ಸಂಬಂಧ’ ಹಲವು ಗೋಜಲುಗಳ ನಡುವೆ ನರಳುತ್ತಿರುವಾಗ ಸಂಬಂಧದ ಸುತ್ತ ನಾವು ಕಟ್ಟಿಕೊಂಡಿರುವ ಬಹಳಷ್ಟು ನಿರೀಕ್ಷೆಗಳು ನಮಗೆ ಸದಾ ಸವಾಲಾಗುತ್ತಿರುತ್ತವೆ ಅನ್ನುತ್ತಾರೆ ಯೂಜಿ ಕೃಷ್ಣಮೂರ್ತಿ… ಸಂಗ್ರಹ ಮತ್ತು ಅನುವಾದ | ಚಿದಂಬರ ನರೇಂದ್ರ
ಪ್ರಶ್ನೆ : ಮನುಷ್ಯ ಸಂಬಂಧಗಳು ಒಂದು ತರಹದ ವ್ಯಾಪಾರದ ವಸ್ತುಗಳಾಗಿವೆ, “ನೀವು ನನಗೇನೋ ಕೊಟ್ಟರೆ, ನಾನು ನಿಮಗೇನೋ ಕೊಡುತ್ತೇನೆ” ರೀತಿಯದು. ಈ ಬಗ್ಗೆ ಸ್ವಲ್ಪ ಹೇಳಬಹುದೆ ?
ಯೂಜಿ : ಹೌದು, ಇದು ನಿಜ. ಆದರೆ ಮನುಷ್ಯ ಸಂಬಂಧಗಳು ಅದ್ಭುತ, ಅಲೌಕಿಕ ಎನ್ನುವ ಮಿಥ್ಯೆ ಯನ್ನ ನಾವು ಬಲವಾಗಿ ನಂಬಿಕೊಂಡಿರುವುದರಿಂದ, ಮನುಷ್ಯ ಸಂಬಂಧ ಕೇವಲ ವ್ಯಾಪಾರ ಎನ್ನಲು ಹಿಂದೇಟು ಹಾಕುತ್ತೇವೆ. “ಈ ಸಂಬಂಧದಿಂದ ನನಗೇನು ಲಾಭ” ಎನ್ನುವ ಪಾಯದ ಮೇಲೆ ಈ ಸಂಬಂಧಗಳು ನಿರ್ಮಿತವಾಗಿವೆ ಎನ್ನುವ ನಿಜವನ್ನು ಒಪ್ಪಿಕೊಳ್ಳುವಷ್ಟು, ಪ್ರಾಮಾಣಿಕರು, ಸಭ್ಯರು ಮತ್ತು ದೊಡ್ಡ ಮನಸ್ಸಿನವರು ನಾವಲ್ಲ. ಪರಸ್ಪರರನ್ನು ತೃಪ್ತಿಗೊಳಿಸುವುದನ್ನ ಬಿಟ್ಟು ಸಂಬಂಧ, ಬೇರೇನೂ ಅಲ್ಲ. ಕೆಲವು ಸಾಮಾಜಿಕ ಕಾರಣಗಳಿಗಾಗಿ, ಮಕ್ಕಳಿಗಾಗಿ, ಸುರಕ್ಷತೆಗಾಗಿ, ಆಸ್ತಿಗಾಗಿ, ನಾವು ಸಂಬಂಧದ ಮುಖವಾಡಗಳ ಹಿಂದೆ ಬದುಕುತ್ತೇವೆ. ಇದೆಲ್ಲ ವ್ಯಾಪಾರದ ಭಾಗವೇ. ಆದರೆ ಈ ಸಂಬಂಧಗಳು ಮುರಿದು ಬಿದ್ದಾಗ ಅಥವಾ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡದೇ ಹೋದಾಗ ನಾವು ‘ಪ್ರೀತಿ-ಪ್ರೇಮ’ ಎಂದು ಯಾವುದನ್ನು ಗುರುತಿಸುತ್ತೇವೋ ಅದರ ದುರ್ಬಲತೆಯನ್ನ, ಸಂಬಂಧಗಳ ಅಪಯಶಸ್ಸಿನ ಮೇಲೆ ಆಪಾದಿಸಿ ನಮ್ಮ ಅಪ್ರಾಣಿಕತೆ ಮೆರೆಯುತ್ತೇವೆ.
