ತಮಗಾದ ಅಪರೋಕ್ಷ ಅನುಭವವನ್ನು ಪದ್ಯಗಳಲ್ಲಿ ಹೇಳಿಕೊಂಡ ವಿರಳಾತಿ ವಿರಳ ದಾಸರುಗಳಲ್ಲಿ ಒಬ್ಬರು ಮಹಿಪತಿದಾಸರು. ಅವರ ಸಾಹಿತ್ಯದಲ್ಲಿ ಅಪರೋಕ್ಷ ಅನುಭವವನ್ನು ಹೇಳಿಕೊಂಡ ಅನೇಕ ಪದ್ಯಗಳನ್ನು ನಾವು ಕಾಣಬಹುದು | ನಾರಾಯಣ ಬಾಬಾನಗರ
‘’ ದಾಸಮಾರ್ಗಮನುಸೃತ್ಯ ಸರ್ವಂ ತತ್ಯಾಜಯೋ ಗುರುಃ ||
ಸೋ ಮೇ ಭೂಯಾತ್ ಸುವಿದ್ಯಾಯೈ ಮಹೀಪತ್ಯಾಭಿದೋ ಪ್ರಭುಃ || ‘’
ದಾಸಮಾರ್ಗದ ದಾರಿಯ ಹಿಡಿಯುವ ಮೊದಲು ಶ್ರೀ ಮಹಿಪತಿರಾಯರದ್ದು ರಾಜನ ದರ್ಬಾರದಲ್ಲಿ ಉನ್ನತ ಹುದ್ದೆಯ ಕಾರ್ಯ. ವಿಜಯಪುರವನ್ನು ಆದಿಲ್ ಶಾಹಿ ಅರಸರು ಆಳುತ್ತಿದ್ದ ಕಾಲವದು. ಬಾಗಲಕೋಟದ ಕಾಥವಟೆ ಮನೆತನದ ಪಂಡಿತ ಕುಟುಂಬ ವಲಸೆ ಹೊಂದುತ್ತಾ ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಬಂದಿತು. ಐಗಳಿಯಲ್ಲಿದ್ದ ಶ್ರೀ ವೆಂಕಟೇಶ್ವರ ದೇವರ ಅರ್ಚನೆಯನ್ನು ಶ್ರೀ ಮಹಿಪತಿರಾಯರ ತಂದೆ ಶ್ರೀ ಕೋನೇರಿರಾಯರು ನೆರವೇರಿಸುತ್ತಿದ್ದರು. ಅದೇ ಗ್ರಾಮದ ಕುಲಕರ್ಣಿ ಮನೆತನದ ಹೆಣ್ಣುಮಗಳೊಂದಿಗೆ ಶ್ರೀ ಮಹಿಪತಿರಾಯರ ವಿವಾಹ. ಕೆಲವೇ ವರ್ಷಗಳಲ್ಲಿ ಪತ್ನಿಯ ವಿಯೋಗ. ಅನಂತರ ಅಥಣಿ ತಾಲೂಕಿನ ಐಗಳಿಯಿಂದ ವಿಜಯಪುರಕ್ಕೆ ಬಂದು ವಾಸಿಸತೊಡಗಿತು ಶ್ರೀಮಹಿಪತಿರಾಯರ ಕುಟುಂಬ.