~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಝೆನ್ ನಲ್ಲಿ ಚಿತ್ರ ಬಿಡಿಸುವುದು ಮತ್ತು ಅದಕ್ಕೆ ಬಣ್ಣ ತುಂಬುವುದು ಅತ್ಯಂತ ಹಳೆಯ ಪರಂಪರೆ. ಝೆನ್ ಮಾಸ್ಟರ್ ಬಳಿ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಅತ್ಯಂತ ಶ್ರದ್ಧೆಯಿಂದ ಪೇಂಟಿಂಗ್ ಮಾಡುತ್ತಿದ್ದ, ಪೇಂಟಿಂಗ್ ಮೂಲಕ ಧ್ಯಾನವನ್ನು ಹೊಂದುವುದು ಝೆನ್ ಕಲಿಕೆಯ ಒಂದು ಭಾಗ. ಬಿದಿರುಗಳ ಚಿತ್ರ ಬಿಡಿಸುವುದರಲ್ಲಿ ಶಿಷ್ಯನಿಗೆ ತುಂಬ ಆಸಕ್ತಿ. ಅವ ಸದಾ ಬಿದಿರುಗಳ ಚಿತ್ರ ಬಿಡಿಸುತ್ತಲೇ ಇರುತ್ತಿದ್ದ. ಶಿಷ್ಯನ ಈ ವರ್ತನೆ ಗಮನಿಸಿದ ಮಾಸ್ಟರ್, ಶಿಷ್ಯನಿಗೆ ತಿಳಿ ಹೇಳಿದ , “ ನೀನು ಸ್ವತಃ ಬಿದಿರು ಆಗುವ ತನಕ ನಿನ್ನ ಚಿತ್ರಗಳಿಗೂ ಮಹತ್ವ ಇಲ್ಲ ಮತ್ತು ನಿನ್ನ ಝೆನ್ ಕಲಿಕೆಯಲ್ಲಿ ಕೂಡ ಯಾವ ಪ್ರಮುಖ ಬೆಳವಣಿಗೆ ಸಾಧ್ಯವಿಲ್ಲ. “
ಶಿಷ್ಯ ಹತ್ತು ವರ್ಷಗಳಿಂದ ಬಿದಿರಿನ ಚಿತ್ರ ಬರೆಯುತ್ತಿದ್ದ. ಅವನು ಬಿದಿರಿನ ಚಿತ್ರ ಬಿಡಿಸುವುದರಲ್ಲಿ ಎಷ್ಟು ಪ್ರಾವೀಣ್ಯತೆ ಗಳಿಸಿದ್ದನೆಂದರೆ ಕಣ್ಣು ಮುಚ್ಚಿಕೊಂಡು ಕಗ್ಗತ್ತಲೆಯಲ್ಲಿ ಚಿತ್ರ ಬಿಡಿಸಿದರೂ ಅವನ ಚಿತ್ರಗಳು ಪರಿಪೂರ್ಣ ಮತ್ತು ಜೀವಂತಿಕೆಯಿಂದ ಕೂಡಿರುತ್ತಿದ್ದವು.
ಆದರೆ ಮಾಸ್ಟರ್, ಶಿಷ್ಯನ ಯಾವ ಚಿತ್ರಗಳಿಗೂ ಮನ್ನಣೆ ನೀಡುತ್ತಿರಲಿಲ್ಲ. ಮಾಸ್ಟರ್ ದು ಒಂದೇ ತಕರಾರು, “ ನೀನು ಸ್ವತಃ ಬಿದಿರು ಆಗದ ಹೊರತು ಬಿದಿರಿನ ಪರಿಪೂರ್ಣ ಚಿತ್ರ ಬಿಡಿಸುವುದು ಹೇಗೆ ಸಾಧ್ಯ? ನೀನು ಬಿದಿರಿನಿಂದ ಹೊರಗೆ ನಿಂತು, ಒಬ್ಬ ವೀಕ್ಷಕನಾಗಿ ಗಮನಿಸಿ ಚಿತ್ರ ಬಿಡಿಸುತ್ತಿದ್ದೀಯ. ಹಾಗಿರುವಾಗ ಬಿದಿರಿನ ಆತ್ಮವನ್ನು ಅನುಭವಿಸುವುದು ನಿನಗೆ ಹೇಗೆ ಸಾಧ್ಯ? ನೀನು ಬಿದಿರಿನಲ್ಲಿ ಒಂದಾಗದೇ ಹೋದರೆ, ಸ್ವತಃ ಬಿದಿರಾಗದೇ ಹೋದರೆ ಬಿದಿರಿನ ಒಳಗನ್ನು ಹಿಡಿದಿಡುವುದು ನಿನಗೆ ಹೇಗೆ ಸಾಧ್ಯ?”
