ಹೆಣ್ಣಿನಲ್ಲಿ ಉಳಿದುಹೋದ ಒಂದೇ ಒಂದು ಕೊರತೆ… : ‘ಕಡಸಾಲೆ’ ಅಂಕಣ

ಕಿನ್ನರಿಯ ಬಳಿ ಒಂದು ಪ್ರಶ್ನೆ ಉಳಿದಿರುತ್ತೆ. “ದೇವಿ, ಅದ್ವಿತೀಯ ಸೃಷ್ಟಿ ಅಂತ ಅನ್ನಿಸ್ಕೊಂಡಿರೋ ಈ ಮಾದರಿಯೊಂದಕ್ಕೆ ನೀನು ಹೆಚ್ಚಿನ ಗಮನ ಕೊಟ್ಟಿದ್ದೀಯ. ಇದರಿಂದ ಉಳಿದೆಲ್ಲಕ್ಕೆ ಅನ್ಯಾಯ ಮಾಡಿದ ಹಾಗೆ ಆಗೋದಿಲ್ವಾ?” ದೇವಿ ಕಿನ್ನರಿಯತ್ತ ಮುಗುಳ್ನಗು ಬೀರಿ ಹೇಳ್ತಾಳೆ, “ಖಂಡಿತಾ ಇಲ್ಲ! ನನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಇವಳಲ್ಲಿ ಒಂದೇ ಒಂದು ತಪ್ಪು ಉಳಿದುಹೋಗಿದೆ…. । ಸುರೇಶ್ ಪದ್ಮನಾಭನ್ & ಶಾನ್ ಚವಾನ್ ; ಆನಂದಕ್ಕೊಂದು ಮಿಸ್ಡ್ ಕಾಲ್ ಪುಸ್ತಕದಿಂದ…

ಸೃಷ್ಟಿದೇವತೆ ಶುಕ್ರವಾರ ಬಹಳಹೊತ್ತಿನ ತನಕ ಕೆಲಸ ಮಾಡ್ತಾ ಇರ್ತಾಳೆ.
ಅಲ್ಲಿಗೆ ಬಂದ ಕಿನ್ನರಿ ಕೇಳ್ತಾಳೆ, “ಓಹ್! ನೀನು ಬಹಳ ದಿನದಿಂದ ಇದೇ ಮಾದರಿಗೆ ರೂಪ ಕೊಡ್ತಾ ಇದ್ದೀಯ. ಇದಕ್ಯಾಕೆ ಇಂಥ ವಿಶೇಷ ಕಾಳಜಿ? ಕಳೆದ ಮಾದರಿಯನ್ನ ಎಷ್ಟು ಬೇಗ ಮಾಡಿ ಮುಗಿಸಿಬಿಟ್ಟಿದ್ದೆ ನೀನು!”
ದೇವತೆ ಹೇಳ್ತಾಳೆ, “ಇದು ನನ್ನ ಅತ್ಯುನ್ನತ ಕೃತಿ. ಅದಕ್ಕೇ ಇಷು ಸಮಯ ಹಿಡೀತಿದೆ.”
“ಈ ಮಾದರಿಗೆ ಏನು ಹೆಸರಾಗುತ್ತೆ?”
ಅವಳು ನಕ್ಕು ಹೇಳ್ತಾಳೆ, “ಹೆಣ್ಣು.”
“ಜೀವನ ಸಾರವನ್ನೆಲ್ಲ ಎರಕ ಹೊಯ್ದು ಇವಳ ಆತ್ಮ ಮತ್ತು ಹೃದಯವನ್ನ ರೂಪಿಸ್ಲಿಕ್ಕೆ ನಾನು ಸ್ವಲ್ಪ ಹೆಚ್ಚು ಸಮಯವನ್ನೇ ತೆಗೆದ್ಕೊಳ್ಳಬೇಕಾಯ್ತು”

