ಒಬ್ಬರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ಅರ್ಧದಲ್ಲೇ ಮಾತು ಮುಗಿಸಿ ಕೇಳಿಸಿಕೊಂಡಷ್ಟನ್ನು ಅಪಾರ್ಥ ಮಾಡಿಕೊಂಡರೆ ಮತ್ತೆ ಕೆಡುವುದು ನಮ್ಮದೇ ನೆಮ್ಮದಿ. ಅದಕ್ಕೇ ರೂಮಿ ಹೇಳುವುದು “ತಾಳ್ಮೆಯೇ ಸಂತೋಷದ ಕೀಲಿ ಕೈ” ಎಂದು. ತಾಳ್ಮೆ ನಮ್ಮೆಲ್ಲರ ಬಾಳಿನ ನಿತ್ಯ ನಿಯಮವಾಗಲಿ ~ ಸಾಕಿ
ವೇಗಭರಿತ ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ 21ನೇ ಶತಮಾನದಲ್ಲಿ ಬದುಕುತ್ತಿರುವ ನಾವು ತಾಳಿದವನು ಬಾಳಿಯಾನು ಎಂಬ ಗಾದೆ ಮಾತನ್ನು ಮರೆತೇ ಬಿಟ್ಟಿದ್ದೇವೆ. ಈ ವೇಗದ ಬದುಕು ಒಂದು ವಿಧದಲ್ಲಿ ಯಾಂತ್ರಿಕವೂ ಹೌದು. ಎಲ್ಲ ಕೆಲಸಗಳನ್ನೂ ತರಾತುರಿಯಲ್ಲಿ ಮುಗಿಸುವ ತವಕ. ರಸ್ತೆ ಮಧ್ಯೆ ಕಾರನ್ನು ಯೂಟರ್ನ್ ಮಾಡುವಾಗ ಒಂದು ಕ್ಷಣ ಆಚೀಚೆ ನೋಡುವ ತಾಳ್ಮೆ ನಮಗಿಲ್ಲದಿದ್ದರೆ ಪರಿಣಾಮ ಹೇಗಿರಬಹುದು? ಜಡಿಮಳೆ ಸುರಿಯುವಾಗ ಮಳೆ ನಿಲ್ಲುವ ತನಕ ಕಾಯದಿದ್ದರೆ ಹೇಗೆ?
ಮನುಷ್ಯ ಸಂಬಂಧಗಳ ವಿಷಯದಲ್ಲೂ ನಾವು ಆತುರದ ತೀರ್ಮಾನ ತೆಗೆದುಕೊಂಡು ಬಿಡುತ್ತೇವೆ. ಯಾವುದೋ ಕ್ಷಣದಲ್ಲಿ ಆತ್ಮೀಯರಾದವರನ್ನು ಮನಸ್ಸಿಗೆ ಹಚ್ಚಿಕೊಂಡು ಬಿಡುತ್ತೇವೆ. ಎಷ್ಟೆಂದರೆ ನಮ್ಮ ಸರ್ವಸ್ವವನ್ನೂ ಅವರಿಗೆ ಸಮರ್ಪಿಸುತ್ತೇವೆ. ಆದರೆ, ಮುಂದೊಂದು ದಿನ ಅವರ ನಿಜ ಸ್ವಭಾವದ ದರ್ಶನವಾಗುತ್ತಲೇ ನಮ್ಮ ಮನಸ್ಸು ನಿಯಂತ್ರಣ ಕಳೆದುಕೊಂಡು ಬಿಡುತ್ತದೆ. ನಾವು ಒಬ್ಬರೊಂದಿಗೆ ಆತ್ಮೀಯರಾಗುವ ಮುನ್ನ ಕೆಲಕಾಲ ಅವರ ಒಡನಾಟದಲ್ಲಿದ್ದು ನಮಗೂ ಅವರಿಗೂ ತಾಳೆಯಾಗುತ್ತದೆಯೇ ಎಂದು ಯೋಚಿಸುವಷ್ಟು ತಾಳ್ಮೆ ನಮಗಿದ್ದರೆ?! ಯಾರ ಮನಸ್ಸನ್ನೂ ತೆರೆದು ಓದಲಾಗದು ಎಂಬುದು ನಿಜವಾದರೂ ಅವರ ಬಗ್ಗೆ ಒಂದಷ್ಟು ಪ್ರಾಥಮಿಕ ಮಾಹಿತಿಯಾದರೂ ನಮಗೆ ಸಿಕ್ಕೇ ಸಿಗುತ್ತದೆ. ಹಾಗಾದಲ್ಲಿ ಮುಂದೆ ನಮ್ಮ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ಬರಲಾರದು.
ಹೀಗೆಯೇ ನಮ್ಮ ಮೇಲೆ ಬರುವ ಟೀಕೆ ಟಿಪ್ಪಣಿಗಳನ್ನೂ ಸಕಾರಾತ್ಮಕವಾಗಿ ಸ್ವೀರಿಸುವುದಕ್ಕೂ ತಾಳ್ಮೆ ಬೇಕು. ಒಬ್ಬರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ಅರ್ಧದಲ್ಲೇ ಮಾತು ಮುಗಿಸಿ ಕೇಳಿಸಿಕೊಂಡಷ್ಟನ್ನು ಅಪಾರ್ಥ ಮಾಡಿಕೊಂಡರೆ ಮತ್ತೆ ಕೆಡುವುದು ನಮ್ಮದೇ ನೆಮ್ಮದಿ. ಅದಕ್ಕೇ ರೂಮಿ ಹೇಳುವುದು “ತಾಳ್ಮೆಯೇ ಸಂತೋಷದ ಕೀಲಿ ಕೈ” ಎಂದು. ತಾಳ್ಮೆ ನಮ್ಮೆಲ್ಲರ ಬಾಳಿನ ನಿತ್ಯ ನಿಯಮವಾಗಲಿ.