ಪ್ರೀತಿಸುವ ಮನುಷ್ಯ ಅಪಾಯಕಾರಿ! : ಜಿಡ್ಡು ಕಂಡ ಹಾಗೆ

ಶಾಂತಿಯ ಕಾಲ ಎಂದು ಹೇಳುವ ಸಮಯದಲ್ಲೂ ನಾವು ಬೌದ್ಧಿಕ ಕೌಶಲ್ಯದಲ್ಲಿ ಹೆಚ್ಚು ಪರಿಣಿತರಾದಂತೆಲ್ಲ ಹೆಚ್ಚು ಕ್ರೂರಿಗಳು, ಹೆಚ್ಚು ನಿಷ್ಕರುಣಿಗಳು, ಹೆಚ್ಚು ನಿಷ್ಠುರರು ಆಗುತ್ತ ಹೋಗುತ್ತೇವೆ. । ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೀತಿಯ ಅನುಪಸ್ಥಿತಿಯಲ್ಲಿ ಮನುಷ್ಯ ಬದುಕುತ್ತಾನಾದರೂ ಹೇಗೆ? ನಾವು ಕೇವಲ ಇರಬಹುದು ಮತ್ತು ಪ್ರೀತಿ ಇಲ್ಲದ ನಮ್ಮ ಈ ಇರುವಿಕೆ ಒಂದು ನಿಯಂತ್ರಣ, ಒಂದು ಗೊಂದಲ, ಒಂದು ನೋವಿನ ಇರುವಿಕೆ ಮಾತ್ರ – ಮತ್ತು ಇಂಥ ಇರುವಿಕೆಯನ್ನೇ ನಾವು ಬಹುತೇಕ ಹುಟ್ಟು ಹಾಕುತ್ತಿರುವುದು. ನಮ್ಮ ಇರುವಿಕೆಯನ್ನ ವ್ಯವಸ್ಥೆಯ ಭಾಗವಾಗಿಸುತ್ತೇವೆ ಮತ್ತು ಸಂಘರ್ಷವನ್ನು ಇರುವಿಕೆಯ ಅನಿವಾರ್ಯತೆ ಎಂದು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ನಮ್ಮ ಇರುವಿಕೆ ಅಧಿಕಾರಕ್ಕಾಗಿರುವ ಕೊನೆಯಿಲ್ಲದ ಹಪಹಪಿಯಷ್ಟೇ. ಖಂಡಿತ, ನಾವು ಪ್ರೀತಿಸುವಾಗ ವ್ಯವಸ್ಥೆಗೆ ತನ್ನದೇ ಆದ ನಿಜದ ಜಾಗೆ ಇದ್ದೇ ಇರುತ್ತದೆ. ಆದರೆ ಪ್ರೀತಿಯ ಹೊರತಾಗಿ, ವ್ಯವಸ್ಥೆ ಒಂದು ಕರಾಳ ಕನಸು, ಕೇವಲ ಯಾಂತ್ರಿಕ, ಒಂದು ಶಿಸ್ತಿನ ಸೈನ್ಯ ಮಾತ್ರ.

