಿಕೊಂಡಿರುವಂಥದು. ಇಂಥ ಪ್ರೀತಿ ಸಮಾಜಕ್ಕೆ, ಸಂಬಂಧಗಳಿಗೆ ಅಪಾಯ ತರುವಂಥದ್ದು, ಆದ್ದರಿಂದಲೇ ಆಲೋಚನೆ ಮಧ್ಯ ಪ್ರವೇಶ ಮಾಡಿ, ಪ್ರೀತಿಯನ್ನ ಪರಿಷ್ಕರಿಸಿ, ನೀತಿ ನಿಯಮಗಳ ಹತೋಟಿಗೆ ಒಳಪಡಿಸಿ, ಕಾನೂನು ಬದ್ಧಗೊಳಿಸಿ ಅಪಾಯದಿಂದ ಪಾರು ಮಾಡಲು ಬಯಸುತ್ತದೆ, ಆಗ ಈ ಪ್ರೀತಿಯೊಂದಿಗೆ ಜನ ಬದುಕಬಹುದು. ನಿಮಗೆ ಗೊತ್ತಲ್ಲವೆ, ನೀವು ಯಾರನ್ನಾದರೂ ನಿಜವಾಗಿ ಪ್ರೀತಿಸುವಿರಾದರೆ ಇಡೀ ಮಾನವಕುಲವನ್ನೇ ಪ್ರೀತಿಸುವಿರೆಂದು ? ಈ ಮನುಷ್ಯನನ್ನು ಪ್ರೀತಿಸುವುದು ಎಷ್ಟು ಅಪಾಯಕಾರಿ ಎಂದು ನಿಮಗೆ ಗೊತ್ತಿಲ್ಲವೆ? ನಿಜದ ಪ್ರಿತಿಯಲ್ಲಿ ನಾನು ನೀನು ಎಂಬ ಭೇದವಿಲ್ಲ, ರಾಷ್ಟ್ರೀಯತೆಯ ಬಗೆಗಿನ ಉನ್ಮಾದವಿಲ್ಲ, ಅಧಿಕಾರ, ಸ್ಥಾನ ಮಾನದ ಬಗೆಗಿನ ಲಾಲಸೆ ಇಲ್ಲ. ಈ ಸಂಗತಿಗಳು ತಮ್ಮ ಮೇಲೆ ಮೌಲ್ಯಗಳನ್ನು ಆರೋಪಿಸಿಕೊಳ್ಳುತ್ತವೆ. ಇಂಥ ಮನುಷ್ಯ ಸಮಾಜಕ್ಕೆ ಆಪಾಯಕಾರಿ.

ಪ್ರೀತಿಯ ಇರುವಿಕೆ ಸಾಧ್ಯವಾಗಬೇಕಾದರೆ ನೆನಪಿನ ಕೊನೆ ಆಗಲೇಬೇಕು. ನೆನಪು ಅಸ್ತಿತ್ವಕ್ಕೆ ಬರೋದು ಅನುಭವವನ್ನು ಪೂರ್ಣವಾಗಿ, ಇಡಿಯಾಗಿ ಅರ್ಥಮಾಡಿಕೊಳ್ಳದೇ ಹೋದಾಗ. ನೆನಪು, ಅನುಭವ ಪೂರ್ತಿಯಾಗದೇ ನಮ್ಮೊಳಗೆ ಉಳಿಸಿಹೋದ ಒಂದು ಭಾಗ, ಒಂದು ಸವಾಲನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಹೋದುದರ ಪರಿಣಾಮ. ಬದುಕು, ಸತತವಾಗಿ ಎದುರಾಗುತ್ತಲೇ ಹೋಗುವ ಸವಾಲು ಜವಾಬುಗಳ ಹಾದಿ. ಸವಾಲು ಯಾವಾಗಲೂ ಹೊಸತಾದರೆ, ಜವಾಬು ಮಾತ್ರ ಮತ್ತೆ ಅದೇ ಹಳೆಯದು.

ಈ ಜವಾಬು ರೂಢಿಯಿಂದ ತಯಾರಾದದ್ದು, ನಮ್ಮ ಎಲ್ಲ ಹಳೆಯ ಅನುಭವಗಳ ಮೂಸೆಯಲ್ಲಿ ಸಿದ್ಧವಾದದ್ದು, ನಮ್ಮ ಇಂಥ ಪ್ರತಿಕ್ರಿಯೆಯನ್ನ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಬೇಕೇ ಹೊರತು ಅದನ್ನ ಶಿಸ್ತಿಗೆ ಒಳಪಡಿಸಲು, ಖಂಡಿಸಲು ಹೋಗಬಾರದು. ಹಾಗೆಂದರೆ ಪ್ರತಿ ದಿನವನ್ನು ಹೊಚ್ಚ ಹೊಸತಾಗಿ, ಪೂರ್ಣವಾಗಿ, ಇಡಿಯಾಗಿ ಬದುಕಬೇಕು. ಇಂಥ ಸಂಪೂರ್ಣ ಬದುಕು ಸಾಧ್ಯವಾಗುವುದು ಪ್ರೀತಿ ಇರುವಾಗ ಮಾತ್ರ , ನಿಮ್ಮ ಎದೆ ತುಂಬಿಕೊಂಡಿರುವಾಗ ಮಾತ್ರ ಆದರೆ ಕೇವಲ ಶಬ್ದಗಳಿಂದಲ್ಲ, ಮನಸ್ಸು ಹೊಂಚು ಹಾಕಿದ ವಿಷಯಗಳಿಂದಲ್ಲ. ಕೇವಲ ಪ್ರೀತಿ ಇರುವಾಗ ಮಾತ್ರ ನೆನಪಿಗೆ ಜಾಗವಿಲ್ಲ ; ಆಗ ನಿಮ್ಮ ಪ್ರತಿ ಮಿಸುಕಾಟ, ಪ್ರತಿ ಚಲನೆಯೂ ಒಂದು ಹೊಸಹುಟ್ಟು.

Leave a Reply