ಯುಜಿ ಜೊತೆ ಮಾತುಕತೆ

ಸಂದರ್ಶಕರ ಪ್ರಶ್ನೆಗಳಿಗೆ ಯುಜಿ ನೀಡಿದ ಉತ್ತರಗಳು... | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ 
ಪ್ರಶ್ನೆ : ನನ್ನದೊಂದು ಸಂದೇಹ.
ಯೂಜಿ : ಯಸ್ ಪ್ಲೀಸ್.

ಪ್ರಶ್ನೆ : ನಮ್ಮ ಮನಸ್ಸು ಸದಾ ಬದಲಾವಣೆ ಬಯಸುತ್ತದೆ. ಇದು ಜಗತ್ತನ್ನು ಬದಲಾಯಿಸಬೇಕು ಎನ್ನುವ ತುಡಿತ ಅಲ್ಲ, ನಿಮ್ಮ ಒಳಗನ್ನು ತಿಳಿದುಕೊಳ್ಳುವ ತೀವ್ರ ಬಯಕೆ. ಇದಕ್ಕಾಗಿಯೇ ನಾವು ಧ್ಯಾನ, ಯೋಗ, ವೃತ ಇಂಥ ಎಲ್ಲದರ ಮೊರೆ ಹೋಗುತ್ತೇವೆ. ಯಾಕೆ ನಾವು ಇಂಥ ಬದಲಾವಣೆಯನ್ನ ಬಯಸುತ್ತೇವೆ?
ಯೂಜಿ : ಎಲ್ಲರ ಮಾತು ಬಿಡು, ವೈಯಕ್ತಿಕವಾಗಿ ನಿನಗೆ ಯಾಕೆ ಹಾಗನಿಸುತ್ತದೆ?

ಪ್ರಶ್ನೆ : ಆಯ್ಕೆಗಳಿವೆ ಎಂದು ಪ್ರಯತ್ನ ಮಾಡ್ತೀನಿ, ಸಾಧ್ಯವಾಗಬಹುದೇ ಅಂತ ಆಸೆ.
ಯೂಜಿ : ಯಾಕೆ ? ನೀನು ಏನಾದರೂ ಬದಲಾವಣೆ ಬಯಸುತ್ತಿದ್ದೀಯಾ?

ಪ್ರಶ್ನೆ : ನನ್ನ ಸಂದೇಹ ಅದೇ, ಹೌದು. ಯಾಕೆ ನಾನು ಬದಲಾವಣೆ ಬೇಕು ಅಂತ ಚಡಪಡಸ್ತಾ ಇದೀನಿ? ಯಾಕೆ ನನಗೆ ತೃಪ್ತಿ ಸಾಧ್ಯ ಆಗ್ತಾ ಇಲ್ಲ ?
ಯೂಜಿ : ನಿನ್ನ ಬಗ್ಗೆ ನಿನಗೆ ಅಸಮಾಧಾನ ಇದೆಯೆ ?

ಪ್ರಶ್ನೆ : ಪ್ರಜ್ಞಾಪೂರ್ವಕವಾಗಿ ಅಂಥದೇನೂ ಇಲ್ಲ....ಇದು ತಮಾಷೆಯ ಸಂಗತಿ. ನನ್ನ ಜೊತೆ ಎಲ್ಲ ಚೆನ್ನಾಗಿಯೇ ಇದೆ. ನನಗೆ ಯಾವ ಅಂಥ ಮುಖ್ಯ ತಕರಾರುಗಳೂ ಇಲ್ಲ. ಆದರೂ......
ಯೂಜಿ : ಆದರೂ ..... ನೀನು ಈ ಬದಲಾವಣೆಯ ಟ್ರ್ಯಾಪ್ ಗೆ ಸಿಲುಕಿದ್ದೀ. ಇದರಲ್ಲಿನ ದ್ವಂದ್ವ ನಿನಗೆ ಕಾಣಿಸುತ್ತಿದೆಯೆ? ನೀನು ತಿಳಿದುಕೊಂಡಿರುವಷ್ಟು ನಿನ್ನ ಮನಸ್ಸಿಗೆ ಸಮಾಧಾನ ಇಲ್ಲ, ತೃಪ್ತಿ ಇಲ್ಲ.