ಸಂಸ್ಕೃತಿ ತನ್ನದೇ ಆದ ಕಾರಣಗಳಿಗಾಗಿ, ಸಂಪ್ರದಾಯ, ಧರ್ಮ, ಸಾಮಾಜಿಕ ನೀತಿ ನಿಯಮ ಮುಂತಾದವುಗಳ ಮೂಲಕ ‘ಸಂಬಂಧ’ ಎನ್ನುವ ಪದ್ಧತಿಯನ್ನ ನಿರ್ಮಿಸಿಕೊಂಡಿದೆ. ಈ ಎಲ್ಲವುಗಳು ಕೇವಲ ಪ್ರೇಮದ ಆಧಾರದ ಮೇಲೆ ಸಂಬಂಧ ಸೃಷ್ಟಿಯಾಗಬೇಕೆಂದು ಬಯಸುತ್ತವೆಯಾದರೂ, ಆಳ್ವಿಕೆ (possessiveness)ಮತ್ತು ಭದ್ರತೆ (security) ಲೌಕಿಕ ಸಂಬಂಧದ ಅಘೋಷಿತ ಮೂಲ ದ್ರವ್ಯಗಳು ಎನ್ನುವುದನ್ನ ಮರೆಯುತ್ತವೆ. ನೀವು ಇನ್ನೊಬ್ಬರನ್ನು ನನ್ನ ಸ್ವತ್ತು ಎಂದು ಸಾಧಿಸಬಯಸುತ್ತೀರಿ ಆದರೆ ಹೀಗೆ ಸಾಧ್ಯವಾಗದೇ ಹೋದಾಗ, ಸಂಬಂಧ ಮುರಿದುಬಿದ್ದಾಗ ಪ್ರೇಮ ಸಾಕಾಗಲಿಲ್ಲ ಎಂದು ಪರಿತಪಿಸುತ್ತೀರಿ, ಇದು ಅಪ್ರಮಾಣಿಕತೆ ಅಷ್ಟೇ ಅಲ್ಲ ಮೂರ್ಖತನ ಕೂಡ.
ಗಂಡು-ಹೆಣ್ಣಿನ ನಡುವಿನ (ಅಥವಾ ಸಮ ಲಿಂಗಿಗಳ ನಡುವೆ) ಸಂಬಂಧದ ಹುಟ್ಟು, ಅವರು ಇನ್ನೊಬ್ಬರಲ್ಲಿ ಯಾವ ರೀತಿಯ ತಮ್ಮ ಪ್ರತಿರೂಪವನ್ನು ಕಾಣಲು ಬಯಸುತ್ತಾರೆ ಎನ್ನುವುದರ ನೆಲೆಯಲ್ಲಿ. ಆದ್ದರಿಂದ ಈ ಇಬ್ಬರ ನಡುವಿನ ಸಂಬಂಧ ಹಾಗೆ ನೋಡಿದರೆ, ಈ ಇಬ್ಬರು ಪರಸ್ಪರರಲ್ಲಿ ಕಟ್ಟಿಕೊಂಡಿರುವ ಎರಡು ಪ್ರತಿರೂಪಗಳ ನಡುವಿನ ಸಂಬಂಧ. ಆದರೆ ಈ ಪ್ರತಿರೂಪಗಳು ಸ್ಥಿರವಾಗಿರುವುದು ಸಾಧ್ಯವಿಲ್ಲ, ಅವು ಬದಲಾಗುತ್ತಲೆ ಇರುತ್ತವೆ. ಈ ಬದಲಾದ ಪ್ರತಿರೂಪಗಳನ್ನು ಗುರುತಿಸಲು ಸಾಧ್ಯವಾಗದಾಗ ಸಂಬಂಧಗಳು ಮುರಿದು ಬೀಳುತ್ತವೆ.
ನನಗೆ, ಈ ಇಬ್ಬರು ಸೇರಿ ಕಟ್ಟಿಕೊಳ್ಳುವ ಸಂಬಂಧದ ಮೇಲೆ ನಂಬಿಕೆ ಇಲ್ಲ. ಎರಡು ( ಇಬ್ಬರು) ಎಂದಾಗಲೆಲ್ಲ ಅಲ್ಲೊಂದು ಭಾಗವಾಗುವಿಕೆಯ ಸಾಧ್ಯತೆಯಿದೆ. ಈ ‘ಎರಡು’ ನಮ್ಮೊಳಗೆ ಇರಬಹುದು ಅಥವಾ ನಮ್ಮಿಬ್ಬರಲ್ಲಿ ಇರಬಹುದು, ಎರಡು ಇರುವಾಗಲೆಲ್ಲ ಅಲ್ಲೊಂದು ಬಿಕ್ಕಟ್ಟು ಇದೆ.
ಇಂಥ ಸಂಬಂಧದ ಯಶಸ್ಸು ಸಾಧ್ಯವೇ ಇಲ್ಲ.
ನೀವು ನನ್ನ ಉದ್ಧಟ ಅಥವಾ ಕಚ್ಚಾ ಅನ್ನಬಹುದು ಆದರೆ ನೀವು ಯಾವುದನ್ನ LOVE ಎನ್ನುತ್ತಿರೋ ಅದು ನನಗೆ ಕೇವಲ ‘Four letter word’. ಎರಡು ಜೀವಗಳ ನಡುವೆ ಸಾಧ್ಯವಾಗಬಹುದಾದ ಮೂಲ ಸಂಬಂಧ, ಅದು ಮಾತ್ರ. ಆದರೆ ನಮ್ಮ ಧರ್ಮ, ಸಂಪ್ರದಾಯಗಳ ಚೌಕಟ್ಟಿನಲ್ಲಿ ಇಂಥ ಸಂಬಂಧಕ್ಕೆ ಅಪವಿತ್ರತೆಯ ಆರೋಪವಿದೆ.
