ಆತ್ಮದ ಅರಿವಿಲ್ಲದೆ ಹೋದರೆ ನಾವು ಕೇವಲ ಯಂತ್ರಗಳಷ್ಟೆ : ಸ್ವಾಮಿ ರಾಮತೀರ್ಥ

ನಮ್ಮ ನಿಜವಾದ ರೂಪ ಯಾವುದು, ನಮ್ಮೊಳಗಿನ ನಿಜವಾದ ನಮ್ಮ ಅಸ್ತಿತ್ವವನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಎಂದು ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ…. ~ ಸಂಗ್ರಹಾನುವಾದ : ಪ್ರಣವ ಚೈತನ್ಯ 

ಪ್ರತಿ ಮನುಷ್ಯನಿಗು ತನ್ನದೆ ಆದ ಒಂದು ವ್ಯಕ್ತಿತ್ವವಿರುತ್ತದೆ, ತನ್ನದೆ ಒಂದು ಗುರುತು ಇರುತ್ತದೆ. ಆದರೆ ಆ ವ್ಯಕ್ತಿತ್ವವಾಗಲಿ ಗುರುತಾಗಲಿ ನಮ್ಮ ನಿಜವಾದ ರೂಪವಲ್ಲ, ಅದು ನಮ್ಮ ಅಸ್ತಿತ್ವವಲ್ಲ. ಅದು ಈ ಸಮಾಜದೊಂದಿಗೆ ಬೆರೆತು ಈ ಸಮಾಜಕ್ಕೆ ಹೊಂದಿಕೊಂಡು, ಈ ಸಮಾಜದ ನಿಯಮಗಳಿಗೆ ಬಗ್ಗಿ, ಸಮಾಜಕ್ಕಾಗಿಯೇ ಬದುಕಲು ರೂಢಿಸಿಕೊಂಡ ಒಂದು ಶೈಲಿಯಷ್ಟೆ.  ಹಾಗಾದರೆ ನಮ್ಮ ನಿಜವಾದ ವ್ಯಕ್ತಿತ್ವ (ಅಥವಾ ಅಸ್ತಿತ್ವ) ಯಾವುದು? ನಮ್ಮ ನಿಜವಾದ ವ್ಯಕ್ತಿತ್ವ ನಮ್ಮ ಆತ್ಮ. ನಮ್ಮ ಆತ್ಮದಿಂದಲೆ ನಮ್ಮ ನಿಜವಾದ ಗುಣಗಳು ಹೊಮ್ಮುವವು. ನಮ್ಮ ನಿಜವಾದ ಶಕ್ತಿಯೆಂದರೆ, ಅದು ನಮ್ಮ ಆತ್ಮವೇ. 

ಎಲ್ಲರಿಗೂ ತಿಳಿದಿರುವಂತೆ  ಆತ್ಮದಲ್ಲಿ ಆ ಪರಮಾತ್ಮನೇ ನೆಲೆಸಿರುತ್ತಾನೆ. ಹೇಗೆ ಕುದುರೆ ಎಷ್ಟೆ ಬಲಿಷ್ಟವಾಗಿದ್ದರೂ ಅದನ್ನು ಪಳಗಿಸಿ ಓಡಿಸುವವನ ಮೇಲೆ ಆ ಕುದುರೆಯ ಓಟ ನಿಂತಿರುತ್ತದೆಯೋ, ಹಾಗೆ ನಮ್ಮ ದೇಹವು ಎಷ್ಟೆ ಬಲಿಷ್ಟ ಹಾಗು ಸುಂದರವಾಗಿದ್ದರು ಒಳಗೆ ಆತ್ಮವಿರದಿದ್ದರೆ ನಾವು ಹೆಣಗಳು. ಕುದುರೆಯ ಓಟದಲ್ಲಿ ಅದರ ಸವಾರನನ್ನು ಎಷ್ಟು ಜನರು ಗಮನಿಸುತ್ತಾರೆ? ಬಹಳ ಕಡಿಮೆ, ಅಲ್ಲವೆ? ಎಲ್ಲರಿಗೂ ಕುದುರೆಯ ಬಗ್ಗೆ ತಿಳಿದುಕೊಂಡರೆ ಸಾಕು, ಈ ಕುದುರೆ ಬಲಿಷ್ಟವಿದೆ ಎಂದರೆ ಇದೇ ಗೆಲ್ಲುತ್ತದೆ ಎಂಬ ಯೋಚನೆ ಮುಖ್ಯವಾಗುತ್ತದೆ. ಆದರೆ ಬುದ್ಧಿವಂತರಿಗೆ ಮಾತ್ರ ಆ ಕುದುರೆಯನ್ನು ಓಡಿಸುವವರ ಪ್ರಾಮುಖ್ಯತೆ ತಿಳಿದಿರುತ್ತದೆ.

