ಕೃಷ್ಣನ ತಲೆನೋವಿಗೆ ಪಾದ ದೂಳಿನ ಮದ್ದು! : ಒಂದು ಪ್ರಕ್ಷೇಪ ಕಥೆ

ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಎಂದಾಗ ಸಮಾಧಾನಗೊಂಡರು….


ಒಮ್ಮೆ ಹೀಗಾಯ್ತು:
ದ್ವಾರಕೆಯಲ್ಲಿ ಅಣ್ಣನೊಡನೆ, ಅಷ್ಟ ಮಹಿಷಿಯರೊಡನೆ ರಾಜ್ಯಭಾರ ಮಾಡಿಕೊಂಡಿದ್ದ ಕೃಷ್ಣನಿಗೆ ವಿಪರೀತ ತಲೆನೋವು ಉಂಟಾಯ್ತು.

ಮನುಷ್ಯರೂ ಮುಗಿದು ದೇವ ವೈದ್ಯ ಧನ್ವಂತರಿಯನ್ನೆ ಕರೆಸಿದರೂ ತಲೆನೋವು ಕಳೆಯಲಿಲ್ಲ. ಆತಂಕಗೊಂಡು ಕೃಷ್ಣನನ್ನ ನೋಡಲು ಬಂದ ನಾರದರು ಒಂದು ಉಪಾಯ ಹೇಳಿದರು. ಹೇಳಿಕೇಳಿ ಕೃಷ್ಣ ಪ್ರೀತಿಸುವವರ ಕಣ್ಮಣಿ. ಯಾರು ಈತನ ಮೇಲೆ ಅತ್ಯುನ್ನತ ಪ್ರೇಮಭಾವ ಹೊಂದಿದ್ದಾರೋ ಅವರ ಪಾದದೂಳಿಯನ್ನು ಕೃಷ್ಣನ ತಲೆಗೆ ಲೇಪಿಸಿದರೆ ಆ ಕ್ಷಣವೇ ನೋವು ಉಪಶಮನವಾಗುತ್ತದೆ ಅಂದರು.

ಅರಮನೆಯಲ್ಲಿ ಕಸಿವಿಸಿ ಶುರುವಾಯ್ತು. ಪಟ್ಟದರಸಿ ರುಕ್ಮಿಣಿ, `ನಾನು ಸ್ವಾಮಿಯನ್ನು ಪ್ರೀತಿಸುವಷ್ಟು ಬಹುಶಃ ಯಾರೂ ಪ್ರೀತಿಸಲಾರರು. ಹಾಗಂತ ನನ್ನ ಪಾದದೂಳಿಯನ್ನ ಅವರ ತಲೆಗೆ ಲೇಪಿಸುವುದೇ? ಸಾಧ್ಯವಿಲ್ಲ’ ಅಂದುಬಿಟ್ಟಳು. ಉಳಿದೆಲ್ಲ ರಾಣಿಯರ ಕಥೆಯೂ ಅದೇ. ಕುಟುಂಬದ ಇತರ ಸದಸ್ಯರ ಪ್ರತಿಕ್ರಿಯೆಯೂ ಹಾಗೆಯೇ ಹೊಮ್ಮಿತು.

ಲ್ಲರೂ ಕೃಷ್ಣನನ್ನು ಪ್ರೀತಿಸುವವರೇ. ಆದರೆ ತಾನು, ಅವನೆಂಬ ದ್ವೈತವೇ ಅಡ್ಡಿ! ತೀರಾ ಕಾಲ ದೂಳನ್ನು ಕೃಷ್ಣನ ಹಣೆಗೆ ತಾಕಿಸುವುದೇ?
ತಲೆನೋವು ತಾಳಲಾರದೆ ಕೃಷ್ಣ ಕೊನೆಗೆ, `ವೃಂದಾವನಕ್ಕೆ ಹೋಗಿ ಗೋಪಿಕೆಯರನ್ನಾದರೂ ಕೇಳಿನೋಡಿ. ತಲೆನೋವು ಸಹಿಸಲಾಗುತ್ತಿಲ್ಲ’ ಅಂದ.

ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಅಂದಾಗ ಸಮಾಧಾನಗೊಂಡರು. “ಅಷ್ಟೇ ತಾನೆ?” ಅನ್ನುತ್ತಾ ರಾಸವೃತ್ತದಂತೆ ಸುತ್ತುವರಿದು ಗುಂಪಾಗಿ ನಿಂತು ಕಾಲು ಕೊಡವಿದರು. ಅಲ್ಲೊಂದು ಪಾದದೂಳಿನ ಪುಟ್ಟಬೆಟ್ಟವೇ ಎದ್ದುನಿಂತಿತು! ಕೃಷ್ಣನ ತಲೆನೋವೂ ಮಾಯವಾಯಿತು!!

1 Comment

Leave a Reply