ಪಾಬ್ಲೋ ಪಿಕಾಸೋ ನಮ್ಮ ಮನುಷ್ಯ ಜಾತಿ ಹುಟ್ಟುಹಾಕಿದ ಅಪೂರ್ವ ಅಸ್ತಿತ್ವವಾದಿ ಜಿನೀಯಸ್. ಅವ ಯಾವ ಉದ್ದೇಶಕ್ಕಾಗಿಯೂ ಪೇಂಟ್ ಮಾಡುತ್ತಿರಲಿಲ್ಲ. ಪೇಂಟ್ ಮಾಡುವುದು ಬಣ್ಣಗಳೊಡನೆಯ ಅವನ ಕುಣಿತ. ಪೇಂಟ್ ಮಾಡುವುದೆಂದರೆ ಅವನ ಖುಶಿಯ ಅಭಿವ್ಯಕ್ತಿ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
“Picasso does not paint for any purpose. Painting is his dance with colors,” says Osho.
ಸಂಗತಿಗಳ ಅರ್ಥಗಳನ್ನು ಕೇಳುವ ಪ್ರಕ್ರಿಯೆಯನ್ನು ನೀವು ಕೈಬಿಟ್ಟ ಕ್ಷಣದಲ್ಲಿಯೇ ಎಲ್ಲವೂ ಸುಂದರ ತನ್ನ
ಪರಿಪೂರ್ಣ ಅಸಂಗತತೆಯಲ್ಲಿ.
ಒಮ್ಮೆ ಒಬ್ಬ ಶ್ರೀಮಂತ ಮಹಿಳೆ ಪಾಬ್ಲೋ ಪಿಕಾಸೋ ನ ಬೇಡಿಕೊಂಡಳು,
“ ಪಾಬ್ಲೋ , ನೀನು ಪೇಂಟ್ ಮಾಡಿದ ಯಾವ ಪೋರ್ಟ್ರೇಟ್ ನ್ನೂ ನಾನು ನೋಡಿಲ್ಲ, ನೀನು ಒಪ್ಪುವೆಯಾದರೆ ನೀನು ಕೇಳಿದಷ್ಟು ಹಣ ಕೊಡಲು ನಾನು ಸಿದ್ಧ, ದಯಮಾಡಿ ನನ್ನ ಪೋರ್ಟ್ರೇಟ್ ಮಾಡಿ ಕೊಡು “
“ ಜನ ತುಂಬಾ ಪ್ರಶ್ನೆ ಕೇಳುತ್ತಾರೆ, ಅವರ ಯಾವ ಪ್ರಶ್ನೆಗೂ ನನ್ನ ಬಳಿ ಉತ್ತರವಿಲ್ಲ. ನೀನು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ ಎಂದು ಪ್ರಮಾಣ ಮಾಡುವೆಯಾದರೆ ಮತ್ತು ಚಿತ್ರ ಮುಗಿದ ನಂತರ ಯಾವ ನಾಟಕ ಆಡದೇ ನನ್ನ ಹಣ ಪಾವತಿ ಮಾಡುವೆಯಾದರೆ ನಾನು ನಿನ್ನ ಪೋರ್ಟ್ರೇಟ್ ಮಾಡಲು ಸಿದ್ಧ. ಇದು ನನ್ನ ಮೊದಲ ಮತ್ತು ಕೊನೆಯ ಪೋರ್ಟ್ರೇಟ್. “
ಪಾಬ್ಲೋ ಪೋರ್ಟ್ರೇಟ್ ಮಾಡಿಕೊಡಲು ಆ ಮಹಿಳೆಗೆ ತನ್ನ ಕರಾರುಗಳನ್ನ ತಿಳಿಸಿದ.
ತನ್ನ ಪೋರ್ಟ್ರೇಟ್ ಮಾಡಲು ಪಿಕಾಸೋ ಒಪ್ಪಿದ್ದನ್ನ ಕೇಳಿ ಮಹಿಳೆ, ಖುಶಿ ಮತ್ತು ಅಭಿಮಾನದಿಂದ ಉಬ್ಬಿಹೋದಳು. ಇಡೀ ಜಗತ್ತಿನಲ್ಲಿ ಪಿಕಾಸೋ ಪೇಂಟ್ ಮಾಡಿದ ಪೋರ್ಟ್ರೇಟ್ ಕೇವಲ ತನ್ನದು ಮಾತ್ರ ಎನ್ನುವ ಸಂಗತಿಯೇ ಆಕೆಯ ಅಪಾರ ಸಡಗರಕ್ಕೆ ಕಾರಣವಾಗಿತ್ತು. ಆಕೆ ಆ ಚಿತ್ರಕ್ಕೆ ಎಷ್ಟು ಹಣ ಬೇಕಾದರೂ ಕೊಡಲು ಸಿದ್ಧವಿದ್ದಳು.
