ಉಪದೇಶಕ ಅಯೋಗ್ಯನಾಗಿದ್ದಾಗ ನಾವೇನು ಮಾಡಬೇಕು? : ಅರಳಿಮರ ಸಂವಾದ

ನೀವು ಕಡೆಗಣಿಸಬೇಕಿರುವುದು ಹಾಗೆ ಸ್ವತಃ ಪಾಲಿಸದೆ ಉಪದೇಶ ನೀಡುತ್ತಿರುವ ವ್ಯಕ್ತಿಯನ್ನೇ ಹೊರತು ಆತ ನೀಡುತ್ತಿರುವ ಉಪದೇಶವನ್ನಲ್ಲ! ~ ಚಿತ್ಕಲಾ


ಪದೇಶ ಮಾಡುವವರು ಸ್ವತಃ ತಾವೇ ಅದನ್ನ ಪಾಲಿಸದೆ ಇದ್ದರೆ, ಅಂತಹ ಉಪದೇಶ ಮಾಡುವವರನ್ನು ಏನೆನ್ನಬೇಕು ? ಉಪದೇಶ ಮಾಡುವಾಗ ತೋರುವ ಒಂದು ಬೆರಳಿಗಿಂತ ಮಿಕ್ಕ ನಾಲ್ಕು ಬೆರಳು ನಮ್ಮ ಕಡೆ ತೋರುತ್ತಿವೆ ಅನ್ನೋದನ್ನೇ ಮರೆತರೆ ಹೇಗೆ?? ಇಂಥವರಿಗೆ ಏನು ಹೇಳಲು ಇಚ್ಛಿಸುತ್ತೀರಿ? – ಇದು ರಾಜ್ ಬಟಕುರ್ಕಿಯವರು ‘ಅರಳಿಮರ’ದ ಮುಂದಿಟ್ಟ ಪ್ರಶ್ನೆ.

ಇದಕ್ಕೆ ಯಾರಾದರೂ ನೀಡಬಹುದಾದ ಅತ್ಯಂತ ಸರಳ ಉತ್ತರ, ‘ಉಪೇಕ್ಷೆ ಅಥವಾ ಇಗ್ನೋರ್ ಮಾಡಿ’ ಅನ್ನುವುದು. ಯಾರಾದರೂ ತಮ್ಮ ಉಪದೇಶಗಳನ್ನು ಸ್ವತಃ ತಾವೇ ನಡೆಸುತ್ತಿಲ್ಲ ಎಂದು ನಿಮಗನ್ನಿಸಿದರೆ, ನೀವು ಮಾಡಬೇಕಾದ ಮೊದಲ ಕೆಲಸ ಅವರನ್ನು ಕಡೆಗಣಿಸುವುದು. ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು.

ಕೊನೆಯ ವಾಕ್ಯವನ್ನು ಮತ್ತೊಮ್ಮೆ ಓದಿಕೊಳ್ಳಿ. ನೀವು ಕಡೆಗಣಿಸಬೇಕಿರುವುದು ಹಾಗೆ ಸ್ವತಃ ಪಾಲಿಸದರೆ ಉಪದೇಶ ನೀಡುತ್ತಿರುವ ವ್ಯಕ್ತಿಯನ್ನೇ ಹೊರತು ಆತ ನೀಡುತ್ತಿರುವ ಉಪದೇಶವನ್ನಲ್ಲ!
ಬಹುತೇಕರು ಮಾಡುವುದೇ ಇದನ್ನು. ತಾವು ಏನು ಮಾಡುತ್ತಿದ್ದೇವೆ ಅನ್ನುವುದನ್ನು ಮರೆತವರಂತೆ ಇತರರಿಗೆ ಉಪದೇಶಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಅತ್ಯಂತ ಚಿಕ್ಕಪುಟ್ಟ ಸಂಗತಿಗಳಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳ ವರೆಗೂ ಹೀಗಾಗುತ್ತದೆ.