ಕಿನ್ನರಿ ಹೆಣ್ಣನ್ನ ಮುಟ್ಟುತ್ತ ಕೇಳ್ತಾಳೆ, “ಇವಳು ಎಷ್ಟೊಂದು ಮೃದು ಮತ್ತು ಹಗುರವಾಗಿದಾಳೆ. ಈಕೆ ದರ‍್ಬಲವಾಗರ‍್ತಾಳೇನು?”
ಸೃಷ್ಟಿ ದೇವತೆಗೆ ನಗು. “ಬಂಡೆಗೆ ಹೋಲಿಸಿದರೆ ಹೂವು ದುರ್ಬಲ ಅಂತ ನಿನಗೆ ಅನ್ನಿಸುತ್ತೇನು? ಇಲ್ಲ. ಹೂವಿಗೆ ತನ್ನದೇ ಬಲ ಮತ್ತು ಆಕರ್ಷಣೆ ಇದೆ. ಏನನ್ನಾದರೂ ಜಜ್ಜಿಹಾಕುವ ವಿಷಯಕ್ಕೆ ಬಂದರೆ ಮಾತ್ರ ಬಂಡೆಯ ಬಲ ವಿಪರೀತ ಅನ್ನಿಸುತ್ತೆ. ಹೂವು ತನ್ನ ನಾಜೂಕು ಚೆಲುವಿನ ವಿಷಯದಲ್ಲಿ ಹೆಚ್ಚು ಸಶಕ್ತ.”
ಅವಳು ಮುಂದುವರೆಸಿದಳು, “ನಾನು ಇವಳನ್ನ ಮಾನಸಿಕವಾಗಿ ಬಲಶಾಲಿಯನ್ನಾಗಿ ರೂಪಿಸ್ತಾ ಇದ್ದೀನಿ. ತನ್ನ ಬದುಕಲ್ಲಿ ಎದುರಾಗಬಹುದಾದ ಎಲ್ಲ ಆತಂಕಗಳ ಬಿರುಗಾಳಿಗೆ ಎದೆಯೊಡ್ಡಿ ಗೆಲ್ಲುವಷ್ಟು ಗಟ್ಟಿ ಮಾಡಬೇಕು ಇವಳನ್ನ. ಯೋಚನೆ ಮಾಡೋದಕ್ಕಿಂತ ಹೆಚ್ಚಾಗಿ ಅನುಭವಿಸೋ ಸಾಮರ್ಥ್ಯವನ್ನ ಇವಳಲ್ಲಿ ತುಂಬ್ತಾ ಇದ್ದೀನಿ. ಇವಳು ತನ್ನ ಚಿಕ್ಕ ಜೀವಮಾನದಲ್ಲೇ ಹಲವು ಹತ್ತು ಪಾತ್ರಗಳನ್ನ ನಿಭಾಯಿಸಬೇಕಿದೆ.”

ಕಿನ್ನರಿ ಕೇಳ್ತಾಳೆ, “ಅವಳ ದೇಹ ಸೌಂದರ್ಯಕ್ಕೆ ಇಷ್ಟೊಂದು ಸಮಯ ಯಾಕೆ ಕೊಡ್ತಾ ಇದ್ದೀಯ ನೀನು?”
“ಇವಳು ಭೂಮಿಯ ಮೇಲೆ ಚೆಲುವು ಮತ್ತು ಉತ್ಸಾಹವನ್ನ ಹರಡ್ತಾಳೆ. ಅವಳು ಗಮನಿಸಲ್ಪಡ್ತಾಳೆ ಮತ್ತು ಅದನ್ನ ಬಯಸ್ತಾಳೆ ಕೂಡ. ಸಾಕಷ್ಟು ಕಣ್ಣುಗಳು ತನ್ನತ್ತ ನೆಡುವಂತೆ ಅವಳು ಕಂಗೊಳಿಸ್ತಾಳೆ. ಅದಕ್ಕಾಗೇ ನಾನು ಜತನದಿಂದ ಅಪರೂಪದ ವಸ್ತುಗಳನ್ನಾಯ್ದು ಇವಳನ್ನ ನಿರ್ಮಿಸ್ತಿದ್ದೀನಿ.”
ಕಿನ್ನರಿ ಅವಳ ಕೆನ್ನೆಯನ್ನು ಮುಟ್ಟಿ ಅನ್ತಾಳೆ, “ಊಹ್! ಇದೇನಿದು? ದೇವಿ, ಈ ಮಾದರಿ ಸೋರ್ತಾ ಇದೆ. ನೀನು ಇವಳ ಮೇಲೆ ವಿಪರೀತ ಹೊರೆ ಹೊರಿಸಿದ್ದೀಯ ಅನ್ನಿಸತ್ತೆ.”
ಅವಳು ಹೇಳ್ತಾಳೆ, “ಅದು ಸೋರ‍್ತಾ ಇರೋದಲ್ಲ. ಆ ಒದ್ದೆಯನ್ನ ‘ಕಣ್ಣೀರು’ ಅಂತಾರೆ. ಕಣ್ಣೀರು ಇವಳ ಅಭಿವ್ಯಕ್ತಿಗೆ ಸಾಧನ. ಅದರ ಮೂಲಕ ಇವಳು ತನ್ನ ವಿಷಾದ, ಅನುಮಾನ, ಪ್ರೀತಿ, ಒಂಟಿತನ, ಯಾತನೆ ಮತ್ತು ಹೆಮ್ಮೆಗಳನ್ನ ವ್ಯಕ್ತಪಡಿಸ್ತಾಳೆ. ಕಣ್ಣೀರು ಬಹಳಷ್ಟು ಸಂಗತಿಗಳನ್ನ ಅಳಿಸಿಹಾಕುತ್ತೆ ಮತ್ತು ಇವಳ ಹೃದಯದ ಮೇಲಿನ ಭಾರದ ಹೊರೆಯನ್ನ ತೆಗೆದುಹಾಕುತ್ತೆ. ಇವಳು ಕಣ್ಣೀರಿಂದ ತನ್ನ ನೋವು, ದುಃಖಗಳನ್ನ ತೊಳೆದುಹಾಕೋಕೆ ಸಮರ್ಥವಾಗರ‍್ತಾಳೆ.

