ತಲೆ ಮೇಲೆ ಸಾವಿನ ಕತ್ತಿ

ಬುದ್ಧ ಹೇಳುತ್ತಾನೆ, “ಸುತ್ತಲಿನ ಸಂಗತಿಗಳಿಂದ ವಿಚಲಿತನಾಗುವ ಮನುಷ್ಯನನ್ನು ಸಾವು ಬೇಗ ಅಪ್ಪಿಕೊಳ್ಳುತ್ತದೆ. ನಿದ್ದೆಯಲ್ಲಿರುವ ಹಳ್ಳಿಯನ್ನು ಪ್ರವಾಹ ನುಂಗಿ ನೀರು ಕುಡಿಯುವಂತೆ ಸಾವು, ಎಚ್ಚರದ ಸ್ಥಿತಿಯಲ್ಲಿರದ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಸದಾ ಎಚ್ಚರವಾಗಿರು, ಜಾಗ್ರತನಾಗಿರು, ಪ್ರಜ್ಞಾವಸ್ಥೆಯಲ್ಲಿರು…” ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

You are living surrounded by death, and if this can be remembered, this can become the greatest stimulation for meditation, for awareness – Osho.

ಸಾವನ್ನು ಸತತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾನೆ ಬುದ್ಧ. ಹಾಗೆಂದ ಮಾತ್ರಕ್ಕೆ ಬುದ್ಧನನ್ನು ನಿರಾಶಾವಾದಿ, ಸಾವಿನ ಗೀಳು ಹಚ್ಚಿಸಿಕೊಂಡವ ಎಂದುಕೊಳ್ಳಬೇಕಿಲ್ಲ. ಖಂಡಿತ ಇಲ್ಲ. ಸಾವಿನ ಕತ್ತಿ ನಮ್ಮ ಮೇಲೆ ತೂಗುತ್ತಿರುವುದನ್ನ ಯಾವಾಗಲೂ ನೆನಪಿನಲ್ಲಿಟ್ಟುಕೊಂಡರೆ ಮನುಷ್ಯ ಸದಾ ಜಾಗ್ರತ ಸ್ಥಿತಿಯಲ್ಲಿರುತ್ತಾನೆ, ಎಚ್ಚರದಲ್ಲಿರುತ್ತಾನೆ ಎನ್ನುವುದಷ್ಟೇ ಬುದ್ಧನ ಮಾತಿನ ಅರ್ಥ.

ಒಮ್ಮೆ ಹೀಗಾಯಿತು.

ಋಷಿಯೊಬ್ಬರು ತಮ್ಮ ಆಶ್ರಮದ ಸನ್ಯಾಸಿಯೊಬ್ಬನನ್ನು ಮಿಥಿಲೆಯ ಮಹಾರಾಜ ಜನಕನ ಆಸ್ಥಾನಕ್ಕೆ ಕಳಿಸುವ ನಿರ್ಧಾರ ತೆಗೆದುಕೊಂಡರು. ಋಷಿಗಳ ಈ ನಿರ್ಧಾರದ ಬಗ್ಗೆ ಸನ್ಯಾಸಿಗೆ ಆಶ್ಚರ್ಯವಾಯಿತು, ಅವನು ಋಷಿಗಳನ್ನ ಪ್ರಶ್ನೆ ಮಾಡಿದ, “ ಗುರುಗಳೇ, ನಾನು ಜನಕನ ಆಸ್ಥಾನಕ್ಕೆ ಹೋಗಿ ಮಾಡುವುದೇನಿದೆ? “

“ ನೀನು ಕಲಿಯಲೇಬೇಕಾದ ವಿಷಯವೊಂದಿದೆ. ಆ ವಿಷಯವನ್ನ ನೀನು ಬೇರೆ ಎಲ್ಲ ಕಡೆಗಳಿಗಿಂತ ಅತೀ ಸುಲಭವಾಗಿ ಜನಕನ ಆಸ್ಥಾನದಲ್ಲಿ ಕಲಿಯಬಹುದು. ನೀನು ಅಲ್ಲಿಗೆ ಹೋದಾಗ ತುಂಬ ಎಚ್ಚರದಿಂದ ಎಲ್ಲವನ್ನೂ ಗಮನಿಸು. ಈ ಭೇಟಿಯಿಂದ ನಿನ್ನ ಬದುಕಿಗೆ ಬಹಳ ಉಪಯೋಗವಾಗಲಿದೆ. ಬದುಕಿನ ಬಗೆಗಿನ ನಿನ್ನ ತಿಳುವಳಿಕೆ ಹೆಚ್ಚಾಗಲಿದೆ.” ಋಷಿಗಳು ಸನ್ಯಾಸಿಯನ್ನು ಜನಕನ ಆಸ್ಥಾನಕ್ಕೆ ಹೋಗುವುಂತೆ ಒಪ್ಪಿಸಲು ಪ್ರಯತ್ನಿಸಿದರು.