ಹಾಗೆ ಉಪದೇಶ ನೀಡುತ್ತಿರುವ ವ್ಯಕ್ತಿ ಸಜ್ಜನನೂ ಸಾಧಕನೂ ಆಗಿದ್ದರೆ, ಉಪದೇಶವನ್ನೂ ಸ್ವೀಕರಿಸಿ, ಉಪದೇಶಕನನ್ನು ಗೌರವಿಸಬೇಕು. ಆದರೆ ಆತ ಧೂರ್ತನಾಗಿದ್ದಾನೆ ಎಂದುಕೊಳ್ಳಿ. ವಂಚಕನಾಗಿದ್ದಾನೆ ಎಂದುಕೊಳ್ಳಿ. ಇಂದು ನಾವು ಇಂಥಾ ಧೂರ್ತರನ್ನು ಸಾಕಷ್ಟು ಸಂಖ್ಯೆಯಲ್ಲಿ ನೋಡುತ್ತಿದ್ದೇವೆ. ಸರಳ ಜೀವನದ ಉಪದೇಶ ನೀಡುತ್ತಾ ಐಷಾರಾಮಿ ಜೀವನ ನಡೆಸುವವರನ್ನು ನೋಡಿದ್ದೇವೆ. ಸ್ವಯಂ ನಿಗ್ರಹದ ಭಾಷಣ ಬಿಗಿಯುತ್ತಾ ಅತ್ಯಾಚಾರದಂಥ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡವರನ್ನು ನೋಡಿದ್ದೇವೆ. ಎಷ್ಟೆಂದರೆ, ಇಂಥಾ ಧೂರ್ತರಿಂದ ಆಧುನಿಕ ಕಾಲದ ಉಪದೇಶಕರನ್ನೆಲ್ಲ ಅನುಮಾನದಿಂದ ನೋಡುವಂತಾಗಿದೆ.

ಅದಿರಲಿ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ಮೊದಲೇ ಹೇಳಿದಂತೆ, ಅವರನ್ನು ಉಪೇಕ್ಷಿಸಬೇಕು. ಅವರಿಗೆ ಗೌರವ ನೀಡುವ ಅಗತ್ಯವಿಲ್ಲ. ತೋರಿಕೆಯ ಮೂಲಕ ಅವರು ಸಾಮಾಜಿಕ ಅಪಚಾರವನ್ನೂ ಮಾಡುತ್ತಿದ್ದಾರೆ; ಆದ್ದರಿಂದ ಅವರ ಕುರಿತು ಅನುಕಂಪ ತೋರುವ ಅಗತ್ಯವೂ ಇಲ್ಲ. ಪ್ರಶ್ನೆಯಲ್ಲಿ ಹೇಳಿರುವಂತೆ ಒಂದು ಬೆರಳನ್ನು ಮತ್ತೊಬ್ಬರತ್ತ ತೋರುತ್ತಾ ಉಪದೇಶ ನೀಡುವವರ ನಾಲ್ಕು ಬೆರಳುಗಳು ತಮ್ಮತ್ತಲೇ ಇರುತ್ತವೆ. ಅದು ಅವರಿಗೂ ಗೊತ್ತಿರುತ್ತದೆ. ಆದರೆ ಅವರು ಆ ನಾಲ್ಕು ಬೆರಳುಗಳಿಗೆ ನಾಚುವ ಅಂತಸ್ಸಾಕ್ಷಿಯನ್ನು ಕುರುಡಾಗಿಸಿಕೊಂಡು ಬಿಟ್ಟಿರುತ್ತಾರೆ. ಆದ್ದರಿಂದ ಅವರಿಗೆ ನಾಲ್ಕಲ್ಲ, ನಲವತ್ತು ಬೆರಳುಗಳು ತಮ್ಮತ್ತ ತೋರಿದರೂ ಅಂಥಾ ವ್ಯತ್ಯಾಸವೇನಾಗುವುದಿಲ್ಲ.
ನಾವು ಅಂಥವರ ಬಳಿ ವಾಗ್ವಾದಕ್ಕೆ ಇಳಿಯುವುದು ವ್ಯರ್ಥ.