ಹತ್ತು ವರ್ಷಗಳಾದರೂ ಮಾಸ್ಟರ್ ನ ಒಪ್ಪಿಗೆ ಸಿಗದೇ ಹೋದಾಗ ಶಿಷ್ಯ, ಒಂದು ಕಾಡಿನಲ್ಲಿ ಕಳೆದು ಹೋದ. ದಟ್ಟ ಬಿದಿರಿನ ಕಾಡಿನಲ್ಲಿ ಹೊಸದಾಗಿ ಬದುಕಲು ಆರಂಭ ಮಾಡಿದ. ಮೂರು ವರ್ಷಗಳ ಕಾಲ ಅವನ ಸುಳಿವು ಯಾರಿಗೂ ಸಿಗಲಿಲ್ಲ. ಆಮೇಲಿನ ಬಿದಿರಿನ ಕಾಡಿನಿಂದ ಬಂದ ಸುದ್ದಿಯ ಪ್ರಕಾರ ಶಿಷ್ಯ ಸ್ವತಃ ಬಿದಿರಾಗಿದ್ದ. ಈಗ ಅವ ಬಿದಿರಿನ ಚಿತ್ರ ಬಿಡಿಸುತ್ತಿರಲಿಲ್ಲ. ಬಿದಿರುಗಳ ಜೊತೆ ವಾಸ ಮಾಡುತ್ತಿದ್ದ, ಬಿದಿರಿನ ಹಾಗೆ ನಿಲ್ಲುತ್ತಿದ್ದ, ಗಾಳಿ ಬೀಸಿದಾಗ ಬಿದಿರಿನ ಜೊತೆ ತಾನೂ ತೂಗುತ್ತಿದ್ದ.
ಈ ವಿಷಯ ಗೊತ್ತಾದಾಗ ಮಾಸ್ಟರ್ ಸ್ವತಃ ಶಿಷ್ಯನನ್ನು ನೋಡಲು ಬಂದ. ಶಿಷ್ಯ ಪೂರ್ತಿಯಾಗಿ ಬಿದಿರಿನ ಸ್ವಭಾವವನ್ನು ಆವಾಹಿಸಿಕೊಂಡಿರುವುದನ್ನ ಗಮನಿಸಿದ. “ ಈಗ ನೀನು ನಿನ್ನನ್ನು ಮತ್ತು ಬಿದಿರನ್ನು ಮರೆತು ಬಿಡು.” ಮಾಸ್ಟರ್ ಶಿಷ್ಯನಿಗೆ ಆಜ್ಞೆ ಮಾಡಿದ. “ ಆದರೆ ಮಾಸ್ಟರ್, ನಾನು ಬಿದಿರಾಗಬೇಕೆಂಬುದು ನಿಮ್ಮ ಬಯಕೆಯಾಗಿತ್ತು. ಈಗ ನಾನು ಬಿದಿರಾಗಿರುವಾಗ ಎಲ್ಲ ಮರೆತು ಬಿಡು ಎಂದು ಹೇಳುತ್ತಿದ್ದೀರಿ, ಯಾಕೆ ?” ಶಿಷ್ಯ ಮಾಸ್ಟರ್ ನ ಪ್ರಶ್ನೆ ಮಾಡಿದ.
“ ನಿನ್ನ ಆಳದಲ್ಲೆಲ್ಲೋ ನೀನು ಈಗಲೂ ಬಿದಿರಿನಿಂದ ಬೇರೆಯಾಗಿರುವೆ. ಆದ್ದರಿಂದಲೇ ನೀನು ಬಿದಿರು ಆಗಿರುವ ವಿಷಯವನ್ನ ಮತ್ತೆ ಮತ್ತೆ ಹೇಳುತ್ತಿರುವೆ. ಹಾಗಾಗಿ ನೀನಿನ್ನೂ ಪರಿಪೂರ್ಣ ಬಿದಿರು ಅಲ್ಲ, ಏಕೆಂದರೆ ಬಿದಿರಿಗೆ ತಾನು ಬಿದಿರಾಗಿರುವ ವಿಷಯ ನೆನಪಿರುವುದಿಲ್ಲ. ಆದ್ದರಿಂದ ಈ ವಿಷಯ ಇಲ್ಲಿಗೇ ಬಿಟ್ಟುಬಿಡು” ಮಾಸ್ಟರ್ ಖಡಾಖಂಡಿತವಾಗಿ ಶಿಷ್ಯನನ್ನು ಕುರಿತು ಮಾತನಾಡಿದ.
ಆಮೇಲಿನ ಹತ್ತು ವರ್ಷ ಶಿಷ್ಯ ಬಿದಿರಿನ ವಿಷಯವನ್ನೇ ಸಂಪೂರ್ಣವಾಗಿ ಮರೆತುಬಿಟ್ಟ. ನಂತರ ಒಂದು ದಿನ ಮಾಸ್ಟರ್ ಶಿಷ್ಯನ ಹೆಗಲ ಮೇಲೆ ಕೈ ಹಾಕಿ ಮಾತನಾಡಿದ, “ ಈಗ ನೀನು ಚಿತ್ರ ಬಿಡಿಸು. ಈಗ ನೀನು ಬಿದಿರೂ ಹೌದು ಮತ್ತು ಈ ಬಗ್ಗೆ ನಿನಗೆ ಯಾವ ನೆನಪೂ ಇಲ್ಲ. ಈಗ ನೀನು ಬಿಡಿಸುವ ಬಿದಿರಿನ ಚಿತ್ರ, ಕೇವಲ ಚಿತ್ರ ಅಲ್ಲ ಅದು ಸ್ವತಃ ಬಿದಿರಿನ ಬೆಳವಣಿಗೆ”.