ಬೆಳಗಿನ ವಚನ…
ಅಯ್ಯೋ! ಗುಹೇಶ್ವರಾ!
ಅಯ್ಯೋ! ಕೂಡಲ ಸಂಗಯ್ಯ!
*
ರಾಜಸಭೆ ದೇವಸಭೆಯೊಳಗೆ,
ದೇವ-ರಾಜ-ಪೂಜಕರೆಲ್ಲಾ ಮುಖ್ಯರಿಗೆ,
ಗುರುವಿನ ಕರುಣ!
ಇದ ಬಲ್ಲರೆ ಅಯ್ಯಾ ಪೂಜಕರೆಲ್ಲರು?
ಇಂತಹ ಪರಿಗಳ ಕಂಡು ಬೆರಗಾದೆ,
ಗುಹೇಶ್ವರಾ- ಇವರೆಲ್ಲ ಸಂಸಾರವ್ಯಾಪಕರು.
*
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು.
ಗುಹೇಶ್ವರನರಿಯದ ಕರ್ಮಿಗಳು.
*
ಆಶೆಯ ವೇಷವ ಧರಿಸಿ ಭಾಷೆ ಪಲ್ಲಟವಾದರೆ
ಎಂತಯ್ಯಾ ರಣಪಥ ವೇದ್ಯವಹುದು?
ತ್ರಿಭುವನದ ಮಸ್ತಕದ ಮೇಲಿಪ್ಪ ಮೂರು ಗಿರಿಯ ಹುಡಿಗುಟ್ಟದನ್ನಕ್ಕರ
ಎಂತಯ್ಯ ಶಿವಪಥ ಸಾಧ್ಯವಹುದು?
ಭದ್ರೆ ನಿಭದ್ರೆಯೆಂಬವರ ಮೂಲದ ನಾಶಮಾಡದನ್ನಕ್ಕರ,
ಎಂತಯ್ಯಾ ಲಿಂಗೈಕ್ಯವು?
ಅತಳಲೋಕದಲ್ಲಿ ಕುಳ್ಳಿರ್ದು, ಬ್ರಹ್ಮಲೋಕದ ಮುಟ್ಟಿದೆನೆಂಬುವರೆಲ್ಲ
ಭವಭಾರಕ್ಕೊಳಗಾದುದ ಕಂಡು
ನಾನು ಬೆರಗಾದೆನು ಗುಹೇಶ್ವರಾ.
*
ಕೂಡಲ ಸಂಗ!
ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದ ಜೀವಿಗಳಲ್ಲದವರು
ಏಸು ಕಾಲವಿರ್ದಡೆನು, ಅದರಂತು ಕಾಣಿರಣ್ಣಾ.
*
ಎಲವೋ, ಎಲವೋ ಪಾಕರ್ಮವ ಮಾಡಿದವನೇ,
ಎಲವೋ, ಎಲವೋಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ,
ಒಮ್ಮೆ ಶರಣೆಂದಡೆ ಪಾಪಕರ್ಮಓಡುವವು,
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು,
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
*
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ,
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ,
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚಿರಿಸುವರ ಮೆಚ್ಚ ಕೂಡಲಸಂಗಮದೇವ.
(ಆಕರ: ಸಮಗ್ರ ವಚನ ಸಂಪುಟ, ಅಲ್ಲಮ ಪ್ರಭುದೇವರ ವಚನ ಸಂಪುಟ, ಕಪುಪ್ರಾ)