ಅವರಿಗೆ ನಾವು ಯಾಕಾದರೂ ಏನಾದರೂ ಹೇಳಬೇಕು? ನಮ್ಮಿಂದ ಸಾಧ್ಯವಾದರೆ, ನಮ್ಮ ಪರಿಚಿತರಿಗೆ ಆ ವ್ಯಕ್ತಿಯ ನಿಜ ಯೋಗ್ಯತೆಯನ್ನು ತಿಳಿಸೋಣ. ಆ ವ್ಯಕ್ತಿಗೆ ಸಾಮಾಜಿಕ ಗೌರವ ನಿರಾಕರಿಸುವ ಮೂಲಕ ಜನಸಾಮಾನ್ಯರು ಅವರ ಬಲೆಗೆ ಬೀಳದಿರುವಂತೆ ಪ್ರಯತ್ನಿಸೋಣ. ಆದರೆ ಈ ಭರದಲ್ಲಿ ನಾವು ಉಪದೇಶಗಳನ್ನು ಅವಮಾನಿಸುವುದು ಬೇಡ. ಆ ವ್ಯಕ್ತಿ ನಿಮಗೆ “ಸುಳ್ಳು ಹೇಳಬೇಡ” ಎಂದು ಉಪದೇಶ ನೀಡಿದ್ದರೆ, “ಅದನ್ನು ಹೇಳುವ ಯೋಗ್ಯತೆ ಅವನಿಗಿಲ್ಲ; ಆದ್ದರಿಂದ ನಾನು ಸುಳ್ಳು ಹೇಳುವುದನ್ನು ಬಿಡುವುದಿಲ್ಲ” ಎನ್ನಲು ಬರುತ್ತದೆಯೇ?

ಇನ್ನೊಂದು ಉದಾಹರಣೆ, ಮಹೋಪನಿಷತ್ತಿನ “ವಸುಧೈವ ಕುಟುಂಬಕಮ್” ಹೇಳಿಕೆ. ಇದು ‘ಪಂಚತಂತ್ರ’ದಲ್ಲೂ ಇದೆ. ಪಂಚತಂತ್ರದಲ್ಲಿ ವಂಚಕ ನರಿ ಈ ಮಾತು ಹೇಳುವುದರಿಂದ ಆ ಶ್ಲೋಕ ತೂಕ ಕಳೆದುಕೊಳ್ಳುವುದೆ? ಆ ಮಾತು ಯಾರೇ ಹೇಳಿದ್ದರೂ ಉದಾರ ಚರಿತರು ಜಗತ್ತನ್ನು ಕುಟುಂಬ ಅಂದುಕೊಳ್ಳುವುದು ನಿಜವಲ್ಲವೆ?

ಆದ್ದರಿಂದ ವ್ಯಕ್ತಿ ತಪ್ಪಾಗಿದ್ದರೂ ಆತನ ಹೇಳಿಕೆ ಸರಿಯಿರುವುದರಿಂದ, ಅದನ್ನು ಗೌರವಿಸಿ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಆ ವ್ಯಕ್ತಿಗೆ ಗೌರವ ಕೊಡಲು ನಿರಾಕರಿಸಬೇಕು. ಆದರೆ ದುರದೃಷ್ಟ, ನಾವಿಂದು
ಠಕ್ಕ ಗುರುಗಳನ್ನು ಹೊತ್ತು ಮೆರೆಸುತ್ತೇವೆ, ಅವರು ತಮ್ಮ ಪಾಂಡಿತ್ಯದಿಂದ ಆಡುವ ಕೆಲವು ಹೊಳಹುಗಳನ್ನು ಗಮನಿಸುವ ಗೋಜಿಗೂ ಹೋಗುವುದಿಲ್ಲ. ನೆನಪಿರಲಿ, ಹೆಣ್ಣನ್ನು ಹೊತ್ತೊಯ್ದ ಅಹಂಕಾರಿ ರಾವಣನ ಶಿವತಾಂಡವ ಸ್ತೋತ್ರವನ್ನು ಗೌರವಿಸಿ ರಾವಣನಿಗೆ ಬಾಣ ಬಿಡುವ ಪರಂಪರೆ ನಮ್ಮದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.