ಧ್ಯಾನವೆಂದರೆ… : ಓಶೋ ವಿವರಣೆ

ಯಾವ ಕ್ರಿಯೆಯೂ ಧ್ಯಾನವಾಗಬಲ್ಲದು. ಒಂದು ಕ್ರಿಯೆಯನ್ನ ಹೇಗೆ ಧ್ಯಾನವಾಗಿ ಪರಿವರ್ತಿಸಕೊಳ್ಳಬಹುದು ಎನ್ನುವುದು ನಿಮ್ಮ ಅರಿವೆಗೆ ಬರುತ್ತಿದ್ದಂತೆಯೇ ನೀವು ನಿಮ್ಮ ಎಲ್ಲ ಕ್ರಿಯೆಗಳನ್ನ ಧ್ಯಾನವಾಗಿ ಬದಲಾಯಿಸಿಕೊಳ್ಳುತ್ತೀರಿ ~ ಓಶೋ |ಕನ್ನಡಕ್ಕೆ : ಚಿದಂಬರ ನರೇಂದ್ರ

ಕಬೀರ ಭಾರತದ ಅತ್ಯಂತ ದೊಡ್ಡ ಅನುಭಾವಿ ಸಂತ. ಅವನು ನೇಕಾರ, ಜ್ಞಾನೋದಯದ ಹಂತ ದಾಟಿದ ಮೇಲೂ ಕಬೀರ ಬಟ್ಟೆ ನೇಯುವುದನ್ನ ನಿಲ್ಲಿಸಲಿಲ್ಲ. ಕಬೀರನಿಗೆ ಸಾವಿರಾರು ಶಿಷ್ಯರು, ಅವರು ಮೇಲಿಂದ ಮೇಲೆ ಕಬೀರನಿಗೆ ಹೇಳುತ್ತಿದ್ದರು, “ ಬಟ್ಟೆ ನೇಯುವುದನ್ನ ಸಾಕು ಮಾಡು, ನಾವು ನಿನ್ನ ನೋಡಿಕೊಳ್ಳುತ್ತೇವೆ. ನಿನ್ನ ಸಮಯವನ್ನ ಧ್ಯಾನ ಮುಂತಾದ ಸತ್ಕಾರ್ಯಗಳಿಗೆ ಬಳಸು.”

ಶಿಷ್ಯರ ಮಾತಿಗೆ ಕಬೀರ ನಕ್ಕು ಬಿಡುತ್ತಿದ್ದ, “ ನಾನು ಬಟ್ಟೆ ನೇಯುವುದು ಸಾಧಾರಣ ಕ್ರಿಯೆ ಅಲ್ಲ , ನಾನು ಬಟ್ಟೆ ತಯಾರಿಸುತ್ತಿರುವುದು ಕೇವಲ ಒಂದು ಬಹಿರಂಗ ಕ್ರಿಯೆ ಆದರೆ ಅದೇ ಸಮಯಕ್ಕೆ ನನ್ನ ಒಳಗೂ ಒಂದು ಕ್ರಿಯೆ ನಡೆಯುತ್ತಿರುತ್ತದೆ ಅದು ನನ್ನನ್ನು ಈ ಬದುಕಿನ ಸಹಜತೆಯೊಂದಿಗೆ ಒಂದುಗೂಡಿಸುತ್ತಿದೆ, ಇದು ನನ್ನ ಧ್ಯಾನ.”

ಹೇಗೆ ಬಟ್ಟೆ ನೇಯುವುದು ಒಂದು ಧ್ಯಾನವಾಗಬಲ್ಲದು ? ಬಟ್ಟೆ ನೇಯುವಾಗ ನಿಮ್ಮ ಬುದ್ದಿ ಮತ್ತು ಮನಸ್ಸು (ಮೈಂಡ್) ನೇಯುವಿಕೆಯಲ್ಲಿ ಧ್ಯಾನದ ಗುಣಮಟ್ಟವನ್ನು ಸಾಧಿಸಬಲ್ಲವಾದರೆ ಆಗ ಬಹಿರಂಗವಾಗಿ ಕಾಣುವ ಕ್ರಿಯೆಯ ಮಹತ್ವಕ್ಕೆ ಇನ್ನೂ ಹೆಚ್ಚಿನ ಕುಶಲತೆಯ ಜೊತೆ ಅಪರೂಪದ ಸಮಾಧಾನವೂ ಸಾಧ್ಯವಾಗುತ್ತದೆ.

