ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಗೆಳೆಯರ ಮಾತು ಕೇಳಿ ಬೋರ್ಡ್ ತಿದ್ದಿದ ಮೀನಿನಂಗಡಿಯವನಿಗೆ ಐದನೆ ಗೆಳೆಯ ಕೊಟ್ಟ ಸಲಹೆ ಏನು ಗೊತ್ತಾ!? ಓದಿ, ಓಶೋ ರಜನೀಶ್ ಹೇಳಿದ ಕಥೆ | ಕನ್ನಡಕ್ಕೆ : ಚಿದಂಬರ ನರೇಂದ್ರ
If you go on listening to people you will become more and more confused – Osho
ಇನ್ನೊಬ್ಬರು ಹೇಳುವುದನ್ನ ಮನಸ್ಸಿಟ್ಟು ಕೇಳಿ ಆದರೆ ನಿಮ್ಮ ಒಳದನಿಯ ತಿಳುವಳಿಕೆಯನ್ನ ಅನುಸರಿಸಿ. ಖಂಡಿತ ಕೇಳಿ, ಧ್ಯಾನಸ್ಥರಾಗಿ ಕೇಳಿ, ಅವರು ನಿಮಗೆ ಏನು ಹೇಳಬಯಸುತ್ತಿದ್ದಾರೆ ಎನ್ನುವುದನ್ನ ತಿಳಿದುಕೊಳ್ಳಿ. ಅವರು ನಿಜವಾಗಿಯೂ ನಿಮಗೆ ಒಳ್ಳೆಯದನ್ನ ಬಯಸುವವರಾಗಿರಬಹುದು ಆದರೆ ನೀವು ಅವರನ್ನ ಕುರುಡಾಗಿ ಅನುಸರಿಸಿದಿರಾದರೆ ಅವರ ಊರುಗೋಲಿನ ಸಹಾಯ ಯಾವಾಗಲೂ ನಿಮಗೆ ಬೇಕಾಗಬಹುದು. ಆಗ ನೀವು ಇನ್ನೊಬ್ಬರ ಸಲಹೆಯ ಮೇಲೆ ಸದಾ ಅವಲಂಬಿತರಾಗುವಿರಿ. ಸದಾ ನೀವು ನಾಯಕರ ಸಹಾಯ ಬಯಸುತ್ತೀರಿ. ನಾಯಕರನ್ನು ಬಯಸುವುದು ಒಂದು ಅನಾರೋಗ್ಯಕರ ಸ್ಥಿತಿ.
ಜನ ಹೇಳುವುದನ್ನ ಕೇಳಿ ಏಕೆಂದರೆ ಜನರ ಅನುಭವ ಬಹಳ ದೊಡ್ಡದು. ಅವರು ತಮ್ಮ ಅನುಭವವನ್ನ ನಿಮ್ಮ ಜೊತೆ ಹಂಚಿಕೊಳ್ಳಬಯಸುವುದನ್ನ ನೀವು ತಿರಸ್ಕರಿಸುವಿರಾದರೆ ಇದು ಮಹಾ ಮೂರ್ಖ ನಡೆ. ಆದರೆ ಅವರ ಅನುಭವ ಕೇಳಿ ತಿಳಿದುಕೊಳ್ಳಿ ಅಷ್ಟೇ ಹೊರತು ಅವರನ್ನ ಖಂಡಿತ ಹಿಂಬಾಲಿಸಬೇಡಿ.
ಒಮ್ಮೆ ಒಬ್ಬ ಮನುಷ್ಯ ಹೊಸದಾಗಿ ಮೀನಿನ ಅಂಗಡಿಯನ್ನು ತೆರೆದ. ‘ ಇಲ್ಲಿ ತಾಜಾ ಮೀನು ಮಾರಲಾಗುತ್ತದೆ’ ಎಂದು ಬೋರ್ಡ್ ಬರೆಸಿ ಹಾಕಿದ. ಈ ಬೋರ್ಡ್ ನೋಡಿದ ಗೆಳೆಯನೊಬ್ಬ “ಇಲ್ಲಿ – ಎಂಬ ಪದ ಬೇಕಾಗಿಲ್ಲ ಅಲ್ಲವೆ ?” ಎಂದು ಕಮೆಂಟ್ ಮಾಡಿದ. ಅಂಗಡಿಯವನಿಗೆ ನಿಜ ಅನಿಸಿ, ಬೋರ್ಡ್ ನಿಂದ ‘ಇಲ್ಲಿ’ ಪದ ತೆಗೆಸಿದ.