ಪ್ರಶ್ನೆ : ಹೂಂ, ಇದು ಹೊರಗಿನ ವಿಷಯಗಳ ಬಗ್ಗೆ ಅಸಮಾಧಾನ ಅಲ್ಲ. ನನ್ನೊಳಗೆ ಏನೋ ಕೊರತೆ ಇದೆ ಎನ್ನುವ ಭಾವನೆ.
ಯೂಜಿ : ಒಳಗೆ, ಹೊರಗೆ ಎನ್ನುವುದೇನಿಲ್ಲ. ನಾನು ಏನು ಹೇಳುತ್ತಿದ್ದೇನೆಂದರೆ ನಿನ್ನಲ್ಲೊಂದು ಭಾವನೆ ಇದೆ , ಬೇಡಿಕೆ ಇದೆ. ನಿನ್ನ ಈಗಿನ ಬದುಕಿಗಿಂತ, ಅಸ್ತಿತ್ವಕ್ಕಿಂತ ಇನ್ನೂ ಏನೋ ಒಂದು ಆಸಕ್ತಿದಾಯಕವಾದದ್ದು ನಿನ್ನಿಂದ ಸಾಧ್ಯ, ಇನ್ನೂ ಹೆಚ್ಚು ಅರ್ಥಪೂರ್ಣವಾದದ್ದು, ಹೆಚ್ಚು ತೃಪ್ತಿದಾಯಕವಾದದ್ದು. ಇದು ನಿನ್ನ ಡಿಮಾಂಡ್, ಆದ್ದರಿಂದಲೇ ನೀನು ಚಡಪಡಿಸುತ್ತಿರುವೆ. ನಾನು ಹೇಳೋದು ನಿನ್ನ ಈ ಬೇಡಿಕೆ ಸಹಜವಲ್ಲ, ನಿನ್ನ ಸ್ವಂತದ್ದಲ್ಲ. ಸಂಸ್ಕೃತಿ, ಸಮಾಜ ಇಂಥ ಹಲವಾರು ಬೇಡಿಕೆಗಳನ್ನ ನಿನ್ನ ಮೇಲೆ ಹೇರಿವೆ.

ಪ್ರಶ್ನೆ : ಹಾಗಾದರೆ ಮನುಷ್ಯನಿಗೆ ಸಹಜ ಬೇಡಿಕೆಗಳಿಲ್ಲವೆ?
ಯೂಜಿ : ಇಲ್ಲ.

ಪ್ರಶ್ನೆ : ಹಾಗಾದರೆ ನನ್ನ ಬೇಡಿಕೆಗಳೆಲ್ಲ ಸಮಾಜ, ಸಂಸ್ಕೃತಿ ಸೃಷ್ಟಿ ಮಾಡಿರುವ ಶಬ್ದಗಳು ಮಾತ್ರವೆ?
ಯೂಜಿ : ಎಕ್ಸಾಕ್ಟ್ಲೀ. ಸಮಾಜ, ಸಂಸ್ಕೃತಿ ಸೃಷ್ಟಿ ಮಾಡಿರುವ ಈ ಬೇಡಿಕೆಗಳು ನಿನ್ನ ಸಹಜತೆಯನ್ನ ನಾಶಮಾಡಿವೆ. ಹಾಗಾಗಿಯೇ ಈ ಬೇಡಿಕೆಗಳನ್ನ ಪೂರ್ತಿ ಮಾಡಿಕೊಳ್ಳದ ಹೊರತು ನಿನ್ನ ಬದುಕು ಅರ್ಥಹೀನ ಎಂದು ನಿನಗನ್ನಿಸುತ್ತಿದೆ. ಈ ಬೋರ್ ಡಂ (boredom) ನ ತುಂಬಿಕೊಳ್ಳಲೆಂದೇ ನೀನು ಏನೆಲ್ಲ ಪ್ರಯತ್ನ ಮಾಡುತ್ತಿದ್ದೀ. ಆದ್ದರಿಂದಲೇ ನೀನು ಈ ಯೋಗ, ಧ್ಯಾನ, ಸೈಕಾಲಜಿ ಮಂತಾದ ಹೊಸ ಗಿಮಿಕ್ ಗಳಿಗೆ ನಿನ್ನನ್ನ ತೆರೆದುಕೊಂಡಿದ್ದೀ.

ಪ್ರಶ್ನೆ : ಪುಸ್ತಕಗಳು ?
ಯೂಜಿ : ಅಧ್ಯಾತ್ಮ, ಧಾರ್ಮಿಕ ಪುಸ್ತಕಗಳನ್ನು ಓದುವುದು ಈಗಾಗಲೇ ಇರುವ ಗಿಮಿಕ್ ಗಳ ಸಾಲಿಗೆ ಹೊಸ ಸೇರ್ಪಡೆ. ಆದರೂ ನಿನಗೆ ನಿನ್ನ boredom ನಿಂದ ಬಿಡುಗಡೆಯಾಗಿಲ್ಲ. ನಿನ್ನ ಬದುಕು, ನಿನ್ನ ಅಸ್ತಿತ್ವದ ಬಗ್ಗೆ ನಿನಗೆ ಬೋರ್ ಆಗ್ತಾ ಇದೆ. ಏಕೆಂದರೆ ನಿನ್ನ ಬದುಕು ರಿಪಿಟೇಟಿವ್ ಆಗಿದೆ. ಒಮ್ಮೆ ನಿನ್ನ ದೈಹಿಕ , ಭೌತಿಕ ಬೇಡಿಕೆಗಳೆಲ್ಲವನ್ನೂ ನೀನು ಬಗೆಹರಿಸಿಕೊಂಡ ಮೇಲೆ ನಿನ್ನಲ್ಲೊಂದು ಪ್ರಶ್ನೆ ಮೂಡುತ್ತದೆ. ಇಷ್ಟೇನಾ ಬದುಕು ? ಪ್ರತಿದಿನ ಆಫೀಸ್ ಅಥವಾ ಮನೆ ಕೆಲಸ, ಊಟ, ನಿದ್ದೆ, ಸೆಕ್ಸ್  ಇಷ್ಟೇನಾ ಬದುಕು? ನಿನ್ನಲ್ಲಿನ ಇಂಥದೊಂದು ಪ್ರಶ್ನೆಯನ್ನೇ ಬಳಸಿಕೊಂಡು ನಿನ್ನ ಶೋಷಿಸುತ್ತಿದ್ದಾರೆ ಈ ಬಾಬಾಗಳು, ಗುರೂಜಿಗಳು, ಸದ್ಗುರುಗಳು.

