ಸರ್ವಸಂಗ ತೊರೆದು ಬಂದ ಝೆನ್ ಸನ್ಯಾಸಿ ಕನ್ನಡಿಯಂಥ ಅಲಂಕಾರಿಕ ವಸ್ತು ಇಟ್ಟುಕೊಂಡಿದ್ಯಾಕೆ? ಓದಿ ಈ ಝೆನ್ ಕಥೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಒಬ್ಬ ಝೆನ್ ಸಾಧಕನಿದ್ಧ, ಅವನು ಬಹಳ ನಿಷ್ಠುರ ಸತ್ಯಗಳನ್ನು ಹೇಳುವವನೂ, ಖಚಿತ ಮತಿಯೂ ಆಗಿದ್ದ. ಮತ್ತು ಈ ಕಾರಣಗಳಿಂದಾಗಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದ. ಅವನ ಈ ಜನಪ್ರಿಯತೆ ಕೆಲವರಿಗೆ ಮಗ್ಗಲ ಮುಳ್ಳಾಗಿತ್ತು. ಆ ಪ್ರದೇಶದ ಪುರೋಹಿತಶಾಹಿ ಅವನನ್ನು ದ್ವೇಷಿಸುತ್ತಿತ್ತು.
ಅದು ಹೇಗೋ ಝೆನ್ ಸಾಧಕ ತನ್ನ ಜೋಳಿಗೆಯಲ್ಲಿ ಸದಾ ಒಂದು ಕನ್ನಡಿಯನ್ನಿಟ್ಟುಕೊಳ್ಳುವುದು ಒಬ್ಬ ಪುರೋಹಿತನಿಗೆ ಗೊತ್ತಾಗಿಹೋಯಿತು. ತನ್ನ ರೂಪ ಸೌಂದರ್ಯಗಳನ್ನು ಪ್ರೇಮಿಸುವುದು ಮತ್ತು ಇವುಗಳ ಸಲುವಾಗಿ ಸಮಯ ವ್ಯರ್ಥ ಮಾಡುವುದನ್ನ ಝೆನ್ ಒಪ್ಪುವುದಿಲ್ಲ, ಝೆನ್ ನಲ್ಲಿ ಅಂತರಂಗದ ಚೆಲುವಿಗೆ ಮಾತ್ರ ಪ್ರಾಧಾನ್ಯ ಮತ್ತು ಸಾಧಕ ವರ್ಷಗಟ್ಟಲೇ ತನ್ನ ಸಹಜ ಸೌಂದರ್ಯವನ್ನು ಕಂಡುಕೊಳ್ಳಲು ಸಾಧನೆ ಮಾಡುತ್ತಾನೆ. ಇಂಥದರಲ್ಲಿ ಈ ಝೆನ್ ಸಾಧಕ ಕನ್ನಡಿಯಂಥ ಅಲಂಕಾರದ ವಸ್ತುವನ್ನು ಸದಾ ಬಳಸುವುದನ್ನ ಜನರಿಗೆ ಎತ್ತಿ ತೋರಿಸಿ ಸಾಧಕನಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ಆ ಪುರೋಹಿತ, ಝೆನ್ ಸಾಧಕ ಉಪನ್ಯಾಸ ಮಾಡುತ್ತಿದ್ದ ಜಾಗಕ್ಕೆ ಬಂದು ಅವನಿಗೆ ಸವಾಲು ಹಾಕಿದ.
“ ಕನ್ನಡಿಯಂಥ ಅಲಂಕಾರಿಕ ಸಾಮಗ್ರಿಯನ್ನ ನೀನು ಸದಾ ನಿನ್ನ ಜೊತೆಯಲ್ಲಿಟ್ಟುಕೊಳ್ಳುವುದು ಝೆನ್ ಗೆ ಮತ್ತು ನೀನು ಉಪದೇಶ ಹೇಳುತ್ತಿರುವ ಮಾತುಗಳಿಗೆ ವಿರುದ್ಧ ಅಲ್ಲವೆ? ಈ ಸಂಗತಿಯಿಂದ ನೀನು ಎಂಥ ಸುಳ್ಳು ಮನುಷ್ಯ ಎನ್ನುವುದು ಗೊತ್ತಾಗುತ್ತದೆ. “
ಝೆನ್ ಸಾಧಕ ತನ್ನ ಜೋಳಿಗೆಯಿಂದ ಕನ್ನಡಿಯನ್ನು ಹೊರತೆಗೆದು ಪುರೋಹಿತನ ಎದುರು ಹಿಡಿದು ಹೇಳಿದ.
“ ಈ ಕನ್ನಡಿ ನನ್ನ ಅಲಂಕಾರದ ಸಲುವಾಗಿ ಅಲ್ಲ. ನಾನು ಈ ಕನ್ನಡಿಯನ್ನ ನನಗೆ ತುಂಬ ಗಂಭೀರ ಸಮಸ್ಯೆ ಎದುರಾದಾಗ ಬಳಸುತ್ತೇನೆ. ಸಮಸ್ಯೆ ಎದುರಾದಾಗ ನಾನು ಈ ಕನ್ನಡಿಯಲ್ಲಿ ದಿಟ್ಟಿಸುತ್ತೇನೆ, ಆಗ ನನಗೆ ಕನ್ನಡಿಯಲ್ಲಿ ನನ್ನ ಸಮಸ್ಯೆಯ ಮೂಲ ಕಾರಣ ಮತ್ತು ನನ್ನ ಸಮಸ್ಯೆಯ ಪರಿಹಾರ ಎರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗಾಗಿ ಇದೊಂದು ಜಾದು ಕನ್ನಡಿ. “
ಝೆನ್ ಸಾಧಕನ ಮಾತು ಕೇಳಿ ಪುರೋಹಿತ ನಾಚಿಕೊಂಡು ಸಭೆ ಬಿಟ್ಟು ಹೊರಟು ಹೋದ.