ಇನ್ನೊಬ್ಬ ಗೆಳೆಯ “ಮಾರಲಾಗುತ್ತದೆ – ಪದ ಯಾಕೆ ಬೇಕು? ಎಲ್ಲರಿಗೂ ಗೊತ್ತು ನೀನೇನು ಪುಕ್ಕಟೆ ಕೊಡುವುದಿಲ್ಲ ತಾನೇ” ಎಂದ. ನಿಜ ಅನಿಸಿ ಅಂಗಡಿಯವ ಆ ಪದವನ್ನೂ ತೆಗೆಸಿದ.
“ತಾಜಾ – ಪದ ಬೇಡ, ನೀನೇನು ಕೊಳೆತ ಮೀನು ಮಾರುವುದಿಲ್ಲ ಅಲ್ಲವೇ?” ಎಂದ. ಮೂರನೆಯ ಗೆಳೆಯ. ಅಂಗಡಿಯವ ‘ತಾಜಾ’ ಪದವನ್ನೂ ಬೋರ್ಡಿನಿಂದ ತೆಗೆಸಿದ.
ಈಗ ಬೋರ್ಡ್ ಮೇಲೆ ‘ ಮೀನು’ ಪದ ಮಾತ್ರ ಉಳಿದಿತ್ತು. ಆಗ ಬಂದ ನಾಲ್ಕನೆಯವ, ಮೀನಿನ ವಾಸನೆ ಮೈಲು ದೂರಿನಿಂದಲೇ ಗೊತ್ತಾಗುತ್ತದೆ. ಬೋರ್ಡ ಇಲ್ಲದಿದ್ದರೂ ನಡೆದೀತು ಎಂದು ಸಲಹೆ ನೀಡಿದ. ಕೊನೆಗೆ ಅಂಗಡಿಯವ ಬೋರ್ಡ್ ತೆಗೆಸಿಬಿಟ್ಟ.
ಆಮೇಲೆ ಬಂದ ಐದನೆಯ ಮನುಷ್ಯ, “ಹೊಸ ಅಂಗಡಿಗೆ ಬೋರ್ಡ್ ಇದ್ದರೆ ಚೆನ್ನ, ‘ಇಲ್ಲಿ ತಾಜಾ ಮೀನು ಮಾರಲಾಗುತ್ತದೆ’ ಎಂದು ಬೋರ್ಡ್ ಹಾಕಿಸು ಎಂದು ಸಲಹೆ ನೀಡಿದ.
ಜನ ಹೇಳುವುದನ್ನ ಕೇಳುತ್ತ ಹೋದರೆ ನೀವು ಹೆಚ್ಚು ಹೆಚ್ಚು ಗೊಂದಲಕ್ಕೆ ಒಳಗಾಗುವಿರಿ. ಬಹಳಷ್ಟು ಜನ ನಿಮಗೆ ಸಲಹೆ ನೀಡುತ್ತಾರೆ, ಆದರೆ ನೀವು ಎಲ್ಲ ಸಲಹೆಗಳನ್ನು ಅನುಸರಿಸಿದರೆ ಗೊಂದಲಕ್ಕೊಳಗಾಗುವಿರಿ. ಜನ ಕೆಟ್ಟ ಸಲಹೆ ನೀಡುತ್ತಾರೆ ಎಂದು ನಾನು ಹೇಳುತ್ತಿಲ್ಲ, ಅವರು ಸಾಮಾನ್ಯವಾಗಿ ನಿಮ್ಮ ಶುಭಾಕಾಂಕ್ಷಿಗಳೇ ಆಗಿರಬಹುದು ಆದರೆ ಅವರು ಪ್ರಜ್ಞಾಪೂರ್ವಕವಾಗಿ ನಿಮ್ಮ ಶುಭಾಕಾಂಕ್ಷಿಗಳಲ್ಲ, ಹಾಗೇನಾದರೂ ಆಗಿದ್ದರೆ ಅವರು ನಿಮಗೆ ಕೇವಲ ಸಲಹೆ ನೀಡುತ್ತಿರಲಿಲ್ಲ, ಒಳನೋಟಗಳನ್ನು ನೀಡುತ್ತಿದ್ದರು. ಅವರು ನಿಮಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳುತ್ತಿರಲಿಲ್ಲ ಬದಲಾಗಿ, ನಿಮ್ಮಲ್ಲಿ ಪರಿಸ್ಥಿತಿಯ ಬಗ್ಗೆ ಪ್ರಜ್ಞೆ ಮೂಡಿಸುತ್ತಿದ್ದರು, ಎಲ್ಲ ಸಾಧಕ ಬಾಧಕಗಳನ್ನು ತುಲನೆ ಮಾಡಿ ನೀವೇ ನಿಮ್ಮ ನಿರ್ಧಾರ ತೆಗೆಗುಕೊಳ್ಳಲು ಸಹಾಯ ಮಾಡುತ್ತಿದ್ದರು.
Osho, The Guest – Talks on Kabir, Ch5, Q6 (excerpt)