ಪ್ರೇಮ ಪರೀಕ್ಷೆ : ಓಶೋ ಹೇಳಿದ ಬಾವುಲ್ ಕಥೆ

ಕೈಯಲ್ಲಿ ತರ್ಕದ ಸಾಣೆಕಲ್ಲು ಹಿಡಿದುಕೊಂಡಿರುವ ನೀನು ಎಂದೂ ಪ್ರೇಮವನ್ನು ಅನುಭವಿಸಲಾರೆ, ತಿಳಿದುಕೊಳ್ಳಲಾರೆ. ನಿನ್ನ ಕೈಯಲ್ಲಿರುವ ತರ್ಕ, ಶಾಸ್ತ್ರ ಎನ್ನುವ ಸಾಣೆಕಲ್ಲು ನಿನ್ನನ್ನ ಪ್ರೇಮದಿಂದ ದೂರ ಮಾಡುತ್ತಿದೆ… | ಓಶೋ, ಕನ್ನಡಕ್ಕೆ : ಚಿದಂಬರ ನರೇಂದ್ರ

“I am love. And if you cannot see it in my dancing, then you will certainly not see it at all when I stop dancing.”

ಒಂದು ಹಳೆಯ ಬಾವುಲ್ ಕಥೆ……

ಹೂವುಗಳಿಂದ ತುಂಬಿದ್ದ ಉದ್ಯಾನವನವೊಂದರಲ್ಲಿ ಫಕೀರನೊಬ್ಬ ಉನ್ಮತ್ತನಾಗಿ ಕುಣಿಯುತ್ತಿದ್ದ. ಸುತ್ತಲಿನ ಹೂಗಳು, ಗಿಡ ಮರಗಳು, ಹಕ್ಕಿಗಳು ಅವನ ಕುಣಿತಕ್ಕೆ ತಲೆದೂಗುತ್ತಿದ್ದವು. ಅಷ್ಟರಲ್ಲಿ ಆ ಊರಿನ ವಿದ್ವಾಂಸನೊಬ್ಬ ಅಲ್ಲಿಗೆ ಬಂದ, ಫಕೀರನನ್ನು ಪ್ರಶ್ನೆ ಮಾಡಿದ,

“ ನೀನು ಯಾವಾಗಲೂ ಪ್ರೇಮ, ಪ್ರೇಮ ಎಂದು ಮಾತನಾಡುತ್ತೀ, ಏನು ಹಾಗೆಂದರೆ? ಪ್ರೇಮದ ಬಗ್ಗೆ ನಿನಗೆ ಏನು ಗೊತ್ತು?”

ಫಕೀರ ಕುಣಿಯುವುದನ್ನ ಮುಂದುವರೆಸಿದ. ಅವನು ಕುಣಿಯುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು ? ಅವನ ಕುಣಿತದಿಂದಾಗಿ ಪ್ರೇಮ ಸುತ್ತೆಲ್ಲ ತುಂಬಿ ಹರಿಯುತ್ತಿತ್ತು. ಪ್ರೇಮ ಹೀಗೆ ಉಕ್ಕುವದನ್ನು ಗಿಡ ಮರಗಳು ನೋಡುತ್ತಿದ್ದವು, ಸರೋವರ ಖುಶಿಯಿಂದ ಗಮನಿಸುತ್ತಿತ್ತು, ಆಕಾಶದಲ್ಲಿನ ಬಿಳಿ ಮೋಡಗಳು ಪ್ರೇಮ ಹರಿಯುವುದನ್ನ ನೋಡುತ್ತ ನಿಂತು ಬಿಟ್ಟಿದ್ದವು. ಆದರೆ ಆ ವಿದ್ವಾಂಸ ಮಾತ್ರ ಪ್ರೇಮಕ್ಕೆ ಕುರುಡನಾಗಿಬಿಟ್ಟಿದ್ದ. ಫಕೀರ ಮಾತ್ರ ಉನ್ಮತ್ತನಾಗಿ ಕುಣಿಯುತ್ತಲೇ ಇದ್ದ.

“ ಹೀಗೆ ಹುಚ್ಚರಂತೆ ಕೈ ಕಾಲು ಅಲ್ಲಾಡಿಸುವುದನ್ನ ನಿಲ್ಲಿಸಿ ನನ್ನ ಪ್ರಶ್ನೆಗೆ ಉತ್ತರ ಕೊಡು. ಹೀಗೆ ಕುಣಿಯುವುದು ನನ್ನ ಪ್ರಶ್ನೆಗೆ ಉತ್ತರ ಅಲ್ಲ. ಪ್ರೇಮ ಎಂದರೇನು ? ಉತ್ತರ ಕೊಡು.” ವಿದ್ವಾಂಸ ಪಟ್ಟು ಹಿಡಿದ.