ಈ ಡಿಮಾಂಡ್ ಗಳು ತಳ ಇಲ್ಲದ ಪಾತ್ರೆಯಂತೆ. ನೀನು ಏನೇ ಪ್ರಯತ್ನ ಮಾಡಿದರೂ, ಯಾವ ಹೊಸ ವಿಧಾನವನ್ನ ಬಳಸಿದರೂ  ಈ ಬೋರ್ ಡಂ ನಿಂದ ನಿನಗೆ ಮುಕ್ತಿಯುಲ್ಲ.  ಏಕೆಂದರೆ ಬೋರ್ ಡಂ ನಿನಗೆ ಒಂದು ರಿಯಾಲಿಟಿ, ಒಂದು ನೈಜ ಸಂಗತಿ. ಇದು ನೈಜ ಅಲ್ಲದೇ ಹೋಗಿದ್ದರೆ ನೀವು ಬೇರೆ ಯಾವ ಪ್ರಯತ್ನಕ್ಕೂ ಕೈ ಹಾಕುತ್ತಿರಲಿಲ್ಲ.

ಪ್ರಶ್ನೆ : ನಿಮ್ಮ ಪ್ರಜ್ಞೆಯಲ್ಲಿ ಈ ಬೋರ್ ಡಂ ಗೆ ಜಾಗ ಇಲ್ಲವೆ ?
ಯೂಜಿ : ಇಲ್ಲ. ಏಕೆಂದರೆ ನೀನು ಯಾವುದರಿಂದ ಪಾರಾಗಲು ಬಯಸುತ್ತಿದ್ದೀಯೋ ಅದು ನಿಜದಲ್ಲಿ ಇಲ್ಲ. ನಾನು ಇದನ್ನೇ ಮೇಲಿಂದ ಮೇಲೆ ಒತ್ತಿ ಹೇಳುತ್ತಿದ್ದೇನೆ. ನಿಜದ ಸಮಸ್ಯೆ ಬೋರ್ ಡಂ ಅಲ್ಲ. ಈ ಬೋರ್ ಡಂ ನ ಇರುವಿಕೆಯ ಬಗ್ಗೆ ನಿಮ್ಮ ವಿಚಾರಗಳ ಲೆವಲ್ ನಲ್ಲೇ ಆಗಲಿ ನಿನ್ನ ಬದುಕಿನ ಹಂತದಲ್ಲೇ ಆಗಲಿ ನಿಮಗೆ ಪೂರ್ಣ ಅರಿವಿಲ್ಲ.

ಇರದ  ಬೋರ್ ಡಂ ನಿಂದ ಬಿಡುಗಡೆ ಹೊಂದಲು ನೀವು ಬಳಸುವ ವಿಧಾನಗಳ ಆಕರ್ಷಕತೆಯೇ ನಿಮ್ಮ ಬೋರ್ ಡಂ ಗೆ ನಿಜವಾದ ಕಾರಣ. ತಾವೇ ಹುಟ್ಟಿಸಿದನ್ನ ಈ ವಿಧಾನಗಳು ತಾವೇ ಕೊಲ್ಲಲಾರವು. ಈ ಸಂಕಟ ಹೀಗೆ ಸತತವಾಗಿ ಮುಂದುವರೆಯುತ್ತಲೇ ಇರುತ್ತದೆ, ನೀವೂ ಹೊಸ ಹೊಸ ಪರಿಹಾರಗಳನ್ನು ಹುಡುಕುತ್ತಲೇ ಇರುತ್ತೀರಿ. ಇಂದೊಂದು ವಿಷ ವೃತ್ತ.

ಪ್ರತೀ ವರ್ಷ ಭಾರತದಲ್ಲಿ ಒಬ್ಬ ಹೊಸ ಗುರು ಹುಟ್ಟುತ್ತಾನೆ ತನ್ನ ಹೊಸ ಗಿಮಿಕ್ ಗಳೊಂದಿಗೆ ಹೊಸ ಹೊಸ ಟೆಕ್ನಿಕ್ ಗಳು, ಹೊಸ ಥೆರಪಿಗಳೊಂದಿಗೆ ಮತ್ತು ನೀವು ನಿಮ್ಮ non existing boredom ನ ಪರಿಹಾರಕ್ಕಾಗಿ ಅವನು ತೋಡಿರುವ ಹೊಸ ಖೆಡ್ಡಾದಲ್ಲಿ ಬೀಳುತ್ತಲೇ ಇರುತ್ತೀರಿ.

Leave a Reply