ಋಷಿಗಳ ಮಾತಿನಿಂದ ಸನ್ಯಾಸಿಗೆ ತೃಪ್ತಿಯಾಗಲಿಲ್ಲ. ಇಂಥ ಮಹಾ ಋುಷಿಗಳ ಹತ್ತಿರ ಕಲಿಯಲಾಗದ ವಿಷಯವನ್ನು ರಾಜನೊಬ್ಬ ಕಲಿಸಬಲ್ಲನೆ ಎನ್ನುವ ಸಂಶಯ ಸನ್ಯಾಸಿಯದು. ರಾಜ, ಸುಖ ಲೋಲುಪತೆಗಳಲ್ಲಿ ಮುಳುಗಿದವನು ಆದರೆ ತಾನು ಎಲ್ಲವನ್ನೂ ತ್ಯಾಗಮಾಡಿ ಜ್ಞಾನಮಾರ್ಗದಲ್ಲಿ ತೊಡಗಿಸಿಕೊಂಡವನು ಹಾಗಾಗಿ ತಾನು ರಾಜನಿಗಿಂತ ತಿಳುವಳಿಕೆಯಲ್ಲಿ ಹೆಚ್ಚಿನವನು ಎನ್ನುವ ಭಾವನೆ ಸನ್ಯಾಸಿಗೆ. ಹಾಗಾಗಿ ರಾಜನ ಆಸ್ಥಾನಕ್ಕೆ ತಾನು ಕಲಿಯಲು ಹೋಗುವುದು ಅವಮಾನಕರ ಎನ್ನುವುದು ಸನ್ಯಾಸಿಯ ಭಾವನೆ. ಆದರೂ ಋಷಿಗಳ ಮಾತಿಗೆ ಇಲ್ಲ ಎನ್ನಲಾರದೇ ಬಹಳ ಹಿಂಜರಿಕೆಯಿಂದ , ಒಲ್ಲದ ಮನಸ್ಸಿನಿಂದ ಮಿಥಿಲಾ ನಗರಿಗೆ ಸನ್ಯಾಸಿ ಪ್ರಯಾಣ ಬೆಳೆಸಿದ.

ಸನ್ಯಾಸಿ, ಜನಕನ ರಾಜ ದರ್ಬಾರನ್ನು ಪ್ರವೇಶ ಮಾಡಿದಾಗ ಅಲ್ಲಿನ ದೃಶ್ಯವನ್ನು ಕಂಡು ಅವನಿಗೆ ದಿಗಿಲಾಯಿತು. ರಾಜನ ಬಗೆಗಿನ ಅವನ ಸಂಶಯಗಳು ಬಲವಾಗತೊಡಗಿದವು. ಜನಕ ಮಹಾರಾಜ ಸಿಂಹಾಸನದಲ್ಲಿ ಮಧುಪಾನ ಮಾಡುತ್ತ ಕುಳಿತಿದ್ದ. ನರ್ತಕಿಯರು ಅವನ ಎದುರಿಗೆ ನೃತ್ಯ ಮಾಡುತ್ತಿದ್ದರು. ಆಸ್ಥಾನದಜನರೆಲ್ಲ ಕುಡಿದ ಮತ್ತಿನಲ್ಲಿದ್ದರು. ಇಂಥ ಮೂರ್ಖರಿಂದ ತಾನು ಕಲಿಯುವುದೇನಿದೆ ಎಂದು ಸನ್ಯಾಸಿ ಮನಸ್ಸಿನಲ್ಲಿಯೇ ಅಂದುಕೊಂಡನು. ಸನ್ಯಾಸಿಯ ಮನಸ್ಸಿನ ಮಾತು ತಿಳಿದುಕೊಂಡವನಂತೆ ಜನಕ ಮಹಾರಾಜ ಸನ್ಯಾಸಿಯನ್ನ ನೋಡಿ ಗಹಗಹಿಸಿ ನಗತೊಡಗಿದ. ಜನಕನ ವರ್ತನೆಯಿಂದ ವಿಚಲಿತನಾದ ಸನ್ಯಾಸಿ ಅವನ ನಗುವಿನ ಕಾರಣ ಕೇಳಿದ.