ಹಾಗೆಯೇ ನಾವು ಕೂಡ ನಮ್ಮ ಆತ್ಮದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು. ಆತ್ಮವಿಲ್ಲದಿದ್ದರೆ ನಾವು ಏನೂ ಅಲ್ಲ, ನಾವು ಕೇವಲ ಒಂದು ಹೆಣವಷ್ಟೆ ಎಂದು ಅರಿಯಬೇಕು. ಆದರೆ ಇದನ್ನು ತಿಳಿದುಕೊಳ್ಳುವುದು ಹೇಗೆ? ನಮ್ಮ ಆತ್ಮವನ್ನು ಅರಿಯಬೇಕು ಎಂದರೆ ನಾವು ಮೊದಲು ನಮ್ಮ ಆತ್ಮವನ್ನು ಜಾಗೃತಗೊಳಿಸಬೇಕು. ನಮ್ಮ ಆತ್ಮವು ನಾವು ಬದುಕುತ್ತಿರುವ  ಸಮಾಜದ ಶೈಲಿಯಿಂದ ಮೌನವಾಗಿಹೋಗಿರುತ್ತದೆ. ಏಕೆಂದರೆ ನಮ್ಮ ಆತ್ಮದ ಕೋರಿಕೆಗಳು ಒಮ್ಮೊಮ್ಮೆ ಸಮಾಜದ ನಿರೀಕ್ಷೆಗಿಂತ ಬೇರೆ ಇರುತ್ತದೆ. ಹೀಗೆ ಆತ್ಮದ ದನಿಯನ್ನು ಮೌನವಾಗಿಸಿ ಬದುಕಿದರೆ ನಾವು ಕಳೆದುಕೊಳ್ಳುವುದು ನಮ್ಮನ್ನೇ… ಏಕೆಂದರೆ ಆತ್ಮವೇ ನಮ್ಮ ನಿಜವಾದ ರೂಪ, ನಿಜವಾದ ವ್ಯಕ್ತಿತ್ವ, ನಮ್ಮ ನಿಜವಾದ ರೂಪದ ಕೋರಿಕೆಗಳನ್ನು ನಾವು ಪೂರೈಸದೆ ಇದ್ದರೆ ನಾವು ಬರುಕಿರುವುದು ವ್ಯರ್ಥ. ಏಕೆಂದರೆ ಆತ್ಮವೇ ನಮ್ಮ ಜೀವದ ಮೂಲ. ಹೀಗಾಗಿ ನಾವು ಮೊದಲು ಆತ್ಮ ಜಾಗರಣೆಯನ್ನು ಮಾಡಿಕೊಳ್ಳಬೇಕು. ಆತ್ಮ ಜಾಗರಣೆಯಾಗಬೇಕೆಂದರೆ ಅದು ನಿತ್ಯ ಧ್ಯಾನದಿಂದ ಮಾತ್ರ ಸಾದ್ಯ. ಏಕೆಂದರೆ ಧ್ಯಾನ ಮಾಡುವುದರಿಂದ ನಮ್ಮೊಳಗೆ ಏನಾಗುತ್ತಿದೆ ಎಂದು ನಮಗೆ ತಿಳಿದುಬರುತ್ತದೆ. ನಮ್ಮ ಆತ್ಮದ ಮೇಲೆ ನಮ್ಮ ಗಮನವನ್ನು ಏಕಾಗ್ರತೆಯಿಂದ ನಿಲ್ಲಿಸಿದಾಗ ನಮ್ಮ ಆತ್ಮ ಜಾಗೃತವಾಗುತ್ತದೆ.

ಒಮ್ಮೆ ಆತ್ಮ ಜಾಗೃತವಾದರೆ ಸಾಕು; ಅದಾದ ಮೇಲೆ ನಾವು ನಮ್ಮ ನಿಜವಾದ ರೂಪಕ್ಕೆ ಬರುತ್ತೇವೆ. ನಮ್ಮಲ್ಲಿ ಅತ್ಯಂತ  ಹೆಚ್ಚು ಶಕ್ತಿ ಬರುತ್ತದೆ, ನಾವು ಅತ್ಯಂತ ಸಂತೋಷವಾಗಿ ಇರಲು ಸಾಧ್ಯವಾಗುತ್ತದೆ. ಏಕೆಂದರೆ ನಾವು ನಮ್ಮ ಆತ್ಮ ಜಾಗೃತವಾದ ಮೇಲೆ ಏನೇನು ಮಾಡಿದರೂ ಅದನ್ನು ಆತ್ಮದ ಇಚ್ಚೆಯಿಂದ ಮಾಡುತ್ತೇವೆ, ನಮ್ಮ ಜೀವದ ಇಚ್ಚೆಯಿಂದ ಮಾಡುತ್ತೇವೆ.

ಆತ್ಮವೆಂದರೆ ಯಾವುದೋ ಒಂದು ಪರ ವಸ್ತು ಎಂದು ತಿಳಿಯಬೇಡಿ. ಆತ್ಮದ ಅರಿವಿಲ್ಲದೆ ಹೋದರೆ ನಾವೆಲ್ಲ ಬರೀ ಯಂತ್ರಗಳಷ್ಟೇ. ಹೀಗಾಗಿ ನಮ್ಮ ನಿಜವಾದ ರೂಪವನ್ನು, ನಮ್ಮ ಆತ್ಮವನ್ನು ನಾವು ಎಂದು ತಿಳಿದುಕೊಳ್ಳುತ್ತೇವೋ ಆಗ ಮಾತ್ರ ನಾವು ಮನುಷ್ಯರಾಗುತ್ತೇವೆ. ಇಲ್ಲವೆಂದರೆ ಸುತ್ತಲಿನ ಸಮಾಜವನ್ನು ಮೆಚ್ಚಿಸುವ, ಅದಕ್ಕಾಗಿ ದುಡಿಯುವ ಕೇವಲ ಯಂತ್ರಗಳಾಗಿದ್ದುಬಿಡುತ್ತೇವೆ – ಎಂದು ಸ್ವಾಮಿ ರಾಮತೀರ್ಥರು ಹೇಳುತ್ತಾರೆ. 

(ಆಕರ : In the woods of God realisation by Sw.Ramatirtha)

Leave a Reply