“ ಪಾಬ್ಲೋ, ನೀನು ಹಣದ ಬಗ್ಗೆ ಕಾಳಜಿ ಮಾಡಬೇಡ, ಎಲ್ಲ ಹಣ ನಿನಗೆ ಮುಂಗಡವಾಗಿ ಕೊಡುತ್ತೇನೆ ಮತ್ತು ಚಿತ್ರ ಮುಗಿದ ಮೇಲೆ ಯಾವ ಪ್ರಶ್ನೆಯನ್ನೂ ನಾನು ಕೇಳುವುದಿಲ್ಲವೆಂದು ಆಣೆ ಮಾಡುತ್ತೇನೆ. “
ಶ್ರೀಮಂತ ಮಹಿಳೆ ಪಾಬ್ಲೋ ಗೆ ಹತ್ತು ಮಿಲಿಯನ್ ಡಾಲರ್ ಗಳ ಚೆಕ್ ಕೂಡಲೇ ಬರೆದುಕೊಟ್ಟಳು.
ಪಿಕಾಸೋ ಮುಂದಿನ ಇಡೀ ಒಂದು ವಾರ ಮಹಿಳೆಯ ಪೋರ್ಟ್ರೇಟ್ ಚಿತ್ರಿಸಲು ನಿಗದಿ ಮಾಡಿದ. ಪ್ರತೀದಿನ ಎರಡು ಮೂರು ತಾಸುಗಳ ಸೆಷನ್. ದಿನ ದಿನಕ್ಕೆ ಚಿತ್ರ ಶೇಪ್ ತೆಗೆದುಕೊಳ್ಳುತ್ತಿದ್ದ ರೀತಿ ನೋಡಿ ಅವಳಿಗೆ ಕಳವಳ ಶುರುವಾಯ್ತು. ಚಿತ್ರದಲ್ಲಿನ ಆಕಾರಕ್ಕೂ ತನ್ನ ಚೆಹರೆ, ಬಟ್ಟೆ ಗೂ ಯಾವ ಸಂಬಂಧವನ್ನೂ ಗುರುತಿಸಲಾಗದೇ ಗಾಬರಿಯಾದಳು. ಆದರೂ ಆಕೆ ಮಹಾ ಸಂಯಮದ ಹೆಣ್ಣು ಮಗಳು ಚಿತ್ರ ಪೂರ್ತಿಯಾಗುವವರೆಗೂ ತುಟಿ ಪಿಟಕ್ಕನ್ನದೆ ಕಾಯುತ್ತಿದ್ದಳು ಇತ್ತ ಪಿಕಾಸೋ ಹುಚ್ಚನಂತೆ ತದೇಕ ಚಿತ್ತದಿಂದ ಆಕೆಯ ಪೋರ್ಟ್ರೇಟ್ ಪೇಂಟ್ ಮಾಡುತ್ತಲೇ ಇದ್ದ.
ಏಳನೇ ದಿನ ಪೋರ್ಟ್ರೇಟ್ ಮುಗಿಯಿತು, ಪಿಕಾಸೋ ಚಿತ್ರವನ್ನು ಅವಳ ಕೈಗಿತ್ತ. ಸುಮಾರು ಹೊತ್ತು ಚಿತ್ರವನ್ನು ದಿಟ್ಟಿಸಿ ನೋಡಿದ ಅವಳು, “ ಪಾಬ್ಲೋ ನನ್ನೊಂದೊಂದು ಸಣ್ಣ ಪ್ರಶ್ನೆ “
“ ನೀನು ಒಪ್ಪಿದ ಕರಾರು ಮರೆತುಬಿಟ್ಟೆಯಾ? ಈ ಕಾರಣಕ್ಕಾಗಿಯೇ ನಾನು ಯಾರ ಪೋರ್ಟ್ರೇಟ್ ಕೂಡ ಮಾಡಿರಲಿಲ್ಲ ಇಲ್ಲಿಯ ತನಕ, ಏನು ನಿನ್ನ ಪ್ರಶ್ನೆ?“ ಪಿಕಾಸೋ ಸಿಟ್ಟಾದ.
“ ಅಂಥ ದೊಡ್ಡ ಪ್ರಶ್ನೆಯೇನಲ್ಲ ಒಂದು ಚಿಕ್ಕ ಸಹಾಯ ಮಾಡು ಸಾಕು. ಈ ಚಿತ್ರದಲ್ಲಿ ನನ್ನ ಮೂಗು ಎಲ್ಲಿದೆ ಹೇಳು. ನನ್ನ ಮೂಗು ಇರುವ ಜಾಗ ಗೊತ್ತಾಗಿಬಿಟ್ಟರೆ ಬೇರೆ ಎಲ್ಲ ನಾನು ಹುಡುಕಿಕೊಳ್ಳುತ್ತೇನೆ. “
ಮಹಿಳೆ ಮತ್ತೆ ಬೇಡಿಕೊಂಡಳು.