“ನಾನೇ ಪ್ರೇಮ. ನನ್ನ ಕುಣಿತದಲ್ಲಿ ನಿನಗೆ ಪ್ರೇಮ ಕಾಣಿಸಲಿಲ್ಲವೆಂದ ಮೇಲೆ ನಾನು ಕುಣಿಸುವುದನ್ನ ನಿಲ್ಲಿಸಿದಾಗ ನಿನಗೆ ಪ್ರೇಮ ಗೊತ್ತಾಗುವುದು ಹೇಗೆ ಸಾಧ್ಯ. ನನ್ನ ಹಾಡಿನಲ್ಲಿ ನಿನಗೆ ಪ್ರೇಮ ಕಾಣಿಸದಿರುವಾಗ, ನನ್ನ ಮೌನದಲ್ಲಿ ನಿನಗೆ ಪ್ರೇಮ ಕಾಣಿಸುವುದು ಅಸಾಧ್ಯ. ಇದೇ ನನ್ನ ಉತ್ತರ.” ಫಕೀರ ವಿದ್ವಾಂಸನಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದ.

ಫಕೀರನ ಮಾತು ಕೇಳಿ ವಿದ್ವಾಂಸ ಗಹಗಹಿಸಿ ನಗತೊಡಗಿದ. “ ನಿನ್ನ ಉತ್ತರ ಮೂರ್ಖರಿಗೆ ಲಾಯಕ್ಕು. ನಾನು ಶಾಸ್ತ್ರ ಗ್ರಂಥಗಳನ್ನು ಓದಿಕೊಂಡವ, ವೇದ, ಉಪನಿಷತ್ತು, ಭಗವದ್ಗೀತೆಗಳನ್ನು ಅಭ್ಯಾಸ ಮಾಡಿದವ, ಏನಾದರೂ ಅರ್ಥವಾಗುವಂಥ ಉತ್ತರ ಕೊಡು. ಇಲ್ಲವಾದರೆ ನಿನಗೆ ಪ್ರೇಮದ ಬಗ್ಗೆ ಗೊತ್ತಿಲ್ಲ ಎಂಬ ನಿಜ ಒಪ್ಪಿಕೋ.” ವಿದ್ವಾಂಸ ಮತ್ತೆ ಫಕೀರನನ್ನು ಕೆಣಕುವ ಪ್ರಯತ್ನ ಮಾಡಿದ.

ವಿದ್ವಾಂಸನಿಗೆ ಉತ್ತರವೆಂಬಂತೆ ಫಕೀರ ಮತ್ತೆ ಹಾಡಲು ಶುರು ಮಾಡಿದ. ಆ ಹಾಡಿನ ಸಾರಾಂಶ ಹೀಗಿತ್ತು……

ಒಮ್ಮೆ ಉದ್ಯಾನವನ ಹೂಗಳಿಂದ ಗಮಗಮಿಸುತ್ತಿತ್ತು. ಉದ್ಯಾನವನ ದ ಮಾಲಿ ಹೊಸ ಅಪರೂಪದ ಹೂಗಳನ್ನು ಕಂಡು ಖುಶಿಯಿಂದ ಹಾಡ ಹಾಡುತ್ತ ಕುಣಿಯುತ್ತಿದ್ದ. ಅಲ್ಲೇ ಹಾಯ್ದು ಹೋಗುತ್ತಿದ್ದ ಆ ಊರಿನ ಅಕ್ಕಸಾಲಿಗ, ಮಾಲಿಯ ಉನ್ಮತ್ತತೆಯನ್ನು ಕಂಡು ಪ್ರಶ್ನೆ ಮಾಡಿದ, “ಹೀಗೆ ನಶೆ ಏರಿದವನಂತೆ ಕುಣಿಯುತ್ತಿದ್ದೀಯಲ್ಲ ಏನಾಯ್ತು? ಎಲ್ಲಿಂದ ಬಂತು ನಿನಗೆ ಇಷ್ಟೊಂದು ನಶೆ?”

“ ಈ ಹೊಸ ಹೂಗಳನ್ನು ನೋಡು, ನನಗೆ ನಶೆ ಏರಲು ಈ ಹೂವುಗಳೇ ಕಾರಣ.” ಮಾಲಿ, ಅಕ್ಕಸಾಲಿಗನಿಗೆ ಉತ್ತರಿಸಿದ.

“ ತಡಿ ತಡಿ ನಾನು ಪರೀಕ್ಷೆ ಮಾಡುತ್ತೇನೆ ಈ ಹೂಗಳಲ್ಲಿನ ನಶೆಯನ್ನ” ಎನ್ನುತ್ತ ಅಕ್ಕಸಾಲಿಗ ತನ್ನ ಚೀಲದಲ್ಲಿದ್ದ ಬಂಗಾರ ಪರೀಕ್ಷೆ ಮಾಡುವ ಸಾಣೆಕಲ್ಲನ್ನು ಹೊರತೆಗೆದು ಹೂವುಗಳಿಗೆ ಸಾಣೆಕಲ್ಲು ಉಜ್ಜತೊಡಗಿದ. ಅಕ್ಕಸಾಲಿಗನಿಗೆ ಹೂಗಳಲ್ಲಿನ ನಶೆ ಗೊತ್ತಾಗಲಿಲ್ಲ ಬದಲಾಗಿ ಹೂಗಳು ನುಜ್ಜುಗುಜ್ಜಾಗಿ ನಾಶವಾದವು. ಅಕ್ಕಸಾಲಿಗನ ಪರೀಕ್ಷಾ ಬುದ್ಧಿಗೆ ಗಿಡಮರಗಳು ನಗತೊಡಗಿದವು, ಆಕಾಶದಲ್ಲಿನ ಮೋಡಗಳು ನಗತೊಡಗಿದವು, ಅಕ್ಕಸಾಲಿಗ ಕಕ್ಕಾವಿಕ್ಕಿಯಾದ.