“ ನಾನು ನಗುತ್ತಿರುವುದು ಏಕೆಂದರೆ ನಿನ್ನ ಗುರುವಿಗೆ ಏನೋ ಒಂದು ಗೊತ್ತಿದೆ ಆದರೆ ನಿನಗೆ ನಿನ್ನ ಗುರುವಿನ ಬಗ್ಗೆ ನಂಬಿಕೆಯಿಲ್ಲ. ನೀನು ಇಲ್ಲಿ ಕಲಿಯಲು ಬಂದಿರುವುದೇನೋ ನಿಜ ಆದರೆ ಒಲ್ಲದ ಮನಸ್ಸಿನಿಂದ.” ಜನಕನ ಮಾತುಗಳನ್ನು ಕೇಳಿ ಸನ್ಯಾಸಿಗೆ ಆಶ್ಚರ್ಯವಾಯಿತು, “ಮಹಾರಾಜ, ನೀನು ಸಂಪೂರ್ಣ ಕುಡಿದ ಮತ್ತಿನಲ್ಲಿರುವೆ. ನಾನು ಇನ್ನೂ ಒಂದು ಮಾತೂ ಆಡಿಲ್ಲ ಆದರೆ ನೀನು ಎಲ್ಲ ಗೊತ್ತಿದ್ದವನಂತೆ ಮಾತನಾಡುತ್ತಿದ್ದೀ.” ಸನ್ಯಾಸಿ ಅಚ್ಚರಿಯಿಂದ ಕೇಳಿದ.

“ ನನ್ನ ಮಧುಪಾನದ ಸ್ಥಿತಿಯ ಬಗ್ಗೆ ಆಮೇಲೆ ಚರ್ಚೆ ಮಾಡೋಣ. ನೀನು ಈಗ ನಾನು ಹೇಳಿದ ಒಂದು ಕೆಲಸ ಮಾಡು. ತಪ್ಪಿದೆಯಾದರೆ ನಿನ್ನ ತಲೆ ಕತ್ತರಿಸಲಾಗುವುದು.” ಜನಕ ರಾಜ ತನ್ನ ಸೈನಿಕರಿಗೆ ಖಡ್ಗ ಹಿಡಿದು ಸಿದ್ಧರಾಗಿರಲು ಆಜ್ಞೆ ಮಾಡಿದ. ರಾಜ ಪೂರ್ತಿ ತುಂಬಿದ ಎಣ್ಣೆಯ ಪಾತ್ರೆಯೊಂದನ್ನ ತರಿಸಿದ. ಅದನ್ನು ಸನ್ಯಾಸಿಯ ತಲೆಯ ಮೇಲಿರಿಸಿ, ಆಸ್ಥಾನದ ಏಳು ಸುತ್ತು ಸುತ್ತಲು ಹೇಳಿದ. ಒಂದು ಹನಿ ಎಣ್ಣೆಯೂ ಕೆಳಗೆ ಬಿದ್ದರೆ ತಲೆ ಕತ್ತರಿಸುವುದಾಗಿ ಎಚ್ಚರಿಕೆ ನೀಡಿದ.

ಸನ್ಯಾಸಿಗೆ ಬೇರೆ ದಾರಿ ಇರಲಿಲ್ಲ. ತಲೆಯ ಮೇಲೆ ಎಣ್ಣೆಯ ಪಾತ್ರೆ ಇಟ್ಟುಕೊಂಡು ಜಾಗರೂಕತೆಯಿಂದ ನಡೆಯತೊಡಗಿದ. ಜನಕ ರಾಜ ನರ್ತಕಿಯರಿಗೆ ನೃತ್ಯ ಮುಂದುವರೆಸುವಂತೆ ಆದೇಶ ನೀಡಿದ. ಎಣ್ಣೆ ತುಂಬಿದ ಪಾತ್ರೆಯನ್ನು ನೋಡಿಯೇ ಸನ್ಯಾಸಿಗೆ ಅರ್ಧ ಜೀವ ಹೊರಟು ಹೋಗಿತ್ತು. ಸುಂದರ ನರ್ತಕಿಯರನ್ನು ಹೊರಳಿ ನೋಡುವ ಮನಸ್ಸಾಗುತ್ತಿತ್ತು. ಆದರೂ ಸಾವಿನ ಕತ್ತಿ ತಲೆ ಮೇಲೆ ತೂಗುತ್ತಿದ್ದರಿಂದ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಮೈಯೆಲ್ಲ ಕಣ್ಣಾಗಿ ನಡೆಯುತ್ತ , ಒಂದು ಹನಿ ಎಣ್ಣೆಯನ್ನೂ ಕೆಳಗೆ ಬೀಳಿಸದಂತೆ ಆಸ್ಥಾನದ ಏಳು ಸುತ್ತುಗಳನ್ನ ಸುತ್ತಿ ಮುಗಿಸಿದ.