ವಿಜಯಪುರದ ಅರಮನೆಯ ಹತ್ತಿರವಿದ್ದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಪುರಾಣ,ಪ್ರವಚನಗಳ ಬೋಧನೆಯ ಆರಂಭ. ಪ್ರಕಾಂಡ ಪಾಂಡಿತ್ಯದ ವಾಗ್ಝರಿ. ಇವರ ಪಾಂಡಿತ್ಯಪೂರ್ವ ಮಾತುಗಳ ಪ್ರಭಾವಕ್ಕೆ ಒಳಗಾದವನು ಖವಾಸಖಾನ. ಆದಿಲಶಾಹಿ ಅರಸರ ಆಡಳಿತದ ಅವಧಿಯಲ್ಲಿ ಮೂವರು ಖವಾಸಖಾನರ ಮಾಹಿತಿ ಲಭ್ಯವಾಗುತ್ತದೆ. ಇವರಲ್ಲಿ ಎರಡನೆಯ ಇಬ್ರಾಹಿಮ್ ಆದಿಲಶಹ ಮತ್ತು ಸುಲ್ತಾನ ಮೊಹಮ್ಮದ ಆದಿಲಶಹನ ಅವಧಿಯ ಆಡಳಿತದಲ್ಲಿ ಕಾರ್ಯನಿರ್ವಹಿಸಿದ ಖವಾಸಖಾನನೇ ಶ್ರೀಮಹಿಪತಿರಾಯರನ್ನು ಭೇಟಿಯಾಗಿರಬಹುದು. ಖವಾಸಖಾನನ ಮೂಲಕ ಎರಡನೆಯ ಇಬ್ರಾಹಿಮ್ ಆದಿಲಶಹನ ಭೇಟಿ. ಆಡಳಿತದಲ್ಲಿ ಉಂಟಾದ ಕ್ಲಿಷ್ಟ ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳಲು ಶ್ರೀ ಮಹಿಪತಿರಾಯರ ನೆರವು ಕೋರಿಕೆ. ಸಮಸ್ಯೆ ಪರಿಹರಿಸಿದ್ದರಿಂದ ಬಾದಶಹನ ಮೆಚ್ಚುಗೆಗೆ ಶ್ರೀ ಮಹಿಪತಿರಾಯರು ಪಾತ್ರರಾದರು. ರಾಜನ ಆಸ್ಥಾನದಲ್ಲಿ ಉನ್ನತ ಹುದ್ದೆ ಪ್ರಾಪ್ತವಾಯಿತು. ಗುಲಬರ್ಗಾದ ದೇಶಮುಖ ಮನೆತನದ ತಿರುಮಲಾಬಾಯಿಯೊಂದಿಗೆ ವಿವಾಹ. ಬಹಳ ವರ್ಷಗಳವರೆಗೆ ಸಂತಾನ ಪ್ರಾಪ್ತಿಯಾಗಲಿಲ್ಲ. ವಿಜಯಪುರದ ಸಮೀಪವಿದ್ದ ಸಾರವಾಡ ಎಂಬ ಗ್ರಾಮದಲ್ಲಿ ಶ್ರೀ ಭಾಸ್ಕರ ಸ್ವಾಮಿಗಳು ಎಂಬ ಯೋಗಿ ನೆಲೆಸಿದ್ದರು. ಶ್ರೀ ಭಾಸ್ಕರ ಸ್ವಾಮಿಗಳ ಕೀರ್ತಿ ಸುತ್ತಲೂ ಜನಜನಿತವಾಗಿತ್ತು. ಶ್ರೀಮತಿ ತಿರುಮಲಾಬಾಯಿ ಸಂತಾನ ಅಪೇಕ್ಷೆಯಿಂದಾಗಿ ಶ್ರೀ ಭಾಸ್ಕರ ಸ್ವಾಮಿಗಳ ಆಶೀರ್ವಾದ ಪಡೆದುಕೊಳ್ಳಲು ಸಾರವಾಡಕ್ಕೆ ಹೋಗಿ ಬರತೊಡಗಿದಳು.