ಇನ್ನೊಬ್ಬ ಅನುಭಾವಿ ಸಂತ ಕುಂಬಾರ, ಅವನ ಹೆಸರು ಗೋರಾ. ಮಣ್ಣಿನ ಮಡಿಕೆಗಳನ್ನು ತಯಾರಿಸುವುದು ಅವನ ವೃತ್ತಿ. ಮಡಿಕೆಗಳನ್ನು ತಯಾರಿಸುವಾಗ ಗೋರಾ ಹಾಡುತ್ತಿದ್ದ, ಕುಣಿಯುತ್ತಿದ್ದ. ಚಕ್ರದ ಮಧ್ಯೆ ಮಣ್ಣಿನ ಮುದ್ದೆ ಇಟ್ಟಾಗಲೆಲ್ಲ ತಾನೂ ತನ್ನ ಮಧ್ಯಕ್ಕೆ ಸೇರಿಕೊಳ್ಳುತ್ತಿದ್ದ. ಹೊರಗಿನ ಜನ ನೋಡುವುದು ಚಕ್ರ ತಿರುಗುವುದನ್ನ ಮತ್ತು ಗೋರಾ ಆ ಮಣ್ಣಿನ ಮುದ್ದೆಯನ್ನ ಮಡಿಕೆಯನ್ನಾಗಿಸುವ ಅದ್ಭುತವನ್ನ. ಆದರೆ ಅದೇ ಸಮಯಕ್ಕೆ ಗೋರಾನ ಒಳಗೆ ಇನ್ನೊಂದು ಅದ್ಭುತ ನಡೆಯುತ್ತಿದೆ. ಚಕ್ರದ ನಡುವೆ ಮಡಿಕೆಯನ್ನು ಸ್ಥಾಪಿಸುತ್ತಿರುವಂತೆಯೇ ಗೋರಾ ತಾನೂ ಒಳ ಪ್ರಜ್ಞೆಯ ಮಧ್ಯದಲ್ಲಿ ಸ್ಥಾಪಿತವಾಗುತ್ತಿದ್ದಾನೆ, ಹೊಸದಾಗಿ ಹುಟ್ಟುತ್ತಿದ್ದಾನೆ. ಗೋರಾ ಕೇವಲ ಮಡಿಕೆಯನ್ನಷ್ಟೇ ತಯಾರಿಸುತ್ತಿಲ್ಲ ತನ್ನನ್ನೂ ಹೊಸದಾಗಿ ರೂಪಿಸಿಕೊಳ್ಳುತ್ತಿದ್ದಾನೆ.

ಯಾವ ಕ್ರಿಯೆಯೂ ಧ್ಯಾನವಾಗಬಲ್ಲದು. ಒಂದು ಕ್ರಿಯೆಯನ್ನ ಹೇಗೆ ಧ್ಯಾನವಾಗಿ ಪರಿವರ್ತಿಸಕೊಳ್ಳಬಹುದು ಎನ್ನುವುದು ನಿಮ್ಮ ಅರಿವೆಗೆ ಬರುತ್ತಿದ್ದಂತೆಯೇ ನೀವು ನಿಮ್ಮ ಎಲ್ಲ ಕ್ರಿಯೆಗಳನ್ನ ಧ್ಯಾನವಾಗಿ ಬದಲಾಯಿಸಿಕೊಳ್ಳುತ್ತೀರಿ. ಆಗ ನಿಮ್ಮ ಇಡೀ ಬದುಕು ಧ್ಯಾನ ಮಾರ್ಗದಲ್ಲಿ ಮುನ್ನಡೆಯುತ್ತದೆ. ಆಗ, ನೀವು ನಡೆಯುತ್ತಿರಬಹುದು, ಆಫೀಸಿನಲ್ಲಿ ಕೆಲಸ ಮಾಡುತ್ತಿರಬಹುದು, ಏನೂ ಮಾಡದೆ ಸುಮ್ಮನೇ ಕುಳಿತಿರಬಹುದು ಎಲ್ಲವೂ ಧ್ಯಾನವಾಗಿ ಪರಿವರ್ತಿತವಾಗುತ್ತವೆ. ಹಾಗಾಗಿ ನೆನಪಿರಲಿ, ಧ್ಯಾನ ಒಂದು ನಿರ್ದಿಷ್ಟ ಪ್ರಕಾರದ ಕ್ರಿಯೆಯಲ್ಲ. ಧ್ಯಾನ, ನೀವು ಆ ಕ್ರಿಯೆಯಲ್ಲಿ ಸಾಧಿಸುವ ಗುಣಮಟ್ಟ.

Leave a Reply