ಸನ್ಯಾಸಿಯ ನಡೆಯಿಂದ ಸಂತುಷ್ಟನಾದ ಜನಕ ರಾಜ ಪ್ರಶ್ನೆ ಮಾಡಿದ, “ ಅಸಾಧ್ಯ ಎನ್ನಿಸಬಹುದಾದ ಕೆಲಸವೊಂದನ್ನು ಮಾಡಿ ಮುಗಿಸಿದ್ದೀಯ. ಹೇಗೆ ಸಾಧ್ಯವಾಯಿತು ನಿನಗೆ ಇದು? “

“ ಸಾವಿನ ಭಯ ಮಹಾರಾಜ, ಸಾವು ನನ್ನಿಂದ ಎರಡು ಹೆಜ್ಜೆ ಹಿಂದೆ ನಡೆಯುತ್ತಿತ್ತು. ಇಷ್ಟು ಹತ್ತಿರದಿಂದ ಸಾವನ್ನು ಎಂದೂ ನೋಡಿರಲಿಲ್ಲ ನಾನು.” ಸನ್ಯಾಸಿ ರಾಜನ ಪ್ರಶ್ನೆಗೆ ಉತ್ತರಿಸಿದ.

“ ಮತ್ತೆ ಈ ನರ್ತಕಿಯರ ಚೆಲುವು, ಸುಮಧುರ ವಾಸನೆ, ಸುತ್ತಲಿನ ಮಧುಪಾತ್ರೆಗಳು ನಿನ್ನ ವಿಚಲಿತಗೊಳಿಸಲಿಲ್ಲವೆ?” ಜನಕರಾಜ ಮತ್ತೆ ಸನ್ಯಾಸಿಯನ್ನು ಪ್ರಶ್ನೆ ಮಾಡಿದ. “ಸಾವು ಅಷ್ಟು ಹತ್ತಿರದಲ್ಲಿರುವಾಗ ಯಾರನ್ನ ತಾನೆ ಇಂಥ ಸಂಗತಿಗಳು ವಿಚಲಿತಗೊಳಿಸಬಲ್ಲವು?” ಸನ್ಯಾಸಿ ನಗುತ್ತ ಉತ್ತರಿಸಿದ.

“ ಈಗ ನೀನು ಮುಖ್ಯವಾದ ಪಾಠವೊಂದನ್ನ ಕಲಿತಿದ್ದೀಯ. ನಿನ್ನ ಗುರುಗಳು ಈ ವಿಷಯ ನಿನಗೆ ಪರಿಪೂರ್ಣವಾಗಿ ಮನವರಿಕೆಯಾಗಲೆಂದೇ ನನ್ನ ಬಳಿ ಕಳಿಸಿದ್ದರು. ಸಾವು ಸದಾ ನಿನ್ನ ನೆನಪಿನಲ್ಲಿರಲಿ. ಆ ಖಡ್ಗಗಳಿಗಿಂತ ಹತ್ತಿರ, ಬೇರೆ ಯಾವುದಕ್ಕಿಂತಲೂ ಹತ್ತಿರ
ಸಾವು ನಮ್ಮನ್ನ ಸುತ್ತುವರೆದಿರುತ್ತದೆ. ಈ ಪಾಠ ಸದಾ ನಿನ್ನ ನೆನಪಿನಲ್ಲಿರುವುದಾದರೆ ನಿನ್ನ ಧ್ಯಾನಕ್ಕೆ ನಿನ್ನ ಜ್ಞಾನೋದಯಕ್ಕೆ ಯಾವ ಅಡಚಣೆಯೂ ಇಲ್ಲ.”

ಹಾಗಾಗಿಯೇ ಬುದ್ಧ ಹೇಳುತ್ತಾನೆ,

“ ಸುತ್ತಲಿನ ಸಂಗತಿಗಳಿಂದ ವಿಚಲಿತನಾಗುವ ಮನುಷ್ಯನನ್ನು ಸಾವು ಬೇಗ ಅಪ್ಪಿಕೊಳ್ಳುತ್ತದೆ. ನಿದ್ದೆಯಲ್ಲಿರುವ ಹಳ್ಳಿಯನ್ನು ಪ್ರವಾಹ ನುಂಗಿ ನೀರು ಕುಡಿಯುವಂತೆ ಸಾವು, ಎಚ್ಚರದ ಸ್ಥಿತಿಯಲ್ಲಿರದ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಸದಾ ಎಚ್ಚರವಾಗಿರು, ಜಾಗ್ರತನಾಗಿರು, ಪ್ರಜ್ಞಾವಸ್ಥೆಯಲ್ಲಿರು.”

Osho, The Dhammapada: The Way of the Buddha, Vol 8, Ch 3 (excerpt)


About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.