ಇತ್ತ ಶ್ರೀ ಮಹಿಪತಿರಾಯರ ಕಾರ್ಯ ದರಬಾರದಲ್ಲಿ ಮುಂದುವರೆದಿತ್ತು. ಒಂದು ದಿನ ಲಗುಬಗೆಯಿಂದ ರಾಜನ ಆಸ್ಥಾನಕ್ಕೆ ತೆರಳುತ್ತಿರುವಾಗ ಸೂಫಿ ಸಂತನೊಬ್ಬ ಶ್ರೀ ಮಹಿಪತಿರಾಯರನ್ನು ಕರೆದ. ಬಳಿ ಬಂದ ಶ್ರೀ ಮಹಿಪತಿರಾಯರ ಜೊತೆ ಏನೂ ಮಾತಾಡದೆ ಹಾಗೆ ಕಳಿಸಿಬಿಟ್ಟ. ಸಂಜೆಯ ಸಮಯ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಶ್ರೀ ಮಹಿಪತಿರಾಯರನ್ನು ಸೂಫಿಸಂತ ಬೆಳಿಗ್ಗೆ ಭೇಟಿಯಾದ ಸ್ಥಳದಲ್ಲಿಯೇ ಮತ್ತೆ ಭೇಟಿಯಾದ. ಅವನು ಬೆತ್ತಲೆ ಸೂಫಿಸಂತ. ಹೆಸರು ಶಾಹನಂಗೀ ಮಜ್ಝೂಬ ಬರಹನಾ. ಸಾಮಾನ್ಯವಾಗಿ ನಂಗೆ ಶಹಾ ವಲಿ ಎಂದು ಕರೆಯುತ್ತಿದ್ದರು. ಮತ್ತೆ ಕರೆದಿದ್ದರಿಂದ ಶ್ರೀ ಮಹಿಪತಿರಾಯರು ಸೂಫಿಸಂತನ ಬಳಿ ತೆರಳಿದರು. ಈ ಸಲ ಸೂಫಿಸಂತ ಮಾತಿಗೆಳೆದ. ಶ್ರೀ ಮಹಿಪತಿರಾಯರು ಕೈ ಬೆರಳಲ್ಲಿ ಧರಿಸಿದ್ದ ರಾಜಮುದ್ರೆ ಉಂಗುರವನ್ನು ಕೇಳಿ ಪಡೆದ. ಪಡೆದುಕೊಂಡ ಉಂಗುರವನ್ನು ಅತ್ತ ಇತ್ತ ನೋಡಿ ಬದಿಯಲ್ಲಿದ್ದ ನೀರು ತುಂಬಿದ ಕಂದಕದಲ್ಲಿ ಒಗೆದ.ಶ್ರೀಮಹಿಪತಿರಾಯರಿಗೆ ಏನೂ ಅರ್ಥವಾಗಲಿಲ್ಲ. ರಾಜಮುದ್ರೆಯ ಉಂಗುರ ಇರದಿದ್ದರೆ ಆಸ್ಥಾನದಲ್ಲಿ ಪ್ರವೇಶವಿಲ್ಲವೆಂಬ ದುಗುಡ. ಕಳವಳಿಕೆ ಮೊಗದಲ್ಲಿ ಕಾಣಿಸತೊಡಗಿತು. ಸೂಫಿಸಂತ ಅದನ್ನು ಗಮನಿಸಿ ಮಂದಹಾಸ ಬೀರಿದ. ನಿನ್ನ ರಾಜಮುದ್ರೆ ಉಂಗುರವನ್ನು ತಂದುಕೊಡುವೆ ತಾಳು ಎಂದು ಕಂದಕದೊಳಗೆ ಜಿಗಿದ. ಕಂದಕದಿಂದ ಎದ್ದವನ ಕೈಯಲ್ಲಿ ಒಂದಕ್ಕಿಂತ ಹೆಚ್ಚು ಉಂಗುರಗಳು. ಎಲ್ಲವೂ ಒಂದೇ ತೆರನಾಗಿವೆ. ಇದರಲ್ಲಿ ನಿನ್ನದು ಯಾವುದು ತೆಗೆದುಕೊ ಎಂದ ಸೂಫಿಸಂತ. ಶ್ರೀ ಮಹಿಪತಿರಾಯರಿಗೆ ಗಲಿಬಿಲಿ. ಕೊನೆಗೆ ರಾಜಮುದ್ರೆ ಉಂಗುರದ ಸುದ್ದಿ ಬಿಟ್ಟು ಮುಂದೇನು ಮಾಡಬೇಕು ಹೇಳು ಎಂದರು. ಆಗ ಸೂಫಿಸಂತ ಬೊಟ್ಟು ಮಾಡಿ ತೋರಿದ್ದು ಸಾರವಾಡದತ್ತ. ಅಲ್ಲಿಯ ಶ್ರೀ ಭಾಸ್ಕರ ಸ್ವಾಮಿಗಳನ್ನು ಕಾಣಲು ಹೇಳಿ ಹೊರಟು ಹೋದ. ಶ್ರೀ ಮಹಿಪತಿರಾಯರು ಮನೆಗೆ ಬಂದು ಸಾರವಾಡಕ್ಕೆ ಹೋಗುವ ಪ್ರಸ್ತಾಪ ಮಾಡಿದರು. ಶ್ರೀಮತಿ ತಿರುಮಲಾಬಾಯಿಗೆ ಆಶ್ಚರ್ಯ. ಇದು ಗುರುಗಳ ಕಾರುಣ್ಯವೇ ಸರಿ ಎಂದು ಅಂದುಕೊಂಡಳು.