ಆಧುನಿಕ ಸಮಾಜ ಹೆಚ್ಚು ಹೆಚ್ಚು ಶಿಸ್ತು ಮತ್ತು ಕೌಶಲ್ಯದ ಮೇಲೆ ಅವಲಂಬಿತವಾಗಿರುವಾಗ ನಮಗೆ ಸೈನ್ಯದ ಅವಶ್ಯಕತೆ ಇನ್ನೂ ಹೆಚ್ಚು ಮತ್ತು ಸೈನ್ಯ ಇದೆಯೆಂದಾದರೆ ಅದು ಸದಾ ಯುದ್ಧಕ್ಕಾಗಿ ಹಾತೊರೆಯುತ್ತಿರುತ್ತದೆ. ಯುದ್ಧವನ್ನು ಸೃಷ್ಟಿಮಾಡಲು ಕಾರಣಗಳನ್ನು ಹುಡುಕುತ್ತಿರುತ್ತದೆ. ಶಾಂತಿಯ ಕಾಲ ಎಂದು ಹೇಳುವ ಸಮಯದಲ್ಲೂ ನಾವು ಬೌದ್ಧಿಕ ಕೌಶಲ್ಯದಲ್ಲಿ ಹೆಚ್ಚು ಪರಿಣಿತರಾದಂತೆಲ್ಲ ಹೆಚ್ಚು ಕ್ರೂರಿಗಳು, ಹೆಚ್ಚು ನಿಷ್ಕರುಣಿಗಳು, ಹೆಚ್ಚು ನಿಷ್ಠುರರು ಆಗುತ್ತ ಹೋಗುತ್ತೇವೆ. ಆದ್ದರಿಂದಲೇ ಜಗತ್ತನಲ್ಲಿ ಗೊಂದಲವಿದೆ, ಯಾಕೆ ಅಧಿಕಾರಶಾಹಿ ಪ್ರಬಲ, ಯಾಕೆ ಹೆಚ್ಚು ಹೆಚ್ಚು ಸರ್ಕಾರಗಳು ಸರ್ವಾಧಿಕಾರತ್ವದ ಕಡೆಗೆ ಹೆಜ್ಜೆ ಹಾಕುತ್ತಿವೆ ಎನ್ನುವುದರ ಕುರಿತಾಗಿ. ಈ ಎಲ್ಲದಕ್ಕೂ ನಾವು ಅನಿವಾರ್ಯ ಎಂಬಂತೆ ಶರಣಾಗುತ್ತಿದ್ದೆವೆ ಏಕೆಂದರೆ ನಾವು ವಾಸಿಸುತ್ತಿರುವುದು ನಮ್ಮ ಮೆದುಳಿನಲ್ಲಿಯೇ ಹೊರತು ಹೃದಯದಲ್ಲಿ ಅಲ್ಲ ಮತ್ತು ಹಾಗಾಗಿ ಪ್ರೀತಿಗೆ ಇಲ್ಲಿ ಯಾವ ಜಾಗ ಇಲ್ಲ.

ಬದುಕಿನ ಅತ್ಯಂತ ಅಪಾಯಕಾರಿ ಮತ್ತು ಅನಿಶ್ಚಿತ ಅಂಶ ಎಂದರೆ ಅದು ಪ್ರೀತಿ ಮಾತ್ರ. ನಾವು ಈ ಅಪಾಯಕ್ಕೆ, ಈ ಅನಿಶ್ಚಿತತೆಗೆ ಹೆದರುತ್ತೆವೆಯಾದ್ದರಿಂದ ಪ್ರೀತಿಯ ಸಹವಾಸಕ್ಕೆ ಬೀಳದೆ ಬುದ್ಧಿಯ ಬೆನ್ನು ಹತ್ತಿದ್ದೇವೆ. ಪ್ರೀತಿಸುವ ಮನುಷ್ಯ ಅಪಾಯಕಾರಿ ಮತ್ತು ಅಪಾಯಕ್ಕೆ ತೆರೆದುಕೊಳ್ಳಲು ನಾವು ಬಯಸುವದಿಲ್ಲವಾದ್ದರಿಂದ, ಎಫೀಷಿಂಯಂಟಾಗಿ ಮತ್ತು ವ್ಯನಸ್ಥೆಯ ಚೌಕಟ್ಟಿನಲ್ಲಿ ನಾವು ಬದುಕಲು ಬಯಸುತ್ತೇವೆ, ಏಕೆಂದರೆ ನಮ್ಮ ಪ್ರಕಾರ ವ್ಯವಸ್ಥೆ ಈ ಜಗತ್ತಿನಲ್ಲಿ ಒಂದು ಕ್ರಮವನ್ನ, ಶಾಂತಿ ಸುವ್ಯವಸ್ಥೆಯನ್ನ ಖಾತ್ರಿ ಮಾಡುತ್ತದೆ. ಹಾಗೆ ನೋಡಿದರೆ ವ್ಯವಸ್ಥೆ ಯಾವತ್ತೂ ಒಂದು ಕ್ರಮವನ್ನ, ಶಾಂತಿಯನ್ನ ಜಗತ್ತಿನಲ್ಲಿ ಜಾರಿ ಮಾಡಿಲ್ಲ.

ಕೊನೆಗೆ ಮತ್ತು ಈ ಕ್ಷಣ ಕೂಡ, ಕೇವಲ ಪ್ರೀತಿ, ಕೇವಲ ಸದ್ಭಾವ, ಕೇವಲ ಅಂತಃಕರಣ ಮಾತ್ರ ಈ ಜಗತ್ತಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನ ನಿಶ್ಚಿತ ಮಾಡಬಲ್ಲವು.

Leave a Reply