ಕಿನ್ನರಿ ಈ ಹೊಸ ಮಾದರಿಯನ್ನ ಪರಿಶೀಲಿಸತೊಡಗ್ತಾಳೆ. “ದೇವಿ, ನೀನು ಇಲ್ಲೊಂದು ರಹಸ್ಯ ಕೋಣೆಯನ್ನ ಸೃಷ್ಟಿಸ್ತಿದ್ದೀಯಲ್ಲ….”
ಸೃಷ್ಟಿದೇವತೆ ಕಿನ್ನರಿಗೆ ಹೇಳ್ತಾಳೆ, “ಇದೀಗ ಒಳ್ಳೆಯದಾಯ್ತು. ನೀನು ಎಲ್ಲ ವಿವರಗಳನ್ನ ಗಮನಿಸಿದ್ದೀಯ. ಇದನ್ನ ಮಡಿಲು ಅನ್ತಾರೆ. ಇದು ಇವಳಿಗೆ ನಾನು ಕೊಡೋ ಅತ್ಯಮೂಲ್ಯ ಉಡುಗೊರೆ. ಇದರೊಳಗಿಂದ ಅವಳು ಹೊಸ ಸೃಷ್ಟಿಯನ್ನ ಪೋಷಿಸಿ ಪೊರೆಯೋಕೆ ಸಾಧ್ಯವಾಗುತ್ತೆ. ನಾನು ಹೊಸಹುಟ್ಟಿನ ಜೀವಕ್ಕೆ ಅನುಕೂಲವಾಗುವಂತೆ ಈ ಮಡಿಲಿನ ರೂಪ ಆಕಾರಗಳನ್ನ ಮತ್ತು ಬಾಳಿಕೆಯನ್ನ ಖಾತ್ರಿಪಡಿಸಿಕೊಂಡಿದ್ದೀನಿ.”