ಸತಿಪತಿಯು ಸೇರಿ ಸಾರವಾಡಕ್ಕೆ ಶ್ರೀ ಭಾಸ್ಕರ ಸ್ವಾಮಿಗಳ ದರ್ಶನಕ್ಕೆ ತೆರಳಿದರು. ಶ್ರೀ ಭಾಸ್ಕರ ಸ್ವಾಮಿಗಳು ಕರುಣೆಯಿಂದ ಬರಮಾಡಿಕೊಂಡು ಜ್ಞಾನದೃಷ್ಟಿಯನ್ನು ಬೀರಿದರು. ಹನ್ನೆರಡು ವರ್ಷಗಳಲ್ಲಿ ಮುಗಿಯುವಂತಹ ಯೋಗಸಾಧನೆಯನ್ನು ಕೇವಲ ಹನ್ನೊಂದು ತಿಂಗಳುಗಳಲ್ಲಿ ಮಾಡಿ ಮುಗಿಸಿದರು. ಅನಂತರ ವಲಸೆ ಹೊಂದುತ್ತಾ ಕಾಖಂಡಕಿ ಗ್ರಾಮಕ್ಕೆ ಬಂದರು.
ಕಾಖಂಡಕಿ ಗ್ರಾಮ ಅಗ್ರಹಾರವಾಗಿತ್ತು.ವಿಜಯಪುರದಿಂದ 35 ಕಿ.ಮೀ. ಅಂತರದಲ್ಲಿದೆ.ಇಲ್ಲಿಗೆ ಆಗಮಿಸಿದಾಗ ಊರ ಜನರಿಂದ ಭವ್ಯ ಸ್ವಾಗತ ದೊರಕಿತು.ಊರ ಹೊರಗಿನ ಹೊಲದಲ್ಲಿನ ಬನ್ನಿ ಗಿಡದ ಬುಡದಲ್ಲಿ ಯೋಗಾನುಷ್ಠಾನದಲ್ಲಿ ತೊಡಗಿದರು.
ಯೋಗಾನುಷ್ಠಾನದಿಂದ ಲೌಕಿಕ ಬದುಕನ್ನು ಮೀರಿ ಅಲೌಕಿಕ ಬದುಕಿನೆಡೆಗೆ ಸಾಗಿ ಅಪರೋಕ್ಷ ಜ್ಞಾನದ ಗುರಿ ಮುಟ್ಟಿದರು. ಸ್ವಾನಂದವನ್ನು ಆನಂದಿಸಿದರು.ಆ ಆನಂದದ ಅನುಭೂತಿಯನ್ನು ಪದ್ಯಗಳಲ್ಲಿ/ಕೀರ್ತನೆಗಳಲ್ಲಿ ಹಿಡಿದಿಟ್ಟರು. ಇಡೀ ದಾಸ ಸಾಹಿತ್ಯದಲ್ಲಿಯೇ ಅವು ಅಪರೂಪಗಳಲ್ಲಿಯೇ ಅಪರೂಪವೆಂದು ಹೇಳಬಹುದು. ತಮಗಾದ ಅಪರೋಕ್ಷ ಅನುಭವವನ್ನು ಪದ್ಯಗಳಲ್ಲಿ ಹೇಳಿಕೊಂಡ ವಿರಳಾತಿ ವಿರಳ ದಾಸರುಗಳಲ್ಲಿ ಒಬ್ಬರು ಮಹಿಪತಿದಾಸರು. ಅವರ ಸಾಹಿತ್ಯದಲ್ಲಿ ಅಪರೋಕ್ಷ ಅನುಭವವನ್ನು ಹೇಳಿಕೊಂಡ ಅನೇಕ ಪದ್ಯಗಳನ್ನು ನಾವು ಕಾಣಬಹುದು.