ಫಕೀರ ನಗುತ್ತ ವಿದ್ವಾಂಸನಿಗೆ ಹೇಳಿದ,

“ ನೀನು ಕೇಳುತ್ತಿರುವುದು ಹೀಗೆಯೇ. ತರ್ಕದ ಸಾಣೆಕಲ್ಲಿಗೆ ಉಜ್ಜಿ ಪ್ರೇಮವನ್ನು ತಿಳಿದುಕೊಳ್ಳುವ, ಪರೀಕ್ಷೆ ಮಾಡುವ ಪ್ರಯತ್ನ ಮಾಡುತ್ತಿದ್ದೀ. ಹೂವನ್ನು ಸಾಣೆಕಲ್ಲಿಗೆ ಉಜ್ಜಿದರೆ ಅದು ನಾಶವಾಗುತ್ತದೆ. ಸಾಣೆಕಲ್ಲು ಬಂಗಾರ ಪರೀಕ್ಷೆ ಮಾಡಲು ಮಾತ್ರ ಸೂಕ್ತ. ಬಂಗಾರ ಮತ್ತು ಸಾಣೆಕಲ್ಲಿನಲ್ಲಿ ಸಾಮಾನ್ಯ ಹೋಲಿಕೆಗಳಿವೆ. ಎರಡೂ ಬಿರುಸಾದ ವಸ್ತುಗಳು. ಯಾವತ್ತಾದರೂ ನೀನು ಬಂಗಾರ ಅರಳುವುದನ್ನ ನೋಡಿದ್ದೀಯಾ? ಬಂಗಾರಕ್ಕೆ ಜೀವವಿಲ್ಲ ಆದರೆ ಹೂವು ಹಾಗಲ್ಲ ಅದು ಜೀವಂತ ಸಂಗತಿ. ಜೀವಂತ ಸಂಗತಿಗಳನ್ನ ಜೀವವಿಲ್ಲದ ವಸ್ತುಗಳಿಂದ ಪರೀಕ್ಷೆ ಮಾಡುವುದು ಸಾಧ್ಯವಿಲ್ಲ, ಹಾಗೆ ಮಾಡಿದ್ದಾದರೆ ಅದು ಕೊಲೆಗೆ ಸಮಾನವಾದದ್ದು. ಈ ಬ್ರಹ್ಮಾಂಡದೊಳಗಿನ ದಿವ್ಯ ನಿನಗೆ ಕಾಣಿಸುತ್ತಿಲ್ಲವೆಂದರೆ, ನೀನು ಉದ್ಯಾನವನದೊಳಗೆ ತಿರುಗಾಡುತ್ತಿರುವ ಆ ಅಕ್ಕಸಾಲಿಗನಂತೆ, ಅವನ ಬಳಿ ಇರುವ ಸಾಣೆಕಲ್ಲು ಬಂಗಾರ ಮಾತ್ರ ಪರೀಕ್ಷೆ ಮಾಡಬಲ್ಲದು. ಪ್ರೇಮ ಈ ಹೂಗಳ ಹಾಗೆ, ಕೈಯಲ್ಲಿ ತರ್ಕದ ಸಾಣೆಕಲ್ಲು ಹಿಡಿದುಕೊಂಡಿರುವ ನೀನು ಎಂದೂ ಪ್ರೇಮವನ್ನು ಅನುಭವಿಸಲಾರೆ, ತಿಳಿದುಕೊಳ್ಳಲಾರೆ. ನಿನ್ನ ಕೈಯಲ್ಲಿರುವ ತರ್ಕ, ಶಾಸ್ತ್ರ ಎನ್ನುವ ಸಾಣೆಕಲ್ಲು ನಿನ್ನನ್ನ ಪ್ರೇಮದಿಂದ ದೂರ ಮಾಡುತ್ತಿದೆ. ನೀನು ಪ್ರೇಮವನ್ನು ನೋಡಬಯಸುತ್ತಿರುವ ವಿಧಾನವೇ ನಿನಗೆ ಪ್ರೇಮವನ್ನು ಅನುಭವಿಸಲು ಅಡ್ಡಗಾಲಾಗಿದೆ. ನೀನು ನಡೆಯುತ್ತಿರುವ ಹಾದಿಯೇ ನಿನ್ನನ್ನು ದಿವ್ಯದಿಂದ ದೂರ ಇಟ್ಟಿದೆ.

Osho, Showering Without Clouds – Reflections on the Poetry of an Enlightened Woman, Sahajo, Ch 3 (excerpt)


Leave a Reply