“ ನಾನು ಒಪ್ಪಿದ್ದು ನಿನ್ನ ಪೋರ್ಟ್ರೇಟ್ ಪೇಂಟ್ ಮಾಡಲು. ನಾನ್ಯಾಕೆ ನಿನ್ನ ಮೂಗು ಪೇಂಟ್ ಮಾಡಲಿ ? ಮೂಗಿಗೆ ಏನು ಮಹತ್ವ ಈ ಪೋರ್ಟ್ರೇಟ್ ಲ್ಲಿ ? ನಿನ್ನ ಮೂಗಿನಿಂದ ಈ ಚಿತ್ರ ಉಸಿರಾಡಬೇಕಿದೆಯಾ? “ ಕೆಂಡಾಮಂಡಲನಾದ ಪಿಕಾಸೋ ಆ ಮಹಿಳೆ ಕೊಟ್ಟ ಚೆಕ್ ವಾಪಸ್ ಮಾಡಿ ಅವಳನ್ನು ತನ್ನ ಮನೆಯಿಂದ ಹೊರಗೆ ಕಳಿಸಿಬಿಟ್ಟ. ಮುಂದೆ ಅವನು ಯಾವತ್ತು ಇಂಥ ಕೆಲಸಕ್ಕೆ ಕೈ ಹಾಕಲಿಲ್ಲ.
ಹೌದು ಪಿಕಾಸೋ ಈ ಪೋರ್ಟ್ರೇಟ್ ಗಳ ವ್ಯವಹಾರದಿಂದ ಬಿಡಿಸಿಕೊಂಡಿದ್ದು ಒಳ್ಳೆಯದಾಯ್ತು. ಅವನು ಮೋಡಗಳನ್ನು ಪೇಂಟ್ ಮಾಡುತ್ತ ಸುಖವಾಗಿ ಇದ್ದುಬಿಡಬಲ್ಲ. ಇದು ಮೋಡದ ಹಾಗೆ ಕಾಣುತ್ತಿಲ್ಲ ಎಂದು ಯಾವ ಮೂರ್ಖನೂ ಪ್ರಶ್ನೆ ಕೇಳುವ ಹಾಗಿಲ್ಲ. ಪಾಬ್ಲೋ ಪಿಕಾಸೋ ನಮ್ಮ ಮನುಷ್ಯ ಜಾತಿ ಹುಟ್ಟುಹಾಕಿದ ಅಪೂರ್ವ ಅಸ್ತಿತ್ವವಾದಿ ಜಿನೀಯಸ್. ಅವ ಯಾವ ಉದ್ದೇಶಕ್ಕಾಗಿಯೂ ಪೇಂಟ್ ಮಾಡುತ್ತಿರಲಿಲ್ಲ. ಪೇಂಟ್ ಮಾಡುವುದು ಬಣ್ಣಗಳೊಡನೆಯ ಅವನ ಕುಣಿತ. ಪೇಂಟ್ ಮಾಡುವುದೆಂದರೆ ಅವನ ಖುಶಿಯ ಅಭಿವ್ಯಕ್ತಿ. ಒಂದು ಸುಂದರ ಸೂರ್ಯಾಸ್ತವನ್ನು ಅದರ ನಾನಾ ಬಣ್ಣಗಳೊಂದಿಗೆ ನೋಡಿದಾಗ ನೀವು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ ಸುಮ್ಮನೇ ಆ ದೃಶ್ಯದೊಂದಿಗೆ ಒಂದಾಗುತ್ತೀರಿ. ಪಾಬ್ಲೋ ನ ಪೇಂಟಿಂಗ್ ಗಳು ಈ ವಿಭಾಗಕ್ಕೆ ಸೇರುವಂಥವು. ಅವುಗಳದು ಅಪೂರ್ವ ಚೆಲುವು ಮತ್ತು ತರ್ಕವನ್ನು ಸಂಪೂರ್ಣವಾಗಿ ಧಿಕ್ಕರಿಸುವ ಸ್ವಭಾವ. ಇದರಲ್ಲಿ ಪಿಕಾಸೋನ ತಪ್ಪೇನೂ ಇಲ್ಲ, ಅಸ್ತಿತ್ವ ಇರೋದೇ ಹಾಗೆ ಸಂಪೂರ್ಣ ತರ್ಕ ರಹಿತ.
Osho, Om Mani Padme Hum – The Sound of Silence, the Diamond in the Lotus, Ch 15, Q 1 (excerpt)