ಅರ್ಥಿಯಾಗಿದೆ ಬನ್ನಿ/ಅರ್ತು ನೋಡುವ…ಎಂದು ಪ್ರಾರಂಭವಾಗುವ ಈ ಪದ್ಯ ಗಮನಿಸಿ
ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳಲೇನಾ
ತುರ್ಯಾವಸ್ತೆಯಲ್ಲಿ ಬೆರೆತು ಕೂಡಿದ ಜ್ಞಾನಿ ಬಲ್ಲಖೂನಾ
ಬರಿಯಮಾತನಾಡಿ ಹೊರೆಯ ಹೇಳುವುದಲ್ಲಾ ಅರಹುಸ್ಥಾನಾ
ಪರ್ಯಾಯದಿಂದಲಿ ಪರಿಣಮಿಸಿದು ನೋಡಿ ಪರಮ ಪ್ರಾಣಾ//1//
ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಲು ಬಹಳಾ
ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲಾ
ಸುಂದರವಾದ ಸುವಸ್ತುವಳಗೊಂಡಿದೆ ಅಚಲಾ
ಸಾಂದ್ರವಾಗಿ ಸುಖತುಂಬಿ ತುಳುಕುತಿದೆ ಥಳಥಳಾ//2//
ಇಂತಹ ಅನೇಕ ಪದ್ಯಗಳು ಮಹಿಪತಿದಾಸರಿಂದ ರಚನೆಗೊಂಡಿವೆ.ವಿಶಿಷ್ಟವಾಗಿರುವ ಇಂತಹ ಪದ್ಯಗಳಿಂದಾಗಿಯೇ ಉಳಿದ ದಾಸರ ಪದ್ಯಗಳಿಗಿಂತ ಗಮನ ಸೆಳೆಯುತ್ತವೆ,ಗಾಢವಾಗಿ ಆವರಿಸಿಕೊಳ್ಳುತ್ತವೆ.
ಇದಲ್ಲದೇ ಇನ್ನೊಂದು ವಿಶಿಷ್ಟ ಪ್ರಯೋಗವನ್ನು ಮಹಿಪತಿದಾಸರು ಮಾಡಿದ್ದಾರೆ.ಒಂದೇ ಪದ್ಯದಲ್ಲಿ ಕನ್ನಡ,ಮರಾಠಿ,ಪಾರ್ಷಿ..ಹೀಗೆ ವಿವಿಧ ಭಾಷೆಯ ಪದಗಳನ್ನು ಬಳಸಿಕೊಂಡಿರುವ ಉದಾಹರಣೆಗಳು ದೊರಕುತ್ತವೆ.ಹರಿಸ್ತುತಿ,ಅನುಭಾವ ಸಾಕ್ಷಾತ್ಕಾರ ಮುಂತಾದ ವಿಷಯ ವೈವಿಧ್ಯತೆಗಳಿರುವ ಕೀರ್ತನೆಗಳಿವೆ.ಅತ್ಯಂತ ಸುಂದರ ಕನ್ನಡ ಸುಲಲಿತ ಭಾಷೆಯಲ್ಲಿ ಬರೆದ ಕೀರ್ತನೆಗಳು ಜನ ಸಾಮಾನ್ಯರ ಹೃದಯ ಮುಟ್ಟಿವೆ.ಭಾರತ ಕಂಡ ಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಡಾ// ರಾನಡೆಯವರಂತೂ ಮಹಿಪತಿದಾಸರನ್ನು ವಿಶಿಷ್ಟ ಯೋಗಿಗಳೆಂದೇ ಗುರುತಿಸಿದ್ದಾರೆ.