ಇದು ಕಿನ್ನರಿಯ ಮೇಲೆ ದೊಡ್ಡ ಪರಿಣಾಮ ಉಂಟುಮಾಡಿತು. “ದೇವಿ, ನೀನಂತೂ ಮಹಾಮಹಿಮಳೇ ಇದ್ದೀಯ. ನೀನು ಎಲ್ಲವನ್ನೂ ಎಷ್ಟು ಚೆನ್ನಾಗಿ ಯೋಜನೆ ಮಾಡಿದ್ದೀಯ. ಈ ಹೆಣ್ಣು ಸೃಷ್ಟಿ ನಿಜಕ್ಕೂ ಎಷ್ಟು ಅದ್ಭುತವಾಗಿದೆ! ಅಂದ ಹಾಗೆ, ಇವಳು ಏನೇನು ಮಾಡಬಲ್ಲವಳಾಗರ‍್ತಾಳೆ?”
ದೇವಿಯ ಉತ್ತರ, “ಇವಳು ಕಾಳಜಿ ವಹಿಸಬಲ್ಲಳು, ಪೋಷಿಸಬಲ್ಲಳು, ದೊಡ್ಡ ದೊಡ್ಡ ಭಾರಗಳನ್ನು ಹೊರಬಲ್ಲಳು.
ಇವಳು ಒಂದೇ ಸಲಕ್ಕೆ ಅಳಲೂಬಲ್ಲಳು, ನಗಲೂಬಲ್ಲಳು. ಇವಳು ಕತೆಗಳಲ್ಲಿ ಒಂದಾಗಿ ಚಿರಕಾಲ ಇರಬಲ್ಲಳು.
ಇವಳು ಹಾಡಬಲ್ಲಳು, ಕುಣಿಯಬಲ್ಲಳು, ಪ್ರತಿ ಕ್ಷಣವನ್ನೂ ಸಂಭ್ರಮದಿಂದ ಸವಿಯಬಲ್ಲಳು. ಇವಳು ಸಂತೋಷವನ್ನ, ಪ್ರೀತಿಯನ್ನ ಮತ್ತು ಅಭಿಪ್ರಾಯಗಳನ್ನ ಹೊಂದಿರಬಲ್ಲಳು. ತಾನು ನಂಬಿಕೊಂಡಿರುವುದನ್ನ ಎತ್ತಿ ಹಿಡಿಯೋಕೆ ಜಗಳಾಡಬಲ್ಲಳು. ಇವಳು ಅನ್ಯಾಯದ ವಿರುದ್ಧ ಹೋರಾಡಬಲ್ಲಳು.
ಉತ್ತಮ ಪರಿಹಾರ ಕಂಡುಬರುವಾಗ ಇವಳು “ಇಲ್ಲ” ಅನ್ನುವ ಪ್ರಮೇಯವೇ ಇರದು. ತನ್ನ ಇಡೀ ಕುಟುಂಬ ಸುಖವಾಗಿರಲೆಂದು ತನ್ನನ್ನೇ ಇವಳು ಕೊಟ್ಟುಬಿಡುವಳು. ತನ್ನ ಮಕ್ಕಳ ಗೆಲುವಿಗೆ ಹರ್ಷೋದ್ಗಾರ ಮಾಡುವಳು. ತನ್ನ ಪ್ರಿಯ ಬಾಂಧವರು ಅಗಲಿಹೋದಾಗ ಬಹಳ ಕಾಲದವರೆಗೆ ಶೋಕಿಸುತ್ತಲೇ ಇರುವಳು. ಎಲ್ಲ ತಡೆಗಳನ್ನೂ ಮೀರಿ ಎದ್ದು ನಿಲ್ಲುವ ಬಲ ಹೊಂದಿರುವಳು.
ಒಂದು ಮುತ್ತು, ಒಂದು ಅಪ್ಪುಗೆಯಿಂದ ಬಿರಿದ ಹೃದಯಕ್ಕೆ ಮುಲಾಮು ಹಚ್ಚಬಹುದೆಂದು ಇವಳಿಗೆ ತಿಳಿದಿರುವುದು. ಅಗತ್ಯಕ್ಕೆ ತಕ್ಕ ಹಾಗೆ ಇವಳು ಬಂಡೆಯAತೆ ಗಟ್ಟಿಗಳೂ ಹೂವಿನಂತೆ ಮೃದುವೂ ಆಗಿರಬಲ್ಲಳು. ಇವಳಲ್ಲಿ ಅಪರಿಮಿತ ಸಹನೆ ಇರುವುದು, ಆದರೆ ಗೋಡೆಗೊತ್ತಿ ಹಿಡಿದಾಗ ಮುಷ್ಟಿ ಕಟ್ಟಿ ಹೋರಾಡಲೂ ಬಲ್ಲಳು.”

ಇಷ್ಟೆಲ್ಲ ಕೇಳಿದ ಮೇಲೂ ಕಿನ್ನರಿಯ ಬಳಿ ಇನ್ನೊಂದು ಪ್ರಶ್ನೆ ಉಳಿದಿರುತ್ತೆ.
“ದೇವಿ, ಅದ್ವಿತೀಯ ಸೃಷ್ಟಿ ಅಂತ ಅನ್ನಿಸ್ಕೊಂಡಿರೋ ಈ ಮಾದರಿಯೊಂದಕ್ಕೆ ನೀನು ಹೆಚ್ಚಿನ ಗಮನ ಕೊಟ್ಟಿದ್ದೀಯ. ಇದರಿಂದ ಉಳಿದೆಲ್ಲಕ್ಕೆ ಅನ್ಯಾಯ ಮಾಡಿದ ಹಾಗೆ ಆಗೋದಿಲ್ವಾ?”
ದೇವಿ ಕಿನ್ನರಿಯತ್ತ ಮುಗುಳ್ನಗು ಬೀರಿ ಹೇಳ್ತಾಳೆ, “ಖಂಡಿತಾ ಇಲ್ಲ! ನನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಇವಳಲ್ಲಿ ಒಂದೇ ಒಂದು ತಪ್ಪು ಉಳಿದುಹೋಗಿದೆ;
ಇವಳು ತನ್ನ ಯೋಗ್ಯತೆಯನ್ನೇ ಮರೆತುಬಿಡ್ತಾಳೆ!”

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.