ಓಶೋ ಹೇಳಿದ ರಾಮತೀರ್ಥರ ಪ್ರಸಂಗ

ಪ್ರಜ್ಞೆ ವಿಶಾಲ ಆಕಾಶದಂತೆ. ಆಕಾಶಕ್ಕೆ ಕಲ್ಲು ಎಸೆದು ಗಾಯ ಮಾಡುವುದು ಅಸಾಧ್ಯ | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ

ಸ್ವಾಮಿ ರಾಮತೀರ್ಥ ಭಾರತ ಕಂಡ ಅತ್ಯಂತ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು. ಒಮ್ಮೆ ಸ್ವಾಮೀಜಿಯವರು ಅಮೇರಿಕಾದ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಅವರು ಮಾತಾಡುವಾಗ, ಉಪನ್ಯಾಸ ಕೊಡುವಾಗ ಯಾವಾಗಲೂ ತೃತಿಯ ಪುರುಷದಲ್ಲಿ ಮಾತನಾಡುತ್ತಿದ್ದರು. ಅವರು ಯಾವಾಗಲೂ ‘ನಾನು’ ಎಂಬ ಪದ ಬಳಸುತ್ತಿರಲಿಲ್ಲ. ಇದು ಅಮೇರಿಕನ್ನರಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿತ್ತು, ಇದರಿಂದಾಗಿ ಸ್ವಾಮೀಜಿಯವರ ಮಾತುಗಳನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಅವರಿಗೆ ಬಹಳ ತೊಂದರೆಯಾಗುತ್ತಿತ್ತು.

ಒಂದು ಸಂಜೆ ರಾಮತೀರ್ಥರು, ಅಮೇರಿಕೆಯಲ್ಲಿ ತಾವು ಇಳಿದುಕೊಂಡಿದ್ದ ಅತಿಥೇಯರ ಮನೆಗೆ ವಾಪಸ್ ಬಂದರು. ಮನೆಗೆ ಬಂದವರೇ ಬಿದ್ದು ಬಿದ್ದು ನಗಲು ಶುರು ಮಾಡಿದರು. ಅವರ ಇಡೀ ಮೈ ನಗುವಿನಿಂದ ಕಂಪಿಸುತ್ತಿತ್ತು. ಹೊಟ್ಟೆ ಹುಣ್ಣಾಗುವಂತೆ ನಗುತ್ತಲೇ ಇದ್ದರು.

ಸ್ವಾಮೀಜಿಯವರ ಈ ನಗುವನ್ನು ಕಂಡು ಬೆರಗಾದ ಅತಿಥೇಯ ಕುಟುಂಬದ ಸದಸ್ಯರೊಬ್ಬರು ಪ್ರಶ್ನೆ ಮಾಡಿದರು. “ ಏನು ವಿಷಯ ಸ್ವಾಮೀಜಿ? ಯಾಕೆ ಇಷ್ಟು ನಗುತ್ತಿದ್ದೀರಿ? ನಿಮ್ಮ ಖುಷಿಗೆ ಕಾರಣ ಏನು? “

“ ಇವತ್ತು ದಾರಿಯಲ್ಲಿ ಹೋಗುವಾಗ ಕೆಲ ತುಂಟ ಹುಡುಗರು ರಾಮನ ವೇಷಭೂಷಣಗಳನ್ನು ನೋಡಿ ಬಹುಶಃ ಅವ ಹುಚ್ಚನಿರಬೇಕೆಂದು ಭಾವಿಸಿ ಅಟ್ಟಿಸಿಕೊಂಡು ಬಂದರು, ರಾಮನ ಕೈಯಲ್ಲಿರುವುದನ್ನು ಕಸಿದುಕೊಳ್ಳಲು ಪ್ರಯತ್ನ ಮಾಡಿದರು, ಒಬ್ಬ ಹುಡುಗನಂತೂ ರಾಮನತ್ತ ಕಲ್ಲು ತೂರಿಬಿಟ್ಟ. ಆ ಹುಡುಗರ ವರ್ತನೆಯಿಂದಾಗಿ ರಾಮನಿಗೆ ಬಹಳ ಸಿಟ್ಟು ಬಂತು. ರಾಮ ಆ ಹುಡುಗರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧನಾಗಿದ್ದ. ಆದರೆ ನಾನು ರಾಮನಿಗೆ ಸಹಾಯ ಮಾಡಲಿಲ್ಲ. ನಾನು ಅವನನ್ನು ಪಕ್ಕಕ್ಕೆ ಎಳೆದುಕೊಂಡು ಬಂದುಬಿಟ್ಟೆ.”