ಮಹಿಪತಿದಾಸರ ಸಾಹಿತ್ಯ ಬಾಯಿಯಿಂದ ಬಾಯಿಗೆ ಜನರ ನಾಲಿಗೆಯಲ್ಲಿ ಹರಿದಾಡಿತ್ತೇ ವಿನಾ ಮುದ್ರಣವಾಗಿ ಹೊರ ಬಂದಿರಲಿಲ್ಲ.ಹೊರ ಬಂದದ್ದು 1950 ರ ಅನಂತರದಲ್ಲಿ.ಅಷ್ಟರಲ್ಲಿ ಉಳಿದ ದಾಸರ ಪದ್ಯಗಳು ಮುಂಚೂಣಿಯಲ್ಲಿ ಬಂದು ಬಿಟ್ಟಿದ್ದವು.ರಾಯಚೂರು ಜಿಲ್ಲೆಯಲ್ಲಿ ಗೋರೆಬಾಳು ಹನುಮಂತರಾಯರಂಥವರು ರಾಯಚೂರು ಭಾಗದಲ್ಲಿ ಆಗಿ ಹೋದ ದಾಸರ ಸಾಹಿತ್ಯವನ್ನು ಮುದ್ರಿಸುವ ದೊಡ್ಡ ಕಾರ್ಯವನ್ನು ಮಾಡಿದರು.ಆದರೆ ಅಂಥದೊಂದು ಬೆಂಬಲ ಮಹಿಪತಿದಾಸರ ಮನೆತನದವರು ರಚಿಸಿದ ಸಾಹಿತ್ಯಕ್ಕೆ ಸಿಗದೇ ಇದ್ದದ್ದು ವಿಪರ್ಯಾಸದ ಸಂಗತಿ.ಅವರ ವಂಶಜರೇ ಮಹಿಪತಿದಾಸರ ಮತ್ತು ಅವರ ಮಕ್ಕಳಾದ ಕೃಷ್ಣದಾಸರ ಪದ್ಯಗಳುಳ್ಳ ಪುಸ್ತಕವನ್ನು ಪ್ರಕಟಿಸಬೇಕಾಯಿತು.ಅದಾದ ಮೇಲೆ ಮೈಸೂರು ವಿಶ್ವವಿದ್ಯಾಲಯ ಮಹಿಪತಿದಾಸರ ಕನ್ನಡದಲ್ಲಿ ಇದ್ದ ಪದ್ಯಗಳನ್ನು ಹೊರ ತಂದಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಪ್ರಕಟಣೆಗಳಲ್ಲಿ ಮಹಿಪತಿದಾಸರ ಪದ್ಯಗಳ ಹೊತ್ತಿಗೆಯನ್ನು ಹೊರ ತಂದಿತು.ಇಷ್ಟಾದರೂ ಇಲ್ಲಿಯವರೆಗೆ ಮಹಿಪತಿದಾಸರ ಕನ್ನಡ ಪದ್ಯಗಳು,ಮಿಶ್ರಭಾಷಾ ಪದ್ಯಗಳು ಮತ್ತು ಇತರ ಭಾಷೆಯಲ್ಲಿ ಬರೆದಿದ್ದಾರೆ ಎಂದು ಹೇಳುವ ಪದ್ಯಗಳು ಒಂದೇ ಪುಸ್ತಕದಲ್ಲಿ ಲಭ್ಯವಾಗುವ ರೀತಿಯಲ್ಲಿ ಇನ್ನೂವರೆಗೂ ಹೊರ ಬಂದಿಲ್ಲ.