ಆದರೆ ಲೈಂಗಿಕತೆಗೆ ಪಾಪದ ಹಣೆಪಟ್ಟಿ ಹಚ್ಚಿ ಬೇಲಿ ಹಾಕಿ ಕಟ್ಟಿಹಾಕಿ ಬಿಟ್ಚಿದ್ದೇವೆ. ಲೈಂಗಿಕತೆ ಕೇವಲ ಜೀವಿಯ ಸರಳ ಬಯೊಲಾಜಿಕಲ್ ಅವಶ್ಯಕತೆ ಮಾತ್ರ. ಈ ದೇಹಕ್ಕೆ ಆಸಕ್ತಿ ಇರುವುದು ಎರಡರಲ್ಲಿ ಮಾತ್ರ, ಒಂದು ಜೀವಂತವಾಗಿರುವುದು (survival) ಮತ್ತು ಎರಡನೇಯದು ತನ್ನಂಥ ಇನ್ನೊಂದು ಜೀವಿಯನ್ನ ಸೃಷ್ಟಿ (reproduction) ಮಾಡುವುದು. ಆದರೆ ನಾವು ಲೈಂಗಿಕತೆಯನ್ನುವ ಸರಳ ಬಯಲಾಜಿಕಲ್ ಅವಶ್ಯಕತೆಗೆ ಸುಖದ ಹಣೆಪಟ್ಟಿ ಕಟ್ಟಿ ಒಂದು ದೊಡ್ಡ ಸಮಸ್ಯೆಯನ್ನ ನಿರ್ಮಿಸಿಕೊಂಡಿದ್ದೆವೆ. ದೇಹಕ್ಕೆ ಸುಖದ ಬಯಕೆ ಇಲ್ಲ. ಆದ್ದರಿಂದ ಒಂದು ಸರಳ ಅವಶ್ಯಕತೆ ಈಗ ಸಮಸ್ಯೆ ಆಗಿದೆ.
ಎರಡನೇ ತೊಂದರೆ ಎಂದರೆ, ನಾವು ಲೈಂಗಿಕತೆಯನ್ನ ವಿಪರೀತವಾಗಿ ವೈಭವೀಕರಿಸುವುದು. ಈಗ ನಮಗೆ ಸೆಕ್ಸ್ ಮಾತ್ರ ಮುಖ್ಯವಲ್ಲ ಅದರ ಸುತ್ತ ಹೆಣೆಯಲಾಗಿರುವ ರೋಮಾನ್ಸ್ ಕೂಡ ಮುಖ್ಯ. ನೀವು ಒಂದು ಹೆಣ್ಣನ್ನ, (ಅಥವಾ ಗಂಡನ್ನ) ಆಕೆ ಸುಂದರ ಎಂದು ಗುರುತಿಸಿದಾಗಲೇ ಒಂದು ಸಮಸ್ಯೆಯ ಭಾಗವಾಗಿದ್ದೀರಿ. ಆಕೆಯನ್ನ ಅಪ್ಪುವುದು, ಮುದ್ದಿಸುವುದು ಹೀಗೆ ಮುಂತಾದವು ಸೆಕ್ಸ್ ನ ಸುತ್ತ ಬೇರೆ ಬೇರೆ ಮಜಲುಗಳನ್ನ ಕಟ್ಟುತ್ತ ಒಂದು ಸರಳ ಕ್ರಿಯೆಯನ್ನ ಸಂಕೀರ್ಣವಾಗಿಸುತ್ತ ಹೋಗುತ್ತವೆ, ಇವಕ್ಕೆಲ್ಲ ಸುಖದ ಹೆಸರಿಟ್ಚು ನಾವು ಮತ್ತಷ್ಟು ಕಂದಕಗಳನ್ನ ನಿರ್ಮಾಣ ಮಾಡುತ್ತ ಹೋಗುತ್ತೆವೆ. ಇದೆಲ್ಲ ಬುದ್ಧಿ-ಮನಸ್ಸು ಗಳ ಆಟ. ಹೆಣ್ಣನ್ನು ಸುಂದರ ಎಂದಾಗ ಸಂಸ್ಕೃತಿಯೂ ಪ್ರವೇಶ ಮಾಡಿ ಲೈಂಗಿಕತೆಯನ್ನ ಸಮಸ್ಯೆ ಮಾಡಿ ಬಿಡುತ್ತದೆ.
ಹೀಗೆ ‘ಸಂಬಂಧ’ ಹಲವು ಗೋಜಲುಗಳ ನಡುವೆ ನರಳುತ್ತಿರುವಾಗ ಸಂಬಂಧದ ಸುತ್ತ ನಾವು ಕಟ್ಟಿಕೊಂಡಿರುವ ಬಹಳಷ್ಟು ನಿರೀಕ್ಷೆಗಳು ನಮಗೆ ಸದಾ ಸವಾಲಾಗುತ್ತಿರುತ್ತವೆ.