ಸ್ವಾಮಿ ರಾಮತೀರ್ಥರು ರಸ್ತೆಯಲ್ಲಿ ನಡೆದ ಘಟನೆಯನ್ನು ಅತಿಥೇಯ ಕುಟುಂಬಕ್ಕೆ ವಿವರಿಸಿ ಹೇಳಿದರು.

“ ನೀವೇ ಅಲ್ಲ ರಾಮ ? ಮತ್ತೆ ಯಾರ ಬಗ್ಗೆ ಮಾತಾಡುತ್ತಿದ್ದೀರಿ ನೀವು ಸ್ವಾಮೀಜಿ ? ನಿಮ್ಮ ಮಾತೇ ಅರ್ಥ ಆಗುತ್ತಿಲ್ಲ. “ ಕುಟುಂಬದ ಸದಸ್ಯರು ಮತ್ತೇ ರಾಮತೀರ್ಥರನ್ನು ಪ್ರಶ್ನೆ ಮಾಡಿದರು.

“ ನಾನು ರಾಮ ಅಲ್ಲ, ನಾನು ಅವನೊಳಗಿರುವ ತಿಳುವಳಿಕೆ. ಈ ದೇಹ ರಾಮ. ಆ ತುಂಟರು ಕಲ್ಲು ಎಸೆದದ್ದು ಈ ದೇಹಕ್ಕೇ ಹೊರತು ಈ ದೇಹದಲ್ಲಿರುವ ತಿಳುವಳಿಕೆಗೆ ಅಲ್ಲ, ಅಂದರೆ ನನಗಲ್ಲ. ಯಾರು ಹೇಗೆ ತಾನೇ ಪ್ರಜ್ಞೆಗೆ ಕಲ್ಲು ಎಸೆಯಬಲ್ಲರು? ಆಕಾಶಕ್ಕೆ ಕಲ್ಲು ಎಸೆಯಬಹುದೆ? ಕಲ್ಲಿನಿಂದ ಆಕಾಶವನ್ನು ಗಾಯ ಮಾಡಬಹುದೆ?”

ಸ್ವಾಮಿ ರಾಮತೀರ್ಥರು ತಮ್ಮ ಮಾತಿನ ಬಗೆಯನ್ನ ಕುಟುಂಬದ ಎದುರು ಬಿಚ್ಚಿಟ್ಟರು.

ಪ್ರಜ್ಞೆ ವಿಶಾಲ ಆಕಾಶದಂತೆ. ಆಕಾಶಕ್ಕೆ ಕಲ್ಲು ಎಸೆದು ಗಾಯ ಮಾಡುವುದು ಅಸಾಧ್ಯ. ಈ ದೇಹಕ್ಕೆ ಕಲ್ಲಿನಿಂದ ಹೊಡೆದು ಗಾಯ ಮಾಡಬಹುದು. ದೇಹ, ಭೌತಿಕ ವಸ್ತು, ದೇಹವೆಂಬ ಈ ಪದಾರ್ಥಕ್ಕೆ ಗಾಯ ಮಾಡಬಹುದು ಆದರೆ ಈ ಪದಾರ್ಥ ಒಳಗೆ ಇರುವ ಪದಕ್ಕೆ, ಪ್ರಜ್ಞೆಗೆ ನೋವನ್ನುಂಟು ಮಾಡುವುದು ಯಾರಿಗೂ ಸಾಧ್ಯವಿಲ್ಲ.


Leave a Reply