ಮಹಿಪತಿದಾಸರಿಗೆ ಇಬ್ಬರು ಗಂಡು ಮಕ್ಕಳು.ಹಿರಿಯವನ ಹೆಸರು ದೇವರಾಯ.ಎರಡನೆಯವನ ಹೆಸರು ಕೃಷ್ಣರಾಯ.ಹಿರಿಯ ಮಗ ದೇವರಾಯ ಸಿಂದಗಿ ತಾಲೂಕಿನ ಜಾಲವಾದಿಯ ದೇಸಗತಿಯನ್ನು ಸಂಪಾದಿಸಿ ಆಡಳಿತ ನಡೆಸಿದರೂ ಕೂಡಾ ಕೊನೆ ಕೊನೆಗೆ ಅಲೌಕಿಕ ಬದುಕಿಗೆ ಬಂದಿರಬೇಕು.ದೇವರಾಯರು ರಚಿಸಿದ್ದೆಂದು ಹೇಳಲಾಗುವ ‘’ ಬಂದ ದುರಿತಗಳ ಪರಿಹಾರ ಮಾಡಯ್ಯ ..’’ ಎಂಬ ಪದ್ಯ ಈಗಲೂ ಪ್ರಚಲಿತವಾಗಿ ಹಾಡಲಾಗುತ್ತಿದೆ.ದೇವರಾಯರ ಇನ್ನಿಷ್ಟು ಪದ್ಯಗಳನ್ನು ಗುರುತಿಸಬೇಕಿದೆ.ಜಾಲವಾದಿಯಲ್ಲಿ ದೇವರಾಯರ ವೃಂದಾವನವಿದೆ. ಎರಡನೆಯ ಮಗ ಕೂಡ ತಂದೆಯ ದಾರಿಯಲ್ಲಿಯೇ ನಡೆದು ಪ್ರಖ್ಯಾತ ದಾಸರಾದರು,ಕೃಷ್ಣದಾಸರೆನಿಸಿಕೊಂಡರು.ತಂದೆಯನ್ನೇ ಗುರುವನ್ನಾಗಿಸಿಕೊಂಡು ನೂರಾರು ಕೃತಿಗಳನ್ನು ರಚಿಸಿದರು.ಮಹಿಪತಿದಾಸರ ಪದ್ಯಗಳೇ ಮುಂಚೂಣಿಯಲ್ಲಿ ಬರದೇ ಇದ್ದಾಗ ಕೃಷ್ಣದಾಸರ ಪದ್ಯಗಳಿಗೆ ಇನ್ನೆಂಥ ಸ್ಥಾನ ಸಿಕ್ಕಿರಬಹುದೆಂದು ಬೇರೆ ಹೇಳಬೇಕಿಲ್ಲ.ಅನಂತರದಲ್ಲಿಯೂ ಮಹಿಪತಿದಾಸರ ಮನೆತನದಲ್ಲಿ ಅವರ ಮೊಮ್ಮಕ್ಕಳು,ಮರಿಮಕ್ಕಳು ಪದ್ಯಗಳನ್ನು ರಚಿಸಿದ್ದಾರೆ.ಈ ರೀತಿ ಅನೇಕ ತಲೆಮಾರುಗಳವರೆಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮನೆತನ ಕಾಖಂಡಕಿ ಮಹಿಪತಿದಾಸರದ್ದೆಂದು ಹೇಳಬಹುದು.
ಪದ್ಯಗಳನ್ನು ಭಜನೆಯ ರೂಪದಲ್ಲಿ ಪಠಿಸಲು ಅನುಕೂಲಕರವಾಗುವಂತೆ ಅವರ ವಂಶಜರಾದ ಶ್ರೀಪತಯ್ಯ ಹರಿದಾಸ ಅವರು ಸೇವಾತತ್ವ ಹೆಸರಿನ ಪುಸ್ತಕವನ್ನು ಹೊರತಂದಿದ್ದಾರೆ.ಆದರೂ ಆಗಬೇಕಾದ ಕಾರ್ಯ ಇನ್ನೂ ಅಗಾಧವಿದೆ.
ಇನ್ನೂ ಅನೇಕ ಅಪ್ರಕಟಿತ ಸಾಹಿತ್ಯವಿದೆ ಎಂದು ಅಂದಾಜಿಸಲಾಗಿದೆ.ಅದು ಹೊರ ಬರಬೇಕಿದೆ.. ಮಹಿಪತಿದಾಸರು ಅನುಷ್ಠಾನ ಮಾಡಿದ ಕಾಖಂಡಕಿ ಗ್ರಾಮದಲ್ಲಿನ ಸ್ಥಳದಲ್ಲಿ ಶಾಲಿಗ್ರಾಮಗಳನ್ನು ಬಳಸಿ ನಿರ್ಮಿಸಿದ ವೃಂದಾವನವಿದೆ.ಮಹಿಪತಿದಾಸರು ಬಳಸಿದ ಯೋಗದಂಡವಿದೆ.ಪ್ರತಿ ವರ್ಷ ಕಾರ್ತಿಕ ವದ್ಯ ದಶಮಿಯಿಂದ ಮಾರ್ಗಶೀರ್ಷ ಶುದ್ಧ ದ್ವಿತೀಯಾವರೆಗೆ ಆರಾಧನೆಯನ್ನು ಆಚರಿಸಲಾಗುತ್ತದೆ.